ಕ್ರಿಕೆಟ್: ಈ ಸೋಲಿನ ಕಥೆಗೆ ಕೊನೆ ಎಂದು?

7

ಕ್ರಿಕೆಟ್: ಈ ಸೋಲಿನ ಕಥೆಗೆ ಕೊನೆ ಎಂದು?

Published:
Updated:
ಕ್ರಿಕೆಟ್: ಈ ಸೋಲಿನ ಕಥೆಗೆ ಕೊನೆ ಎಂದು?

ಸಿಡ್ನಿ: ರಜೆ ಇದ್ದರೂ ಬೆಳಿಗ್ಗೆ ಬೇಗನೇ ಎದ್ದು ಟಿವಿಯತ್ತ ಕಣ್ಣು ನೆಟ್ಟು ಕುಳಿತ ಕ್ರಿಕೆಟ್ ಪ್ರೇಮಿಗಳಿಗೆ ಮತ್ತದೇ ನಿರಾಸೆ. ಏಕೆಂದರೆ ದೋನಿ ಬಳಗವನ್ನು ಮತ್ತೊಂದು ಸೋಲು ಬಂದಪ್ಪಳಿಸಿತು. `ಏನಾಗಿದೆ ಭಾರತದ ಈ ಬ್ಯಾಟ್ಸ್‌ಮನ್‌ಗಳಿಗೆ~ ಎಂದು ಅಭಿಮಾನಿಗಳು ಇನ್ನು ಅರಚಿಕೊಳ್ಳಬೇಕು ಅಷ್ಟೆ!ಆದರೆ ಸೋಲು ಮಾತ್ರ ಭಾರತ ತಂಡದ ಬೆನ್ನು ಬಿಡುತ್ತಿಲ್ಲ. ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ಆಸ್ಟ್ರೇಲಿಯಾ ತಂಡಕ್ಕೆ ಮತ್ತೆ ಶರಣಾದ ಕಾರಣ ಭಾರತವೀಗ ತ್ರಿಕೋನ ಏಕದಿನ ಸರಣಿಯಿಂದ ಹೊರಬೀಳುವ ಭೀತಿ ಎದುರಿಸುತ್ತಿದೆ. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಯಾವುದೇ ಪವಾಡ ನಡೆಯದಿದ್ದರೆ ಅದು ಬಹುತೇಕ ಖಚಿತ.ಏಕೆಂದರೆ 19 ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ಬಳಿ ಈಗ 15 ಪಾಯಿಂಟ್‌ಗಳಿವೆ. ಅದರೆ ಈ ತಂಡ ಇನ್ನೂ ಎರಡು ಪಂದ್ಯ ಆಡಬೇಕಾಗಿದೆ. ಭಾರತದ ಬಳಿ ಕೇವಲ 10 ಪಾಯಿಂಟ್‌ಗಳಿವೆ. ಹಾಗಾಗಿ ಶ್ರೀಲಂಕಾ ವಿರುದ್ಧ ಮಂಗಳವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯವನ್ನು ಮಹಿ ಪಡೆ ಬೋನಸ್ ಪಾಯಿಂಟ್‌ನೊಂದಿಗೆ ಗೆಲ್ಲಬೇಕು.

 

ಆಸ್ಟ್ರೇಲಿಯಾ ವಿರುದ್ಧದ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಸೋಲಬೇಕು. ಹಾಗಾದಲ್ಲಿ ಮಾತ್ರ ಭಾರತ ಫೈನಲ್‌ನಲ್ಲಿಆಡಲು ಸ್ಥಾನ ಗಿಟ್ಟಿಸಬಹುದು. ಆದರೆ ಭಾರತ ತಂಡ ಆಡುತ್ತಿರುವ ಪರಿ ನೋಡಿದರೆ ಆ ಸಾಧ್ಯತೆ ಕಡಿಮೆ!ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 253 ರನ್‌ಗಳ ಗುರಿಯನ್ನು ಬೆನ್ನಟ್ಟಲು ಕೂಡ ಭಾರತಕ್ಕೆ ಸಾಧ್ಯವಾಗಲಿಲ್ಲ. 39.3 ಓವರ್‌ಗಳಲ್ಲಿ ಕೇವಲ 165 ರನ್‌ಗಳಿಗೆ ಪ್ರವಾಸಿ ತಂಡದವರು ಗಂಟುಮೂಟೆ ಕಟ್ಟಿದರು. 87 ರನ್‌ಗಳಿಂದ ಗೆದ್ದ ಕಾಂಗರೂ ಪಡೆ ಅಂತಿಮ ಘಟ್ಟ ಪ್ರವೇಶಿಸಿತು.ಪತ್ರಿಕಾಗೋಷ್ಠಿಗಳಲ್ಲಿ ಪರಸ್ಪರ ಕೆಸರು ಎರಚಾಟದ ಮೂಲಕ ಸುದ್ದಿಯಾಗುತ್ತಿರುವ ಹಿರಿಯ ಹಾಗೂ ಅನುಭವಿ ಬ್ಯಾಟ್ಸ್‌ಮನ್‌ಗಳು ಅಂಗಳದಲ್ಲಿ ಮಾತ್ರ ಪೆರೇಡ್ ನಡೆಸಿದರು. 30 ರನ್‌ಗಳ ಗೆರೆ ದಾಟಲು ಯಾರೊಬ್ಬರಿಗೂ ಸಾಧ್ಯವಾಗಲಿಲ್ಲ ಎಂದರೆ ಊಹಿಸಿಕೊಳ್ಳಿ!ಕಾಂಗರೂ ಬಳಗವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಲು ಕಾರಣರಾಗಿದ್ದ ಬೌಲರ್‌ಗಳ ಶ್ರಮಕ್ಕೂ ಬೆಲೆ ಸಿಗಲಿಲ್ಲ. ಆಸ್ಟ್ರೇಲಿಯಾ ಪ್ರವಾಸವನ್ನು ಇನ್ನೆಂದೂ ನೆನಪಿಸಿಕೊಳ್ಳಬಾರದಷ್ಟು ಕೆಟ್ಟ ಪ್ರದರ್ಶನ ತೋರುತ್ತಿರುವ ವೀರೇಂದ್ರ ಸೆಹ್ವಾಗ್ ಅವರದ್ದು ಅದೇ ರಾಗ ಅದೇ ಹಾಡು. ಎರಡನೇ ಓವರ್‌ನಲ್ಲಿಯೇ ವಿಕೆಟ್ ಒಪ್ಪಿಸಿ ಕ್ರೀಸ್‌ಗೆ ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ವಾಪಸಾದರು.ಸಚಿನ್ ತೆಂಡೂಲ್ಕರ್ ಅವರದ್ದು ಅದೇ ಕಥೆ. ಆದರೆ ಈ ಪಂದ್ಯದಲ್ಲಿ ಅವರಿಗೆ ಅದೃಷ್ಟ ಕೈಕೊಟ್ಟಿತು. ಅದಕ್ಕೆ ಅವರು ರನ್‌ಔಟ್ ಆದ ರೀತಿಯೇ ಸಾಕ್ಷಿ. ವಿಕೆಟ್ ಬಳಿಯೇ ಚೆಂಡನ್ನು ಕುಟುಕಿ ಒಂಟಿ ರನ್ ತೆಗೆಯಲು ಗಂಭೀರ್ ಓಡಿಬಂದಾಗ ಈ ಎಡವಟ್ಟು ಸಂಭವಿಸಿತು. ಇನ್ನೊಂದು ಬದಿಯಲ್ಲಿದ್ದ ಸಚಿನ್ ಕ್ರೀಸ್ ಮುಟ್ಟುವ ಯತ್ನದಲ್ಲಿದ್ದಾಗ ಬ್ರೆಟ್ ಲೀ ಅಡ್ಡಬಂದರು. ಅಷ್ಟರಲ್ಲಿ ಡೇವಿಡ್ ವಾರ್ನರ್ ಆಕರ್ಷಕ ರೀತಿಯಲ್ಲಿ ಜಿಗಿದು ಚೆಂಡನ್ನು ವಿಕೆಟ್‌ಗೆ ಎಸೆದರು. ಸಚಿನ್ ರನ್‌ಔಟ್.ತೆಂಡೂಲ್ಕರ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ಈ ಬಗ್ಗೆ ಸಮಾಲೋಚನೆ ನಡೆಸಿದ ಅಂಪೈರ್‌ಗಳು ತಮ್ಮ ತೀರ್ಪಿಗೆ ಬದ್ಧರಾದರು. `ನಮ್ಮ ಆಟಗಾರ ಅಡ್ಡಬಂದ ಕಾರಣ ಸಚಿನ್ ರನ್‌ಔಟ್ ಆದರು~ ಎಂದು ಆಸ್ಟ್ರೇಲಿಯಾ ತಂಡದವರು ಕ್ರೀಡಾ ಸ್ಫೂರ್ತಿ ತೋರುವ ಸಾಧ್ಯತೆ ಮರೆತುಬಿಡಿ. ಏಕೆಂದರೆ ಅದು ಈ ತಂಡದ ಇತಿಹಾಸದಲ್ಲೇ ಇಲ್ಲ!ಮೈಕಲ್ ಕ್ಲಾರ್ಕ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಶೇನ್ ವಾಟ್ಸನ್ ಬ್ಯಾಟಿಂಗ್‌ನಲ್ಲಿ ಅನುಭವಿಸಿದ ವೈಫಲ್ಯವನ್ನು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಸರಿಪಡಿಸಿಕೊಂಡರು. ಅವರು ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ವಿಕೆಟ್ ಕಬಳಿಸಿದರು. ಅಷ್ಟರಲ್ಲಿ ಭಾರತದ ಸೋಲು ಖಚಿತವಾಗಿತ್ತು.ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಭಾರತ ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಚೆನ್ನಾಗಿಯೇ ಇತ್ತು. ಅದಕ್ಕೆ ಪ್ರವೀಣ್ ಕುಮಾರ್ ಅವರ ಬೌಲಿಂಗ್ ಹಾಗೂ ಡೇವಿಡ್ ವಾರ್ನರ್ ಕ್ಯಾಚ್ ಪಡೆದ ರೈನಾ ಸಾಕ್ಷಿ. ಇದೇ ಮಟ್ಟದ ಪ್ರದರ್ಶನ ಬ್ಯಾಟಿಂಗ್‌ನಲ್ಲಿ ಮೂಡಿಬರಲಿಲ್ಲ.ಆದರೆ ಡೇವಿಡ್ ಹಸ್ಸಿ 54 ರನ್ ಗಳಿಸಿದ್ದು ಅದೃಷ್ಟದ ಬಲದಿಂದ. ಏಕೆಂದರೆ ಒಂಟಿ ರನ್ ಗಳಿಸಲು ಓಡುವಾಗ ಚೆಂಡನ್ನು ಕೈಯಿಂದ ಉದ್ದೇಶಪೂರ್ವಕವಾಗಿ ತಡೆದಿದ್ದರು. ಆಗ ಅವರು ಕೇವಲ 17 ರನ್ ಗಳಿಸಿದ್ದರು. ನಿಯಮಗಳ ಪ್ರಕಾರ ಅವರು ಔಟ್.

 

ಆದರೆ `ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಚೆಂಡನ್ನು ತಡೆದಿದ್ದಾರೆ. ಹಾಗಾಗಿ ಔಟ್ ಅಲ್ಲ~ ಎಂದು ಮೂರನೇ ಅಂಪೈರ್ ತೀರ್ಪು ನೀಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಅಂಪೈರ್‌ಗಳೊಂದಿಗೆ ದೋನಿ ನಡೆಸಿದ ಸಮಾಲೋಚನೆ ಯಶಸ್ವಿಯಾಗಲಿಲ್ಲ.ಸ್ಕೋರ್ ವಿವರ:

ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 252 

ಡೇವಿಡ್ ವಾರ್ನರ್ ಸಿ ಸುರೇಶ್ ರೈನಾ ಬಿ ರವೀಂದ್ರ ಜಡೇಜಾ 68

ಶೇನ್ ವಾಟ್ಸನ್ ಸಿ ಉಮೇಶ್ ಬಿ ಪ್ರವೀಣ್ ಕುಮಾರ್  01

ಪೀಟರ್ ಫಾರೆಸ್ಟ್ ಬಿ ಪ್ರವೀಣ್ ಕುಮಾರ್  07

ಮೈಕ್ ಹಸ್ಸಿ ರನ್‌ಔಟ್ (ಅಶ್ವಿನ್/ಪಠಾಣ್)  10

ಡೇವಿಡ್ ಹಸ್ಸಿ ಸಿ ಎಂ.ಎಸ್.ದೋನಿ ಬಿ ಉಮೇಶ್ ಯಾದವ್  54

ಮ್ಯಾಥ್ಯೂ ವೇಡ್ ಸಿ ಎಂ.ಎಸ್.ದೋನಿ ಬಿ ಉಮೇಶ್  56

ಡೇನಿಯಲ್ ಕ್ರಿಸ್ಟಿಯಾನ್ ಸಿ ರವೀಂದ್ರ ಜಡೇಜಾ ಬಿ ಸೆಹ್ವಾಗ್  24

ಕ್ಲಿಂಟ್ ಮೆಕ್‌ಕೇ  ಸ್ಟಂಪ್ಡ್ ಎಂ.ಎಸ್.ದೋನಿ ಬಿ ಸೆಹ್ವಾಗ್  01

ಬ್ರೆಟ್ ಲೀ ಸಿ ವಿರಾಟ್ ಕೊಹ್ಲಿ ಬಿ ವೀರೇಂದ್ರ ಸೆಹ್ವಾಗ್  04

ಕ್ಸೇವಿಯರ್ ಡೋಹರ್ತಿ ಔಟಾಗದೆ  13

ಇತರೆ (ಲೆಗ್‌ಬೈ-9, ವೈಡ್-5)  14

ವಿಕೆಟ್ ಪತನ: 1-5 (ವಾಟ್ಸನ್; 2.2); 2- 26 (ಫಾರೆಸ್ಟ್; 6.2); 3-57 (ಮೈಕ್ ಹಸ್ಸಿ; 13.2); 4-107 (ವಾರ್ನರ್; 20.6); 5-201 (ವೇಡ್; 39.2); 6-212 (ಡೇವಿಡ್ ಹಸ್ಸಿ; 42.1); 7-217 (ಮೆಕ್‌ಕೇ; 43.1); 8-232 (ಬ್ರೆಟ್ ಲೀ; 47.3); 9-252 (ಕ್ರಿಸ್ಟಿಯನ್; 49.6).

ಬೌಲಿಂಗ್: ಪ್ರವೀಣ್ ಕುಮಾರ್ 10-1-37-2 (ವೈಡ್-2), ಇರ್ಫಾನ್ ಪಠಾಣ್ 5-1-28-0, ಆರ್.ಅಶ್ವಿನ್ 10-0-45-0 (ವೈಡ್-1), ಉಮೇಶ್ ಯಾದವ್ 6-0-39-2 (ವೈಡ್-2), ರವೀಂದ್ರ ಜಡೇಜಾ 10-0-51-1, ವೀರೇಂದ್ರ ಸೆಹ್ವಾಗ್ 9-0-43-3.

ಭಾರತ 39.3 ಓವರ್‌ಗಳಲ್ಲಿ 165

ವೀರೇಂದ್ರ ಸೆಹ್ವಾಗ್ ಸಿ ಅಂಡ್ ಬಿ ಬೆನ್ ಹಿಲ್ಫೆನ್ಹಾಸ್  05

ಸಚಿನ್ ತೆಂಡೂಲ್ಕರ್ ರನ್‌ಔಟ್ (ವಾರ್ನರ್)  14

ಗೌತಮ್ ಗಂಭೀರ್ ಬಿ ಕ್ಲಿಂಟ್ ಮೆಕ್‌ಕೇ  23

ವಿರಾಟ್ ಕೊಹ್ಲಿ ಸಿ ಡೇನಿಯಲ್ ಕ್ರಿಸ್ಟಿಯಾನ್ ಬಿ ವಾಟ್ಸನ್  21

ಸುರೇಶ್ ರೈನಾ ಸಿ ಮ್ಯಾಥ್ಯೂ ವೇಡ್ ಬಿ ಶೇನ್ ವಾಟ್ಸನ್  08

ಎಂ.ಎಸ್.ದೋನಿ ಎಲ್‌ಬಿಡಬ್ಲ್ಯು ಬಿ ಬೆನ್ ಹಿಲ್ಫೆನ್ಹಾಸ್  14

ರವೀಂದ್ರ ಜಡೇಜಾ ಸಿ ಶೇನ್ ವಾಟ್ಸನ್ ಬಿ ಕ್ರಿಸ್ಟಿಯನ್   08

ಆರ್.ಅಶ್ವಿನ್ ಸಿ ಶೇನ್ ವಾಟ್ಸನ್ ಬಿ ಕ್ಸೇವಿಯರ್ ಡೋಹರ್ತಿ  26

ಇರ್ಫಾನ್ ಪಠಾಣ್ ಸಿ ಮೈಕ್ ಹಸ್ಸಿ ಬಿ ಬ್ರೆಟ್ ಲೀ  22

ಪ್ರವೀಣ್ ಕುಮಾರ್ ಬಿ ಕ್ಸೇವಿಯರ್ ಡೋಹರ್ತಿ  01

ಉಮೇಶ್ ಯಾದವ್ ಔಟಾಗದೆ  00

ಇತರೆ (ಬೈ-4, ಲೆಗ್‌ಬೈ-8, ವೈಡ್-8, ನೋಬಾಲ್-3)  23

ವಿಕೆಟ್ ಪತನ: 1-7 (ಸೆಹ್ವಾಗ್; 1.6); 2-35 (ತೆಂಡೂಲ್ಕರ್; 6.6); 3-79 (ಕೊಹ್ಲಿ; 15.6); 4-83 (ಗಂಭೀರ್; 16.6); 5-89 (ರೈನಾ; 19.2); 6-104 (ಜಡೇಜಾ; 26.3); 7-126 (ದೋನಿ; 32.5); 8-156 (ಅಶ್ವಿನಿ; 37.6); 9-163 (ಇರ್ಫಾನ್; 38.3); 10-165 (ಪ್ರವೀಣ್; 39.3).

ಬೌಲಿಂಗ್: ಬ್ರೆಟ್ ಲೀ 8-0-26- 1 (ನೋಬಾಲ್-1, ವೈಡ್-2), ಬೆನ್ ಹಿಲ್ಫೆನ್ಹಾಸ್ 8-1-50-2 (ನೋಬಾಲ್-1, ವೈಡ್-5), ಕ್ಲಿಂಟ್ ಮೆಕ್‌ಕೇ 6-0- 27-1 (ನೋಬಾಲ್-1), ಡೇವಿಡ್ ಹಸ್ಸಿ 2-0-7-0, ಡೇನಿಯಲ್ ಕ್ರಿಸ್ಟಿಯಾನ್ 3-0-8-1 (ವೈಡ್-1), ಶೇನ್ ವಾಟ್ಸನ್ 5-2-9-2, ಕ್ಸೇವಿಯರ್ ಡೋಹರ್ತಿ 7.3-0-26-2ಫಲಿತಾಂಶ: ಆಸ್ಟ್ರೇಲಿಯಾಕ್ಕೆ 87 ರನ್ ಗೆಲುವು. ಪಾಯಿಂಟ್: ಆಸ್ಟ್ರೇಲಿಯಾ: 5, ಭಾರತ: 0. ಪಂದ್ಯ ಶ್ರೇಷ್ಠ: ಡೇನಿಯಲ್ ವಾರ್ನರ್. ಭಾರತದ ಮುಂದಿನ ಪಂದ್ಯ: ಶ್ರೀಲಂಕಾ ವಿರುದ್ಧ (ಫೆ.28; ಹೋಬರ್ಟ್‌ನಲ್ಲಿ). 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry