ಕ್ರಿಕೆಟ್ ಉತ್ಸಾಹಕ್ಕೆ ನೀರೆರೆದಿದ್ದು ಕಾಲೇಜು- ಅನಿಲ್ ಕುಂಬ್ಳೆ
ಬೆಂಗಳೂರು: `ನನ್ನ ಕ್ರಿಕೆಟ್ ಉತ್ಸಾಹಕ್ಕೆ ನೀರೆರೆದಿದ್ದು ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾ ತಂಡ~ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಅನಿಲ್ ಕುಂಬ್ಳೆ ಹೇಳಿದರು.
ನಗರದ ಎಂ.ಎಸ್.ರಾಮಯ್ಯ ತಾಂತ್ರಿಕ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ `ಮಿಲನ-2012~ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಲೇಜು ದಿನಗಳ ತಮ್ಮ ಕ್ರಿಕೆಟ್ ಪ್ರೀತಿಯನ್ನು ನೆನಪಿಸಿಕೊಂಡ ಅವರು, `ಕಾಲೇಜಿನಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಉತ್ತೇಜನ ನೀಡುತ್ತಿದ್ದ ಕಾರಣ ನಾನು ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ರಾಜ್ಯದಲ್ಲಿ ಸುಮಾರು 200 ಎಂಜಿನಿಯರಿಂಗ್ ಕಾಲೇಜುಗಳಿದ್ದರೂ ಎಂ.ಎಸ್.ರಾಮಯ್ಯ ಕಾಲೇಜು ತಮ್ಮ ಗುಣಮಟ್ಟ ಹಾಗೂ ಘನತೆಯನ್ನು ಉಳಿಸಿಕೊಂಡು ಬಂದಿದೆ~ ಎಂದು ಅವರು ನುಡಿದರು.
ಕಾಲೇಜಿನ ಮತ್ತೊಬ್ಬ ಹಳೆಯ ವಿದ್ಯಾರ್ಥಿ, ಜಿಂದಾಲ್ ಸ್ಟೀಲ್ಸ್ ಲಿಮಿಟೆಡ್ನ ಅಧ್ಯಕ್ಷ ಸಜ್ಜನ್ ಜಿಂದಾಲ್ ಮಾತನಾಡಿ, `ನನ್ನ ಜೀವನದಲ್ಲಿ ಕಾಲೇಜಿನ ಸ್ನೇಹಿತರು ಹಾಗೂ ಪ್ರಾಧ್ಯಾಪಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಾಲೇಜಿಗೆ ಮೊದಲಿನಿಂದಲೂ ಒಳ್ಳೆಯ ಹೆಸರಿದೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಬೇಕು~ ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಕಾಲೇಜಿನ ಸುಮಾರು 2500 ಸಾವಿರ ಹಳೆಯ ವಿದ್ಯಾರ್ಥಿಗಳು, ನೂರಾರು ಜನ ನಿವೃತ್ತ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು ಪಾಲ್ಗೊಂಡಿದ್ದರು. ನಿವೃತ್ತ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ವೈ.ಕುಲಕರ್ಣಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ತಲ್ಲಂ ವೆಂಕಟೇಶ್, ಜಿಇಎಫ್ನ ಮುಖ್ಯಸ್ಥ ಎಸ್.ಎಂ.ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.