ಮಂಗಳವಾರ, ಅಕ್ಟೋಬರ್ 15, 2019
26 °C

ಕ್ರಿಕೆಟ್; ಒತ್ತಡದ ಅಗತ್ಯವಿಲ್ಲ: ಗಣೇಶ್

Published:
Updated:
ಕ್ರಿಕೆಟ್; ಒತ್ತಡದ ಅಗತ್ಯವಿಲ್ಲ: ಗಣೇಶ್

ಬೆಂಗಳೂರು: ಆರ್. ವಿನಯ್ ಕುಮಾರ್ ಅನುಪಸ್ಥಿತಿಯಲ್ಲಿ ಕರ್ನಾಟಕದ ನೇತೃತ್ವ ವಹಿಸಿರುವ ಗಣೇಶ್ ಸತೀಶ್ ಲೀಗ್ ಹಂತದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದೀಗ ನಾಕೌಟ್ ಪಂದ್ಯಗಳಲ್ಲೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಗುರಿ ಅವರದ್ದು.ಸೋಮವಾರ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರಿಯಾಣ ವಿರುದ್ಧ ಜಯ ಸಾಧಿಸುವ ವಿಶ್ವಾಸದಲ್ಲಿ ಅವರು ಇದ್ದಾರೆ. ಆದರೆ ಗೆಲುವು ಅಷ್ಟು ಸುಲಭವಲ್ಲ ಎಂಬುದು ಕೂಡಾ ಸತೀಶ್‌ಗೆ ತಿಳಿದಿದೆ. ಕ್ವಾರ್ಟರ್ ಫೈನಲ್ ಪಂದ್ಯ ಎಂಬ ಕಾರಣ ಒತ್ತಡವನ್ನು ಮೈಮೇಲೆ ಎಳೆದುಕೊಳ್ಳಲು ಕರ್ನಾಟಕ ತಂಡದ ನಾಯಕ ಸಿದ್ಧರಿಲ್ಲ.ತಂಡದ ಎಲ್ಲ ಸದಸ್ಯರಿಂದ ಎಂದಿನಂತೆ ಸಹಜ ಆಟದ ನಿರೀಕ್ಷೆಯಲ್ಲಿ ಅವರಿದ್ದಾರೆ. `ಇದು ಇನ್ನೊಂದು ಪಂದ್ಯವಷ್ಟೆ. ಈ ಹಿಂದಿನ ಪಂದ್ಯಗಳಿಗೆ ಸಿದ್ಧತೆ ನಡೆಸಿದಂತೆ ಹರಿಯಾಣ ವಿರುದ್ಧದ ಕ್ವಾರ್ಟರ್ ಫೈನಲ್‌ಗೆ ಸಜ್ಜಾಗಿದ್ದೇವೆ. ಯಾವುದೇ ವಿಶೇಷ ಯೋಜನೆ ರೂಪಿಸಿಲ್ಲ~ ಎಂದು ಭಾನುವಾರದ ಅಭ್ಯಾಸದ ಬಳಿಕ ಅವರು ತಿಳಿಸಿದರು.`ಲೀಗ್‌ನಲ್ಲಿ ಪಂದ್ಯದಿಂದ ಪಂದ್ಯಕ್ಕೆ ನಾವು ಪ್ರದರ್ಶನ ಉತ್ತಮಪಡಿಸಿಕೊಂಡಿದ್ದೇವೆ. ಎಲ್ಲ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ~ ಎಂದ ಅವರ ಎದುರಾಳಿ ತಂಡವನ್ನು ಲಘು ವಾಗಿ ಪರಿಗಣಿಸುವ ಪ್ರಶ್ನೆಯೇ ಇಲ್ಲ~ ಎಂದರು. `ಹರಿಯಾಣ ಬಲಿಷ್ಠ ತಂಡ. ಉತ್ತಮ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳನ್ನು ಒಳಗೊಂಡಿದೆ. ಗೆಲುವು ಪಡೆಯಲು ಕಠಿಣ ಪರಿಶ್ರಮ ನಡೆಸುವುದು ಅನಿವಾರ್ಯ~ ಎಂದು ತಿಳಿಸಿದರು.ಕರ್ನಾಟಕದ ಕಳೆದ ಪಂದ್ಯ ವೀಕ್ಷಿಸಲು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದರು. ಇಲ್ಲಿ ಅಂತಹ ನಿರೀಕ್ಷೆ ಇದೇ ಎಂದು ಕೇಳಿದಾಗ, `ಅಷ್ಟು ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ನಿರೀಕ್ಷಿಸುವಂತಿಲ್ಲ~ ಎನ್ನುತ್ತಾ ನಗು ಬೀರಿದರು. ಶಿವಮೊಗ್ಗದಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ಕೊನೆಯ ಲೀಗ್ ಪಂದ್ಯ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿದ್ದರು.ನಮ್ಮ ಗುರಿ ಕೂಡಾ ಗೆಲುವು ಎಂದಿರುವ ಹರಿಯಾಣ ತಂಡದ ನಾಯಕ ಅಮಿತ್ ಮಿಶ್ರಾ, `ಸಕಾರಾತ್ಮಕ ಮನೋಭಾವದೊಂದಿಗೆ ಉದ್ಯಾನನಗರಿಗೆ ಆಗಮಿಸಿದ್ದೇವೆ. ಇಲ್ಲಿನ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂಬುದು ತಿಳಿದಿದೆ. ಯುವ ಆಟಗಾರರ ಬಲ ತಂಡಕ್ಕಿದೆ~ ಎಂದು ಹೇಳಿದ್ದಾರೆ.ಸ್ಪೋರ್ಟಿಂಗ್ ವಿಕೆಟ್: ಈ ಪಂದ್ಯಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ `ಸ್ಪೋರ್ಟಿಂಗ್ ಪಿಚ್~ ಸಿದ್ಧಗೊಂಡಿದೆ. ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಂಡರೆ ಒಳ್ಳೆಯದು ಎಂಬ ಅಭಿಪ್ರಾಯವನ್ನು ಕೆಎಸ್‌ಸಿಎ ಕ್ಯುರೇಟರ್ ನಾರಾಯಣ ರಾಜು ವ್ಯಕ್ತಪಡಿಸಿದ್ದಾರೆ. `ಆರಂಭದ ಒಂದೆರಡು ಅವಧಿಯಲ್ಲಿ ಪಿಚ್ ಮಧ್ಯಮ ವೇಗಿಗಳಿಗೆ ನೆರವು ನೀಡಬಹುದು. ಬಳಿಕ ಇಲ್ಲಿ ಬ್ಯಾಟಿಂಗ್ ಸುಲಭ~ ಎಂದು ಅವರು ನುಡಿದಿದ್ದಾರೆ.ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಲಯ ಕ್ಯುರೇಟರ್‌ಗಳು ಕೂಡಾ ಪಿಚ್ ಸಿದ್ಧಪಡಿಸುವ ಸಂದರ್ಭ ತಮ್ಮ ನಿಗಾ ಇಟ್ಟಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಸಕ್ತ ರಣಜಿ ಋತುವಿನ ಮೂರನೇ ಪಂದ್ಯ ಇದು. ಈ ಮೊದಲು ಲೀಗ್ ಹಂತದಲ್ಲಿ ಸೌರಾಷ್ಟ್ರ ಮತ್ತು ಪಂಜಾಬ್ ವಿರುದ್ಧ ಕರ್ನಾಟಕ ಆಡಿತ್ತು. ಎರಡೂ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಹೊರಹೊಮ್ಮಬಹುದು ಎಂಬ ವಿಶ್ವಾಸದಲ್ಲಿ ನಾರಾಯಣ ರಾಜು ಇದ್ದಾರೆ.

Post Comments (+)