ಕ್ರಿಕೆಟ್ ಕನವರಿಕೆ

7

ಕ್ರಿಕೆಟ್ ಕನವರಿಕೆ

Published:
Updated:
ಕ್ರಿಕೆಟ್ ಕನವರಿಕೆ

ಉದ್ಯಾನ ನಗರಿಯ ಜನರ ಯಾರ ಬಾಯಲ್ಲಿ ಕೇಳಿದರೂ ಬರಿ ಕ್ರಿಕೆಟ್ ಮಾತು. ದೇಹಕ್ಕೆ ಜ್ವರ ಬಂದರೂ ಮನಕ್ಕೆ ಅಂಟಿಕೊಂಡಿರುವ ಕ್ರಿಕೆಟ್ ಜ್ವರ ಅವರನ್ನು ಬಿಡಲೊಲ್ಲದು. ಜನರ ಆಟದ ಮೇಲಿನ ಪ್ರೀತಿಯಿಂದ ನಿತ್ಯದ ಸಾಕಷ್ಟು ಒತ್ತಡಗಳು ಗೌಣವಾಗಿಬಿಟ್ಟಿವೆ. ನಿತ್ಯದ ಹಲವು ಕೆಲಸಗಳ ಮಧ್ಯೆಯೂ ಕ್ರಿಕೆಟ್ ಜ್ವರ ಉದ್ಯಾನನಗರಿಯ ಜನರನ್ನು ಬೆಂಬಿಡದೇ ಕಾಡುತ್ತಿದೆ.

ಮಕ್ಕಳು, ಮಹಿಳೆಯರು ಎನ್ನುವ ಯಾವ ಭೇದವೂ ಇಲ್ಲದೇ ಕ್ರಿಕೆಟ್ ಜ್ವರ ಎಲ್ಲರನ್ನೂ ಆವರಿಸಿಕೊಂಡಿದೆ. ಇದಕ್ಕೆಲ್ಲಾ ಕಾರಣ ಭಾನುವಾರ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ. ಇಂಗ್ಲೆಂಡ್ ಬಲಿಷ್ಠ ತಂಡವಾಗಿರದೇ ಹೋಗಿದ್ದರೆ ಅಥವಾ ಪಂದ್ಯ ಬೆಂಗಳೂರಿಗೆ ವರ್ಗವಾಗದೇ ಇದ್ದರೆ ಈ ಪಂದ್ಯಕ್ಕೆ ಅಷ್ಟೇನೂ ವಿಶೇಷ ಮಹತ್ವ ಲಭಿಸುತ್ತಿರಲಿಲ್ಲವೇನೋ! ಆದರೆ ಈ ಪಂದ್ಯ ರಾಜ್ಯದ ಪಾಲಿಗೆ ಒಲಿದು ಬಂದಿದ್ದು ತೀರಾ ಅಕಸ್ಮಿಕ. ಆದ್ದರಿಂದಲೇ ಸಿಲಿಕಾನ್ ಸಿಟಿಯ ಜನರು ‘ನಿನ್ನಿಂದಲೇ ಕ್ರಿಕೆಟ್‌ನಿಂದಲೇ’ ದಿನವೊಂದು ಶುರುವಾಗ್ತಿದೆ! ಎಂದು ಮೆಲ್ಲಗೆ ಮನದಲ್ಲಿಯೇ ಗುನುಗಿಕೊಳ್ಳುತ್ತಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೊದಲು ನಿರ್ಧರಿಸಿದಂತೆ ಈ ಪಂದ್ಯ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ನಿಗದಿತ ಅವಧಿಯಲ್ಲಿ ಪಿಚ್ ತಯಾರಾಗದ ಕಾರಣ ಎರಡು ಬಲಿಷ್ಠ ತಂಡಗಳು ಸೆಣಸುವುದನ್ನು ನೋಡುವ ಅವಕಾಶ ಕರ್ನಾಟಕದ ಪಾಲಿಗೆ ಅನಿರೀಕ್ಷಿತವಾಗಿ ಒಲಿದು ಬಂದಿತು. ಆದ್ದರಿಂದಲೇ ಈ ಪಂದ್ಯಕ್ಕೆ ಟಿಕೆಟ್ ಪಡೆಯಲು ಕ್ರೀಡಾ ಪ್ರೇಮಿಗಳು ಮುಗಿಬಿದ್ದರು. ಅದಕ್ಕಾಗಿ ಲಾಠಿ ಪೆಟ್ಟನ್ನೂ ತಿಂದರು. ತೊಂದರೆಗೆ ಸಿಕ್ಕಿ ಹಾಕಿಕೊಂಡರು. ಆದರೂ ಅವರ ಕ್ರಿಕೆಟ್ ಪ್ರೀತಿ ತಣ್ಣಗಾಗಲಿಲ್ಲ.

‘ಮನಸ್ಸಿಗೆ ತಾಗಿರುವ ಕ್ರಿಕೆಟ್ ಜ್ವರದ ಮುಂದೆ ದೇಹದ ಜ್ವರ ದೊಡ್ಡದೇನೂ ಅಲ್ಲ’ ಎನ್ನುವ ಕ್ರಿಕೆಟ್ ಪ್ರೇಮಿಗಳು ಟಿಕೆಟ್‌ಗಾಗಿ ರಾತ್ರಿಯಿಡೀ ಕಾದರು. ಕೆಲವರಿಗೆ ಟಿಕೆಟ್ ಸಿಕ್ಕ ಸಂಭ್ರಮ. ಇನ್ನೂ ಕೆಲವರಿಗೆ ನಿರಾಶೆ. ನಮ್ಮ ಮನೆಯಲ್ಲಿಯೇ (ತವರು ನೆಲ) ಕ್ರಿಕೆಟ್ ನಡೆಯುವಾಗ ಖುದ್ದು ವೀಕ್ಷಿಸುವ ಅವಕಾಶವನ್ನು ಕಳೆದುಕೊಳ್ಳಲು ಯಾವ ಅಭಿಮಾನಿಯೂ ಇಷ್ಟಪಡುತ್ತಿಲ್ಲ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಮಹತ್ವದ ಈ ಹೋರಾಟಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಬೇಕು ಎನ್ನುವ ತುಡಿತ ಕ್ರೀಡಾಪ್ರೇಮಿಗಳದ್ದು.

ಯಾವ ತಂಡ ಸೋಲಲಿ, ಗೆಲ್ಲಲಿ... ಅದರ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಬೇಸರವಿಲ್ಲ. ಆದರೆ ಮನದುಂಬಿ ಆಟದ ಸವಿ ಸವಿಯಬೇಕು ಎಂಬುದಷ್ಟೇ ಅವರ ಆಸೆ. ಆದರೂ ‘ನಮ್ಮ ದೇಶ’ ಗೆಲ್ಲಬೇಕು ಎನ್ನುವ ಉತ್ಕಟ ಆಸೆಯೊಂದು ತವರು ನೆಲದ ಅಭಿಮಾನಗಳ ಮನದ ಮೂಲೆಯಲ್ಲಿ ಗುಪ್ತವಾಗಿ ಅಡಗಿ ಕುಳಿತಿದೆ. ಭಾರತ ಗೆಲುವು ಸಾಧಿಸಬೇಕು ಎನ್ನುವ ಅಭಿಮಾನಿಗಳ ಆಸೆ ಈಡೇರುವುದೋ ಇಲ್ಲವೋ ಅದೇ ಬೇರೆ ಮಾತು. ಆದರೆ ಒಂದಂತೂ ಸತ್ಯ. ಉಭಯ ತಂಡಗಳ ಸೆಣಸಾಟ ಭಾನುವಾರ ಉದ್ಯಾನ ನಗರಿಯ ಜನರ ಮನಸ್ಸಿಗೆ ಖುಷಿ ನೀಡುವುದಂತೂ ಖಂಡಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry