ಕ್ರಿಕೆಟ್: ಕ್ರೀಸ್‌ನಲ್ಲಿ ಗಟ್ಟಿಯಾದ ಎಡ್ವರ್ಡ್ಸ್, ಬ್ರಾವೊ

7

ಕ್ರಿಕೆಟ್: ಕ್ರೀಸ್‌ನಲ್ಲಿ ಗಟ್ಟಿಯಾದ ಎಡ್ವರ್ಡ್ಸ್, ಬ್ರಾವೊ

Published:
Updated:
ಕ್ರಿಕೆಟ್: ಕ್ರೀಸ್‌ನಲ್ಲಿ ಗಟ್ಟಿಯಾದ ಎಡ್ವರ್ಡ್ಸ್, ಬ್ರಾವೊ

ಮುಂಬೈ: ಪಂದ್ಯದಿಂದ ಪಂದ್ಯಕ್ಕೆ ಪ್ರಗತಿ ಎಂದಿದ್ದ ಡರೆನ್ ಸಾಮಿ. ನಾಯಕನಾಡಿದ ಈ ಮಾತನ್ನು ಪಾಲಿಸಿದರು ಕೆರಿಬಿಯನ್ ಕ್ರಿಕೆಟಿಗರು. ಮೂರನೇ ಟೆಸ್ಟ್‌ನಲ್ಲಿ ಭದ್ರ ಬುನಾದಿಯ ಮೇಲೆ ಪ್ರಥಮ ಇನಿಂಗ್ಸ್ ಕಟ್ಟುವಂಥ ದಿಟ್ಟ ಆಟವನ್ನೂ ಆಡಿದ್ದು ವಿಶೇಷ.ಭಾರತದ್ದೇನು ಕೆಟ್ಟ ಬೌಲಿಂಗ್ ಅಲ್ಲ. ಆದರೂ ವಿಂಡೀಸ್ ಆರಂಭದ ಬ್ಯಾಟ್ಸ್‌ಮನ್‌ಗಳನ್ನೇ ಕಟ್ಟಿಹಾಕಲು ಪಟ್ಟ ಕಷ್ಟ ಅಪಾರ. `ಮಹಿ~ ಬೌಲಿಂಗ್ ಬತ್ತಳಿಕೆಯಲ್ಲಿನ ವೇಗಾಸ್ತ್ರಗಳು ಪ್ರಯೋಜನಕ್ಕೆ ಬರಲಿಲ್ಲ. ಆಗಲೇ ಪ್ರವಾಸಿ ಪಡೆಗೆ ದೊಡ್ಡ ಮೊತ್ತದ ಕನಸು. ಮನಸು ಮಾಡಿದರೆ ಎಂಥ ಅಂಗಳದಲ್ಲಿಯೂ ಗಟ್ಟಿಯಾಗಿ ನಿಲ್ಲಬಲ್ಲೆವು ಎನ್ನುವುದನ್ನು ಸಾಬೀತು ಪಡಿಸಿದರು ಕೆರಿಬಿಯನ್ನರು.ಟಾಸ್ ಗೆಲುವಿನೊಂದಿಗೆಯೇ ಅದೃಷ್ಟದ ಬಾಗಿಲು ತೆರೆಯಿತೆಂದು ಸಂತಸ ಪಟ್ಟ ಸಾಮಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದು ನಿರೀಕ್ಷಿತ. ಎರಡು ದಿನಗಳಲ್ಲಿಯೇ ಸ್ವರೂಪ ಬದಲಿಸುವ ಇತಿಹಾಸ ಹೊಂದಿರುವ ಅಂಗಳ ವಾಂಖೇಡೆ ಕ್ರೀಡಾಂಗಣದಲ್ಲಿನದು. ಆದ್ದರಿಂದ ಆರಂಭದಲ್ಲಿಯೇ ದೊಡ್ಡ ಮೊತ್ತದ ಗುರಿಯನ್ನಿಟ್ಟು ಭಾರತವನ್ನು ಕಾಡುವುದು ಕೆರಿಬಿಯನ್ನರ ಉದ್ದೇಶ. ಆ ಯೋಚನೆಯಂತೆಯೇ ನಿಧಾನವಾಗಿ ರನ್‌ಗಳನ್ನು ಖಾತೆಗೆ ಸೇರಿಸಿಕೊಳ್ಳುತ್ತಲೇ ಸಾಗಿದೆ ವಿಂಡೀಸ್.ಮೂರನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನವಾದ ಮಂಗಳವಾರದ ಆಟಕ್ಕೆ ತೆರೆ ಬೀಳುವ ಹೊತ್ತಿಗೆ ವೆಸ್ಟ್ ಇಂಡೀಸ್ ತಂಡದ ಖಾತೆಗೆ ಹರಿದು ಬಂದಿದ್ದು 267 ರನ್. ಕಳೆದುಕೊಂಡಿದ್ದು ಕೇವಲ ಎರಡು ವಿಕೆಟ್. ಆದ್ದರಿಂದ ರನ್‌ಗಳ ಗೋಪುರವನ್ನು ಎತ್ತರಕ್ಕೇರಿಸುವ ಆಶಯಕ್ಕೂ ಬಲ. ಎಲ್ಲವೂ ಬಯಸಿದಂತೆ ಸಾಗಿರುವ ಈ ಪಂದ್ಯದಲ್ಲಿ ಗೆಲುವು ಸಾಧ್ಯವಾದರೆ ಅದು ಪ್ರವಾಸಿಗಳಿಗೆ ದೊಡ್ಡ ಹಿರಿಮೆಯ ಗರಿ. ಬಲಾಢ್ಯ ಭಾರತಕ್ಕೆ ಸಂಪೂರ್ಣ ಸರಣಿ ವಿಜಯದ ಅವಕಾಶ ನೀಡಲಿಲ್ಲ ಎನ್ನುವ ಸಮಾಧಾನ.ಮೊದಲ ದಿನ ಸಂತಸದಿಂದ ಕಳೆದಿರುವ ಸಾಮಿ ಬಳಗವನ್ನು ನಿಯಂತ್ರಿಸುವ ತಂತ್ರದ ಬಲೆಯನ್ನು ಹೆಣೆಯುವುದೇ ಈಗ ಭಾರತದ ಮುಂದಿರುವ ಸವಾಲು. ಆರಂಭದಲ್ಲಿಯೇ ವಿಂಡೀಸ್‌ಗೆ ಪೆಟ್ಟು ನೀಡುವ ಉದ್ದೇಶವಂತೂ ಈಡೇರಲಿಲ್ಲ.ಆ್ಯಡ್ರಿನ್ ಭರತ್ (62; 148 ಎಸೆತ, 8 ಬೌಂಡರಿ) ಹಾಗೂ ಕ್ರೇಗ್ ಬ್ರಾಥ್‌ವೈಟ್ (68; 184 ಎ., 8 ಬೌಂಡರಿ) ನಡುವಣ ಜೊತೆಯಾಟ ಬೆಳೆಯಿತು. 132 (317 ಎಸೆತ) ರನ್‌ಗಳನ್ನು ಕಲೆಹಾಕಿದ ಇವರಿಬ್ಬರೂ ತೋರಿದ ಸಹನೆ ಮೆಚ್ಚುವಂಥದು.ಗಟ್ಟಿಯಾದ ಅಂಗಳದಲ್ಲಿ ಚೆಂಡು ಪುಟಿದೆದ್ದರೂ ಆತುರದಿಂದ ಬ್ಯಾಟ್ ಬೀಸಲಿಲ್ಲ. ರಕ್ಷಣೆಯ ಆಟವೇ ಅವರ ಮೂಲಮಂತ್ರ! ದೋನಿ ಪಡೆಯ ಬೌಲರ್‌ಗಳು ಯಾವುದೇ ತಂತ್ರ ಮಾಡಿದರೂ ಅದಕ್ಕೆ ವಿಂಡೀಸ್ ಜೋಡಿಯದು ತಿರುಮಂತ್ರ. ಐವತ್ತು ಓವರುಗಳು ಕಳೆದು ಹೋದವು. ಅಲ್ಲಿಯವರೆಗೆ ವೇಗ ಹಾಗೂ ಸ್ಪಿನ್ ದಾಳಿ ಪ್ರಯೋಜನಕ್ಕೆ ಬರಲಿಲ್ಲ. ಬೌಲಿಂಗ್‌ನಲ್ಲಿ ಬದಲಾವಣೆ ಮಾಡುತ್ತಲೇ ಸಾಗಿದ ಭಾರತ ತಂಡದ ನಾಯಕನ ಯೋಚನೆಗೆ ತಕ್ಕ ಫಲ ಸಿಕ್ಕಿದ್ದು ಮಾತ್ರ 53ನೇ ಓವರ್‌ನಲ್ಲಿ.ನವದೆಹಲಿಯಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿಯೇ ಹೀರೊ ಆಗಿ ಮಿಂಚಿದ್ದ ಚೆನ್ನೈ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಲ್ಲಿಯೂ ತಂಡಕ್ಕೆ ಪ್ರಯೋಜನಕಾರಿ ಬೌಲರ್ ಎನಿಸಿದರು. ಉತ್ತಮ ಅಂತರದಲ್ಲಿ ಚೆಂಡನ್ನು ಎಸೆದರು. ಆಗ ಪುಟಿದೆದ್ದ ಚೆಂಡು ಒಳಮುಖವಾಗಿ ತಿರುವು ಕೂಡ ಪಡೆಯಿತು. ಅದೇ ಭಾರತಕ್ಕೆ ದಿನದ ಅದ್ಭುತ ಕ್ಷಣ. ಆಗ ವಿಂಡೀಸ್‌ನ ಆ್ಯಡ್ರಿನ್ ಭರತ್ ಅವರ ಬ್ಯಾಟ್ ಒಳ ಕೊನೆಗೆ ತಾಗಿದ್ದ ಚೆಂಡನ್ನು ವಿಕೆಟ್ ಕೀಪರ್ ದೋನಿ ಹಿಡಿತಕ್ಕೆ ಪಡೆಯುವಲ್ಲಿ ತಪ್ಪು ಮಾಡಲಿಲ್ಲ. ಅದಕ್ಕೂ ಮುನ್ನ ಒಮ್ಮೆ ಭರತ್ ಹೀಗೆಯೇ ತಡಬಡಾಯಿಸಿದ್ದರೂ, ಅಪಾಯದಿಂದ ತಪ್ಪಿಸಿಕೊಂಡಿದ್ದರು. ಆದರೆ ಮತ್ತೊಮ್ಮೆ ಅದೃಷ್ಟವು ಕೈಹಿಡಿದು ನಿಲ್ಲಲಿಲ್ಲ.ಇನ್ನೊಬ್ಬ ಆರಂಭಿಕ ಆಟಗಾರ ಬ್ರಾಥ್‌ವೈಟ್ ಕೂಡ ಅಶ್ವಿನ್ ಬೀಸಿದ ಸ್ಪಿನ್ ಮೋಡಿಯ ಬಲೆಯಲ್ಲಿಯೇ ಬಿದ್ದರು. ಸೂಕ್ಷ್ಮವಾಗಿ ಬ್ಯಾಟ್‌ಗೆ ತಾಗಿ ನಂತದ ಗ್ಲೌಸ್‌ಗೆ ಸವರಿತ್ತು ಚೆಂಡು. ಅಂಪೈರ್‌ಗೆ ಅದೊಂದು ಸವಾಲಿನ ತೀರ್ಪು. ಕ್ಯಾಚ್ ಪಡೆದಿದ್ದ ವಿರಾಟ್ ಕೊಹ್ಲಿ ಉತ್ಸಾಹದಿಂದ ಕಿರುಚಿದ್ದರು. ಅದಕ್ಕೆ ಭಾರತ ತಂಡದ ಎಲ್ಲರೂ ಧ್ವನಿಗೂಡಿಸಿದರು. ಈ ಒಕ್ಕೋರಲಿನ ಮನವಿಗೆ ತಕ್ಕ ಫಲವೇ ಸಿಕ್ಕಿತು. ಆದರೆ ಆನಂತರ ಮತ್ತೆ ವಿಕೆಟ್ ಬಿದ್ದ ಸಂಭ್ರಮದ ಅಲೆಯಲ್ಲಿ ತೇಲುವ ಅವಕಾಶ ಆತಿಥೇಯರಿಗೆ ಸಿಗಲಿಲ್ಲ.ಕ್ರಿಕ್ ಎಡ್ವರ್ಡ್ಸ್ (65;117 ಎ., 10 ಬೌಂಡರಿ) ಹಾಗೂ ಡರೆನ್ ಬ್ರಾವೊ (57; 98 ಎ., 7 ಬೌಂಡರಿ) ಅವರು ಸೂರ್ಯ ಪಶ್ಚಿಮದ ಕಡಲ ಅಂಚಿಗೆ ಜಾರುವ ಹೊತ್ತಿಗೂ ಕ್ರೀಸ್‌ನಲ್ಲಿ ಉಳಿದರು. ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ ಅವರು 117 (192 ಎಸೆತ) ರನ್‌ಗಳನ್ನು ಕಲೆಹಾಕಿದರು.ದಿನದಾಟ ಮುಗಿಯುವರೆಗೆ ಇವರಿಬ್ಬರೂ ಕ್ರೀಸ್‌ನಲ್ಲಿ ಉಳಿಯಲು ಭಾರತದವರು ಕ್ಷೇತ್ರ ರಕ್ಷಣೆಯಲ್ಲಿ ಏಕಾಗ್ರತೆ ಕಳೆದುಕೊಂಡಿದ್ದೂ ಕಾರಣ. ಸ್ಲಿಪ್‌ನಲ್ಲಿದ್ದ ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಕೈಚಾಚಿ ಚೆಂಡನ್ನು ಹಿಡಿಯುವಲ್ಲಿ ತಡಬಡಾಯಿಸಿದ್ದಂತೂ ಕಣ್ಣುಕುಕ್ಕಿತು. ಈಡನ್ ಗಾರ್ಡನ್ಸ್‌ನಲ್ಲಿ ಅದ್ಭುತವಾದ ಕ್ಯಾಚ್ ಪಡೆದು ಮಿಂಚಿದ್ದ ಇವರಿಬ್ಬರೂ ಇಲ್ಲಿ ಅಂಥ ಸಾಹಸ ಮಾಡಲಿಲ್ಲ ಎನ್ನುವುದು ಬೇಸರಕ್ಕೆ ಕಾರಣ!ಸ್ಕೋರ್ ವಿವರ: ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 91 ಓವರುಗಳಲ್ಲಿ   2 ವಿಕೆಟ್‌ಗಳ ನಷ್ಟಕ್ಕೆ 267

ಆ್ಯಡ್ರಿನ್ ಭರತ್ ಸಿ ಮಹೇಂದ್ರ ಸಿಂಗ್ ದೋನಿ ಬಿ ರವಿಚಂದ್ರನ್ ಅಶ್ವಿನ್  62

ಕ್ರೇಗ್ ಬ್ರಾಥ್‌ವೈಟ್ ಸಿ ವಿರಾಟ್ ಕೊಹ್ಲಿ ಬಿ ರವಿಚಂದ್ರನ್ ಅಶ್ವಿನ್  68

ಕ್ರಿಕ್ ಎಡ್ವರ್ಡ್ಸ್ ಬ್ಯಾಟಿಂಗ್  65

ಡರೆನ್ ಬ್ರಾವೊ ಬ್ಯಾಟಿಂಗ್  57

ಇತರೆ: (ಬೈ-4, ಲೆಗ್‌ಬೈ-10, ನೋಬಾಲ್-1) 15

ವಿಕೆಟ್ ಪತನ: 1-137 (ಆ್ಯಡ್ರಿನ್ ಭರತ್; 52.5), 2-150 (ಕ್ರೇಗ್ ಬ್ರಾಥ್‌ವೈಟ್; 58.6).

ಬೌಲಿಂಗ್: ಇಶಾಂತ್ ಶರ್ಮ 17-6-33-0 (ನೋಬಾಲ್-1), ವರುಣ್ ಆ್ಯರನ್ 16-3-47-0, ಪ್ರಗ್ಯಾನ್ ಓಜಾ 26-7-55-0, ರವಿಚಂದ್ರನ್ ಅಶ್ವಿನ್ 27-2-86-2, ವೀರೇಂದ್ರ ಸೆಹ್ವಾಗ್ 3-0-23-0, ವಿರಾಟ್ ಕೊಹ್ಲಿ 2-0-9-0

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry