ಕ್ರಿಕೆಟ್: ಕ್ಲೀನ್‌ಸ್ವೀಪ್ ಅವಮಾನದಿಂದ ಪಾರಾಗುವುದೇ?

7

ಕ್ರಿಕೆಟ್: ಕ್ಲೀನ್‌ಸ್ವೀಪ್ ಅವಮಾನದಿಂದ ಪಾರಾಗುವುದೇ?

Published:
Updated:
ಕ್ರಿಕೆಟ್: ಕ್ಲೀನ್‌ಸ್ವೀಪ್ ಅವಮಾನದಿಂದ ಪಾರಾಗುವುದೇ?

ಲಂಡನ್: ಭಾರತ ಕ್ರಿಕೆಟ್ ತಂಡದ ಆಟಗಾರರು ಐದು ವಾರಗಳ ಹಿಂದೆ ಹಲವು ಸುಂದರ ಕನಸುಗಳನ್ನು ಕಟ್ಟಿಕೊಂಡು ಇಂಗ್ಲೆಂಡ್‌ಗೆ ಬಂದಿಳಿದಿದ್ದರು. ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರ ರ‌್ಯಾಂಕಿಂಗ್ ಹೊಂದಿರುವ ಹೆಮ್ಮೆ ಆಟಗಾರರಲ್ಲಿತ್ತು. ಯುವ ಹಾಗೂ ಅನುಭವಿಗಳನ್ನೊಳಗೊಂಡ ತಂಡದ ಮೇಲೆ ಎಲ್ಲರಿಗೂ ವಿಶ್ವಾಸವಿತ್ತು.ಇಂತಹ ಮಹೇಂದ್ರ ಸಿಂಗ್ ದೋನಿ ಬಳಗದ ಸ್ಥಿತಿ ಈಗ ದಿಕ್ಕುತಪ್ಪಿದ ಹಡಗಿನಂತಾಗಿದೆ. ಇಂಗ್ಲೆಂಡ್‌ನ `ವೇಗ~ದ ಮುಂದೆ ಭಾರತದ ಆಟಗಾರರ ಒಂದೊಂದೇ ಕನಸುಗಳು ಪುಡಿಯಾಗಿವೆ. ಅಗ್ರ ರ‌್ಯಾಂಕಿಂಗ್ ಪಟ್ಟ ಕೈಜಾರಿದೆ. ಎಲ್ಲ ಕಡೆಗಳಿಂದ ಟೀಕೆಗಳು ಕೇಳಿಬಂದಿವೆ. ಕಳೆದ ಕೆಲ ವಾರಗಳು ಭಾರತಕ್ಕೆ ದುರಂತವಾಗಿ ಪರಿಣಮಿಸಿದೆ.ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ 0-3 ರಲ್ಲಿ ಹಿನ್ನಡೆ ಅನುಭವಿಸಿರುವ ಭಾರತದ ಮುಂದೆ ಈಗ ಇರುವುದು ಒಂದು ಗುರಿ ಮಾತ್ರ. ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗುವ ಅಂತಿಮ ಟೆಸ್ಟ್‌ನಲ್ಲಿ ಗೆಲುವು ಸಾಧ್ಯವಲ್ಲದಿದ್ದರೂ, ಕಡಿಮೆಪಕ್ಷ ಡ್ರಾ ಸಾಧಿಸಬೇಕು. ಆ ಮೂಲಕ `ಕ್ಲೀನ್‌ಸ್ವೀಪ್~ ಅವಮಾನದಿಂದ ಪಾರಾಗುವುದು.ಭಾರತ ತಂಡದ ಪ್ರಸಕ್ತ ಪರಿಸ್ಥಿತಿಯನ್ನು ನೋಡಿದರೆ ಈ ಗುರಿ ಈಡೇರುವುದು ಸುಲಭವಲ್ಲ. ಏಕೆಂದರೆ ಒಂದರ ಮೇಲೊಂದರಂತೆ ಅಪ್ಪಳಿಸಿದ ಮೂರು ಸೋಲುಗಳಿಂದ ಆಟಗಾರರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಎಳ್ಳಷ್ಟೂ ಉತ್ಸಾಹ ಉಳಿದಿಲ್ಲ. ಈ ತಂಡವನ್ನು ದೋನಿ ಅಂತಿಮ ಟೆಸ್ಟ್‌ನಲ್ಲಿ ಯಶಸ್ಸಿನೆಡೆಗೆ ಮುನ್ನಡೆಸಬೇಕಾದರೆ ಪವಾಡ ನಡೆಯಬೇಕಷ್ಟೆ.`ಮಹಿ~ ಬಳಗ ಎಲ್ಲ ವಿಭಾಗಗಳಲ್ಲೂ ಪೂರ್ಣ ವೈಫಲ್ಯ ಅನುಭವಿಸಿದೆ. ಸರಣಿಯಲ್ಲಿ ಇದುವರೆಗೆ ಆಡಿದ ಆರು ಇನಿಂಗ್ಸ್‌ಗಳಲ್ಲಿ ಒಮ್ಮೆಯೂ ತಂಡ 300ರ ಗಡಿ ದಾಟಿಲ್ಲ. ಮಾತ್ರವಲ್ಲ ಇಂಗ್ಲೆಂಡ್‌ನ ಎಲ್ಲ 20 ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಿಲ್ಲ.ಭಾರತ ತನ್ನ 79 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ `ಕ್ಲೀನ್‌ಸ್ವೀಪ್~ ಅವಮಾನ ಎದುರಿಸಿದ್ದು ಮೂರು ಸಲ ಮಾತ್ರ. ಇಂಗ್ಲೆಂಡ್ ಕೈಯಲ್ಲಿ 1959 ರಲ್ಲಿ 0-5, ವೆಸ್ಟ್ ಇಂಡೀಸ್ ಎದುರು 1961-62 ರಲ್ಲಿ 0-5 ಹಾಗೂ ಆಸ್ಟ್ರೇಲಿಯ ಕೈಯಲ್ಲಿ 1967-68 ರಲ್ಲಿ 0-4 ರಲ್ಲಿ ಸರಣಿ ಸೋಲು ಅನುಭವಿಸಿತ್ತು. ಇದೀಗ ಅಂತಹದೇ ಅವಮಾನದ ಹೊಸ್ತಿಲಲ್ಲಿ ಬಂದು ನಿಂತಿದೆ.ಆದರೆ ಅಂತಿಮ ಪಂದ್ಯ ನಡೆಯಲಿರುವ ಓವಲ್ ಕ್ರೀಡಾಂಗಣದ ಇತಿಹಾಸ ಭಾರತದ ಪರವಾಗಿದೆ. ಇಲ್ಲಿ ಈ ಹಿಂದೆ ಆಡಿದ 10 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಸೋಲು ಅನುಭವಿಸಿದೆ. ಸಚಿನ್ ತೆಂಡೂಲ್ಕರ್ ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಇಲ್ಲೇ ಆಡಿದ್ದರು. ಇದೇ ತಾಣದಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ 100ನೇ ಶತಕ ಗಳಿಸವರೇ ಎಂಬುದನ್ನು ಕಾದುನೋಡಬೇಕು.ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಅವರಿಂದ ತಂಡ ಉತ್ತಮ ಆರಂಭ ನಿರೀಕ್ಷಿಸುತ್ತಿದೆ. `ವೀರೂ~ ಎದುರಾಳಿ ಬೌಲರ್‌ಗಳ ದಿಕ್ಕುತಪ್ಪಿಸುವುದು ಅಗತ್ಯ. ಹಾಗಾದಲ್ಲಿ ಇತರ ಬ್ಯಾಟ್ಸ್‌ಮನ್‌ಗಳಿಗೆ ಹೆದರಿಕೆಯಿಲ್ಲದೆ ಆಡಬಹುದು.ಮೂರನೇ ಟೆಸ್ಟ್ ವೇಳೆ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ದ ಪ್ರವೀಣ್ ಕುಮಾರ್ ಕಣಕ್ಕಿಳಿಯುವುದು ಇನ್ನೂ ಖಚಿತವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry