ಕ್ರಿಕೆಟ್ ಗೀಳಿಗೆ ಹರಿಹರನ್ ಹಾಡು

7

ಕ್ರಿಕೆಟ್ ಗೀಳಿಗೆ ಹರಿಹರನ್ ಹಾಡು

Published:
Updated:
ಕ್ರಿಕೆಟ್ ಗೀಳಿಗೆ ಹರಿಹರನ್ ಹಾಡು

ಏಳು ಭಾಷೆಯ ಸಾವಿರಾರು ಸುಮಧುರ ಗೀತೆಗಳಿಗೆ ಧ್ವನಿಯಾಗಿರುವ ಗಾಯಕ ಹರಿಹರನ್ ಅವರಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ತಮ್ಮ ವಿಭಿನ್ನ ಕಂಠದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಈ ಕಲಾ ಕೋವಿದರ ಕಂಠದಲ್ಲಿ ಮೂಡಿಬಂದಿರುವ ಗೀತೆಗಳನ್ನು ಕೇಳಿದರೆ ಮೈಯಲ್ಲಿನ ರೋಮಗಳೆಲ್ಲಾ ಸೆಟೆದು ನಿಲ್ಲುತ್ತವೆ. ಕಂಠದಿಂದಷ್ಟೇ ಅಲ್ಲದೇ ತಮ್ಮ ವೇಷ ಭೂಷಣದಿಂದಲೂ ಮನಸೆಳವ ಗಾಯಕ ಹರಿಹರನ್ ಭಾನುವಾರ ಬೆಂಗಳೂರಿಗೆ ಬಂದಿದ್ದರು. ಹರಿಹರನ್ ಅವರಿಗೆ ವಯಸ್ಸು ಐವತ್ತೇಳಾದರೂ ಉತ್ಸಾಹದ ಚಿಲುಮೆ. ತಲೆ ಮೇಲೊಂದು ಸಿನಿಮಾ ನಿರ್ದೇಶಕರ ಕಪ್ಪು ಟೊಪ್ಪಿ ಧರಿಸಿದ್ದ ಹರಿಹರನ್ ಅವರು ಕಪ್ಪು ಅಂಗಿ, ಕಪ್ಪು ಪ್ಯಾಂಟು, ಕರಿ ಬೂಟು ಧರಿಸಿದ್ದರು. ಅಂಗಿ ಮೇಲೊಂದು ಹಸಿರು ಬಣ್ಣದ ವೇಯ್ಸ್ಟಕೋಟು ಮಿಂಚುತ್ತಿತ್ತು. ಎನ್‌ಡಿ ಟೀವಿ ಪ್ರಾಯೋಜಿತ ಟೊಯೊಟಾ ಯೂನಿವರ್ಸಿಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ `ಸದರನ್ ಚಾಂಪ್ಸ್' ಹಾಗೂ `ಈಸ್ಟ್ರನ್ ಈಗಲ್ಸ್' ತಂಡಗಳ ನಡುವೆ ಕ್ರಿಕೆಟ್‌ಟೂರ್ನಿ ಇತ್ತು. ಈ ಪಂದ್ಯದ ಆಟಗಾರರನ್ನು ಹುರಿದುಂಬಿಸುವ ಸಲುವಾಗಿ ಹರಿಹರನ್ ಬಂದಿದ್ದರು. ಈ ವೇಳೆ ಮಾತಿಗೆ ಸಿಕ್ಕ ಹರಿಹರನ್ ಅವರ ಜತೆಗಿನ ಚುಟುಕು ಸಂದರ್ಶನ ಇಲ್ಲಿದೆ.ಕ್ರಿಕೆಟ್ ಅಂಗಳದಲ್ಲಿ ಹಾಡುವಾಗಿನ ಅನುಭವ...

ಇಷ್ಟು ದೊಡ್ಡ ಕ್ರಿಕೆಟ್ ಅಂಗಳದಲ್ಲಿ ಹಾಡುವುದೇ ಒಂದು ವಿಭಿನ್ನ ಅನುಭವ ಹಾಗೂ ವಿಭಿನ್ನ ವೇದಿಕೆ. ಈ ಹಿಂದೆ ಮದ್ರಾಸ್‌ನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಇದೇ ಮಾದರಿಯ ಒಂದು ಪ್ರದರ್ಶನ ನೀಡಿದ್ದೆ. ಅದಾದ ನಂತರ ಬೆಂಗಳೂರಿನಲ್ಲಿ ನಡೆಯುತ್ತಿರುವ ಮತ್ತೊಂದು ಕ್ರಿಕೆಟ್ ಟೂರ್ನಿಯಲ್ಲಿ ಹಾಡಿದ್ದು ಖುಷಿಕೊಟ್ಟಿದೆ.ಟೊಯೊಟಾ ಯುನಿವರ್ಸಿಟಿ ಕ್ರಿಕೆಟ್ ಚಾಂಪಿಯನ್‌ಶಿಪ್ ಬಗ್ಗೆ...

ಪದವಿ ಮಟ್ಟದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಚಾಂಪಿಯನ್‌ಶಿಪ್ ಅತ್ಯುತ್ತಮ ವೇದಿಕೆ. ಭಾರತ ಕ್ರಿಕೆಟ್ ತಂಡವನ್ನು ಸೇರಬೇಕು ಎಂಬ ಕನಸುಳ್ಳ ಉದಯೋನ್ಮುಖ ಆಟಗಾರರಿಗೆ ಇಂತಹ ಪಂದ್ಯಾವಳಿಗಳು ಅತ್ಯವಶ್ಯಕ. ಕ್ರಿಕೆಟ್ ಧ್ಯಾನಿಸುವ ಹುಡುಗರಿಗೆ ಈ ಪಂದ್ಯಾವಳಿ ಸಹಕಾರಿ.ಯಾವ ಯಾವ ಹಾಡುಗಳನ್ನು ಹಾಡಲಿದ್ದೀರಿ?

ಕ್ರಿಕೆಟ್ ಆಟಗಾರರನ್ನು ಹುರಿದುಂಬಿಸುವಂಥ ಹಾಡುಗಳನ್ನು ಹಾಡುವುದು ನನ್ನ ಉದ್ದೇಶ. ರೋಜಾ ಸಿನಿಮಾದ ಎವರ್‌ಗ್ರೀನ್ ಸಾಂಗ್ `ರೋಜಾ ರೋಜಾ' ಇತ್ತೀಚೆಗೆ ತೆರೆಕಂಡ ವಿಜಯ್ ಅಭಿನಯದ `ತುಪಾಕಿ' ಚಿತ್ರದ ಗೀತೆ ಹೀಗೆ ಕೆಲವು ಹಾಡುಗಳನ್ನು ಹಾಡಲಿದ್ದೇನೆ.ಮುಂದಿನ ಪ್ರಾಜೆಕ್ಟ್‌ಗಳು...

ತೆಲುಗಿನ `ವಿಧೇಯುಡು', ತಮಿಳಿನ `ಒರುವರ್ ಮೀಥು ಇರುವರ್ ಸೈಂಥು' ಚಿತ್ರಗಳು ಕೈಯಲ್ಲಿವೆ. ಇದರ ನಡುನಡುವೆ ಸಂಗೀತ ಕಾರ್ಯಕ್ರಮಗಳಂತೂ ಇದ್ದೇ ಇರುತ್ತವೆ. ಹಾಗೆಯೇ, ಉಸ್ತಾದ್ ಜಾಕೀರ್ ಹುಸೇನ್ ಜತೆಗೂಡಿ ಒಂದು ಪ್ರಾಜೆಕ್ಟ್ ಮಾಡುವ ಕೆಲಸ ನಡೆಯುತ್ತಿದೆ.ಬೆಂಗಳೂರು ಬಗ್ಗೆ...

ಕೆಲ ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದೆ. ಆಗ ನನ್ನ ವಾಸ ಕುಂಬಳಗೋಡಿನಲ್ಲಿ. ನಾನು ಮದುವೆಯಾಗಿದ್ದು ಬೆಂಗಳೂರಿನಲ್ಲಿಯೇ. ಬೆಂಗಳೂರು ಉತ್ತಮ ಹವಾಗುಣ ಹೊಂದಿರುವ ಸುಂದರ ನಗರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry