ಗುರುವಾರ , ಮೇ 28, 2020
27 °C

ಕ್ರಿಕೆಟ್: ಚಿಯರ್‌ಗರ್ಲ್ಸ್ ನೆರವು ಹೇಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿ ಪಂದ್ಯಗಳ ಸಂದರ್ಭದಲ್ಲಿ ಕುಣಿಯುವ ಚಿಯರ್‌ಗರ್ಲ್ಸ್ ಯಾವ ರೀತಿಯಲ್ಲಿ ಕ್ರಿಕೆಟ್‌ಗೆ ನೆರವಾಗುತ್ತಾರೆ?ಇಂಥದೊಂದು ಸವಾಲು ಹಾಕಿದ ಸಂಸದೀಯ ಹಣಕಾಸು ಸ್ಥಾಯಿ ಸಮಿತಿಯು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಅಧಿಕಾರಿಗಳು ತಬ್ಬಿಬ್ಬಾಗಿ ನಿಲ್ಲುವಂತೆ ಮಾಡಿತು.ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್, ಕಾರ್ಯದರ್ಶಿ ಎನ್.ಶ್ರೀನಿವಾಸನ್ ಹಾಗೂ ಐಪಿಎಲ್ ಮುಖ್ಯಸ್ಥ ಚಿರಾಯು ಅಮೀನ್ ಅವರು ‘ಐಪಿಎಲ್ ಮೂಲಕ ಪ್ರತಿಭಾವಂತ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ವಿವರಿಸಿದರು. ಆದರೆ ಚಿಯರ್‌ಗರ್ಲ್ಸ್ ಕುರಿತು ಪ್ರಶ್ನೆ ಕೇಳಿದಾಗ ಉತ್ತರ ನೀಡಲಾಗದೇ ಬಾಯಿಗೆ ಬೀಗ ಹಾಕಿಕೊಂಡರು ಎಂದು ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ. ಯಶವಂತ್ ಸಿನ್ಹಾ ಅಧ್ಯಕ್ಷತೆಯ ಸಂಸದೀಯ ಸಮಿತಿಯು ಐಪಿಎಲ್‌ನಲ್ಲಿ ಆಟಗಾರರ ಹರಾಜು ನಡೆಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿತು.ರೋಮನ್ ಸಾಮ್ರಾಜ್ಯದಲ್ಲಿ ಗುಲಾಮರನ್ನು ‘ಗ್ಲೇಡಿಯೇಟರ್’ಗಳಾಗಿ ಮಾಡಲು ಹರಾಜಿನಲ್ಲಿ ಖರೀದಿಸುತ್ತಿದ್ದ ರೀತಿಯಲ್ಲಿಯೇ ಐಪಿಎಲ್‌ನಲ್ಲಿ ಕ್ರಿಕೆಟಿಗರನ್ನು ಮಾರಾಟ ಮಾಡುತ್ತಿರುವುದೇಕೆ? ಎಂದು ಕೇಳುವ ಜೊತೆಗೇ ಹೀಗೆ ಮಾಡುವುದು ಅಗತ್ಯವಿಲ್ಲ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸಲಾಯಿತು. ಐಪಿಎಲ್‌ನಿಂದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆಗಿರುವ ಕುರಿತು ವಿಚಾರಣೆ ನಡೆಸುತ್ತಿರುವ ಸಮಿತಿಯು ಗುರುವಾರ ಸುಮಾರು ಎರಡೂವರೆ ತಾಸಿಗೂ ಹೆಚ್ಚು ಹೊತ್ತು ಬಿಸಿಸಿಐ ಹಿರಿಯ ಅಧಿಕಾರಿಗಳನ್ನು ಪ್ರಶ್ನೆಗಳ ಬಲೆಯಲ್ಲಿ ಕಟ್ಟಿಹಾಕಿತು!ವಿದೇಶಿ ಕ್ರಿಕೆಟಿಗರಿಗಾಗಿ 13 ದಶಲಕ್ಷ ಡಾಲರ್ ಮೊತ್ತದ ಬ್ಯಾಂಕ್ ಖಾತ್ರಿ ಹಣವನ್ನು ಮುಂದುವರಿಸಿಕೊಂಡು ಹೋಗುವ ವಿಷಯದಲ್ಲಿ ನಿರ್ಣಯ ಕೈಗೊಳ್ಳುವ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅನುಮತಿ ಪಡೆಯದೇ ಇರುವ ಮೂಲಕ ವಿದೇಶಿ ಹಣ ಹೂಡಿಕೆ ನಿಯಮ ಉಲ್ಲಂಘಿಸಿರುವುದಕ್ಕೆ ಸಮಿತಿಯು ಬಿಸಿಸಿಐ ಹಾಗೂ ಐಪಿಎಲ್ ವಿರುದ್ಧ ಕಿಡಿಕಾರಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.