ಗುರುವಾರ , ನವೆಂಬರ್ 21, 2019
20 °C

ಕ್ರಿಕೆಟ್ ಜಗಳ ಕೊಲೆಯಲ್ಲಿ ಅಂತ್ಯ

Published:
Updated:

ಬೆಂಗಳೂರು: ಕ್ರಿಕೆಟ್ ಆಡುವ ವೇಳೆ ಸ್ನೇಹಿತರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಕಂಡಿರುವ ಘಟನೆ ಚಿಕ್ಕಬೊಮ್ಮಸಂದ್ರದಲ್ಲಿ ಶುಕ್ರವಾರ ನಡೆದಿದೆ.ಮೂಲತಃ ಯಾದಗಿರಿಯವರಾದ ಪರಮೇಶ್ (30) ಕೊಲೆಯಾದವರು. ಕೂಲಿ ಕೆಲಸ ಮಾಡುತ್ತಿದ್ದ ಅವರು ಚಿಕ್ಕಬೊಮ್ಮಸಂದ್ರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಅವರ ಸ್ನೇಹಿತರು ಸಹ ಕೂಲಿ ಕೆಲಸ ಮಾಡಿಕೊಂಡು ಚಿಕ್ಕಬೊಮ್ಮಸಂದ್ರದಲ್ಲೆ ವಾಸವಾಗಿದ್ದಾರೆ.`ಶುಕ್ರವಾರ ಮಧ್ಯಾಹ್ನ ಎಲ್ಲರೂ ಕ್ರಿಕೆಟ್ ಆಡಿದ್ದಾರೆ. ಈ ವೇಳೆ ಜಗಳ ನಡೆದ ಕಾರಣ ಪರಮೇಶ್ ಆಟವನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಹಿಂದಿರುಗಿದ್ದಾರೆ. ಮಧ್ಯಾಹ್ನ ನಡೆದ ಜಗಳದಿಂದ ಕೋಪಗೊಂಡಿದ್ದ ಸ್ನೇಹಿತರು, ರಾತ್ರಿ 8.30ರ ಸುಮಾರಿಗೆ ಪಾನಮತ್ತರಾಗಿ ಪರಮೇಶ್ ಅವರ ಮನೆ ಬಳಿ ಬಂದು ಮತ್ತೆ ಜಗಳ ತೆಗೆದಿದ್ದಾರೆ.ಈ ವೇಳೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪರಮೇಶ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದರು.ಪರಶುರಾಮ್, ಹನುಮಂತು ಸೇರಿದಂತೆ ನಾಲ್ಕೈದು ಮಂದಿ ಈ ಕೃತ್ಯ ಎಸಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕೂಡಲೇ ಅವರನ್ನು ಬಂಧಿಸಲಾಗುವುದು ಎಂದು ಯಲಹಂಕ ಉಪನಗರ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)