`ಕ್ರಿಕೆಟ್ ದೇವರಿಗೆ' ಮೊದಲ ಅಗ್ನಿಪರೀಕ್ಷೆ

7
ನಾಳೆಯಿಂದ ಮೂರನೇ ಟೆಸ್ಟ್; ಹಿಂದೆಂದಿಗಿಂತಲೂ ಹೆಚ್ಚಿನ ಒತ್ತಡದಲ್ಲಿ ಸಚಿನ್

`ಕ್ರಿಕೆಟ್ ದೇವರಿಗೆ' ಮೊದಲ ಅಗ್ನಿಪರೀಕ್ಷೆ

Published:
Updated:
`ಕ್ರಿಕೆಟ್ ದೇವರಿಗೆ' ಮೊದಲ ಅಗ್ನಿಪರೀಕ್ಷೆ

ಕೋಲ್ಕತ್ತ: `ನಿಮ್ಮ ಸ್ವರ ಹಿಂದಿನಂತಿಲ್ಲ, ಹಾಡುವುದನ್ನು ನಿಲ್ಲಿಸಿಬಿಡಿ' ಎಂದು ಖ್ಯಾತ ಸಂಗೀತಗಾರನೊಬ್ಬನಿಗೆ ಹೇಳಿ ನೋಡಿ. `ನೀವು ಬಿಡಿಸುತ್ತಿರುವ ಚಿತ್ರದ ರೇಖೆಗಳು ಹಾದಿ ತಪ್ಪುತ್ತಿವೆ, ಕುಂಚವನ್ನು ಕೆಳಗಿಟ್ಟುಬಿಡಿ' ಎಂದು ಖ್ಯಾತ ಕಲಾವಿದನಿಗೊಮ್ಮೆ ಹೇಳಿ ನೋಡಿ.

ಉಹೂಂ, ಸಂಗೀತವನ್ನೇ ಉಸಿರಾಗಿಸಿಕೊಂಡು ಬಂದಿರುವ ಆ ಗಾಯಕನಿಗೆ, ಕಲೆಯೇ ಜೀವನವೆಂದು ಬದುಕುತ್ತಿರುವ ಆ ಕಲಾವಿದನಿಗೆ ಹಾಗೆ ಮಾಡುವುದು ಸುಲಭದ ಕೆಲಸವಲ್ಲ. ಅದೆಷ್ಟು ಕಷ್ಟ ಎಂಬುದು ಅವರಿಗೆ ಮಾತ್ರ ಗೊತ್ತು. ಎಲ್ಲಾ ಸಮಯದಲ್ಲೂ ಶ್ರೇಷ್ಠ ಸಾಧನೆ ಹೊರಹೊಮ್ಮಲು ಸಾಧ್ಯವೇ? 23 ವರ್ಷಗಳಿಂದ ಕ್ರಿಕೆಟ್ ಆಟವನ್ನು ಆರಾಧಿಸಿಕೊಂಡು ಬಂದಿರುವ ಸಚಿನ್ ತೆಂಡೂಲ್ಕರ್ ಎದುರಿಸುತ್ತಿರುವುದು ಕೂಡ ಇದೇ ರೀತಿಯ ತಳಮಳವನ್ನು.

ತೆಂಡೂಲ್ಕರ್ ಅವರ ಶ್ರೇಷ್ಠತೆಯನ್ನು ಯಾರೂ ಪ್ರಶ್ನಿಸಲಾರರು. ಆದರೆ ಇತ್ತೀಚಿನ ಕಳಪೆ ಫಾರ್ಮ್ ಟೀಕಾ ಪ್ರಹಾರಕ್ಕೆ ಕಾರಣವಾಗಿದೆ. `ನೀವು ಆಡಿದ್ದು ಸಾಕು ಸಚಿನ್' ಎಂಬ ಟೀಕೆಯನ್ನು ಈಗ ಮುಂಬೈಕರ್‌ಗೆ ಎದುರಿಸಬೇಕಾಗಿದೆ.

`ಬೇರೆಯವರಿಂದ ಹೇಳಿಸಿಕೊಂಡು ವಿದಾಯ ಹೇಳುವ ಮೊದಲೇ ಸಚಿನ್ ಸೂಕ್ತ ನಿರ್ಧಾರಕ್ಕೆ ಮುಂದಾಗಬೇಕು. ಮನಸ್ಸನ್ನು ಕೇಂದ್ರೀಕರಿಸಿ ಆಡಲು ಸಾಧ್ಯವಾಗುತ್ತಿಲ್ಲ ಎಂಬ ವಿಷಯವನ್ನು ಅವರು ಬೇಗನೇ ಒಪ್ಪಿಕೊಳ್ಳಬೇಕು. ಆಟಕ್ಕೆ ಅವರ ದೇಹ ಈಗ ಸ್ಪಂದಿಸುತ್ತಿಲ್ಲ' ಎಂದು ಮಾಜಿ ಕ್ರಿಕೆಟಿಗ ಎರ‌್ರಪಳ್ಳಿ ಪ್ರಸನ್ನ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಂಡದಲ್ಲಿನ ತಮ್ಮ ಸ್ಥಾನಕ್ಕೆ ಕುತ್ತು ಎದುರಾಗುವ ಆತಂಕವನ್ನು ಇಷ್ಟು ವರ್ಷಗಳ ಕ್ರಿಕೆಟ್ ಜೀವನದಲ್ಲಿ ಸಚಿನ್ ಯಾವತ್ತೂ ಎದುರಿಸಿರಲಿಲ್ಲ. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ತೆಂಡೂಲ್ಕರ್ ಭವಿಷ್ಯ ನಿರ್ಧಾರವಾಗಲಿದೆ.

`ತೆಂಡೂಲ್ಕರ್ ಫಾರ್ಮ್ ಕಳೆದುಕೊಂಡಿದ್ದಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಅವರೀಗ ತುಂಬಾ ಒತ್ತಡಕ್ಕೆ ಸಿಲುಕಿದ್ದಾರೆ. ಆಟದ ಮೇಲೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಹಿಂದಿನ ರೀತಿಯ ಆಟವನ್ನು ಅವರಿಂದ ನಿರೀಕ್ಷಿಸುವುದು ತಪ್ಪು' ಎಂದು ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಹೇಳಿದ್ದಾರೆ.

ರಿಕಿ ಪಾಂಟಿಂಗ್ ಏಕಾಏಕಿ ವಿದಾಯ ಪ್ರಕಟಿಸಿರುವುದು ಕೂಡ ತೆಂಡೂಲ್ಕರ್ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಬೈಕರ್ ಶತಕ ಗಳಿಸದೇ 23 ತಿಂಗಳಾಗಿವೆ. ಈ ರೀತಿ ತಮ್ಮ ಕ್ರಿಕೆಟ್ ಜೀವನದಲ್ಲಿ ಸಚಿನ್‌ಗೆ ಯಾವತ್ತೂ ಆಗಿರಲಿಲ್ಲ. ಸಚಿನ್ ವಿಷಯದಲ್ಲಿ ಒತ್ತಡಕ್ಕೆ ಸಿಲುಕಿರುವ ರಾಷ್ಟ್ರೀಯ ಆಯ್ಕೆದಾರರು ಕೋಲ್ಕತ್ತ ಪಂದ್ಯಕ್ಕೆ ಮಾತ್ರ ತಂಡವನ್ನು ಪ್ರಕಟಿಸಿರುವ ಉದ್ದೇಶದಲ್ಲಿ ಹಲವು ಅರ್ಥಗಳಿವೆ. ಈಗ ಆಯ್ಕೆದಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಸಚಿನ್ ಕೈಯಲ್ಲಿದೆ.

`ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ತೆಂಡೂಲ್ಕರ್‌ಗೆ ಚೆನ್ನಾಗಿ ಗೊತ್ತಿದೆ. ಒಂದು ಉತ್ತಮ ಇನಿಂಗ್ಸ್ ಎಲ್ಲವನ್ನೂ ಮರೆಸಿಬಿಡುತ್ತದೆ. ಅವರು ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬಾರದು' ಎಂದು ಜಿಆರ್‌ವಿ ನುಡಿದಿದ್ದಾರೆ.

ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲೂ ಇದೇ ಚರ್ಚೆ. `ಅಂತಿಮ ಘಟ್ಟದಲ್ಲಿ ಸಚಿನ್ ಈ ರೀತಿ ಆಡಿದ್ದರು ಎಂಬ ಟೀಕೆಯನ್ನು ಅಂಟಿಸಿಕೊಳ್ಳಬಾರದು. ಹಾಗಾಗಿ ವಿದಾಯದ ಕ್ಷಣದ್ಲ್ಲಲ್ಲಿ ತೆಂಡೂಲ್ಕರ್ ಅದ್ಭುತ ಸಾಧನೆಯ ನೆನಪಿನ ಹೆಜ್ಜೆ ಇಟ್ಟು ಹೋಗಬೇಕು' ಎಂಬುದು ಅಭಿಮಾನಿಗಳ ಅಭಿಪ್ರಾಯ.

ಜಾಹೀರಾತು ಕರಾರು ಅಡ್ಡಿ: ಸಚಿನ್ ಸದ್ಯ 12ಕ್ಕೂ ಹೆಚ್ಚು ಜಾಹೀರಾತು ಉತ್ಪನ್ನಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಕರಾರು ಮುಗಿಯಲು ಕೆಲ ವರ್ಷಗಳಿವೆ. ಅಕಸ್ಮಾತ್ ತೆಂಡೂಲ್ಕರ್ ವಿದಾಯ ಹೇಳಿದರೆ ಆ ಒಪ್ಪಂದಕ್ಕೆ ಪೆಟ್ಟು ಬೀಳುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಜಾಹೀರಾತು ಉತ್ಪನ್ನಗಳೊಂದಿಗಿನ ಒಪ್ಪಂದವೂ ವಿದಾಯದ ಹಾದಿಗೆ ಅಡ್ಡಿಬರುವ ಸಾಧ್ಯತೆ ಇದೆ.

ತಲೆಕೆಡಿಸಿಕೊಳ್ಳದ ಸಚಿನ್: ತಮ್ಮತ್ತ ಟೀಕೆಯ ಪ್ರವಾಹವೇ ಹರಿಯುತ್ತಿದ್ದರೂ ಸಚಿನ್ ಆ ಬಗ್ಗೆ ಕಿಂಚಿತ್ ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಎಂದಿನಂತೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಮುಂಬೈ ಟೆಸ್ಟ್ ಮುಗಿದ ಮಾರನೇ ದಿನವೇ ಬಾಂದ್ರಾ ಕುರ್ಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ತೆಂಡೂಲ್ಕರ್ ಅಭ್ಯಾಸ ನಿರತರಾಗಿದ್ದರು.

ಸೋಮವಾರ ಕೂಡ ಈಡನ್ ಗಾರ್ಡನ್ಸ್ ಅಂಗಳದಲ್ಲಿ ತುಂಬಾ ಹೊತ್ತು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಅಶ್ವಿನ್, ಹರಭಜನ್ ಸೇರಿದಂತೆ ಸ್ಥಳೀಯ ಸ್ಪಿನ್ನರ್‌ಗಳು ಸಚಿನ್‌ಗೆ ಹೆಚ್ಚು ಹೊತ್ತು ಬೌಲ್ ಮಾಡಿದರು.

ಸಚಿನ್ ತೆಂಡೂಲ್ಕರ್ ಆಡಿದ್ದು ಸಾಕು: ಪ್ರಸನ್ನ

`ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದು ಯಾವುದೇ ವ್ಯಕ್ತಿ ಆಗಿರಬಹುದು. ಯಾವುದೇ ಕ್ರೀಡಾಪಟುವಾಗಿರಬಹುದು. ಪತ್ರಕರ್ತರಿಗೆ ನಿವೃತ್ತಿಯ ಮಿತಿ ಇಲ್ಲವೇ? ಏಕೆ ಆ ಮಿತಿ ಇರುತ್ತದೆ ಹೇಳಿ ನೋಡೋಣಾ?' ಎಂದು ಪ್ರಶ್ನಿಸಿದ್ದು ಮಾಜಿ ಕ್ರಿಕೆಟಿಗ ಎರ‌್ರಪಳ್ಳಿ ಪ್ರಸನ್ನ.

`ತೆಂಡೂಲ್ಕರ್ ಆಟಕ್ಕೆ ವಯಸ್ಸು ಅಡ್ಡಿಯಾಗುತ್ತಿದೆ. ದೇಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಒಂದು ಕಾಲದಲ್ಲಿ ಅವರು ಶ್ರೇಷ್ಠ ಆಟಗಾರರಾಗಿರಬಹುದು. ಆದರೆ ಈಗ ಅದೇ ರೀತಿಯಲ್ಲಿ ಆಡಲು ಸಾಧ್ಯವಿಲ್ಲ. ಇದು ಕೇವಲ ಫಾರ್ಮ್‌ನ ಪ್ರಶ್ನೆ ಅಲ್ಲ. ಹಾಗಾಗಿ ಸಚಿನ್ ಆಡಿದ್ದು ಸಾಕು. ವಿದಾಯ ಹೇಳಲು ಇದು ಸೂಕ್ತ ಸಮಯ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

90 ವರ್ಷದ ವ್ಯಕ್ತಿಗೆ ಕಾರನ್ನು ಚಲಾಯಿಸಲು ಹೇಳಿ. ಆತನ ಕೈಗಳು ಅದುರುತ್ತವೆ, ದೃಷ್ಟಿ ಮಂದವಾಗುತ್ತದೆ, ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟ. ಸಚಿನ್ ಕೂಡ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ಶ್ರೇಷ್ಠ ಆಟಗಾರ ಎಂದು ಸಾಯುವವರೆಗೂ ಆಡುತ್ತಿರಲು ಸಾಧ್ಯವೇ? ಹಾಗಿದ್ದರೆ ದ್ರಾವಿಡ್, ಕುಂಬ್ಳೆ ಕೂಡ ಆಡಬಹುದಿತ್ತಲ್ಲವೇ ಎಂದು ಮಾಜಿ ಆಫ್ ಸ್ಪಿನ್ನರ್ ಪ್ರಸನ್ನ ಪ್ರಶ್ನಿಸಿದ್ದಾರೆ.

ಸಚಿನ್‌ಗೆ ಬಿಟ್ಟದ್ದು: ಜಿಆರ್‌ವಿ

ಯಾವತ್ತು ವಿದಾಯ ಹೇಳಬೇಕು ಎಂಬುದು ಶ್ರೇಷ್ಠ ಆಟಗಾರರಿಗೆ ಚೆನ್ನಾಗಿ ಗೊತ್ತಿರುತ್ತದೆ. ಅದನ್ನು ಪ್ರಶ್ನಿಸಲು ನಮಗೆ, ನಿಮಗೆ ಅಧಿಕಾರವಿಲ್ಲ. 23 ವರ್ಷ ಆಡಿದವರಿಗಿಂತ ನಾವು ದೊಡ್ಡವರೇ? ಜನರಿಗೆ ನೆನಪಿನ ಶಕ್ತಿ ಕಡಿಮೆ. ಹಿಂದಿನ ಶ್ರೇಷ್ಠ ಪ್ರದರ್ಶನವನ್ನು ಮರೆತುಬಿಡುತ್ತಾರೆ' ಎಂದು ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ನುಡಿದಿದ್ದಾರೆ.ತೆಂಡೂಲ್ಕರ್ ಅವರ ಆಟದ ಬದ್ಧತೆ, ಪ್ರೀತಿ, ಶ್ರೇಷ್ಠತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಅವರು ಒಬ್ಬಂಟಿಯಾಗಿ ಭಾರತ ತಂಡವನ್ನು ಗೆಲ್ಲಿಸಿದ ನಿದರ್ಶನಗಳಿವೆ. ಅದರೆ ಸೋಲಿಗೆ ಅವರೊಬ್ಬರೇ ಕಾರಣರಲ್ಲ ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry