ಬುಧವಾರ, ನವೆಂಬರ್ 13, 2019
17 °C
`ಅಭಿಮಾನಿಗಳ ಪ್ರೀತಿಯೇ ನನ್ನ ಶಕ್ತಿ'

ಕ್ರಿಕೆಟ್ ದೊರೆಗೆ 40ರ ವಸಂತ

Published:
Updated:

ಕೋಲ್ಕತ್ತ (ಪಿಟಿಐ): ಕ್ರಿಕೆಟ್ ಜಗತ್ತಿನ ಮೇರುಮಂದಾರ, ದಾಖಲೆಗಳ ಸರದಾರ, ಎರಡು ದಶಕಗಳಿಗಿಂತಲೂ ಅಧಿಕ ಕಾಲದಿಂದ ಭಾರತ ತಂಡದ ಶಕ್ತಿಯಾಗಿ ಮೆರೆದಿರುವ ಸಚಿನ್ ತೆಂಡೂಲ್ಕರ್‌ಗೆ ಇದೀಗ 40ನೇ ಹುಟ್ಟುಹಬ್ಬದ ಸಂಭ್ರಮ.ಗೆಳೆಯರು, ಸಹ ಆಟಗಾರರು, ಮಾಜಿ ಕ್ರಿಕೆಟಿಗರು ಹಾಗೂ ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಅಭಿಮಾನಿಗಳಿಂದ ಹರಿದುಬಂದ ಶುಭಾಶಯಗಳ ಮಹಾಪೂರದ ನಡುವೆ `ಮಾಸ್ಟರ್ ಬ್ಲಾಸ್ಟರ್' ತಮ್ಮ ಜನ್ಮದಿನ ಆಚರಿಸಿಕೊಂಡರು.ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ತನ್ನ ಆಟಗಾರನ ಹುಟ್ಟುಹಬ್ಬ ಆಚರಿಸಲು ಬುಧವಾರ ಇಲ್ಲಿ ಸಮಾರಂಭ ಏರ್ಪಡಿಸಿತ್ತು. ಅಂಗಳದಲ್ಲಿ ಪಂದ್ಯವಾಡುವ ಸಂದರ್ಭ ಸಚಿನ್ ಒತ್ತಡಕ್ಕೆ ಒಳಗಾಗುವುದೇ ಇಲ್ಲ. ಆದರೆ 40ನೇ ಹುಟ್ಟುಹಬ್ಬ ಆಚರಣೆಗೆ ಕೇಕ್ ಕತ್ತರಿಸಲು ಮುಂದಾಗುವ ವೇಳೆ ಅವರು ಒತ್ತಡಕ್ಕೆ ಒಳಗಾದರಂತೆ!`ನಾನು ಕೇಕ್ ಕತ್ತರಿಸುವ ವೇಳೆ ಈ ಹಿಂದೆ ಒಮ್ಮೆಯೂ ಇಷ್ಟೊಂದು ಒತ್ತಡಕ್ಕೆ ಒಳಗಾಗಿಲ್ಲ' ಎಂದು ಸಚಿನ್ ಹೇಳಿದರು. `ಅನಿಲ್ ಕುಂಬ್ಳೆ ಅವರ ಶುಭಾಶಯ ನನ್ನ ಒತ್ತಡವನ್ನು ಕಡಿಮೆ ಮಾಡಿತು. ಕೇಕ್ ಕತ್ತರಿಸಲು ತೆರಳುವ ವೇಳೆ ಕುಂಬ್ಳೆ ನನ್ನಲ್ಲಿ “ಹುಟ್ಟುಹಬ್ಬದ ಶುಭಾಶಯಗಳು. ಹೆದರ ಬೇಡ... 40 ಎಂಬುದು ಕೇವಲ ಸಂಖ್ಯೆಯಷ್ಟೆ” ಎಂದರು. ಆಗ ನಾನು ನಿರಾಳನಾದೆ' ಎಂದು ನುಡಿದರು. ಈ ವೇಳೆ ಹಾಜರಿದ್ದ ಪತ್ನಿ ಅಂಜಲಿ ಅವರು ಸಚಿನ್‌ಗೆ ಮೊದಲು ಕೇಕ್ ತಿನ್ನಿಸಿದರು.ಬಳಿಕ ಮಾತನಾಡಿದ ತೆಂಡೂಲ್ಕರ್ ವಿಶ್ವದಾದ್ಯಂತವಿರುವ ಕೋಟ್ಯಂತರ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. `ಈ ಸಂದರ್ಭದಲ್ಲಿ ಭಾರತ ಮಾತ್ರವಲ್ಲ ಇತರ ದೇಶಗಳಲ್ಲಿರುವ ನನ್ನ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆನು.ಕಳೆದ 23 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಅವಧಿಯಲ್ಲಿ ನನ್ನ ಬೆಂಬಲಕ್ಕೆ ನಿಂತ, ನನ್ನ ಮೇಲೆ ಷರತ್ತುರಹಿತ ಪ್ರೀತಿ ತೋರಿಸಿದ ಎಲ್ಲರಿಗೂ ಶುಭಾಶಯ ಸಲ್ಲಿಸುವೆ. ಅಭಿಮಾನಿಗಳ ಈ ಪ್ರೀತಿ ನಿಜಕ್ಕೂ ವಿಶೇಷವಾದುದು' ಎಂದು ಹೇಳಿದರು.`ಅಭಿಮಾನಿಗಳ ಪ್ರೋತ್ಸಾಹ, ಪ್ರಾರ್ಥನೆಯಿಂದಾಗಿ ನನಗೆ ಸುದೀರ್ಘ ಅವಧಿಯ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಸಾಧ್ಯವಾಗಿದೆ. ನಿಮ್ಮ ಈ ಪ್ರೀತಿಯೇ ನನ್ನ ಸಾಧನೆಯ ಹಿಂದಿನ ಶಕ್ತಿ. ಒಂದಲ್ಲ ಒಂದು ರೀತಿಯಲ್ಲಿ ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಲು ಇದು ಉತ್ತಮ ಅವಕಾಶ ಎಂದು ಭಾವಿಸಿದ್ದೇನೆ' ಎಂದರು.ಅಲ್ಪ ಭಾವುಕರಾದ ಸಚಿನ್ ಮತ್ತೆ ಮಾತು ಮುಂದುವರಿಸಿದರು. `ಹಲವು ಮಂದಿ ನನಗಾಗಿ ವಿವಿಧ ರೀತಿಯ ತ್ಯಾಗಗಳನ್ನು ಮಾಡಿದ್ದಾರೆ. ನಾನು ಗಾಯದ ಸಮಸ್ಯೆಗೆ ಒಳಗಾಗಿದ್ದ ಸಂದರ್ಭ ಬೇಗನೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಉಪವಾಸ ಒಳಗೊಂಡಂತೆ ಕೆಲವು ಆಚರಣೆಗಳನ್ನೂ ಮಾಡಿದ್ದಾರೆ.ಎಲ್ಲರಿಗೂ ನನ್ನ ಕೃತಜ್ಞತೆಗಳು. ಈ ರೀತಿ ಕೇವಲ ಕೃತಜ್ಞತೆ ಸಲ್ಲಿಸಿದರೆ ಮಾತ್ರ ಸಾಲದು ಎಂಬುದು ನನ್ನ ಭಾವನೆ. ಪ್ರತಿ ಯೊಬ್ಬರನ್ನೂ ವೈಯಕ್ತಿಕ ವಾಗಿ ಭೇಟಿ ಮಾಡ ಬೇಕೆಂಬುದು ನನ್ನ ಬಯಕೆ. ಆದರೆ ಅದು ಅಸಾಧ್ಯ. ಆದ್ದರಿಂದ ಅಭಿಮಾನಿಗಳಿಗೆ ನನ್ನ ಸಂದೇಶ ರವಾನಿಸಲು ಈ ಅವಕಾಶವನ್ನು ಬಳಸಿಕೊಂಡಿದ್ದೇನೆ' ಎಂದು ನುಡಿದರು.ಸಚಿನ್ ಹುಟ್ಟುಹಬ್ಬ ಆಚರಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ ಕೂಡಾ ಪ್ರತ್ಯೇಕ ಸಮಾರಂಭ ಏರ್ಪಡಿಸಿತ್ತು. ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರಾತ್ರಿ ನಡೆದ ಐಪಿಎಲ್ ಪಂದ್ಯಕ್ಕೆ ಮುನ್ನ ಸಚಿನ್ ಕೇಕ್ ಕತ್ತರಿಸಿದರು. ಇದಕ್ಕಾಗಿ 40 ಪೌಂಡ್ ತೂಕದ ವಿಶೇಷ ಕೇಕ್ ಸಿದ್ಧಪಡಿಸಲಾಗಿತ್ತು.ಪಠ್ಯ ಪುಸ್ತಕ ಜೊತೆಗೆ ತಂದಿದ್ದ ಸಚಿನ್!

ಲಂಡನ್ (ಪಿಟಿಐ): `
ಭಾರತ ತಂಡ 1990 ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಂದರ್ಭ ಸಚಿನ್ 10ನೇ ತರಗತಿಯ ಪಠ್ಯ ಪುಸ್ತಕ ತಮ್ಮ ಜೊತೆಗೆ ಒಯ್ದಿದ್ದರು'-ಈ ವಿಷಯವನ್ನು ಬಹಿರಂಗಪಡಿಸಿದ್ದು ಕಪಿಲ್ ದೇವ್. `ಆತ (ಸಚಿನ್) ತುಂಬಾ ನಾಚಿಕೆ ಸ್ವಭಾವದ ಹುಡುಗನಾಗಿದ್ದ. ತನ್ನ ಮೊದಲ ಇಂಗ್ಲೆಂಡ್ ಪ್ರವಾಸದ ವೇಳೆ 10ನೇ ತರಗತಿಯ ಪಠ್ಯ ಪುಸ್ತಕ ಜೊತೆಗೆ ಇಟ್ಟುಕೊಂಡಿದ್ದ. ಬಿಡುವು ಲಭಿಸಿದಾಗ ಕಲಿಯುವುದು ಆತನ ಉದ್ದೇಶವಾಗಿತ್ತು. ಪ್ರವಾಸದ ವೇಳೆ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ' ಎಂದು `ಬಿಬಿಸಿ ರೇಡಿಯೊ 5 ಲೈವ್ ಶೋ' ಕಾರ್ಯಕ್ರಮದಲ್ಲಿ ಕಪಿಲ್ ಹೇಳಿದ್ದಾರೆ.`ಆ ಪ್ರವಾಸದ ಅವಧಿಯಲ್ಲಿ ಅವರ ಎರಡು ವಿಶೇಷ ಗುಣಗಳು ನನ್ನ ಗಮನಕ್ಕೆ ಬಂದವು. ಬ್ಯಾಟಿಂಗ್ ವೇಳೆ ತಮ್ಮ ದೇಹದ ಮೇಲೆ ಹೊಂದುತ್ತಿದ್ದ ಸಮತೋಲನ ಅದ್ಭುತವಾಗಿತ್ತು. ಅದೇ ರೀತಿ ಚೆಂಡನ್ನು ಜೋರಾಗಿ ಅಟ್ಟುತ್ತಿರಲಿಲ್ಲ. ಕೇವಲ ಪುಶ್ ಮಾಡುತ್ತಿದ್ದರು. ಅವರು ಭಾರವಾದ ಬ್ಯಾಟ್ ಉಪಯೋಗಿಸುತ್ತಿದ್ದರು. ಆ ಸಂದರ್ಭದಲ್ಲಿ ಅಷ್ಟೊಂದು ಭಾರವಿರುವ ಬ್ಯಾಟ್‌ಅನ್ನು ಬೇರೆ ಯಾರೂ ಬಳಸುತ್ತಿರಲಿಲ್ಲ' ಎಂದು ಕಪಿಲ್ ಅವರು ಸಚಿನ್ ಹುಟ್ಟುಹಬ್ಬದ ಸಂದರ್ಭ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಪ್ರತಿಕ್ರಿಯಿಸಿ (+)