ಕ್ರಿಕೆಟ್: ದೋನಿ-ಜಡೇಜಾ ಜುಗಲ್‌ಬಂದಿ; ಇಂಗ್ಲೆಂಡ್‌ಗೆ ಮುಖಭಂಗ...

7

ಕ್ರಿಕೆಟ್: ದೋನಿ-ಜಡೇಜಾ ಜುಗಲ್‌ಬಂದಿ; ಇಂಗ್ಲೆಂಡ್‌ಗೆ ಮುಖಭಂಗ...

Published:
Updated:

ಮೊಹಾಲಿ: ಮಹೇಂದ್ರಸಿಂಗ್ ದೋನಿ ಬ್ಯಾಟಿನಿಂದ ಸಿಡಿದ ಆ ಎರಡು ಬೌಂಡರಿಗಳು ಭಾರತ ತಂಡದ ಸರಣಿ ಗೆಲುವಿನ ಕನಸನ್ನು ನನಸು ಮಾಡಿದರೆ, ಮೊಹಾಲಿಯ ಅಂಗಳದಲ್ಲಿ `ದೀಪಾವಳಿ~ಯ ಬೆಳಕು ಚೆಲ್ಲಿದವು!ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿಯ ಆ 14 ಎಸೆತಗಳಲ್ಲಿ ಮೂರು ಲೋಕದ ರೋಚಕತೆ ತುಂಬಿಕೊಂಡಿದ್ದವು. ಇಂಗ್ಲೆಂಡ್ ತಂಡವು ನೀಡಿದ್ದ 299 ರನ್ನುಗಳ ಗುರಿಯನ್ನು ಬೆನ್ನತ್ತಿದ್ದ ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ ಒಲಿದಿದ್ದೇ ಆ ಕೊನೆಯ 2.2 ಓವರ್‌ಗಳಲ್ಲಿ. ಜೊತೆಗೆ ಐದು ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಜಯ ಕೂಡ ಲಭಿಸಿತು. ಆರನೇ ವಿಕೆಟ್ ಜೊತೆಯಾಟದಲ್ಲಿ ಮಹೇಂದ್ರಸಿಂಗ್ ದೋನಿ (ಅಜೇಯ 33; 47ಎಸೆತ, 3ಬೌಂಡರಿ) ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ (ಔಟಾಗದೇ 26, 24ಎಸೆತ, 2ಬೌಂಡರಿ, 38ನಿಮಿಷ) 65 ರನ್ ಸೇರಿಸಿ ದೇಶದ ಕ್ರಿಕೆಟ್‌ಪ್ರೇಮಿಗಳಿಗೆ ದೀಪಾವಳಿ ಕಾಣಿಕೆ ನೀಡಿದರು. 42ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಔಟಾದಾಗ ಭಾರತಕ್ಕೆ ಗೆಲ್ಲಲು 50 ಎಸೆತಗಳಲ್ಲಿ 64 ರನ್ನುಗಳು ಬೇಕಾಗಿದ್ದವು. ಇನ್ನೊಂದು ತುದಿಯಲ್ಲಿ ಮೂರು ರನ್ ಗಳಿಸಿದ್ದ ದೋನಿ ಜೊತೆ ಸೇರಿದ ರವೀಂದ್ರ ಜಡೇಜಾ ಒಂದು, ಎರಡು ರನ್ ತೆಗೆದುಕೊಳ್ಳುತ್ತಿದ್ದರೂ ಚೆಂಡು ಮತ್ತು ರನ್ನುಗಳ ಅಂತರ ಹೆಚ್ಚುತ್ತಿತ್ತು.ಅದು ಕೊನೆಯ ಮೂರು ಓವರುಗಳಲ್ಲಿ ಪ್ರತಿ ಓವರಿಗೆ ಸರಾಸರಿ ಹತ್ತು ರನ್‌ಗಳ ಅವಶ್ಯಕತೆಗೆ ಬಂದಿತು. ಆಗ ನಿಧಾನಗತಿಯ ಆಟ ಕೈಬಿಟ್ಟ ದೋನಿ-ಜಡೇಜಾ ಜೋಡಿಗೆ ಅದೃಷ್ಟವೂ ಜೊತೆಗೂಡಿತು. ಐದು ವಿಕೆಟ್‌ಗಳು ಇನ್ನೂ ಇದ್ದವು. ಇಂಗ್ಲೆಂಡ್ ತಂಡದ ಬೌಲರ್‌ಗಳು ಬಿಗಿಯಾದ ಬೌಲಿಂಗ್ ಮಾಡುತ್ತಿದ್ದರು.ಅಸಾಧ್ಯ ಎನ್ನುವ ಆತಂಕ ಎಲ್ಲೆಡೆಯೂ ಮನೆ ಮಾಡಿತ್ತು. ಪ್ರೇಕ್ಷಕರ ಗುಂಪಿನಿಂದ `ಸೋನಿಹಾಲ್ ಸತ್‌ಶ್ರಿ ಅಕಾಲ್..~, ಭಾರತ್ ಮಾತಾ ಕೀ ಜೈ ಘೋಷಣೆಗಳು ಮೊಳಗಿದ ನಂತರ ನಿಶ್ಯಬ್ದತೆ ಆವರಿಸಿತು.ಸ್ಟಿವನ್ ಫಿನ್ ಹಾಕಿದ 48ನೇ ಓವರ್‌ನ (1,4,2,1,4,1) 13 ರನ್ನುಗಳನ್ನು ಕಬಳಿಸುವಲ್ಲಿ ಇಬ್ಬರೂ ಸಫಲರಾದರು. ಜೇಡ್ ಡೆನ್‌ಬ್ಯಾಕ್ ಹಾಕಿದ 49ನೇ ಓವರ್‌ನಲ್ಲಿ ಪಂದ್ಯದ ಮೇಲಿನ ಹಿಡಿತವನ್ನು ಇಂಗ್ಲೆಂಡ್ ಕಳೆದುಕೊಂಡಿತು. ಒಂದು ವೈಡ್ ಮತ್ತು ಒಂದು ನೋಬಾಲ್ ಸಮೇತ ಒಟ್ಟು ಒಂಬತ್ತು ರನ್‌ಗಳು ಈ ಓವರಿನಲ್ಲಿ ಬಂದವು. 

ಕೊನೆಯ ಓವರಿನಲ್ಲಿ ಜಯಕ್ಕೆ ಬೇಕಾಗಿದ್ದ ಏಳು ರನ್‌ಗಳನ್ನು ಹೊಡೆಯಲು ದೋನಿಗೆ ಎರಡು ಎಸೆತಗಳು ಮಾತ್ರ ಸಾಕಾಗಿದ್ದವು. ಉತ್ತಮ ಆರಂಭ:  ಆರಂಭಿಕ ಬ್ಯಾಟ್ಸಮನ್ ಪಾರ್ಥಿವ್ ಪಟೇಲ್ (38; 46ಎಸೆತ, 3ಬೌಂಡರಿ) ಮತ್ತು ಅಜಿಂಕ್ಯ ರಹಾನೆ (91; 104ಎಸೆತ, 6ಬೌಂಡರಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 79 ರನ್ ಗಳಿಸಿ ಉತ್ತಮ ಆರಂಭ ನೀಡಿದರು.ಟಿಮ್ ಬ್ರೆಸ್ನನ್ ಬೌಲಿಂಗ್‌ನಲ್ಲಿ ಪಾರ್ಥಿವ್ ಪಟೇಲ್ ಎಲ್‌ಬಿಡಬ್ಲ್ಯು ಆದ ನಂತರ `ಮದುಮಗ~ ಗೌತಮ್ ಗಂಭೀರ್ ರನ್ ಗಳಿಕೆಯನ್ನು ಹೆಚ್ಚಿಸುತ್ತ ಸಾಗಿದರು. ಎರಡನೇ ವಿಕೆಟ್‌ಗೆ ಇವರಿಬ್ಬರೂ 106 ಎಸೆತಗಳಲ್ಲಿ 111 ರನ್ ಸೇರಿಸಿದರು. ಫಿನ್ ಬೌಲಿಂಗ್‌ನಲ್ಲಿ ಕೆವಿನ್ ಪೀಟರ್ಸನ್ ಹಿಡಿದ ಕ್ಯಾಚ್‌ಗೆ ಗಂಭೀರ್ ನಿರ್ಗಮಿಸುವುದರೊಂದಿಗೆ ರನ್ ಗಳಿಕೆ ವೇಗಕ್ಕೆ ತಡೆ ಬಿತ್ತು.  ವಿರಾಟ್ ಕೊಹ್ಲಿ ನಾಲ್ಕು ರನ್ ಗಳಿಸಿದ್ದಾಗ ವಿಕೆಟ್‌ಕೀಪರ್ ಬಿಟ್ಟ ಕ್ಯಾಚ್ ತುಟ್ಟಿಯಾಯಿತು. ತಂಡದ ಮೊತ್ತವನ್ನು 200 ರನ್ನುಗಳ ಗಡಿ ದಾಟಿಸಿದರು. ಚೊಚ್ಚಲ ಶತಕದತ್ತ ಸಾಗುತ್ತಿದ್ದ ಅಜಿಂಕ್ಯ ರಹಾನೆ ಫಿನ್ ಬೌಲಿಂಗ್‌ನಲ್ಲಿ ಕುಕ್ ಹಿಡಿದ ಉತ್ತಮ ಕ್ಯಾಚಿಗೆ ನಿರ್ಗಮಿಸಿದರು. ಸುರೇಶ್ ರೈನಾ ಖಾತೆ ತೆರೆಯಲಿಲ್ಲ. ಉತ್ತಮವಾಗಿ ಆಡುತ್ತಿದ್ದ ವಿರಾಟ್ ಕೋಹ್ಲಿ ಗ್ರೆಮ್ ಸ್ವಾನ್‌ಗೆ ಎಲ್‌ಬಿಡಬ್ಲ್ಯು ಆದಾಗ ಗೆಲುವು ಸಮೀಪದಲ್ಲಿ ಇರಲಿಲ್ಲ. ನಂತರ ದೋನಿ ಮತ್ತು ಜಡೇಜಾ ಆಟ ರಂಗು ತುಂಬಿತು.  ಟ್ರಾಟ್-ಸಮಿತ್ ಜೋಡಿಗಾನ: ಇಂಗ್ಲೆಂಡ್ ತಂಡಕ್ಕೆ 298 ರನ್ನುಗಳ ಮೊತ್ತ ಬರಲು ಜೊನಾಥನ್ ಟ್ರಾಟ್ (ಔಟಾಗದೇ 98; 116ಎಸೆತ, 8ಬೌಂಡರಿ, 185ನಿಮಿಷ) ಮತ್ತು ಆಲ್‌ರೌಂಡರ್ ಸಮಿತ್ ಪಟೇಲ್ (ಔಟಾಗದೇ 70; 43ಎಸೆತ, 6ಬೌಂಡರಿ, 2ಸಿಕ್ಸರ್) ಜೊತೆಯಾಟ ಕಾರಣವಾಯಿತು.ಮಧ್ಯಾಹ್ನ ಅಲಿಸ್ಟರ್ ಕುಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಾಗ ಎಲ್ಲರಿಗೂ ಅಚ್ಚರಿ. ಸಂಜೆ ಹೊತ್ತಿನಲ್ಲಿ ಬೀಳುವ ಇಬ್ಬನಿಯ ಹನಿಗಳು ಬೌಲರ್‌ಗಳಿಗೆ ಸಹಕಾರಿಯಲ್ಲ ಎನ್ನುವುದು ಗೊತ್ತಿದ್ದರೂ ಬ್ಯಾಟಿಂಗ್ ತೆಗೆದುಕೊಂಡಿದ್ದರು.

 

ಅಲ್ಲದೇ ಕಳೆದ ಎರಡು ಪಂದ್ಯಗಳಲ್ಲಿ ಇದ್ದ ತಂಡವೇ ಇಲ್ಲಿಯೂ ಕಣಕ್ಕಿಳಿಯಿತು. ಅನುಭವಿ ಆಟಗಾರ ಇಯಾನ್ ಬೆಲ್ ಮತ್ತೆ ಪೆವಿಲಿಯನ್‌ನಲ್ಲಿಯೇ ಉಳಿದರು. `ದಾವಣಗೆರೆ ಎಕ್ಸ್‌ಪ್ರೆಸ್~ ಆರ್. ವಿನಯಕುಮಾರ್, ತಮ್ಮ ಎರಡನೇ ಓವರಿನಲ್ಲಿಯೇ ಅಲಿಸ್ಟರ್ ಕುಕ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ ಆತಂಕ ಮೂಡಿಸಿದರು.ಸರಣಿಯಲ್ಲಿ ವಿಫಲರಾಗಿದ್ದ ಆರಂಭಿಕ ಆಟಗಾರ ಕ್ರೆಗ್ ಕೀಸ್‌ವೆಟ್ಟರ್ (36; 38ಎಸೆತ, 2ಬೌಂಡರಿ, 2ಸಿಕ್ಸರ್) ಇಲ್ಲಿ ಮೈಚಳಿ ಬಿಟ್ಟು ಆಡಿದರು. ಪ್ರವೀಣಕುಮಾರ್ ಎಸೆತದಲ್ಲಿ ಸಿಕ್ಸರ್‌ಗೆ ಎತ್ತಿದ ಚೆಂಡು ಜನರಿಲ್ಲದ ಸ್ಟ್ಯಾಂಡಿನಲ್ಲಿ ಬಿತ್ತು. ನಂತರದ ಓವರಿನಲ್ಲಿ ವಿನಯಕುಮಾರ್ ಎಸೆತವನ್ನು  ಥರ್ಡ್‌ಮ್ಯಾನ್ ಬೌಂಡರಿಗೆ ಸಿಕ್ಸರ್ ಎತ್ತಿದರು.ಪ್ರವೀಣಕುಮಾರ್ ಬದಲಿಗೆ ಬೌಲಿಂಗ್‌ಗೆ ಇಳಿದಿದ್ದ ವಿರಾಟ್ ಕೊಹ್ಲಿಯ ಎಸೆತ ಆಫ್‌ಸ್ಟಂಪಿನಿಂದ ಹೊರಗೆ ತಿರುವು ಪಡೆದ ಚೆಂಡು ಕೀಸ್‌ವೆಟರ್ ಬ್ಯಾಟಿನ ಒಳಅಂಚು ಸವರಿ ಲೆಗ್‌ಸ್ಟಂಪ್‌ಗೆ ಮುತ್ತಿಕ್ಕಿತು. ಪಾದಚಲನೆಯೇ ಇಲ್ಲದೇ ಕೆಟ್ಟ ಹೊಡೆತಕ್ಕೆ ಯತ್ನಿಸಿದ ಕೀಸ್‌ವೆಟರ್ ಆಘಾತ ಅನುಭವಿಸಿದರು. ಇನ್ನೊಂದೆಡೆ 11 ರನ್ ಗಳಿಸಿದ್ದ ಟ್ರಾಟ್ ಇದ್ದರು.ನಂತರ ಬಂದ ಕೆವಿನ್ ಪೀಟರ್ಸನ್ (64; 61ಎಸೆತ, 9ಬೌಂಡರಿ) ಮತ್ತು ಟ್ರಾಟ್ ಇನಿಂಗ್ಸ್ ಕಟ್ಟಿದರು. ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 101(102ಎಸೆತ) ರನ್ನುಗಳನ್ನು ಪಾಲುದಾರಿಕೆಯಲ್ಲಿ, `ಕೆಪಿ~ ಬೌಲರ್‌ಗಳನ್ನು ದಂಡಿಸುತ್ತಿದ್ದರೆ, ಟ್ರಾಟ್ ಮೆಲ್ಲಗೆ ನಿಧಾನವಾಗಿ ಆಡುತ್ತಿದ್ದರು.ಎಡಗೈ ಬೌಲರ್ ರವೀಂದ್ರ ಜಡೇಜಾ ಎಸೆತವನ್ನು ಬೌಂಡರಿಗೆ ಅಟ್ಟಿದ ಕೆವಿನ್ 23ನೇ ಅರ್ಧಶತಕವನ್ನು ಗಳಿಸಿದರು. ಇದಕ್ಕೂ ಮುನ್ನ ಕೊಹ್ಲಿ ಥ್ರೋ ಗುರಿ ತಪ್ಪಿದ್ದರಿಂದ ಕೆವಿನ್ ರನೌಟ್ ಅಪಾಯದಿಂದ ತಪ್ಪಿಸಿಕೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry