ಕ್ರಿಕೆಟ್ ನಮ್ಮನ್ನು ಒಂದುಗೂಡಿಸಲಿ

7

ಕ್ರಿಕೆಟ್ ನಮ್ಮನ್ನು ಒಂದುಗೂಡಿಸಲಿ

Published:
Updated:
ಕ್ರಿಕೆಟ್ ನಮ್ಮನ್ನು ಒಂದುಗೂಡಿಸಲಿ

ಮೊಹಾಲಿ (ಚಂಡೀಗಡ): ‘ಯಾರೇ ಗೆಲ್ಲಲಿ ಯಾರೇ ಸೋಲಲಿ. ನಾವು ಮಾತ್ರ ಉತ್ತಮ ಕ್ರಿಕೆಟ್ ಆಡುತ್ತೇವೆ. ಮೈದಾನದ ಹೊರಗೆ ನಡೆಯುವ ಯಾವುದೇ ಚಟುವಟಿಕೆಗಳ ಬಗ್ಗೆ ನಮ್ಮ ಗಮನ ಇಲ್ಲ. ಕ್ರಿಕೆಟ್ ನಮ್ಮನ್ನು ಒಂದುಗೂಡಿಸಲಿ’ ಎಂದು ಭಾರತ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಮತ್ತು ಶಾಹಿದ್ ಅಫ್ರಿದಿ ಮಂಗಳವಾರ ಹೇಳಿದರು.ಪಂಜಾಬ್ ಕ್ರಿಕೆಟ್ ಸಂಸ್ಥೆ ಹಾಲ್‌ನಲ್ಲಿ ಮೊದಲು ಪತ್ರಿಕಾಗೋಷ್ಠಿ ನಡೆಸಿದವರು ದೋನಿ. ಅವರು ಮುಗಿಸುವ ಹಂತದಲ್ಲಿ ಅಫ್ರಿದಿ ಆಗಮಿಸಿದರು. ದೋನಿ ಕುರ್ಚಿಯಿಂದ ಮೇಲೇಳುತ್ತಿದ್ದಂತೆಯೇ ಅವರ ಬಳಿ ಬಂದ ಅಫ್ರಿದಿ ಆತ್ಮೀಯವಾಗಿ ಕೈಕುಲುಕಿದರು. ಇಬ್ಬರೂ ನಗುನಗುತ್ತ ಛಾಯಾಗ್ರಾಹಕರೆದುರು ನಿಂತರು. ಇಬ್ಬರೂ ಪರಸ್ಪರ ಶುಭ ಕೋರಿದರು.ದೋನಿ ತಮ್ಮ ಎಂದಿನ ತುಂಟನಗೆ ಬೀರುತ್ತಲೇ ಉತ್ತರಿಸಿದರು. ‘ಮಾಧ್ಯಮದವರು ಬೆಳೆಸಿರುವ ಈ ಕ್ರಿಕೆಟ್ ಸಮೂಹಸನ್ನಿ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಟಿವಿ ನೋಡುವುದನ್ನು ಬಿಟ್ಟಿದ್ದು ನಮಗೆ ಅನುಕೂಲವಾಗಿದೆ. ಎರಡೂ ರಾಷ್ಟ್ರಗಳ ಪ್ರಧಾನಿಗಳು ಏನಾದರೂ ಮಾಡಿಕೊಳ್ಳಲಿ. ನಾವು ನಮ್ಮ ಆಟ ಆಡುತ್ತೇವೆ. ಕ್ರಿಕೆಟ್ ರಾಯಭಾರ ನಡೆಯುತ್ತಿರಲಿ. ರಾಜಕೀಯ ಬೆಳವಣಿಗೆಗಳಿಂದ ಆಟದಲ್ಲೇನೂ ಬದಲಾವಣೆ ಆಗುವುದಿಲ್ಲ. ಮೈದಾನದಲ್ಲಿ ಯಾರಾದರೊಬ್ಬರು ಸೋಲಲೇಬೇಕು. ಭಾರತ ತಂಡದ ಮೇಲಿರುವ ಜನರ ವ್ಯಾಮೋಹದ ಹುಚ್ಚು ನಮ್ಮ ಮೇಲೆ ಒತ್ತಡ ಹೇರುವುದಿಲ್ಲ. ನಾವು ಚೆನ್ನಾಗಿ ಅಭ್ಯಾಸ ಮಾಡಿದ್ದೇವೆ’ ಎಂದು ಅವರು ಹೇಳಿದರು.‘ನಾವು ಫೈನಲ್ ತಲುಪುವ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ. ಪಾಕಿಸ್ತಾನ ಆಡುವುದು ನಮಗೆ ವಿಶೇಷವೇನಲ್ಲ. ಅಥವಾ ಇದು ನನ್ನ ಅತಿ ದೊಡ್ಡ ಸವಾಲಿನ ಪಂದ್ಯವೂ ಅಲ್ಲ. ನನ್ನ ಜವಾಬ್ದಾರಿ ಚೆನ್ನಾಗಿ ಆಡುವುದು. ಆರಂಭದ ಆಟಗಾರರು ಚೆನ್ನಾಗಿ ಆಡುತ್ತಿರುವುದರಿಂದ ನನಗೆ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಆದರೆ ಆಸ್ಟ್ರೇಲಿಯ ವಿರುದ್ಧ ನಾನು ಚೆನ್ನಾಗಿ ಆಡಬೇಕಿತ್ತು. ನಾನು ಹೆಚ್ಚು ರನ್ ಮಾಡದಿರುವುದು ಸಮಸ್ಯೆಯೇನೂ ಆಗಿಲ್ಲ. ಅಲ್ಲದೇ ನಾಯಕತ್ವದ ಒತ್ತಡ ನನ್ನ ಮೇಲಿಲ್ಲ. ನಾಯಕತ್ವ ಎನ್ನುವುದು ದೊಡ್ಡ ಗೌರವದ ವಿಷಯ’ ಎಂದು ಅವರು ಹೇಳಿದರು.ಶಾಹಿದ್ ಅಫ್ರಿದಿ ಬಹಳ ಖುಷಿಯಿಂದಲೇ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದರು. ‘ಭಾರತದಲ್ಲಿ ಆಡುವುದೆಂದರೆ ನಮಗೆಲ್ಲ ಸಂತೋಷದ ವಿಷಯ. ಭಾರತ ದೊಡ್ಡ ದೇಶ. ಅತ್ಯುತ್ತಮ ಆಟಗಾರರಿದ್ದಾರೆ. ಅವರೊಡನೆ ಪೈಪೋಟಿ ನಡೆಸುವುದು ನಮಗೆ ಇಷ್ಟ. ಈ ವಿಶ್ವ ಕಪ್‌ನಲ್ಲಿ ನಮ್ಮ ಯುವ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಸೆಮಿಫೈನಲ್ ಪಂದ್ಯ ನಮಗೆ ಬಹಳ ದೊಡ್ಡದು. ಉತ್ತಮ ಕ್ರಿಕೆಟ್ ಆಡುವುದು ನಮ್ಮ ಗುರಿ’ ಎಂದು ಅವರು ಹೇಳಿದರು.‘ಪಾಕಿಸ್ತಾನದ ಪ್ರಧಾನಿ ನಮ್ಮ ಆಟ ನೋಡಲು ಬರುತ್ತಿರುವುದು ಸಂತಸಕರ ವಿಷಯ. ಕ್ರಿಕೆಟ್ ಎರಡೂ ದೇಶಗಳ ನಡುವೆ ಹೊಸ ಬಾಂಧವ್ಯ ಬೆಸೆಯಲು ಸಹಾಯಕವಾಗಲಿ’ ಎಂದೂ ಅವರು ಹೇಳಿದರು.ಭಾರತದ ಮಾಧ್ಯಮಗಳು ತಮ್ಮ ಬಗ್ಗೆ ನಕಾರಾತ್ಮಕವಾಗಿವೆ ಎಂದು ಅಫ್ರಿದಿ ಸೋಮವಾರ ದೂರಿದ್ದರು. ‘ಸಚಿನ್ ತೆಂಡೂಲ್ಕರ್ ಶತಕ ಹೊಡೆಯಲು ಕೊಡುವುದಿಲ್ಲ ಎಂದು ಹೇಳಿದ್ದರಲ್ಲಿ ಏನು ತಪ್ಪಿದೆ. ಸಚಿನ್ ನೂರು ಹೊಡೆಯಲು ಬಿಡುತ್ತೇವೆ ಎಂದು ಹೇಳಬೇಕಿತ್ತೇ? ಸಚಿನ್ ಮಹಾನ್ ಆಟಗಾರ. ಅವರ ವಿಕೆಟ್ ಪಡೆಯುವುದು ನಮಗೆ ಹೆಮ್ಮೆಯ ವಿಷಯ’ ಎಂದು ಅವರು ನಗುತ್ತ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry