ಭಾನುವಾರ, ಏಪ್ರಿಲ್ 18, 2021
25 °C

ಕ್ರಿಕೆಟ್ ಪಂದ್ಯಕ್ಕೆ ಪಾಸ್: ವಿಚಾರಣೆ ನಡೆಸಲು ಸದನ ಸಮಿತಿ ರಚನೆಗೆ ಶಾಸಕರ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ- ಇಂಗ್ಲೆಂಡ್ ನಡುವೆ ಕಳೆದ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಶಾಸಕರಿಗೆ ಸರಿಯಾಗಿ ಪಾಸ್ ವಿತರಿಸದ ಹಾಗೂ ಶಿಷ್ಟಾಚಾರ ಪಾಲಿಸದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಿರುದ್ಧ ಮಂಗಳವಾರ ವಿಧಾನ ಸಭೆಯಲ್ಲಿ ಶಾಸಕರು ಪಕ್ಷಾತೀತವಾಗಿ ಕಿಡಿಕಾರಿದರು.ಸರ್ಕಾರದ ಜಾಗದಲ್ಲಿ ಸ್ಟೇಡಿಯಂ ಇದೆ. ಸರ್ಕಾರ ಅವರಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಆದರೆ ಸಚಿವರು, ಶಾಸಕರಿಗೆ ಪಾಸ್ ನೀಡಿಲ್ಲ. ಕೆಎಸ್‌ಸಿಎ ಪದಾಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಲು ಸದನ ಸಮಿತಿ ರಚಿಸಬೇಕು ಎಂದು ಶಾಸಕರು ಪಟ್ಟು ಹಿಡಿದರು.ನೆ.ಲ.ನರೇಂದ್ರಬಾಬು, ಎನ್.ಸಂಪಂಗಿ, ಎಸ್.ಆರ್.ವಿಶ್ವನಾಥ್ ಮೊದಲಾದವರು ಗಮನ ಸೆಳೆಯುವ ಸೂಚನೆಯಡಿ ಈ ವಿಷಯ ಪ್ರಸ್ತಾಪಿಸಿ, ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡಿದ್ದಾರೆ. ಆದರೆ ಸಚಿವರು, ಶಾಸಕರಿಗೆ ಟಿಕೆಟ್ ನೀಡಿಲ್ಲ. ಕೆಲವು ಶಾಸಕರಿಗೆ ಟಿಕೆಟ್ ನೀಡಲಾಗಿತ್ತಾದರೂ, ಅವರಿಗೆ ಗಣ್ಯರ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡುವ ಬದಲು, ಸಾರ್ವಜನಿಕರ ಗ್ಯಾಲರಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು ಎಂದು ಕಿಡಿಕಾರಿದರು.‘ಶಾಸಕರು ಕಾಡಿ ಬೇಡಿದರೂ ಟಿಕೆಟ್ ಕೊಡಲಿಲ್ಲ. ಹಣ ಕೊಡುತ್ತೇವೆ ಎಂದರೂ ಟಿಕೆಟ್ ನೀಡಲಿಲ್ಲ. ಸರ್ಕಾರಿ ಜಾಗದಲ್ಲಿ ಕ್ರೀಡಾಂಗಣವಿದೆ. ಸಚಿವರು, ಶಾಸಕರಿಗೆ ಗೌರವ ನೀಡದಿದ್ದರೆ ಹೇಗೆ? ಆಡಳಿತ ಮಂಡಳಿಯವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು’ ಎಂದು ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಆಗ್ರಹಿಸಿದರು.ಪಿ.ಎಂ.ಅಶೋಕ, ವೆಂಕಟರಾವ್ ನಾಡಗೌಡ, ಎನ್.ಸಂಪಂಗಿ ಸೇರಿದಂತೆ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಇದೇ ರೀತಿ ತಮಗಾದ ಅಸಮಾಧಾನವನ್ನು ತೋಡಿಕೊಂಡು ಸದನ ಸಮಿತಿಗೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ಟಿಕೆಟ್‌ಗೆ ಇದ್ದಷ್ಟೇ ಬೇಡಿಕೆ ಸದನದಲ್ಲಿ ಮಾತನಾಡಲು ಇದೆ. ಬೇರೆ ರೂಪದಲ್ಲಿ ಈ ವಿಷಯದ ಬಗ್ಗೆ ಚರ್ಚೆ ಮಾಡೋಣ ಎಂದರು. ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಗುರುವಾರ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.ಕ್ರಿಕೆಟ್ ಬೆಟ್ಟಿಂಗ್ ಹಾವಳಿ ತಡೆಯಲು ಸರ್ಕಾರ ಬದ್ಧವಾಗಿದ್ದು, ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಟ್ಟಿಂಗ್ ಮಾಹಿತಿ ನೀಡಲು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಈಗಾಗಲೇ 15 ಜನರನ್ನು ಬಂಧಿಸಿದ್ದು, 29 ಲಕ್ಷ ರೂಪಾಯಿ ಹಣ, ಒಂದು ಕೋಟಿ ರೂಪಾಯಿ ಮೌಲ್ಯದ ಕಂಪ್ಯೂಟರ್‌ಗಳು, ಮೊಬೈಲ್ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.