ಕ್ರಿಕೆಟ್: ಪಾಕಿಸ್ತಾನಕ್ಕೆ ರೋಚಕ ಜಯ

7

ಕ್ರಿಕೆಟ್: ಪಾಕಿಸ್ತಾನಕ್ಕೆ ರೋಚಕ ಜಯ

Published:
Updated:

ನೇಪಿಯರ್ (ಎಪಿ):  ಮಿಸ್ಬಾಹ್-ಉಲ್-ಹಕ್ (ಅಜೇಯ 93) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಪಾಕಿಸ್ತಾನ ತಂಡದವರು ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರೋಚಕ ಗೆಲುವು ಪಡೆದರು.ಇಲ್ಲಿನ ಮೆಕ್ಲೆನ್ ಪಾರ್ಕ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 262 ರನ್ ಕಲೆ ಹಾಕಿತು. ಈ ಸವಾಲಿನ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ 49 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 264ರನ್‌ಗಳನ್ನು ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು. ಪಾಕಿಸ್ತಾನ ಈ ಗೆಲುವಿನ ಮೂಲಕ ಆರು ಏಕದಿನ ಪಂದ್ಯಗಳ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ತಂಡದ ಒಟ್ಟು ಮೊತ್ತ 100ರ ಗಡಿ ತಲುಪುವ ಮುನ್ನವೇ ಐದು ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೆ ಪಾಕ್ ಬೌಲರ್‌ಗಳು ಪೆವಿಲಿಯನ್ ಹಾದಿ ತೋರಿಸಿದ್ದರು. ನಂತರ ಜೇಮ್ಸ್ ಫ್ರಾಂಕ್ಲಿನ್ (65) ಹಾಗೂ ನಥಾನ್ ಮೆಕ್ಲಮ್ (53) ಗಳಿಸಿದ ಅರ್ಧ ಶತಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ವಹಾಬ್ ರಿಯಾಜ್ (51ಕ್ಕೆ3) ವಿಕೆಟ್ ಪಡೆದು ಪ್ರಭಾವಿ ಬೌಲರ್ ಎನಿಸಿದರೆ, ಅಬ್ದುಲ್ ರಜಾಕ್, ಮೊಹಮ್ಮದ್ ಹಫೀಜ್ ಹಾಗೂ ಶಾಹೀದ್ ಆಫ್ರಿದಿ ತಲಾ ಒಂದು ವಿಕೆಟ್ ಪಡೆದು ಗಮನ ಸೆಳೆದರು.ಈ ಸವಾಲಿನ ಮೊತ್ತಕ್ಕೆ ಉತ್ತರ ನೀಡಿ ಸರಣಿಯಲ್ಲಿ ಮುನ್ನಡೆ ಸಾಧಿಸಬೇಕು ಎನ್ನುವ ನಾಯಕ ಶಾಹೀದ್ ಆಫ್ರಿದಿ ಲೆಕ್ಕಾಚಾರ ಕೊನೆಗೂ ಯಶಸ್ವಿಯಾಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಿಸ್ಬಾಹ್-ಉಲ್-ಹಕ್ 91 ಎಸೆತೆಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಂತೆ ಗಳಿಸಿದ ಅಜೇಯ 93 ರನ್‌ಗಳು ಪಾಕ್ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು.ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262. (ಜೇಮ್ಸ್ ಫ್ರಾಂಕ್ಲಿನ್ 65, ಬ್ರೆಂಡನ್ ಮೆಕ್ಲಮ್ 37, ನಥಾನ್ ಮೆಕ್ಲಮ್ ಬ್ಯಾಟಿಂಗ್ 33: ಅಬ್ದುಲ್ ರಜಾಕ್ 16ಕ್ಕೆ1, ವಹಾಬ್ ರಿಯಾಜ್ 51ಕ್ಕೆ3, ಮೊಹಮ್ಮದ್ ಹಫೀಜ್ 25ಕ್ಕೆ1).ಪಾಕಿಸ್ತಾನ 49 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 264. (ಅಹ್ಮದ್ ಶಜಾದ್ 42, ಯೂನಿಸ್ ಖಾನ್ 42, ಮಿಸ್ಬಾಹ್-ಉಲ್-ಹಕ್ 93, ಅಬ್ದುಲ್ ರಜಾಕ್ 23; ಹಮೀಶ್ ಬೆನೆಟ್ 48ಕ್ಕೆ2, ಡೇನಿಯಲ್ ವೆಟೋರಿ 48ಕ್ಕೆ 2,  ಸ್ಕಾಟ್ ಸ್ಟ್ರೈಸ್ 40ಕ್ಕೆ3).ಫಲಿತಾಂಶ:
ಪಾಕಿಸ್ತಾನಕ್ಕೆ ಎರಡು ವಿಕೆಟ್‌ಗಳ ಗೆಲುವು

ಪಂದ್ಯ ಶ್ರೇಷ್ಠ:  ಮಿಸ್ಬಾಹ್- ಉಲ್-ಹಕ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry