ಕ್ರಿಕೆಟ್: ಪಾಕಿಸ್ತಾನಕ್ಕೆ ಸುಲಭ ವಿಜಯ

7

ಕ್ರಿಕೆಟ್: ಪಾಕಿಸ್ತಾನಕ್ಕೆ ಸುಲಭ ವಿಜಯ

Published:
Updated:

ಹ್ಯಾಮಿಲ್ಟನ್ (ಪಿಟಿಐ): ಅಬ್ಬರದ ಶತಕ ಸಾಧನೆ ಮಾಡುವುದರೊಂದಿಗೆ ‘ಪಂದ್ಯ ಶ್ರೇಷ್ಠ’ರಾದ ಅಹ್ಮದ್ ಶೆಹ್ಜಾದ್ ಅವರ ಬ್ಯಾಟಿಂಗ್ ಬಲದಿಂದ ಪಾಕಿಸ್ತಾನ ತಂಡದವರು ಗುರುವಾರ ಇಲ್ಲಿ ನಡೆದ ಏಕದಿನ ಪಂದ್ಯದಲ್ಲಿ 41 ರನ್‌ಗಳ ಅಂತರದಿಂದ ಆತಿಥೇಯ ನ್ಯೂಜಿ ಲೆಂಡ್ ತಂಡವನ್ನು ಮಣಿಸಿದರು.ಸೆಡ್ಡಾನ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ರಾಸ್ ಟೇಲರ್ ಅವರು ತಮ್ಮ ಬೌಲರ್‌ಗಳ ಮೇಲಿನ ಭಾರಿ ವಿಶ್ವಾಸದೊಂದಿಗೆ ಪಾಕ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆಗಲೇ ಲೆಕ್ಕಾಚಾರ ತಪ್ಪಿದ್ದು.ಶಾಹೀದ್ ಆಫ್ರಿದಿ ನಾಯಕತ್ವದ ಪಡೆಯನ್ನು ನಿರೀಕ್ಷಿಸಿದಷ್ಟು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವುದು ಸಾಧ್ಯವಾಗಲಿಲ್ಲ. ಶೆಹ್ಜಾದ್ (115; 156 ನಿ., 109 ಎ., 12 ಬೌಂಡರಿ, 3 ಸಿಕ್ಸರ್) ಅವರಂತೂ ಎದುರಾಳಿ ಪಡೆಯ ಬೌಲರ್‌ಗಳ ಉತ್ಸಾಹ ಕುಗ್ಗುವಂತೆ ಮಾಡಿದರು.ಪಾಕ್ ತನ್ನ ಪಾಲಿನ ಐವತ್ತು ಓವರುಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡು 268 ರನ್‌ಗಳನ್ನು ಗಳಿಸಿತು.ನ್ಯೂಜಿಲೆಂಡ್‌ನ ಕೇಲ್ ಮಿಲ್ಸ್, ಜೇಕಬ್ ಓರಾಮ್ ಹಾಗೂ ಸ್ಕಾಟ್ ಸ್ಟೈರಿಸ್ ಅವರ ತಲಾ ಎರಡು ವಿಕೆಟ್ ಕಬಳಿಸಿದರೂ, ಪ್ರವಾಸಿ ಪಡೆಯನ್ನು ಇನ್ನೂರರ ಗಡಿಯೊಳಗೆ ತಡೆದು ನಿಲ್ಲಿಸುವ ಸಾಹಸ ಮಾಡಲಿಲ್ಲ.ನ್ಯೂಜಿಲೆಂಡ್‌ಗೆ ಗುರಿಯನ್ನು ಬೆನ್ನಟ್ಟುವ ಹಾದಿಯೂ ಕಷ್ಟದ್ದಾಯಿತು. ಪಾಕ್ ಬೌಲರ್‌ಗಳು ಕಿವೀಸ್ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುವುದಕ್ಕೆ ಅವಕಾಶವನ್ನೇ ನೀಡಲಿಲ್ಲ. ವಹಾಬ್ ರಿಯಾಜ್, ಉಮರ್ ಗುಲ್ ಹಾಗೂ ನಾಯಕ ಆಫ್ರಿದಿ ಅವರು ಆತಿಥೇಯರನ್ನು ಪ್ರಭಾವಿ ಬೌಲಿಂಗ್ ದಾಳಿಯಿಂದ ಕಾಡಿದರು. 46.5 ಓವರುಗಳಲ್ಲಿಯೇ ನ್ಯೂಜಿಲೆಂಡ್ ಕುಸಿಯಿತು. ಗಳಿಸಿದ್ದು 227 ರನ್ ಮಾತ್ರ.ಸಂಕ್ಷಿಪ್ತ ಸ್ಕೋರ್:

ಪಾಕಿಸ್ತಾನ: 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 268 (ಮೊಹಮ್ಮದ್ ಹಫೀಜ್ 14, ಅಹ್ಮದ್ ಶೆಹ್ಜಾದ್ 115, ಕಮ್ರನ್ ಅಕ್ಮಲ್ 17, ಯೂನಿಸ್ ಖಾನ್ 21, ಮಿಸ್ಬಾಹ್ ಉಲ್ ಹಕ್ 25, ಉಮರ್ ಅಕ್ಮಲ್ 32, ಶಾಹೀದ್ ಆಫ್ರಿದಿ 24; ಕೇಲ್ ಮಿಲ್ಸ್ 42ಕ್ಕೆ2, ಜೇಕಬ್ ಓರಾಮ್ 49ಕ್ಕೆ2, ಸ್ಕಾಟ್ ಸ್ಟೈರಿಸ್ 51ಕ್ಕೆ2); ನ್ಯೂಜಿಲೆಂಡ್: 46.5 ಓವರುಗಳಲ್ಲಿ 227 (ಮಾರ್ಟಿನ್ ಗುಪ್ಟಿಲ್ 65, ಜ್ಯಾಮಿ ಹೌವ್ 12, ರಾಸ್ ಟೇಲರ್ 69, ಜೇಮ್ಸ್ ಫ್ರಾಂಕ್ಲಿನ್ 16, ನಥಾನ್ ಮೆಕ್ಲಮ್ 14, ಜೇಕಬ್ ಓರಾಮ್ 10; ವಹಾಬ್ ರಿಯಾಜ್ 51ಕ್ಕೆ3, ಉಮರ್ ಗುಲ್ 28ಕ್ಕೆ2, ಶಾಹೀದ್ ಅಫ್ರಿದಿ 55ಕ್ಕೆ2); ಫಲಿತಾಂಶ: ಪಾಕಿಸ್ತಾನಕ್ಕೆ 41 ರನ್‌ಗಳ ಗೆಲುವು; 6 ಪಂದ್ಯಗಳ ಸರಣಿಯಲ್ಲಿ 3-1ರಲ್ಲಿ ಮುನ್ನಡೆ; ಪಂದ್ಯ ಶ್ರೇಷ್ಠ: ಅಹ್ಮದ್ ಶೆಹ್ಜಾದ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry