ಮಂಗಳವಾರ, ಏಪ್ರಿಲ್ 20, 2021

ಕ್ರಿಕೆಟ್ ಪ್ರೇಮಿಗಳ ಬರ್ಮಿ ಆರ್ಮಿ

ಪ್ರಜಾವಾಣಿ ವಾರ್ತೆ / ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಗ್ಲೆಂಡ್ ತಂಡ ಎಲ್ಲಿರುತ್ತದೆಯೋ ಅಲ್ಲಿ ‘ಬರ್ಮಿ ಆರ್ಮಿ’ ಎಂಬ ಕ್ರಿಕೆಟ್ ಪ್ರೇಮಿಗಳ ಲೋಕ ಸೃಷ್ಟಿಯಾಗುತ್ತದೆ. ಹಾಗಾಗಿ ಇಂಗ್ಲೆಂಡ್ ತಂಡ ಎಲ್ಲಿಯೇ ಆಡಲಿ ಅಭಿಮಾನಿಗಳ ಕೊರತೆ ಎದುರಾಗದು. ಆತಿಥೇಯ ದೇಶದ ಅಭಿಮಾನಿಗಳ ಬೆಂಬಲವನ್ನು ಮೀರಿ ನಿಲ್ಲುವಂತೆ ಅವರು ತಮ್ಮ ದೇಶದ ಆಟಗಾರರಿಗೆ ಸ್ಫೂರ್ತಿಯಾಗುತ್ತಾರೆ.ಹತ್ತನೇ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ವಿಶೇಷ ಆಕರ್ಷಣೆ ಬಾರ್ಮಿ ಆರ್ಮಿ. ಆ್ಯಂಡ್ರ್ಯೂ ಸ್ಟ್ರಾಸ್ ಪಡೆಯನ್ನು ಬೆಂಬಲಿಸಲು ನಾಲ್ಕು ಸಾವಿರಕ್ಕೂ ಅಧಿಕ ಇಂಗ್ಲೆಂಡ್‌ನ ಪ್ರೇಕ್ಷಕರು ಭಾರತಕ್ಕೆ ಬಂದಿದ್ದಾರೆ. ಅವರೆಲ್ಲಾ ಬರ್ಮಿ ಆರ್ಮಿ ಗುಂಪಿನ ಸದಸ್ಯರು ಎನ್ನುವುದು ವಿಶೇಷ.ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆಯೇ ಈ ಸದಸ್ಯರೆಲ್ಲಾ ಇಂಗ್ಲೆಂಡ್ ಧ್ವಜ ಹಿಡಿದು ಜೋರಾಗಿ ಕೂಗುತ್ತಾ ಸ್ಥಳೀಯ ಕ್ರೀಡಾಭಿಮಾನಿಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಇವರೆಲ್ಲಾ ಭಾನುವಾರ ಇಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಟಿಕೆಟ್ ಖರೀದಿಸಲು ದೊಡ್ಡ ಸಾಲಿನಲ್ಲಿ ನಿಂತಿದ್ದರು.‘ನನಗಿದು ಮೂರನೇ ವಿಶ್ವಕಪ್. ಇಂಗ್ಲೆಂಡ್ ಆಡಿದ ಪ್ರತಿ ಪಂದ್ಯಗಳನ್ನು ತಪ್ಪದೆ ವೀಕ್ಷಿಸುತ್ತೇನೆ. ತಂಡ ಗೆಲ್ಲಲಿ ಅಥವಾ ಸೋಲಲಿ. ಪಂದ್ಯವನ್ನು ಖುಷಿಯಿಂದ ವೀಕ್ಷಿಸುವುದಷ್ಟೆ ನನ್ನ ಕೆಲಸ. ನನ್ನ ನೆಚ್ಚಿನ ಆಟಗಾರ ಕೆವಿನ್ ಪೀಟರ್ಸನ್’ ಎನ್ನುತ್ತಾರೆ ಬರ್ಮಿ  ಆರ್ಮಿ ಸದಸ್ಯ ಜೇಮಿ ಮಸೋನ್.ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಒಲವು ಹೊಂದಿದ್ದರು. ಆದರೆ ಅವರಿಗೆ ಟಿಕೆಟ್‌ನದ್ದೇ ಸಮಸ್ಯೆ. ಅದರಲ್ಲೂ ಭಾರತ ವಿರುದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದಾಗ ಈ ಗುಂಪಿನ ಹೆಚ್ಚಿನ ಸದಸ್ಯರಿಗೆ ಟಿಕೆಟ್ ಲಭಿಸಿರಲಿಲ್ಲ.‘ನಮ್ಮ ಕುಟುಂಬದಲ್ಲಿ ಆರು ಮಂದಿ ಇದ್ದೇವೆ. ಆದರೆ ಟೈನಲ್ಲಿ ಕೊನೆಗೊಂಡ ಬೆಂಗಳೂರು ಪಂದ್ಯಕ್ಕೆ ಕೇವಲ ಮೂರು ಟಿಕೆಟ್ ಲಭಿಸಿದ್ದವು. ಉಳಿದ ಮೂರು ಮಂದಿ ಹೋಟೆಲ್‌ನಲ್ಲಿಯೇ ಪಂದ್ಯ ವೀಕ್ಷಿಸಬೇಕಾಯಿತು. ತುಂಬಾ ಮಂದಿಗೆ ಹೀಗೆ ಆಗಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಕ್ಕೆ ಎಲ್ಲರಿಗೂ ಟಿಕೆಟ್ ಲಭಿಸಿದೆ’ ಎಂದು ಗುಂಪಿನ ಸದಸ್ಯೆ ಗ್ಯಾಬ್ರಿಯಲ್ ಡೈಸಿ ‘ಪ್ರಜಾವಾಣಿ’ಗೆ ತಿಳಿಸಿದರು.ಟಿಕೆಟ್ ಖರೀದಿಸಿದ ಬಳಿಕ ಬರ್ಮಿ  ಆರ್ಮಿ ಸದಸ್ಯರು ಸಮೀಪದಲ್ಲೇ ಇರುವ ಮರೀನ್ ಬೀಚ್‌ಗೆ ತೆರಳಿದರು. ವಿಶೇಷವೆಂದರೆ ಬರ್ಮಿ  ಆರ್ಮಿ ಗುಂಪಿನಲ್ಲಿ ಪುಟಾಣಿ ಮಕ್ಕಳು, ಮಹಿಳೆಯರು, ತುಂಬಾ ವಯಸ್ಸಾದವರೂ ಇದ್ದಾರೆ. ಹೆಚ್ಚಿನವರು ವಿವಿಧ ಉದ್ಯೋಗದಲ್ಲಿದ್ದಾರೆ. ಸದ್ಯಕ್ಕೆ ರಜೆ ಹಾಕಿ ಭಾರತಕ್ಕೆ ಆಗಮಿಸಿದ್ದಾರೆ. ಅನೇಕ ಮಂದಿ ಮೊದಲ ಬಾರಿ ಈ ದೇಶಕ್ಕೆ ಭೇಟಿ ನೀಡಿದ್ದಾರೆ. ಆ ತಂಡಕ್ಕೊಬ್ಬ ನಾಯಕ ಕೂಡ ಇದ್ದಾನೆ.ಪಂದ್ಯ ನಡೆಯುವಾಗ ಒಟ್ಟಿಗೆ ಹಾಡು ಹೇಳುವುದು, ಬ್ಯಾನರ್ ಪ್ರದರ್ಶಿಸುತ್ತಾ ಕುಣಿಯುವುದು, ಉಳಿದ ಪ್ರೇಕ್ಷಕರನ್ನು ಹುರಿದುಂಬಿಸುವುದು ಈ ಗುಂಪಿನ ಕೆಲಸ. ಕ್ರಿಕೆಟ್‌ನೆಡೆಗಿನ ಇವರ ಬದ್ಧತೆ, ಪ್ರೀತಿ, ವಿಶ್ವಾಸ, ಹಾಸ್ಯ ಪ್ರಜ್ಞೆ ಪ್ರತಿಯೊಬ್ಬ ಕ್ರೀಡಾ ಪ್ರೇಮಿಗೆ ಸ್ಫೂರ್ತಿ ನೀಡುವಂಥದ್ದು. ಐರ್ಲೆಂಡ್ ಎದುರು ಇಂಗ್ಲೆಂಡ್ ತಂಡ ಸೋಲು ಕಂಡಿರುವುದು ಇವರನ್ನು ನಿರಾಸೆಗೊಳಿಸಿಲ್ಲ. ‘ಇನ್ನೂ ನಮಗೆ ಮೂರು ಪಂದ್ಯಗಳಿವೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್ ವಿರುದ್ಧ ಆಡಬೇಕಾಗಿದೆ. ಕ್ವಾರ್ಟರ್ ಫೈನಲ್ ತಲುಪುವ ವಿಶ್ವಾಸವಿದೆ. ಭಾರತ ಹಾಗೂ ಐರ್ಲೆಂಡ್ ಪಂದ್ಯಗಳು ತುಂಬಾ ಮಜಾ ನೀಡಿದವು’ ಎಂದು ಲ್ಯೂಸಿ ಎಲಿಸ್ ನುಡಿದರು.ಪ್ರಮುಖವಾಗಿ ಟೆಸ್ಟ್ ಸರಣಿ ನಡೆಯುವಾಗ ‘ಬರ್ಮಿ ಆರ್ಮಿ’ ಸದಸ್ಯರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಸರಣಿ ವೇಳೆ ಅವರ ಸೊಬಗೇ ಬೇರೆ. ಬೀರು ಹೀರುತ್ತಾ ಪಂದ್ಯ ವೀಕ್ಷಿಸುತ್ತಾರೆ. ಪಂದ್ಯದ ಬಳಿಕ ಪಬ್, ರೆಸ್ಟೋರೆಂಟ್‌ಗಳಲ್ಲಿ ಠಿಕಾಣಿ ಹೂಡ್ತುತಾರೆ. ಪ್ರಮುಖ ರಸ್ತೆಗಳಲ್ಲಿ ತಿರುಗುತ್ತಾ ಸ್ಥಳೀಯರಿಗೆ ರಂಜನೆ ನೀಡುತ್ತಾರೆ. ಪ್ರತ್ಯೇಕ ವೆಬ್‌ಸೈಟ್ ಹಾಗೂ ಮಾಧ್ಯಮ ವಕ್ತಾರರನ್ನು ಕೂಡ ಈ ಗುಂಪು ಹೊಂದಿದೆ. ಇಂಗ್ಲೆಂಡ್ ತಂಡದ ಆಟಗಾರರು ಕೂಡ ಬರ್ಮಿ ಆರ್ಮಿ ಗುಂಪಿನ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಟಿಕೆಟ್ ಹಾಗೂ ಹೋಟೆಲ್ ವ್ಯವಸ್ಥೆ ಸಂಬಂಧ ಸಹಾಯ ಮಾಡುತ್ತಾರೆ.ಏನಿದು ಬರ್ಮಿ ಆರ್ಮಿ?: ಇದೊಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಅಭಿಮಾನಿಗಳ ಗುಂಪು. ಇಂಗ್ಲೆಂಡ್ ತಂಡ ಪ್ರವಾಸ ಕೈಗೊಂಡಾಗ ಈ ಗುಂಪಿನ ಸದಸ್ಯರು ಒಟ್ಟಿಗೆ ತೆರಳುತ್ತಾರೆ. ಒಂದೇ ಕಡೆ ಉಳಿದುಕೊಳ್ಳುತ್ತಾರೆ. 1994-95ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಈ ಗುಂಪು ಅಸ್ತಿತ್ವಕ್ಕೆ ಬಂತು. ಆಸ್ಟ್ರೇಲಿಯಾ ಮಾಧ್ಯಮಗಳು ಈ ಹೆಸರು ನೀಡಿದವು. ಇದಕ್ಕೊಂದು ಕಾರಣವಿದೆ. ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗಲೆಲ್ಲಾ ಸೋಲು ಕಾಣುತಿತ್ತು. ಆದರೆ ತಂಡ ಸತತ ಸೋಲು ಕಾಣುತ್ತಿದ್ದರೂ ಈ ಅಭಿಮಾನಿಗಳ ಗುಂಪು ಕ್ರೀಡಾಂಗಣದಲ್ಲಿ ಜೋರಾಗಿ ಕೂಗುತ್ತಾ ಬೆಂಬಲ ವ್ಯಕ್ತಪಡಿಸುತ್ತಿತ್ತು. ಇದ್ದ ಹಣವನ್ನೆಲ್ಲಾ ಖರ್ಚು ಮಾಡಿ ಅಂತಹ ತಂಡಕ್ಕೆ ಬೆಂಬಲ ನೀಡುತ್ತಿರುವುದಕ್ಕೆ ‘ಬರ್ಮಿ’ ಎಂಬ ಹೆಸರು ಬಂತು. ಗುಂಪಾಗಿ ಇರುತ್ತಿದ್ದ ಕಾರಣ ‘ಆರ್ಮಿ’ ಎಂದು ಕರೆದರು.ಈಗ ಅದು ನೋಂದಾಯಿತ ಗುಂಪು ಕೂಡ. ‘ಬರ್ಮಿ ಆರ್ಮಿ ಲಿಮಿಟೆಡ್’ ಎಂದು ಲಂಡನ್‌ನಲ್ಲಿ ನೋಂದಾಯಿಸಿದ್ದಾರೆ. ಇವರು ಸಮಾಜ ಸೇವೆ ಕಾರ್ಯಗಳಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.