ಕ್ರಿಕೆಟ್ ಬದಲು ಹಾಕಿ ಆಟಕ್ಕೆ ಸಾಥ್

7

ಕ್ರಿಕೆಟ್ ಬದಲು ಹಾಕಿ ಆಟಕ್ಕೆ ಸಾಥ್

Published:
Updated:
ಕ್ರಿಕೆಟ್ ಬದಲು ಹಾಕಿ ಆಟಕ್ಕೆ ಸಾಥ್

ಕ್ರಿಕೆಟ್ ಬ್ಯಾಟ್ ಕೈ ಬಿಟ್ಟ ಸಹಾರಾ ಸಂಸ್ಥೆ ಹಾಕಿ ಸ್ಟಿಕ್‌ಗೆ ಆರ್ಥಿಕ ಬಲ ತುಂಬುವುದರ ಜೊತೆಗೆ ಭಾರತೀಯ ಹಾಕಿ ಕ್ಷೇತ್ರಕ್ಕೆ ಶುಕ್ರದೆಸೆ ಆರಂಭವಾಗಿದೆ.

ಸುಮಾರು ಐವತ್ತು ಕೋಟಿ ರೂಪಾಯಿಗಳ ಪ್ರಾಯೋಜಕತ್ವ ನೀಡಲಿರುವ ಸಹಾರಾ ಸಂಸ್ಥೆಯಿಂದಾಗಿ ಭಾರತೀಯ ಹಾಕಿ ಆಟಗಾರರ ಮುಖದಲ್ಲಿ ಹೊಸ ಕಳೆ ಹೊಳೆಯುತ್ತಿದೆ.ಇದರಿಂದ ಫೆಬ್ರುವರಿ 18ರಿಂದ 26ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಹಾಕಿ ಟೂರ್ನಿಯಲ್ಲಿ ಗೆಲ್ಲುವ ಹುಮ್ಮಸ್ಸು ಇಮ್ಮಡಿಗೊಂಡಿದೆ.ಆರ್ಥಿಕ ಬಲ ಸಿಕ್ಕ ಸಮಾಧಾನದ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಈ ಬಾರಿ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವ ಕಠಿಣ ಸವಾಲು ಭಾರತದ ಮುಂದಿದೆ. ತಂಡದ ಆಯ್ಕೆ ಸಂದರ್ಭದಲ್ಲಿಯೇ ವಿವಾದದ ಮುಖ ಕಂಡಿರುವ ಸದ್ಯದ ಯುವಪಡೆ ಇದನ್ನು ಎದುರಿಸಲು ಶಕ್ತವೇ ಎಂಬ ಚಿಂತನೆಯೂ ಈಗ ನಡೆದಿದೆ.`ಅತ್ಯುತ್ತಮ ತಂಡವನ್ನೇ ಆಯ್ಕೆ ಮಾಡಿದ್ದೇವೆ. ಹಿರಿತನ ಅಥವಾ ಪ್ರತಿಷ್ಠೆಯನ್ನು ನೋಡಿ ಮಣೆ ಹಾಕುವುದು ನನ್ನ ಕೆಲಸವಲ್ಲ. ತಂಡದ ವ್ಯವಸ್ಥೆಗೆ ಹೊಂದಿಕೊಳ್ಳುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ~ ಎಂದು ಕೋಚ್ ಮೈಕಲ್ ನಾಬ್ಸ್ ವಿಶ್ವಾಸದಿಂದ ಹೇಳುತ್ತಾರೆ.ಆದರೆ ಹಿರಿಯ ಆಟಗಾರ ಮತ್ತು ಕೋಚ್ ಅಶೋಕಕುಮಾರ್ (ಮೇಜರ್ ಧ್ಯಾನಚಂದ್ ಅವರ ಪುತ್ರ) ಇದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. `ಪ್ರಜಾವಾಣಿ~ಯೊಂದಿಗೆ ಅವರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ;ರಾಜ್ಪಾಲ್‌ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿದ್ದು  ಮತ್ತು ಅರ್ಜುನ್ ಹಾಲಪ್ಪ ಅವರನ್ನು ಕಾಯ್ದಿಟ್ಟ ಆಟಗಾರರ ಪಟ್ಟಿಯಲ್ಲಿ ಇಟ್ಟಿರುವುದು ಸರಿಯಲ್ಲ. ಅವರನ್ನು ತಂಡದಿಂದ ಹೊರಗಿಡುವುದೇ ಆಗಿದ್ದರೆ ಅಥವಾ ಅವರು ಅನರ್ಹರು ಎಂದಾಗಿದ್ದರೆ ಸಂಭವನೀಯರ ಪಟ್ಟಿಯಲ್ಲಿಯೇ ಇಡಬಾರದಿತ್ತು.           ತರಬೇತಿ ಶಿಬಿರದಲ್ಲಿ ಇಟ್ಟುಕೊಂಡು ಏಕಾಏಕಿ ಅಂತಿಮ ಹಂತದ ಆಯ್ಕೆಯಿಂದ ಕೈಬಿಡುವ ಅವಶ್ಯಕತೆ ಇರಲಿಲ್ಲ.  ಕಳೆದ ಟೂರ್ನಿಗಳಲ್ಲಿ ಹಾಲಪ್ಪ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಒತ್ತಡದ ಸಂದರ್ಭದಲ್ಲಿಯೂ ಸ್ಥಿರ ಪ್ರದರ್ಶನ ನೀಡುವ ಗುಣ ಅವರಿಗಿದೆ.  ರಾಜ್ಪಾಲ್ ಸಹ ಅನುಭವಿ ಆಟಗಾರ.2008ರಲ್ಲಿ ಬೀಜಿಂಗ್ ವಿಮಾನದಲ್ಲಿ ಸೀಟು ಗಿಟ್ಟಿಸದ ಭಾರತ ತಂಡಕ್ಕೆ ಈ ಬಾರಿ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಇದು ಸುವರ್ಣಾವಕಾಶ. ಅರ್ಹತಾ ಸುತ್ತಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಕೆನಡಾ. ಫ್ರಾನ್ಸ್, ಇಟಲಿ, ಪೋಲೆಂಡ್ ಮತ್ತು ಸಿಂಗಪುರ ತಂಡಗಳು ಈ ಸುತ್ತಿನಲ್ಲಿವೆ. ಇದ್ದುದರಲ್ಲಿ ಇದು ಸರಳ ಸುತ್ತು. ಈಗ ಗೆಲ್ಲದಿದ್ದರೆ ಮತ್ತೆ ಇಂತಹ ಅವಕಾಶ ಸಿಗುವುದಿಲ್ಲ.ಸದ್ಯದ ತಂಡದ ಉಪನಾಯಕ ಮಿಡ್‌ಫೀಲ್ಡರ್ ಸರ್ದಾರ್ ಸಿಂಗ್, ಬೀರೇಂದ್ರ ಲಾಕ್ರಾ, ಇಗ್ನೇಶ್ ಟಿರ್ಕಿ, ಫಾರ್ವರ್ಡ್ ಸುನಿಲ್ ವಾಲ್ಮೀಕಿ,  ಸರವಣಜಿತ್ ಸಿಂಗ್, ಡಿಫೆಂಡರ್ ಸಂದೀಪ್‌ಸಿಂಗ್, ವಿ.ಆರ್. ರಘುನಾಥ್ ಅವರಿಂದ ಹೆಚ್ಚಿನ ನಿರೀಕ್ಷೆ ಇದೆ. ಆದರೆ ತಂಡದ ಬಹುತೇಕ ಆಟಗಾರರಿಗೆ ಸಾಕಷ್ಟು ಪಂದ್ಯಗಳನ್ನು ಆಡಿರುವ ಅನುಭವದ ಕೊರತೆ ಇದೆ.

ಇಂತಹ ಸಂದರ್ಭದಲ್ಲಿ  ಹಾಲಪ್ಪ ಮತ್ತು ರಾಜ್ಪಾಲ್  ಅವರ ಅಗತ್ಯ ಎದ್ದು ಕಾಣುತ್ತದೆ.ಇತ್ತೀಚಿನ ಟೂರ್ನಿಗಳಲ್ಲಿ ಭಾರತ ತಂಡದ ಪ್ರದರ್ಶನವನ್ನು ನೋಡಿದರೆ ಬಹುತೇಕ ಗೋಲುಗಳು ಪೆನಾಲ್ಟಿ ಕಾರ್ನರ್‌ನಲ್ಲಿಯೇ ಬಂದಿವೆ. ಆದರೆ ಫೀಲ್ಡ್ ಗೋಲುಗಳ ಸಂಖ್ಯೆ ತೀರಾ ಕಡಿಮೆ. ಒಂದೆಡೆ ಇದು ಪ್ಲಸ್ ಪಾಯಿಂಟ್ ಆದರೂ, ಇನ್ನೊಂದೆಡೆ       ಅಪಾಯಕಾರಿಯೂ ಹೌದು.

 

ಎದುರಾಳಿ ತಂಡವು ಎಚ್ಚರಿಕೆಯಿಂದ ಆಡಿ ಫೀಲ್ಡ್ ಗೋಲು ಗಳಿಕೆಯಿಂದಲೇ ಮುನ್ನಡೆ ಸಾಧಿಸಿಬಿಟ್ಟರೆ ನಮಗೆ ಸೋಲು ಕಟ್ಟಿಟ್ಟ ಬುತ್ತಿ. ಸದ್ಯ ಭರತ್ ಚೆಟ್ರಿ ನಾಯಕತ್ವದ ತಂಡವು ಉತ್ತಮ ಪ್ರದರ್ಶನ ನೀಡಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಬಿಟ್ಟರೆ ಆಯ್ಕೆದಾರರು ಬೀಗಬಹುದು. ಒಂದು ವೇಳೆ ತಂಡ ಸೋಲನುಭವಿಸಿದರೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಕೋಚ್ ಮೈಕಲ್ ನಾಬ್ಸ್‌ಗೆ ಈ ಸವಾಲಿನ ಅರಿವು ಇದೆ.ಅದಕ್ಕಾಗಿಯೇ ಆಟದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಟೂರ್ನಿಗೆ ಸನ್ನದ್ಧಗೊಳಿಸುವುದಾಗಿ ಅವರು ಹೇಳಿದ್ದಾರೆ.ಹಾಕಿ ಆಟಗಾರರಿಗೆ ಸಿಗುತ್ತಿರುವ ಸಂಭಾವನೆ, ನಗದು ಪ್ರಶಸ್ತಿಗಳ ಮೊತ್ತದ ಬಗ್ಗೆ ಈಗಾಗಲೇ ಹಲವು ವಿವಾದಗಳು ಇತಿಹಾಸದ ಪುಟ ಸೇರಿವೆ. ಇಂತಹ ಸಂದರ್ಭದಲ್ಲಿ ತಂಡಕ್ಕೆ ದೊಡ್ಡ ಸಂಸ್ಥೆಯೊಂದರ ಪ್ರಾಯೋಜಕತ್ವದ ಬಲ ಸಿಕ್ಕಿದೆ. ಈ ಧನಬಲದ ಜೊತೆಗೆ ಆಟಗಾರರ ಆತ್ಮಬಲವೂ ಸಮ್ಮಿಲನಗೊಂಡರೆ ಹಾಕಿಯ ಚಿನ್ನದ ದಿನಗಳು ಮತ್ತೆ ಆರಂಭವಾಗುವ ನಿರೀಕ್ಷೆಗಳು ಗರಿಗೆದರುತ್ತವೆ. 

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ಸಂಬಂಧ ಕಡಿದುಕೊಂಡ ಸಹಾರಾ ಸಂಸ್ಥೆ ರಾಷ್ಟ್ರೀಯ ಕ್ರೀಡೆ ಹಾಕಿಯತ್ತ ವಾಲಿದೆ. 2011ರಲ್ಲಿ ಹಾಕಿ ಇಂಡಿಯಾದೊಂದಿಗೆ ಮುಗಿದುಹೋಗಿದ್ದ ಪ್ರಾಯೋಜಕತ್ವಕ್ಕೆ ಮತ್ತೆ ಮರುಜೀವ ನೀಡಿದೆ.ಇದರೊಂದಿಗೆ ಹಾಕಿ ಆಟದ ಬೆಳವಣಿಗೆಗೆ ಹಾಗೂ ಆಟಗಾರರ ಪ್ರೋತ್ಸಾಹಕ್ಕೆ ಯೋಜನೆಗಳನ್ನು ರೂಪಿಸಲು ಹಾಕಿ ಇಂಡಿಯಾಕ್ಕೆ ಅವಕಾಶ ಸಿಕ್ಕಂತಾಗಿದೆ. ಈ ಹುರುಪಿನಲ್ಲಿಯೇ ಲಂಡನ್ ಒಲಿಂಪಿಕ್ಸ್‌ಗೆ ಭಾರತದ ಹಾಕಿ ತಂಡಗಳು ಅರ್ಹತೆ ಗಿಟ್ಟಿಸಬಹುದೇ... ವನಿತೆಯರ ಅದೃಷ್ಟ ಖುಲಾಯಿಸುವುದೇ..ಭಾರತದ ಮಹಿಳಾ ಹಾಕಿ ಕುರಿತು ಕೆಲವು ವರ್ಷಗಳ ಹಿಂದೆ `ಚಕ್ ದೇ ಇಂಡಿಯಾ~ ಹಿಂದಿ ಸಿನೆಮಾ ಭರ್ಜರಿ ಹಿಟ್ ಆಗಿತ್ತು. ಆದರೆ ಭಾರತ ಮಹಿಳಾ ಹಾಕಿ ತಂಡಕ್ಕೆ ಮಾತ್ರ ಆ ಮಟ್ಟದ ಜನಪ್ರಿಯತೆ ಇಂದಿಗೂ ಸಿಕ್ಕಿಲ್ಲ.2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿದ್ದ ಮಹಿಳಾ ತಂಡ, ಈ ಬಾರಿ ಲಂಡನ್‌ನ ಒಲಿಂಪಿಕ್ಸ್‌ಗೆ ಹೋಗುವ ತಯಾರಿ ನಡೆಸಿದೆ. ಜಾರ್ಖಂಡ್‌ನ ಹುಡುಗಿ ಅಸುಂತಾ ಲಾಕ್ರಾ ನೇತೃತ್ವದ ತಂಡ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದೆ.ಕಳೆದ ಬಾರಿ ರಷ್ಯಾದ ಕಜಾನ್‌ನಲ್ಲಿ ನಡೆದಿದ್ದ ದ್ವಿತೀಯ ಸುತ್ತಿನ ಅರ್ಹತಾ ಟೂರ್ನಿಯಲ್ಲಿ ಆರು ತಂಡಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಭಾರತದ ವನಿತೆಯರು ಬೀಜಿಂಗ್‌ಗೆ ಅವಕಾಶ ತಪ್ಪಿಸಿಕೊಂಡಿದ್ದರು. ಈ ಟೂರ್ನಿಗೆ ಆಯ್ಕೆ ಮಾಡಿದ ಆಟಗಾರ್ತಿಯರಲ್ಲಿ ಬಹುತೇಕರು ಫಿಟ್ ಇರಲಿಲ್ಲ ಎನ್ನುವ ಸಂಗತಿಗಳು ನಂತರ ವಿವಾದ ಸೃಷ್ಟಿಸಿದ್ದವು.ಈ ಬಾರಿಯ ತಂಡ ಇದ್ದುದ್ದರಲ್ಲಿಯೇ ಅರ್ಹ ಎಂದು ಹೇಳಲಾಗುತ್ತಿದೆ. ಮುಖ್ಯ ಕೋಚ್ ಸಿ.ಆರ್. ಕುಮಾರ್ ಕೂಡ ತಂಡದ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ.  ಮೊದಲು ನಾಯಕಿಯಾಗಿದ್ದ ಸಬಾ ಅಂಜುಮ್ ಮದುವೆಯ ಕಾರಣದಿಂದ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ.

 

ಅನುಭವಿ ಆಟಗಾರ್ತಿಯರಾದ ಜಯದೀಪ್ ಕೌರ್, ಮುಕ್ತಾ ಬಾರ್ಲಾ, ಜಸ್ಜೀತ್ ಕೌರ್ ಮತ್ತು ದೀಪಿಕಾ ಠಾಕೂರ್ ಗಾಯಗೊಂಡಿದ್ದು, ಅವರು ಆಡುತ್ತಿಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಿದೆ.ಸಬಾ ಅಂಜುಮ್ ಇಲ್ಲದ ಕಾರಣ ಅಸುಂತಾಗೆ ನಾಯಕಿ ಪಟ್ಟ ಒಲಿದುಬಂದಿದೆ. ತಂಡದಲ್ಲಿರುವ ಪ್ರತಿಭಾನ್ವಿತ ಆಟಗಾರ್ತಿಯರ ಉತ್ಸಾಹ ಮತ್ತು ಆತ್ಮವಿಶ್ವಾಸದ ಮೇಲೆಯೇ ಅವರಿಗೆ ಹೆಚ್ಚು ಭರವಸೆ ಇದೆ. `ಭಾರತದ ಮಹಿಳಾ ಹಾಕಿ ಬಗ್ಗೆ ಸಿನೆಮಾಗಳು ಬಂದಿವೆ. ಅವು ಭರ್ಜರಿ ಹಿಟ್ ಕೂಡ ಆಗಿವೆ. ಆದರೆ ವಾಸ್ತವದಲ್ಲಿ ಪುರುಷರ ತಂಡಕ್ಕೆ ಸಿಕ್ಕಷ್ಟು ಪ್ರಾಧಾನ್ಯತೆ, ಪ್ರಚಾರಗಳು ಮಹಿಳಾ ತಂಡಕ್ಕೆ ಸಿಗುತ್ತಿಲ್ಲ. ಮಹಿಳಾ ತಂಡಕ್ಕೂ ಹೆಚ್ಚಿನ ಪ್ರೋತ್ಸಾಹ ಸಿಗಲೇಬೇಕು. ಅವರು ದೇಶಕ್ಕಾಗಿ ಆಡುತ್ತಿದ್ದಾರೆ. ಅವರು ಒಂದು ವೇಳೆ ಪದಕ ಗೆದ್ದರೆ ಅದು ದೇಶದ ಹೆಮ್ಮೆಯಲ್ಲವೇ~ ಎಂದು ಅಶೋಕಕುಮಾರ್ ಪ್ರಶ್ನಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry