ಶನಿವಾರ, ಮೇ 21, 2022
23 °C

ಕ್ರಿಕೆಟ್ ಬೆಟ್ಟಿಂಗ್: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿರುವ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು, ಅವರಿಂದ 1.50 ಲಕ್ಷ ರೂ. ಮತ್ತು ಬೆಟ್ಟಿಂಗ್ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಮೋತಿ ವೃತ್ತದ ಬಳಿ ಇರುವ ಅಂಗಡಿಯೊಂದರಲ್ಲಿ ಶನಿವಾರ ಸಂಜೆ ವಿಶ್ವಕಪ್ ಪಂದ್ಯಾವಳಿಯ ಆಸ್ಟ್ರೇಲಿಯಾ- ಶ್ರೀಲಂಕಾ ನಡುವಿನ ಪಂದ್ಯಕ್ಕೆ ಸಂಬಂಧಿಸಿದ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ದಿಲೀಪ್, ವಿನೋದ್ ಮತ್ತು ಅಬ್ದುಲ್ ಹಸನ್ ಅವರನ್ನು ಬಂಧಿಸಲಾಗಿದೆ.

ಸಿಪಿಐ - ಎಸ್.ಎಸ್. ಹುಲ್ಲೂರ ತಂಡದ ನೇತೃತ್ವ ವಹಿಸಿದ್ದರು. ಬ್ರೂಸ್‌ಪೇಟೆ ಪೊಲೀಸರು ಪ್ರಕರಣ ದಾಖಸಿಕೊಂಡಿದ್ದಾರೆ.

ವರದಕ್ಷಿಣೆ: ಮಹಿಳೆ ಆತ್ಮಹತ್ಯೆ

ಬಳ್ಳಾರಿ: ವರದಕ್ಷಿಣೆ ತರುವಂತೆ ಗಂಡನ ಮನೆಯವರು ಪದೇಪದೇ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸ್ಥಳೀಯ ಪಾರ್ವತಿ ನಗರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.ಅರುಣಕುಮಾರಿ ಶ್ರವಣಕುಮಾರ್ (20) ಎಂಬ ಗೃಹಿಣಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ.

ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಅರುಣಾ ಅವರ ತಂದೆ ಮದುವೆ ಸಂದರ್ಭ ಒಂದು ಲಕ್ಷಕ್ಕೂ ಅಧಿಕ ಮೊತ್ತದ ವರದಕ್ಷಿಣೆ, ಚಿನ್ನ ಕೊಟ್ಟಿದ್ದರೂ, ಇನ್ನೂ ಹೆಚ್ಚು ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಇದರಿಂದ ತೀವ್ರ ಬೇಸತ್ತ ಅರುಣಕುಮಾರಿ ಮನೆಯ ಪಕ್ಕದಲ್ಲಿದ್ದ ಕೋಣೆಯೊಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಮೃತಳ ತಂದೆ ಪಿ.ಮಾರೆಪ್ಪ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೃತಳ ಪತಿ ಶ್ರವಣಕುಮಾರ್ ಹಾಗೂ ಅವರ ತಂದೆ ಮಾರೆಪ್ಪ, ತಾಯಿ ಮಾರೆಮ್ಮ ಅವರನ್ನು ಬಂಧಿಸಲಾಗಿದೆ. ಡಿವೈಎಸ್‌ಪಿ ಎಸ್.ಎಸ್. ಘೋರಿ ತನಿಖೆ ಮುಂದುವರಿಸಿದ್ದಾರೆ.

ಮಟ್ಕಾ ಅಡ್ಡೆ ಮೇಲೆ ದಾಳಿ

ಹೊಸಪೇಟೆ: ನಗರದ ವಿವಿಧೆಡೆ ನಡೆಯುತ್ತಿದ್ದ ಮಟ್ಕಾ ಅಡ್ಡೆಗಳ ಮೇಲೆ ಶುಕ್ರವಾರ ಪೊಲೀಸರು ದಾಳಿ ನಡೆಸಿದ್ದು ಐವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ರೂ. 6030 ವಶಪಡಿಸಿಕೊಳ್ಳಲಾಗಿದೆ. ಹಂಪಿ ರಸ್ತೆಯಲ್ಲಿರುವ ಲಕ್ಷ್ಮೀ ಸಾಮಿಲ್ ಬಳಿ ಹಾಗೂ ಜೆ.ಪಿ. ನಗರದ ವಿಕ್ಟೋರಿಯಾ ಹೋಟೆಲ್ ಹತ್ತಿರದ ಮಟ್ಕಾ ಅಡ್ಡೆಗಳ ಮೇಲೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ. ಪರಮೇಶ್ವರಪ್ಪ, ಧನುಂಜಯ, ಶೇಖ್‌ರಿಯಾಜ್ ಮತ್ತು ಮಹಮ್ಮದ್ ಎಂಬುವರರನ್ನು ಬಂಧಿಸಿದ್ದಾರೆ. ಅವರಿಂದ ಒಟ್ಟು ರೂ.4980 ಹಾಗೂ 2 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾರಿಗನೂರು ಬಸ್ ನಿಲ್ದಾಣ ಬಳಿ ನಡೆಯುತ್ತಿದ್ದ ಮಟ್ಕಾ ಅಡ್ಡೆ ಮೇಲೆ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಬಂಗಾರಪ್ಪ ಎಂಬತಾನನ್ನು ಬಂಧಿಸಿ ರೂ. 1050 ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ವಶ

ಸ್ಥಳೀಯ ಬಳ್ಳಾರಿ ರಸ್ತೆಯಲ್ಲಿರುವ ವಿಕ್ಟೋರಿಯಾ ಹೊಟೇಲ್ ಮೇಲೆ ದಾಳಿ ನಡೆಸಿರುವ ನಗರ ಠಾಣೆ ಪೊಲೀಸರು ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಹೊಟೇಲ್ ವ್ಯವಸ್ಥಾಪಕ ರವಿ ಎಂಬುವವರನ್ನು ಬಂಧಿಸಿದ್ದು ರೂ. 3183ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.