ಕ್ರಿಕೆಟ್ ಬೆಟ್ಟಿಂಗ್: ಮೂವರ ಸೆರೆ
ಬೆಂಗಳೂರು: ಭಾರತ- ಐರ್ಲೆಂಡ್ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು 69 ಸಾವಿರ ನಗದು ಸೇರಿದಂತೆ ಎಂಬತ್ತು ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕಾಟನ್ಪೇಟೆಯ ಎನ್.ಪಿ.ಲೇಔಟ್ನ ಕಮಲೇಶ್ (25), ವಿಜಯನಗರದ ರಘುನಾಥ್ (36) ಮತ್ತು ಪ್ರಕಾಶನಗರದ ನಿತಿನ್ (29) ಬಂಧಿತರು. ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಕುಮಾರ್ ಮತ್ತು ಗೋವಿಂದ ಎಂಬುವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಅಲಂಕಾರ್ ಪ್ಲಾಜಾದ ಅಂಗಡಿ ಮಳಿಗೆಯಲ್ಲಿ (ಸಂಖ್ಯೆ 50ಎ) ದುಷ್ಕರ್ಮಿಗಳು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಬಂತು. ಸಿಬ್ಬಂದಿ ಅಂಗಡಿ ಮೇಲೆ ದಾಳಿ ನಡೆಸಿದಾಗ ಮೂರು ಮಂದಿ ಸೆರೆಸಿಕ್ಕರು. ಅವರ ಬಳಿಯಿದ್ದ ಹಣ, ಎರಡು ಮೊಬೈಲ್ ಫೋನ್ ಮತ್ತು ಎಲ್ಸಿಡಿ ಮಾನಿಟರ್ಗಳನ್ನು ವಶಕ್ಕೆ ಪಡೆಯಲಾಯಿತು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಲಂಕಾರ್ ಪರ್ಲ್ ಪ್ಲಾಜಾದಲ್ಲಿ ಸಿದ್ಧ ಉಡುಪು ಅಂಗಡಿ ಇಟ್ಟುಕೊಂಡಿರುವ ಕಮಲೇಶ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಭಾರತ ಮತ್ತು ಐರ್ಲೆಂಡ್ ಪರವಾಗಿ ಆತ ಹತ್ತು ಸಾವಿರ, ಐದು ಸಾವಿರ, ಒಂದು ಸಾವಿರ ರೂಪಾಯಿಯನ್ನು ಬೆಟ್ಟಿಂಗ್ ಕಟ್ಟಿಸಿಕೊಂಡು ಆಡುತ್ತಿದ್ದರು’ ಎಂದು ಅವರು ಮಾಹಿತಿ ನೀಡಿದರು. ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಸೋಲಭೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಲೋಕೇಶ್ವರ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.
ಕಾಳಸಂತೆಯಲ್ಲಿ ಟಿಕೆಟ್ ಮಾರಾಟ; ಬಂಧನ: ಭಾರತ ಮತ್ತು ಐರ್ಲೆಂಡ್ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಹನ್ನೊಂದು ಮಂದಿಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆಯ ಶಿವಾನಂದ (32), ಹಲಸೂರಿನ ಭರತ್ಕುಮಾರ್ (24), ಬನ್ನೇರುಘಟ್ಟ ಮುಖ್ಯ ರಸ್ತೆಯ ಪ್ರಶಾಂತ್ (28), ಓಕಳಿಪುರದ ಸುರೇಶ್ (26), ಹೆಗ್ಗಡೆನಗರದ ಶಹಾಬುದ್ದೀನ್ (21), ಸದ್ದಾಂ (23), ಕನಕಪುರದ ಕೆಂಪರಾಜು (24), ಸುಬ್ರಹ್ಮಣ್ಯನಗರದ ರವಿಕುಮಾರ್ (38), ಕೆ.ಆರ್ ಪುರದ ಗಾಂಧಿರಾಜ್ (26), ಬಿನ್ನಿಪೇಟೆಯ ಚಂದ್ರು (38) ಮತ್ತು ದೆಹಲಿಯ ಆದಿತ್ಯ ಶಾ (20) ಬಂಧಿತರು.
ಆರೋಪಿಗಳು 200, 1000, 2000 ಮತ್ತು 3000 ಸಾವಿರ ರೂಪಾಯಿ ಮುಖ ಬೆಲೆಯ ಟಿಕೆಟ್ಗಳನ್ನು ಅದರ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅವರಿಂದ 33 ಸಾವಿರ ರೂಪಾಯಿ ಬೆಲೆ ಬಾಳುವ 45 ಟಿಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.