ಶುಕ್ರವಾರ, ಜೂನ್ 18, 2021
20 °C

ಕ್ರಿಕೆಟ್: ಬೆಳಗಾವಿ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಎನ್.ವಿ. ಮೈದಾನದಲ್ಲಿ ನೂತನ ವಿದ್ಯಾಲಯ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಶುಕ್ರವಾರ ನಡೆದ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡ ಸಾಹು ಕ್ರಿಕೆಟ್ ಕ್ಲಬ್ ವಿಜಾಪುರ ತಂಡದ ವಿರುದ್ಧ 8 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಾಹು ಕ್ರಿಕೆಟ್ ಕ್ಲಬ್ ತಂಡ 29.1ಓವರ್‌ಗಳಲ್ಲಿ ಎಲ್ಲ ವಿಕೆಟ್ ನಷ್ಟಕ್ಕೆ 99 ರನ್‌ಗಳಿಸಿತು. ಬಿ. ಚಿದಾನಂದ 25 ಎಸೆತಗಳಲ್ಲಿ 15ರನ್‌ಗಳಿಸಿ ಬೌಂಡರಿ ಎತ್ತಲು ಹೋಗಿ ವಿಕೆಟ್ ಒಪ್ಪಿಸಿದರು. ಶರಣು ದೇವಕರ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದರು. ನಂರ ಬಂದ ಬ್ಯಾಟಿಂಗ್‌ಗೆ ಬಂದ ಬ್ಯಾಟ್ಸ್‌ಮನ್‌ಗಳು ಎದುರಾಳಿ ತಂಡದ ಬೌಲರ್‌ಗಳ ಮಾರಕ ದಾಳಿಗೆ ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು.ನಂತರ ಬಂದ ರಫೀಕ್ ತಾಳಿಕೋಟಿ 30ಎಸೆತಗಳಲ್ಲಿ 19ರನ್‌ಗಳಿಸಿ ಕ್ರಿಸ್‌ನಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳಲು ಹೆಣಗಾಡಿದರೂ ಬರಸಿಡಿಲಿನಂತೆ ಬಂದ ಬೌಲಿಂಗ್ ದಾಳಿ ವಿಕೆಟ್ ಕಬಳಿಸಿತು. 3 ಬೌಂಡರಿಗಳನ್ನು ಎತ್ತುವ ಮೂಲಕ ಗೆಲುವಿನ ಕನಸು ಕಟ್ಟಿಕೊಂಡಿದ್ದ ರಫೀಕ್ ಕನಸು ಗೋಪುರದಂತೆ ಉರುಳಿ ಬಿತ್ತು. ಮುತ್ತು ಮಾದರ ಕೂಡಾ ರಫೀಕ್ ದಾರಿಯಲ್ಲೆ ನಡೆದರು. ಉತ್ತಮ ರನ್‌ಗಳನ್ನು ಪೇರಿಸಲು ಸಾಧ್ಯವಾಗದೆ ಬ್ಯಾಟ್ಸ್‌ಮನ್‌ಗಳು ಪರದಾಡುವಂಥ ಸ್ಥಿತಿ ನಿರ್ಮಾಣವಾಯಿತು.

 

ಸಚಿನ್ ಶಿಂಧೆ ಕ್ರಿಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ದಿನವಿಡಿ ಕಾಡಿದರು. 5 ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡಕ್ಕೆ ನಡುಕ ಹುಟ್ಟುವಂತೆ ಮಾಡಿದರು. ಬ್ಯಾಟಿಂಗ್ ವೈಫಲ್ಯವನ್ನು ವರದಾನವಾಗಿ ಬಳಸಿಕೊಂಡ ಬೌಲರ್ ರಾಹುಲ್ ನಾಯಕ್, ಝೀಶಾನ್ ಸೈಯದ್ ಶಿಶಿರ್ ಭವಾನಿ, ಪರಪ್ಪ ಮೊರಡಿ  ವಿಕೆಟ್ ಪಡೆಯುವ ಮೂಲಕ ಹೆಚ್ಚು ರನ್ ಪೇರಿಸದಂತೆ ಕಟ್ಟಿ ಹಾಕಿದರು.ನಂತರ ಬ್ಯಾಟಿಂಗ್‌ಗೆ ಬಂದ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡ 17.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್‌ಗಳಿಸುವ ಮೂಲಕ ಗೆಲುವಿನ ನಗೆ ಬೀರಿದರು. ರೋಹಿತ್ ದೇಸಾಯಿ 5 ಎಸೆತಗಳಿಗೆ 9ರನ್‌ಗಳಿಸಿ ರಫೀಕ್ ತಾಳಿಕೋಟಿಗೆ ವಿಕೆಟ್ ಒಪ್ಪಿಸಿದರು. ಗಣೇಶ ಕೆ. ಉತ್ತಮ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳುವಲ್ಲಿ ಎಡವಿದರು. 22 ಎಸೆತಗಳಿಗೆ ಕೇವಲ 6ರನ್‌ಗಳಸಿ ವಿಕೆಟ್ ಒಪ್ಪಿಸಿದರು. ನಂತರ ಬ್ಯಾಟಿಂಗ್‌ಗೆ ಬಂದ ಶಿಶಿರ್ ಭವಾನಿ 53 ಎಸೆತಗಳಲ್ಲಿ 12 ಬೌಂಡರಿ ಬಾರಿಸುವ ಮೂಲಕ 67ರನ್‌ಗಳನ್ನು ಪೇರಿಸಿದರು.ಅಮೋಧ್ ದೇಶಪಾಂಡೆ (7 ರನ್)ಶಿಶಿರಗೆ ಉತ್ತಮ ಸಾಥ್ ನೀಡಿದರು. ಶಿಶಿರ ಭವಾನಿ ಅರ್ಧ ಶತಕ ಪೂರೈಸುತ್ತಲೆ ತಂಡದಲ್ಲಿ ಗೆಲುವಿನ ಸಂಭ್ರಮ ಕಾಣತೊಡಗಿತು. ಬೆಳಗಾವಿ ಕುಂದಾ ಸವಿದಷ್ಟೇ ಸಂತಸ, ಸಂಭ್ರಮ ತಂಡದ ಆಟಗಾರರ ಮುಖದಲ್ಲಿ ಕಾಣಿಸಿದವು. ಎದುರಾಳಿ ತಂಡದ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾದರು. ಗೈಬುದ್ಧೀನ್, ರಫೀಕ್ ತಾಳಿಕೋಟಿ ತಲಾ 1ವಿಕೆಟ್ ಪಡೆದರು.ಬೆಳಗಾವಿ ತಂಡದ ಆಟಗಾರರು ಬ್ಯಾಟಿಂಗ್, ಬೌಲಿಂಗ್, ಕ್ಷೇತ್ರ ರಕ್ಷಣೆಯಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುವ ಮೂಲಕ ಗೆಲುವು ಸಾಧಿಸಿದರು.ಎದುರಾಳಿ ತಂಡದ ಬ್ಯಾಟಿಂಗ್‌ಗೆ ಕಡಿವಾಣ ಹಾಕುವ ಮೂಲಕ 5 ವಿಕೆಟ್ ಪಡೆದು ತಂಡದ ಗೆಲುವಿಗೆ ಮುನ್ನುಡಿ ಬರೆದ  ಸಚಿನ್ ಶಿಂಧೆ ಪಂದ್ಯಪುರುಷ ಪ್ರಶಸ್ತಿ ಪಡೆದರು.ಇಂದಿನ ಟೂರ್ನಿ: ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡ  ಹಾಗೂ ರಾಯಲ್ ಕ್ರಿಕೆಟ್ ಕ್ಲಬ್ ಯಾದಗಿರಿ ತಂಡಗಳ ನಡುವೆ ಮೊದಲ ಸೆಮಿಫೈನಲ್ ಟೂರ್ನಿ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.