ಕ್ರಿಕೆಟ್ ಬ್ಯಾಟ್‌ಗಳ ಡಾಕ್ಟರ್

7

ಕ್ರಿಕೆಟ್ ಬ್ಯಾಟ್‌ಗಳ ಡಾಕ್ಟರ್

Published:
Updated:

ಒಂದು ಕಾಲದಲ್ಲಿ ಈತ ಕನ್ನಡ ಸಿನಿಮಾಗಳ ಸ್ಟಂಟ್ ಮಾಸ್ಟರ್. ಆದರೆ ಈಗ ಕ್ರಿಕೆಟ್ ಆಟಗಾರರ ಬ್ಯಾಟ್‌ಗಳ ನಂಬಿಕಸ್ತ ವೈದ್ಯ!ಎತ್ತಣದಿಂದ ಎತ್ತಣ ಸಂಬಂಧ ಎಂದು ಅಚ್ಚರಿಯಾಗುತ್ತಿರಬಹುದು ಅಲ್ಲವೇ? ಆದರೆ ಉದ್ಯಾನ ನಗರಿಗೆ ಬಂದಾಗಲೆಲ್ಲಾ ಇವರನ್ನು ಭೇಟಿಯಾಗಲು ಸಚಿನ್ ತೆಂಡೂಲ್ಕರ್ ಮರೆಯುವುದಿಲ್ಲ. ಈ ವ್ಯಕ್ತಿಯೊಂದಿಗೆ ಕ್ರಿಸ್ ಗೇಲ್ ಗಂಟೆಗಟ್ಟಲೆ ಹರಟುತ್ತಾರೆ. ಇವರ ಜೊತೆ ಕುಳಿತು ವೀರೇಂದ್ರ ಸೆಹ್ವಾಗ್ ಊಟ ಮಾಡುತ್ತಾರೆ. ಇವರನ್ನು ಕಂಡರೆ ಎ್ಲ್ಲಲಾ ಕ್ರಿಕೆಟಿಗರಿಗೂ ಇಷ್ಟ.ವಿರಾಟ್ ಕೊಹ್ಲಿ, ದೋನಿ, ರಿಕಿ ಪಾಂಟಿಂಗ್, ಚಂದ್ರಪಾಲ್, ತಿಲಕರತ್ನೆ ದಿಲ್ಶಾನ್ ಈ ವ್ಯಕ್ತಿ ಜೊತೆ ದೂರವಾಣಿ ಮೂಲಕ ಸಂಪರ್ಕದಲ್ಲಿರುತ್ತಾರೆ. ಬೆಂಗಳೂರಿಗೆ ಬಂದಾಗಲೆಲ್ಲಾ ಇವರ ಮುಖ ದರ್ಶನ ಮಾಡದೇ ಅವರು ಹಿಂತಿರುಗುವುದಿಲ್ಲ. ಅಂದಹಾಗೆ, ಭಾರತ ಕ್ರಿಕೆಟ್ ತಂಡ 2007ರ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಇವರ ಪಾಲೂ ಇದೆ. ಸಚಿನ್ ಯಶಸ್ಸಿನ ಗುಟ್ಟಿನಲ್ಲಿ ಈ ವ್ಯಕ್ತಿಯ ಕಾಣಿಕೆಯೂ ಇದೆ.`ನಾವು ತೆರೆಯ ಮುಂದಿನ ತಾರೆಗಳು. ನೀನು ತೆರೆಯ ಹಿಂದಿನ ತಾರೆ~ ಎಂದು ವೀರೂ ಸೇರಿದಂತೆ ಪ್ರಮುಖರು ಈ ವ್ಯಕ್ತಿಯ ಗುಣಗಾನ ಮಾಡುತ್ತಿರುತ್ತಾರೆ. ಇಷ್ಟೊಂದು ಖ್ಯಾತಿ ಹೊಂದಿರುವ ಆ ವ್ಯಕ್ತಿ ಯಾರು ಎಂದು ನಿಮಗೆ ಕುತೂಹಲವಾಗುತ್ತಿರಬಹುದು.ಆ ವ್ಯಕ್ತಿ ಉದ್ಯಾನ ನಗರಿಯ ಕುಮಾರ ಸ್ವಾಮಿ ಬಡಾವಣೆಯ ಗಲ್ಲಿಯೊಂದರ ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಹೆಸರು ರಾಮ್ ಭಂಡಾರಿ. ಕ್ರಿಕೆಟಿಗರ ಭಾಷೆಯಲ್ಲಿ ಹೇಳುವುದಾದರೆ ಬ್ಯಾಟ್‌ಗಳ ತಜ್ಞ ವೈದ್ಯ!ವಿಷಯವಿಷ್ಟೇ: ಕ್ರಿಕೆಟ್ ಆಟಗಾರರ ಬ್ಯಾಟ್‌ಗಳನ್ನು ಅವರ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಅಥವಾ ಮರು ವಿನ್ಯಾಸ ಮಾಡಿ ಕೊಡುವ ಕೆಲಸ ಭಂಡಾರಿ ಅವರದ್ದು. ಕಂಪೆನಿಗಳಿಂದ ಬರುವ ಹೊಸ ಬ್ಯಾಟ್‌ಗಳನ್ನು ಕ್ರಿಕೆಟಿಗರು ತಮ್ಮ ಅಗತ್ಯಕ್ಕೆ ತಕ್ಕಂತೆ ರೂಪ ಬದಲಾಯಿಸಿಕೊಡಲು ಭಂಡಾರಿ ಬಳಿ ತಂದುಕೊಡುತ್ತಾರೆ. ವಿನ್ಯಾಸ ಬದಲಾವಣೆಗಾಗಿ ಕೆಲ ಆಟಗಾರರು ಸಾವಿರಾರು ರೂಪಾಯಿ ಖರ್ಚು ಮಾಡಿ ವಿದೇಶದಿಂದ ಕೊರಿಯರ್‌ನಲ್ಲಿ ಬ್ಯಾಟ್‌ಗಳನ್ನು ಕಳುಹಿಸಿಕೊಡುತ್ತಾರೆ.ಭಂಡಾರಿ ಅವರ ಕೈಚಳಕ ಹಾಗೂ ಅವರ ಸ್ಪರ್ಶದಲ್ಲಿರುವ ಯಶಸ್ಸಿನ ಗುಟ್ಟೇ ಇದಕ್ಕೆ ಕಾರಣ. ಫಾರ್ಮ್ ಕೈಕೊಟ್ಟ ಕ್ರಿಕೆಟಿಗರು ತಮ್ಮ ಬ್ಯಾಟ್‌ಗಳನ್ನು ಇವರಿಂದ ಮರು ವಿನ್ಯಾಸ ಮಾಡಿಕೊಂಡ ಮೇಲೆ ಯಶಸ್ಸು ಕಂಡಿದ್ದಿದೆ. ಹಾಗಾಗಿ  ಕ್ರಿಕೆಟಿಗರು 52 ವರ್ಷ ವಯಸ್ಸಿನ ಭಂಡಾರಿ ಅವರನ್ನು ಆರಾಧಿಸುತ್ತಾರೆ!ಅಂದಹಾಗೆ, ಭಂಡಾರಿ ಮೂಲತಃ ಬಿಹಾರದವರು. 1980ರ ದಶಕದಲ್ಲಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. 10ನೇ ತರಗತಿ ಅನುತ್ತೀರ್ಣರಾಗಿರುವ ಇವರು ಮೊದಲು ಮೆಜೆಸ್ಟಿಕ್‌ನ ಮಳಿಗೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆಮೇಲೆ ಸಿನಿಮಾ ನಿರ್ಮಾಪಕ ಶೈಲೇಂದ್ರ ಬಾಬು ಅವರ ಕಾರಿನ ಚಾಲಕರಾಗಿ ಕೆಲಸ ಮಾಡಿದರು.ಮದ್ರಾಸ್‌ನಲ್ಲಿ ಕರಾಟೆ ಕಲಿತಿದ್ದ ಇವರು ಕನ್ನಡದ ಕೆಲ ಸಿನಿಮಾಗಳಲ್ಲಿ ಸ್ಟಂಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಆದರೆ ಅಂತಿಮವಾಗಿ ಇವರ ಕೈಹಿಡಿದಿದ್ದು ಬ್ಯಾಟ್ ವಿನ್ಯಾಸ ಮಾರ್ಪಾಡು ಮಾಡುವುದು. ಇವರ ಮೂಲ ವೃತ್ತಿಯೇ ಮರಗೆಲಸ.ಸಚಿನ್ ಯಶಸ್ಸಿನಲ್ಲಿ ಭಂಡಾರಿ ಪಾಲು


ಏಕದಿನ ವಿಶ್ವಕಪ್ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ ಟೈ ಆದ ಪಂದ್ಯ ನಿಮಗೆ ನೆನಪಿರಬಹುದು. ಆ ಪಂದ್ಯದಲ್ಲಿ ತೆಂಡೂಲ್ಕರ್ ಶತಕ ಬಾರಿಸಿದ್ದು ಭಂಡಾರಿ ವಿನ್ಯಾಸ ಮಾಡಿಕೊಟ್ಟ ಬ್ಯಾಟ್‌ನಿಂದಲೇ. ಅಷ್ಟೇ ಏಕೆ? ಬಾಂಗ್ಲಾ ದೇಶದಲ್ಲಿ ಶತಕಗಳ ಶತಕದ ಸಾಧನೆ ಮಾಡಿದ ಬ್ಯಾಟ್ ಕೂಡ ಇವರ ಕೈಚಳಕಕ್ಕೆ ಉದಾಹರಣೆ. ಇವರು ವಿನ್ಯಾಸ ಮಾಡಿಕೊಟ್ಟ ಬ್ಯಾಟ್‌ನಲ್ಲಿ ಸಚಿನ್ 14 ಶತಕ ಗಳಿಸ್ದ್ದಿದಾರಂತೆ.ಹದಿನಾಲ್ಕು ವರ್ಷಗಳಿಂದ ರಾಮ್ ಈ ಕೆಲಸದಲ್ಲಿ ತೊಡಗಿದ್ದಾರೆ. ಇವರು ಹೊಸದಾಗಿ ಬ್ಯಾಟ್ ತಯಾರಿಸುವುದಿಲ್ಲ. ಬದಲಾಗಿ ಬ್ಯಾಟ್‌ಗಳನ್ನು ಆಟಗಾರರ ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಡುತ್ತಾರೆ. ತೂಕ ಕಡಿಮೆ ಮಾಡುವುದು, ಕರ್ವ್ ಮಾಡಿಕೊಡುವುದು, ಸ್ಟ್ರೋಕ್ ಹೆಚ್ಚು ಮಾಡುವುದು, ಗ್ರಿಪ್ ಸರಿಪಡಿಸುವುದು, ಹ್ಯಾಂಡಲ್ ಚಿಕ್ಕದು ಮಾಡುವುದರಲ್ಲಿ ಇವರು ಪರಿಣತರು.ಮುರಿದುಹೋದ ಬ್ಯಾಟ್‌ಗಳನ್ನು ಸರಿ ಮಾಡಿಕೊಡುತ್ತಾರೆ. ಏಕೆಂದರೆ ಕ್ರಿಕೆಟಿಗರಿಗೆ ಕೆಲ ಬ್ಯಾಟ್‌ಗಳು ತುಂಬಾ ನೆಚ್ಚಿನದಾಗಿರುತ್ತವೆ. ನಿರ್ದಿಷ್ಟ ಬ್ಯಾಟ್‌ನಲ್ಲಿ ಆಡಬೇಕು ಎಂದಿಕೊಂಡಿರುತ್ತಾರೆ. ಅಕಸ್ಮಾತ್ ಅವು ತುಂಡಾದರೆ ಆಟಗಾರರ ಫಾರ್ಮ್‌ನಲ್ಲೂ ವ್ಯತ್ಯಾಸ ಆಗುವುದುಂಟು. ಆದರೆ ಈ ಭಂಡಾರಿ ಆ ಬ್ಯಾಟ್‌ಗಳನ್ನು ಮೊದಲಿನಂತೆ ಮಾಡಿ ಕೊಡಬಲ್ಲರು.`ಸಚಿನ್ ಇಷ್ಟು ಸುದೀರ್ಘ ಕಾಲ ಆಡಲು ಕಾರಣ ಅತ್ಯುತ್ತಮ ಬ್ಯಾಟ್‌ಗಳ ಆಯ್ಕೆ. ಒಂದು ಸಣ್ಣ ಲೋಪವಿದ್ದರೂ ಅವರು ಆ ಬ್ಯಾಟ್ ಮುಟ್ಟುವುದಿಲ್ಲ. ಮಗುವನ್ನು ಆರೈಕೆ ಮಾಡಿದ ರೀತಿ ಬ್ಯಾಟ್‌ಗಳನ್ನು ನೋಡಿಕೊಳ್ಳುತ್ತಾರೆ. ತಮ್ಮ ಕುಟುಂಬದವರಿಗೂ ಬ್ಯಾಟ್ ಮುಟ್ಟಲು ಅವಕಾಶ ನೀಡುವುದಿಲ್ಲ~ ಎಂದು ಭಂಡಾರಿ ಹೇಳುತ್ತಾರೆ.`ವಿಶ್ವದಲ್ಲಿ ಅತಿ ಹೆಚ್ಚು ತೂಕದ ಬ್ಯಾಟ್ ಬಳಸುವುದು ಸಚಿನ್ (1,350 ಗ್ರಾಂ). ಉಳಿದ ಆಟಗಾರರ ಬ್ಯಾಟ್‌ಗಳ ಸರಾಸರಿ ತೂಕ 1,250 ಗ್ರಾಂ. ಈಗ ಅಮೋಘ ಫಾರ್ಮ್‌ನಲ್ಲಿರುವ ಕೊಹ್ಲಿ (1,150 ಗ್ರಾಂ) ಕಡಿಮೆ ತೂಕದ ಬ್ಯಾಟ್ ಬಳಸುತ್ತಾರೆ~ ಎಂದು ಅವರು ವಿವರಿಸುತ್ತಾರೆ.ಭಂಡಾರಿ ಇದುವರೆಗೆ ಸುಮಾರು 300ಕ್ಕೂ ಹೆಚ್ಚು ಬ್ಯಾಟ್‌ಗಳನ್ನು ಮರುವಿನ್ಯಾಸ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಸಚಿನ್‌ಗೆ 30 ಬ್ಯಾಟ್ ಮಾಡಿಕೊಟ್ಟಿದ್ದಾರೆ. ಇವರ ಮಕ್ಕಳು ಕೂಡ ಕ್ರಿಕೆಟಿಗರು; ಕೆಎಸ್‌ಸಿಎ ಲೀಗ್ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.ಇವರ ನಿವಾಸದಲ್ಲಿ ಬ್ಯಾಟ್‌ಗಳ ಸಂಗ್ರಹಾಲಯವೇ ಇದೆ. ಸಚಿನ್, ಕೊಹ್ಲಿ, ಗಂಭೀರ್, ರಾಬಿನ್ ಉತ್ತಪ್ಪ ನೀಡಿರುವ ಉಡುಗೊರೆ ಬ್ಯಾಟ್‌ಗಳೂ ಇಲ್ಲಿವೆ. `ಕೊಹ್ಲಿ ನೀಡಿದ ಬ್ಯಾಟ್‌ನಲ್ಲಿ ನನ್ನ ಮಗ ಶತಕ ಗಳಿಸಿದ್ದ~ ಎಂದು ರಾಮ್ ಹೆಮ್ಮೆಯಿಂದ ಹೇಳುತ್ತಾರೆ.`ಭಾರತದ ನೆಲದಲ್ಲಿ ಬೆಳೆಯುವ ಮರಗಳಿಂದ ಮಾಡಿದ ಬ್ಯಾಟ್‌ಗಳನ್ನು ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟಿಗರು ಬಳಸುವುದಿಲ್ಲ. ಕಾರಣ ಇಲ್ಲಿನ ವಾತಾವರಣ ವ್ಯತ್ಯಾಸದಿಂದಾಗಿ ಬ್ಯಾಟ್‌ಗಳು ತುಂಬಾ ತೂಕವಿರುತ್ತವೆ.

 

ಹಾಗಾಗಿ ಹೆಚ್ಚಾಗಿ ಇಂಗ್ಲೆಂಡ್‌ನ ಮರಗಳಿಂದ ತಯಾರಿಸಿದ ಬ್ಯಾಟ್ ಬಳಸುತ್ತಾರೆ. ಅಲ್ಲಿ ಸದಾ ಒಂದೇ ರೀತಿಯ ವಾತಾವರಣವಿರುತ್ತದೆ. ಕಾಶ್ಮೀರದಲ್ಲಿ ಕೂಡ ಇಂಗ್ಲೆಂಡ್‌ನಿಂದ ತಂದ ಸಸಿಗಳನ್ನು ನೆಟ್ಟು ಪರೀಕ್ಷಿಸಲಾಯಿತು. ಆದರೆ ತೂಕ ಹೆಚ್ಚು ಬಂತು~ ಎಂದು ಭಂಡಾರಿ ವಿವರಿಸುತ್ತಾರೆ.`ಜಲಂಧರ್‌ನಲ್ಲಿರುವ ಬ್ಯಾಟ್ ವಿತರಕರಿಗೆ ಇಂಗ್ಲೆಂಡ್‌ನಿಂದ ಮರ ಬರುತ್ತದೆ. ಅವರು ಬ್ಯಾಟ್ ತಯಾರಿಸಿ ಕ್ರಿಕೆಟಿಗರಿಗೆ ನೀಡುತ್ತಾರೆ. ಈ ಬ್ಯಾಟ್‌ಗಳಿಗೆ ಎರಡು ಸಾವಿರದಿಂದ 25 ಸಾವಿರದವರೆಗೆ ಬೆಲೆ ಇದೆ~ ಎನ್ನುತ್ತಾರೆ.`ಕೊಹ್ಲಿ ಒಂದೇ ಗ್ರಿಪ್ (ಹ್ಯಾಂಡಲ್‌ಗೆ ಸುತ್ತಿರುವ ಪ್ಲಾಸ್ಟಿಕ್) ಇರುವ ಬ್ಯಾಟ್ ಬಳಸುತ್ತಾರೆ. ಆದರೆ ಸಚಿನ್ ಬ್ಯಾಟ್‌ಗಳು ಎರಡು ಗ್ರಿಪ್‌ನಿಂದ ಕೂಡಿರುತ್ತವೆ. ಇವರಿಬ್ಬರೂ ಚಿಕ್ಕ ಹ್ಯಾಂಡಲ್ ಇರುವ ಬ್ಯಾಟ್ ಬಳಸುತ್ತಾರೆ. ದೋನಿ ಬ್ಯಾಟ್‌ನ ಹ್ಯಾಂಡಲ್ ಉದ್ದವಾಗಿರುತ್ತದೆ~ ಎಂದು ಅವರು ಕೆಲ ಆಟಗಾರರ ಬ್ಯಾಟ್‌ಗಳ ವಿನ್ಯಾಸದ ಪರಿಚಯ ಮಾಡಿಕೊಟ್ಟರು.`ಸೆಹ್ವಾಗ್ ನನ್ನ ನೆಚ್ಚಿನ ಕ್ರಿಕೆಟಿಗ. ಚಂದ್ರಪಾಲ್ ತಾವು ವಾಸ್ತವ್ಯ ಹೂಡುವ ಹೋಟೆಲ್‌ನ ಕೊಠಡಿಯಲ್ಲಿ ನನಗೆ ಊಟ ತರಿಸಿ ಕೊಟ್ಟಿದ್ದರು. ಬಳಿಕ ತಟ್ಟೆಯನ್ನು ಅವರೇ ಹೊರಗೆ ಎತ್ತಿಟ್ಟರು. ಕ್ರಿಕೆಟಿಗರು ಎಷ್ಟು ಕೊಡುತ್ತಾರೊ ಅಷ್ಟು ಹಣ ತೆಗೆದುಕೊಳ್ಳುತ್ತೇನೆ. ಆದರೆ ಕೆಲ ಕ್ರಿಕೆಟಿಗರು ದುಡ್ಡು ಕೊಡುವುದನ್ನೇ ಮರೆತುಬಿಡುತ್ತಾರೆ~ ಎಂದು ಭಂಡಾರಿ ನುಡಿಯುತ್ತಾರೆ.ಇವರಿಗೆ ಕ್ರಿಕೆಟ್ ಲೋಕದ ಪರಿಚಯವಾಗಿದ್ದು ದ್ರಾವಿಡ್ ಮೂಲಕ. ಮೊದಲು ದ್ರಾವಿಡ್ ಅವರ ಬ್ಯಾಟ್‌ಗಳ ಮರು ವಿನ್ಯಾಸ ಮಾಡಿಕೊಡುತ್ತಿದ್ದರು. ಅವರಿಂದ ಸಚಿನ್ ಪರಿಚಯವಾಯಿತು. ಬಳಿಕ ಕ್ರಿಕೆಟಿಗರು ಇವರಿಗೆ ಸಲಾಂ ಹೊಡೆದು ಬ್ಯಾಟ್‌ಗಳನ್ನು ವಿನ್ಯಾಸ ಮಾಡಿಸಿಕೊಳ್ಳಲು ಶುರು ಮಾಡಿದರು. ಇದು ಕ್ರಿಕೆಟ್ ಲೋಕದ ತೆರೆಯ ಹಿಂದಿನ ಹೀರೊ ಕಥೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry