ಕ್ರಿಕೆಟ್: ಭಾರತಕ್ಕೆ ಮತ್ತೊಂದು ಅಗ್ನಿಪರೀಕ್ಷೆ

7

ಕ್ರಿಕೆಟ್: ಭಾರತಕ್ಕೆ ಮತ್ತೊಂದು ಅಗ್ನಿಪರೀಕ್ಷೆ

Published:
Updated:

ಕೊಲಂಬೊ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಮೇಲಿನ ಗೆಲುವು ಭಾರತ ತಂಡದ ಆಟಗಾರರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ದಕ್ಷಿಣ ಆಫ್ರಿಕಾ ಎದುರು ಪೈಪೋಟಿ ನಡೆಸಲು ಮಂಗಳವಾರ ರಾತ್ರಿ ಆರ್.ಪ್ರೇಮದಾಸ ಕ್ರೀಡಾಂಗಣಕ್ಕಿಳಿಯಲಿರುವ ದೋನಿ ಬಳಗಕ್ಕೆ ಈ ಗೆಲುವೇ ದೊಡ್ಡ ಸ್ಫೂರ್ತಿ.ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ `ಸೂಪರ್ 8~ ಹಂತದಲ್ಲಿ ಭಾರತ ತಂಡಕ್ಕಿದು ಕೊನೆಯ ಪಂದ್ಯ. ಈ ಹೋರಾಟದಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶದ ಹಾದಿ ಸುಲಭವಾಗುವ ಸಾಧ್ಯತೆ ಇದೆ. ಆದರೆ ಇದೇ ದಿನ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಗಾಗಿ ಈ ಫಲಿತಾಂಶವೂ ಸೆಮಿಫೈನಲ್ ಹಾದಿಯ ಲೆಕ್ಕಾಚಾರಕ್ಕೆ ಬರಲಿದೆ. ಈ ಗುಂಪಿನಿಂದ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್ ತಲುಪುತ್ತವೆ.ಸತತ ಎರಡು ಪಂದ್ಯಗಳನ್ನು ಸೋತಿರುವ ದಕ್ಷಿಣ ಆಫ್ರಿಕಾ ತಂಡದ ನಾಲ್ಕರ ಘಟ್ಟದ ಹಾದಿ ತುಂಬಾ ಕಠಿಣವಾಗಿದೆ. ಎರಡು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಸದ್ಯ ಅಗ್ರಸ್ಥಾನದಲ್ಲಿದೆ. ಭಾರತ ಹಾಗೂ ಪಾಕ್ ತಲಾ ಒಂದು ಪಂದ್ಯ ಗೆದ್ದಿವೆ. ಹಾಗಾಗಿ ಸೆಮಿಫೈನಲ್ ಹಾದಿ ಇನ್ನೂ ಮುಕ್ತವಾಗಿದೆ.ಮಂಗಳವಾರದ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಪಾಕ್ ತಂಡ ಸೋತರೆ ದೋನಿ ಪಡೆ ಹಾಗೂ ಕಾಂಗರೂ ಬಳಗ ಸೆಮಿಫೈನಲ್ ಪ್ರವೇಶಿಸಲಿವೆ. ಆಸೀಸ್ ಎದುರು ಪಾಕ್ ಗೆದ್ದರೂ ರನ್‌ರೇಟ್‌ನಲ್ಲಿ ಭಾರತ ತಂಡ ಮೇಲುಗೈ ಹೊಂದಿದ್ದರೆ ಅವಕಾಶವಿದೆ. ಅಕಸ್ಮಾತ್ ಈ ಪಂದ್ಯಗಳಲ್ಲಿ ಭಾರತ ಹಾಗೂ ಪಾಕ್ ತಂಡಗಳು ಸೋತರೆ ಮತ್ತೆ ರನ್‌ರೇಟ್ ಮೊರೆ ಹೋಗಲಾಗುತ್ತದೆ.ಹಾಗಾಗಿ ಭಾರತ ತಂಡಕ್ಕೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಈ ಕಾರಣ `ಪಾಕ್ ಎದುರಿನ ಪಂದ್ಯದಲ್ಲಿ ಗೆದ್ದಿದ್ದೇವೆ~ ಎಂದು ದೋನಿ ಬಳಗ ವಿರಮಿಸುವಂತಿಲ್ಲ. ಆ ಗೆಲುವಿನ ಖುಷಿಯ ಗುಂಗಿನಲ್ಲಿರುವಂತಿಲ್ಲ. ಪ್ರಮುಖ ಟೂರ್ನಿಗಳ ಪ್ರಮುಖ ಘಟ್ಟಗಳಲ್ಲಿ  `ಅಂತಿಮ ಕ್ಷಣಗಳಲ್ಲಿ ಎಡವುವ ತಂಡ~ ಎಂಬ ಹಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ಈಗ ಸಂಕಷ್ಟದಲ್ಲಿದೆ. ಆದರೆ ಡೇಲ್ ಸ್ಟೇಯ್ನ ಹಾಗೂ ಮಾರ್ನ್ ಮಾರ್ಕೆಲ್ ಅವರಂಥ ಬೌಲರ್‌ಗಳನ್ನು ಹೊಂದಿರುವ ಈ ತಂಡ ಅಪಾಯಕಾರಿ ಕೂಡ.ಪಾಕ್ ಎದುರು ಆಡಿದ ತಂಡವನ್ನೇ ಭಾರತ ಕಣಕ್ಕಿಳಿಸುವ ಸಾಧ್ಯತೆ ಇದೆ. ಅಕಸ್ಮಾತ್ ಬದಲಾವಣೆ ಬಯಸಿದರೆ ವೇಗಿಗಳಾದ ಜಹೀರ್ ಖಾನ್ ಅಥವಾ ಎಲ್.ಬಾಲಾಜಿ ಬದಲಿಗೆ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರನ್ನು ಆಡಿಸುವ ನಿರೀಕ್ಷೆ ಇದೆ. ಸ್ಪಿನ್ನರ್‌ಗಳ ಎದುರು ಆಡಲು ಎ.ಬಿ.ಡಿವಿಲಿಯರ್ಸ್ ಬಳಗ ತಡಬಡಾಯಿಸುತ್ತಿರುವುದು ಇದಕ್ಕೆ ಕಾರಣ. ಪಾಕ್ ಎದುರು ಸೋತ ಪಂದ್ಯದಲ್ಲಿ ಈ ತಂಡ ಅಲ್ಪ ಮೊತ್ತ ಪೇರಿಸಿತ್ತು.ವಿರಾಟ್ ಕೊಹ್ಲಿ ಅಮೋಘ ಫಾರ್ಮ್‌ನಲ್ಲಿರುವುದು ನಾಯಕ ದೋನಿ ಅವರ ವಿಶ್ವಾಸ ಹೆಚ್ಚಿಸಿದೆ. ಅದರಲ್ಲೂ ಗುರಿ ಬೆನ್ನಟ್ಟುವಾಗ ಕೊಹ್ಲಿ ಮೂಡಿಸಿರುವ ಭರವಸೆ ಅದ್ಭುತ. ಪಾಕ್ ಎದುರು ಯುವರಾಜ್ ಸಿಂಗ್ ತೋರಿದ ಆಲ್‌ರೌಂಡ್ ಆಟಕ್ಕೆ ದೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಉತ್ತಮ ಆರಂಭ ಸಿಗುತ್ತಿಲ್ಲ. ಒಮ್ಮೆ ವೀರೂ ವಿಫಲವಾದರೆ, ಮತ್ತೊಂದು ಪಂದ್ಯದಲ್ಲಿ ಗಂಭೀರ್ ಎಡವುತ್ತಿದ್ದಾರೆ. ಈ ಕಾರಣ ಭಾರತದ ಮುಂದೆಯೂ ಸವಾಲುಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry