ಕ್ರಿಕೆಟ್: ಭಾರತಕ್ಕೆ ಮೊದಲ ಜಯದ ವಿಶ್ವಾಸ

ಮಂಗಳವಾರ, ಜೂಲೈ 23, 2019
20 °C

ಕ್ರಿಕೆಟ್: ಭಾರತಕ್ಕೆ ಮೊದಲ ಜಯದ ವಿಶ್ವಾಸ

Published:
Updated:

ಕಿಂಗ್‌ಸ್ಟನ್ (ಪಿಟಿಐ): ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿರುವ ಭಾರತ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮಂಗಳವಾರದ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೆಣಸಲಿದ್ದು, ಮೊದಲ ಗೆಲುವಿನ ವಿಶ್ವಾಸದಲ್ಲಿದೆ.ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಎದುರು ಸೋಲು ಕಂಡಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆ ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಭಾರತ ತಂಡ ಈ ಸರಣಿಯ ತನ್ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಸರಣಿಯ ಇನ್ನುಳಿದ ಪಂದ್ಯಗಳಿಗೆ ದೋನಿ ಅಲಭ್ಯರಾಗಿರುವುದು ತಂಡಕ್ಕೆ ಹಿನ್ನಡೆ ಉಂಟುಮಾಡಿದೆ.ಸಬಿನಾ ಪಾರ್ಕ್ ಕ್ರೀಡಾಂಗಣದಲ್ಲಿ ರನ್ ಗಳಿಸಲು ಭಾರತದ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಪ್ರಯಾಸ ಪಟ್ಟಿದ್ದರು. ರೋಹಿತ್ ಶರ್ಮ ಮಾತ್ರ ಅರ್ಧಶತಕ ಗಳಿಸಿದ್ದರು. ಆದರೆ, ಭಾರತದ ಬ್ಯಾಟಿಂಗ್ ಬಲ ಎನಿಸಿರುವ ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸುವಲ್ಲಿ ವಿಫಲರಾಗಿದ್ದರು.ವಿಂಡೀಸ್ ಗೆಲುವಿಗೆ ಭಾರತ ಸಾಧಾರಣ ಮೊತ್ತದ ಗುರಿ ನೀಡಿತ್ತಾದರೂ, ವೇಗಿಗಳಾದ ಉಮೇಶ್ ಯಾದವ್, ಇಶಾಂತ್ ಶರ್ಮ ಮತ್ತು ಆಫ್ ಸ್ಪಿನ್ನರ್ ಅರ್. ಅಶ್ವಿನ್ ಸಮರ್ಥ ಬೌಲಿಂಗ್ ಮಾಡಿದ್ದರು. ಆದರೆ, ಆತಿಥೇಯರು ಒಂದು ವಿಕೆಟ್ ಬಾಕಿ ಇರುವಂತೆಯೇ ಗೆಲುವು ಸಾಧಿಸಿದರು.ಲಂಕಾಕ್ಕೂ ಮೊದಲ ಗೆಲುವಿನ ತುಡಿತ: ಶ್ರೀಲಂಕಾ ತಂಡದ ಪರಿಸ್ಥಿತಿ ಕೂಡಾ ಭಾರತ ತಂಡಕ್ಕಿಂತ ಭಿನ್ನವಾಗಿಲ್ಲ. ಏಂಜಲೊ ಮ್ಯಾಥ್ಯೂಸ್ ನೇತೃತೃದ ತಂಡ ತನ್ನ ಮೊದಲ ಪಂದ್ಯದಲ್ಲಿ ವಿಂಡೀಸ್ ಎದುರು ಸೋಲು ಕಂಡಿತ್ತು. ವಿಂಡೀಸ್ ಎದುರು 208 ರನ್‌ಗಳಿಗೆ ಆಲ್‌ಔಟ್ ಆಗಿದ್ದ ಲಂಕಾ ತಂಡವನ್ನೂ ಬ್ಯಾಟಿಂಗ್ ವೈಫಲ್ಯ ಕಾಡುತ್ತಿದೆ.ವಿಂಡೀಸ್ ಎದುರು ಲಂಕಾದ ಹಿರಿಯ ಬ್ಯಾಟ್ಸ್‌ಮನ್ ಮಾಹೇಲ ಜಯವರ್ಧನೆ ಅರ್ಧಶತಕ ಗಳಿಸಿದ್ದರು. ಆದರೆ, ಮಾಜಿ ನಾಯಕ ಕುಮಾರ ಸಂಗಕ್ಕಾರ ವಿಫಲರಾಗಿದ್ದರು. ಆದ್ದರಿಂದ ಈ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಬಲಗೊಳ್ಳಬೇಕಿದೆ. ವೇಗಿಗಳಾದ ಲಸಿತ್ ಮಾಲಿಂಗ, ನುವಾನ್ ಕುಲಶೇಖರ ಹಾಗೂ ಸ್ಪಿನ್ನರ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮೊದಲ ಪಂದ್ಯಗಳಲ್ಲಿ ಸೋಲು ಕಂಡಿರುವ ಉಭಯ ತಂಡಗಳು ತ್ರಿಕೋನ ಸರಣಿಯಲ್ಲಿ ಮೊದಲ ಗೆಲುವಿಗಾಗಿ ಕಾತರಿಸುತ್ತಿವೆ.ಪಂದ್ಯ ಆರಂಭ: ರಾತ್ರಿ 8ಕ್ಕೆ (ಭಾರತೀಯ ಕಾಲಮಾನ).

ಸರಣಿಯಿಂದ ದೋನಿ ಹೊರಕ್ಕೆ

ಕಿಂಗ್‌ಸ್ಟನ್ (ಪಿಟಿಐ): ಸ್ನಾಯುಸೆಳೆತದ ನೋವಿನಿಂದ ಬಳಲುತ್ತಿರುವ ನಾಯಕ ಎಂ.ಎಸ್. ದೋನಿ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದು, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.`ದೋನಿ ಬದಲಾಗಿ ಅಂಬಟಿ ರಾಯುಡು ಅವರಿಗೆ ಸ್ಥಾನ ನೀಡಲಾಗಿದೆ. ರಾಯುಡು ಶೀಘ್ರವೇ ತಂಡವನ್ನು ಸೇರಿಕೊಳ್ಳಲಿದ್ದಾರೆ' ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry