ಕ್ರಿಕೆಟ್: ಭಾರತಕ್ಕೊಂದು ಕೊನೆಯ ಅವಕಾಶ

7

ಕ್ರಿಕೆಟ್: ಭಾರತಕ್ಕೊಂದು ಕೊನೆಯ ಅವಕಾಶ

Published:
Updated:
ಕ್ರಿಕೆಟ್: ಭಾರತಕ್ಕೊಂದು ಕೊನೆಯ ಅವಕಾಶ

ಹೋಬರ್ಟ್: ಆಸ್ಟ್ರೇಲಿಯಾ ಪ್ರವಾಸವನ್ನು ಇನ್ನೆಂದೂ ನೆನಪಿಸಿಕೊಳ್ಳಬಾರದಷ್ಟು ಕೆಟ್ಟ ಪ್ರದರ್ಶನ ತೋರುತ್ತಿರುವ ಭಾರತ ತಂಡದವರು ಗಂಟುಮೂಟೆ ಕಟ್ಟಲು ತಯಾರಿ ನಡೆಸುತ್ತಿದ್ದಾರೆ. ಅದಕ್ಕೂ ಮೊದಲು ಒಂದು ಕೊನೆಯ ಅವಕಾಶವಿದೆ. ಆದರೆ ಅದಕ್ಕೆ ಪವಾಡವೇ ನಡೆಯಬೇಕು!ಏಕೆಂದರೆ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಿಂದ ಹೊರಬೀಳುವ ಭೀತಿ ಎದುರಿಸುತ್ತಿರುವ ಭಾರತ ತಂಡ ಮಂಗಳವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸುತ್ತಿದೆ. ಆದರೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ದೋನಿ ಬಳಗ ಈ ಪಂದ್ಯವನ್ನು ಬೋನಸ್ ಪಾಯಿಂಟ್‌ನೊಂದಿಗೆ ಗೆಲ್ಲಬೇಕಾಗಿದೆ. ಈ ರೀತಿ ಗೆದ್ದರೂ ಈ ತಂಡದ ಅದೃಷ್ಟ ಖುಲಾಯಿಸುವುದಿಲ್ಲ. ಏಕೆಂದರೆ ಶ್ರೀಲಂಕಾ ತಂಡದವರು ತಮ್ಮ ಕೊನೆಯ ಲೀಗ್ ಪಂದ್ಯದಲ್ಲೂ ಆಸ್ಟ್ರೇಲಿಯಾ ಎದುರು ಸೋಲಬೇಕು.ಹಾಗಾಗಿ ಹಿಂದಿನ ಬಾಗಿಲಿನಿಂದ ಫೈನಲ್ ಪ್ರವೇಶಿಸುವ ಹಾದಿಯನ್ನು ಭಾರತ ತಂಡ ಹುಡುಕಾಡುತ್ತಿದೆ. ಸಚಿನ್, ಸೆಹ್ವಾಗ್, ಗಂಭೀರ್, ದೋನಿ ಅವರಂಥ ಆಟಗಾರರನ್ನು ಒಳಗೊಂಡಿರುವ ತಂಡಕ್ಕೆ ಇದೇನು ದೊಡ್ಡ ವಿಷಯವಲ್ಲ ಎನಿಸಿಬಹುದು. ಆದರೆ ಈ ಎಲ್ಲಾ ಆಟಗಾರರು ಕಾಂಗರೂ ನಾಡಿಗೆ ಬರುವ ಮುನ್ನ ತಮ್ಮ ಕೌಶಲವನ್ನು ಭಾರತದಲ್ಲಿಯೇ ಬಿಟ್ಟು ಬಂದವರಂತೆ ಕಾಣುತ್ತಿದ್ದಾರೆ!ಇನ್ನು ಬೋನಸ್ ಪಾಯಿಂಟ್‌ನೊಂದಿಗೆ ಭಾರತ ಈ ಪಂದ್ಯ ಗೆಲ್ಲಲು ಸಾಧ್ಯವೇ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಸುಳಿದಾಡದೇ ಇರದು. 19 ಪಾಯಿಂಟ್ ಹೊಂದಿರುವ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಶ್ರೀಲಂಕಾ ಬಳಿ ಈಗ 15 ಪಾಯಿಂಟ್‌ಗಳಿವೆ. ಆದರೆ ಈ ತಂಡ ಇನ್ನೂ ಎರಡು ಪಂದ್ಯ ಆಡಬೇಕಾಗಿದೆ. ಭಾರತದ ಬಳಿ ಕೇವಲ 10 ಪಾಯಿಂಟ್‌ಗಳಿವೆ. ಹಾಗಾಗಿ ಮಳೆಯ ಕಾರಣ ಪಂದ್ಯ ರದ್ದಾದರೂ ಮಹಿ ಪಡೆ ಟೂರ್ನಿಯಿಂದ `ಔಟ್~ ಆಗಲಿದೆ.ಈ ಟೂರ್ನಿಯಲ್ಲಿ ಭಾರತದ ಒಬ್ಬ ಆಟಗಾರನೂ ಶತಕ ಗಳಿಸಿಲ್ಲ. ಒಂದೂ ಶತಕದ ಜೊತೆಯಾಟ ಮೂಡಿಬಂದಿಲ್ಲ. ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 30 ರನ್‌ಗಳ ಗೆರೆ ದಾಟಲು ಯಾರೊಬ್ಬರಿಗೂ ಸಾಧ್ಯವಾಗಲಿಲ್ಲ.ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಒಂದು ಶತಕ ಗಳಿಸಲು ಸಚಿನ್‌ಗೆ ಇನ್ನೂ ಸಾಧ್ಯವಾಗಿಲ್ಲ. ಶತಕಗಳ ಶತಕಕ್ಕಾಗಿ ಅವರು ಕಳೆದ 10 ತಿಂಗಳಿನಿಂದ ಪ್ರಯತ್ನಿಸುತ್ತಲೇ ಇದ್ದಾರೆ. `ನಮ್ಮ ದೇಶದಲ್ಲಿ ಇರುವವರೆಗೆ ಅವರಿಗೆ ಈ ಸಾಧನೆ ಮಾಡಲು ಅವಕಾಶ ನೀಡುವುದಿಲ್ಲ~ ಎಂದು ಇಂಗ್ಲೆಂಡ್ ಆಟಗಾರರು ಹೇಳಿದ್ದರು. ಅಲ್ಲೂ ತೆಂಡೂಲ್ಕರ್‌ಗೆ ಸಾಧ್ಯವಾಗಲಿಲ್ಲ. ಕಾಂಗರೂ ನಾಡಿಗೆ ಕಾಲಿಡುತ್ತಿದ್ದಂತೆ ಆತಿಥೇಯ ದೇಶದ ಆಟಗಾರರು ಇದೇ ಮಾತನ್ನು ಹೇಳಿದರು. ಇದುವರೆಗೆ ಸಚಿನ್‌ಗೆ ಅದು ಸಾಧ್ಯವಾಗಿಲ್ಲ. ಆದರೆ ಮಂಗಳವಾರ ಅವರಿಗೆ ಕೊನೆಯ ಅವಕಾಶವೊಂದಿದೆ.ಪೂರ್ಣ ಫಿಟ್ ಆಗಿರುವ ಬೌಲರ್‌ಗಳನ್ನು ಕಣಕ್ಕಿಳಿಸಲು ಈಗ ದೋನಿ ಪರದಾಡಬೇಕಾಗಿದೆ. ಏಕೆಂದರೆ ವೇಗಿಗಳಾದ ಜಹೀರ್ ಖಾನ್ ಹಾಗೂ ಆರ್.ವಿನಯ್ ಕುಮಾರ್ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಇರ್ಫಾನ್ ಪಠಾಣ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಪಡೆಯಲು ಓಡುವಾಗ ಸುರೇಶ್ ರೈನಾಗೆ ಡಿಕ್ಕಿಯಾಗಿ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡ್ದ್ದಿದಾರೆ.ಶ್ರೀಲಂಕಾ ತಂಡಕ್ಕೆ ಅಂತಹ ದೊಡ್ಡ ಆತಂಕವೇನೂ ಇಲ್ಲ. ಏಕೆಂದರೆ ಈ ಪಂದ್ಯದಲ್ಲಿ ಗೆದ್ದರೆ ಸಾಕು ಈ ತಂಡದ ಫೈನಲ್ ಹಾದಿ ಸುಗಮವಾಗಲಿದೆ. ಜೊತೆಗೆ ಈ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇನಿಂಗ್ಸ್ ಆರಂಭಿಸುತ್ತಿರುವ ನಾಯಕ ಮಾಹೇಲ ಜಯವರ್ಧನೆ ಕೂಡ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುತ್ತಿದ್ದಾರೆ.

ತಂಡಗಳು

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಉಮೇಶ್ ಯಾದವ್, ಪ್ರವೀಣ್ ಕುಮಾರ್, ಇರ್ಫಾನ್ ಪಠಾಣ್, ಆರ್.ವಿನಯ್ ಕುಮಾರ್, ಪಾರ್ಥಿವ್ ಪಟೇಲ್, ರಾಹುಲ್ ಶರ್ಮ, ಜಹೀರ್ ಖಾನ್ ಹಾಗೂ ಮನೋಜ್ ತಿವಾರಿ.ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ (ವಿಕೆಟ್ ಕೀಪರ್), ದಿನೇಶ್ ಚಂಡಿಮಾಲ್, ಲಹಿರು ತಿರಿಮಾನೆ, ತಿಸ್ಸಾರ ಪೆರೇರಾ, ಆ್ಯಂಜೆಲೊ ಮ್ಯಾಥ್ಯೂಸ್, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ರಂಗನಾ ಹೇರತ್, ಫರ್ವೀಜ್ ಮಹಾರೂಫ್ ಹಾಗೂ ಉಪುಲ್ ತರಂಗ.

ಪಂದ್ಯ ಆರಂಭ: ಭಾರತೀಯ ಕಾಲಮಾನ ಬೆಳಿಗ್ಗೆ 8.50ಕ್ಕೆ.

ನೇರ ಪ್ರಸಾರ: ಸ್ಟಾರ್ ಕ್ರಿಕೆಟ್ ಹಾಗೂ ಡಿಡಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry