ಕ್ರಿಕೆಟ್: ಭಾರತದ ವನಿತೆಯರ ಚಾರಿತ್ರಿಕ ಸಾಧನೆ

ಮೆಲ್ಬರ್ನ್ (ಪಿಟಿಐ): ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ (27ಕ್ಕೆ2) ಮತ್ತು ಜೂಲನ್ ಗೋಸ್ವಾಮಿ (16ಕ್ಕೆ2) ಅವರ ಬಿಗುವಿನ ದಾಳಿಯ ಬಲದಿಂದ ಭಾರತ ವನಿತೆಯರ ತಂಡ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 10 ವಿಕೆಟ್ಗಳಿಂದ ಮಣಿಸಿತು.
ಇದರೊಂದಿಗೆ ಮಿಥಾಲಿ ರಾಜ್ ಸಾರಥ್ಯದ ತಂಡ ಒಂದು ಪಂದ್ಯದ ಆಟ ಬಾಕಿ ಇರುವಂತೆಯೇ 2–0ರಲ್ಲಿ ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿತು. ಮೂರು ಬಾರಿಯ ವಿಶ್ವ ಚಾಂಪಿ ಯನ್ ಆಸ್ಟ್ರೇಲಿಯಾ ಎದುರು ಭಾರತ ತಂಡ ಮೊದಲ ಬಾರಿಗೆ ಸರಣಿ ಗೆದ್ದು ಶ್ರೇಯ ತನ್ನದಾಗಿಸಿಕೊಂಡಿತು.
ಮಳೆಯಿಂದಾಗಿ 18 ಓವರ್ಗಳಿಗೆ ಕಡಿತಗೊಳಿಸಲಾಗಿದ್ದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಬಲಿಷ್ಠ ಕಾಂಗರೂಗಳ ನಾಡಿನ ತಂಡವನ್ನು 8 ವಿಕೆಟ್ಗೆ 125ರನ್ಗಳಿಗೆ ನಿಯಂತ್ರಿಸಿದ ಪ್ರವಾಸಿ ತಂಡದ ಬೌಲರ್ಗಳು ನಾಯಕಿ ಮಿಥಾಲಿ ನಿರ್ಧಾರವನ್ನು ಸಮರ್ಥಿಸಿ ಕೊಂಡರು. ಗುರಿ ಬೆನ್ನಟ್ಟಿದ ಭಾರತ ತಂಡ 9.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69ರನ್ ಗಳಿಸಿದ್ದ ವೇಳೆ ಮತ್ತೊಮ್ಮೆ ಆಟಕ್ಕೆ ಮಳೆ ಅಡ್ಡಿಯಾಯಿತು.
ವರುಣ ನಿಲ್ಲುವ ಸೂಚನೆ ಕಾಣದಿದ್ದಾಗ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ಭಾರತ ವನ್ನು ವಿಜಯಿ ಎಂದು ಘೋಷಿಸ ಲಾಯಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್ನ ಮೂರನೇ ಎಸೆತದಲ್ಲಿ ಆರಂಭಿಕ ಆಟ ಗಾರ್ತಿ ಗ್ರೇಸ್ ಹ್ಯಾರಿಸ್ ಜೂಲನ್ ಗೋಸ್ವಾಮಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬೆಥ್ ಮೂನಿ (10) ಕೂಡಾ ಪೆವಿಲಿಯನ್ ಸೇರಿಕೊಂಡರು. ಎಲ್ಲಿಸೆ ಪೆರ್ರಿ (4) ಹಾಗೆ ಬಂದು ಹೀಗೆ ಹೋದರು.
ಈ ಹಂತದಲ್ಲಿ ಒಂದಾದ ನಾಯಕಿ ಮೆಗ್ ಲ್ಯಾನಿಂಗ್ (49; 39ಎ, 3ಬೌಂ, 2ಸಿ) ಮತ್ತು ಜೆಸ್ ಜೊನಾಸೆನ್ (27) ಕೆಲಕಾಲ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು. ಇವರಿಬ್ಬರ ವಿಕೆಟ್ ಪತನದ ಬಳಿಕ ಆತಿಥೇಯತಂಡ ಕುಸಿತ ಕಂಡಿತು.
ಉತ್ತಮ ಆರಂಭ: ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕಿ ಮಿಥಾಲಿ (ಔಟಾಗದೆ 37; 32ಎ, 6ಬೌಂ) ಮತ್ತು ಸ್ಮೃತಿ ಮಂದಾನ (ಔಟಾಗದೆ 22; 24ಎ, 3ಬೌಂ) ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಈ ಜೋಡಿ ಮೊದಲ ವಿಕೆಟ್ಗೆ 55 ಎಸೆತಗಳಲ್ಲಿ 69ರನ್ ಕಲೆಹಾಕಿ ಮಿಂಚಿತು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 18 ಓವರ್ಗಳಲ್ಲಿ 8 ವಿಕೆಟ್ಗೆ 125 (ಬೆಥ್್ ಮೂನಿ 10, ಮೆಗ್ ಲ್ಯಾನಿಂಗ್ 49, ಜೆಸ್ ಜೊನಾಸೆನ್ 27, ಅಲೆಕ್ಸ್ ಬ್ಲಾಕ್ವೆಲ್ ಔಟಾಗದೆ 12; ಜೂಲನ್ ಗೋಸ್ವಾಮಿ 16ಕ್ಕೆ2, ರಾಜೇಶ್ವರಿ ಗಾಯಕ್ವಾಡ್ 27ಕ್ಕೆ2, ಪೂನಮ್ ಯಾದವ್ 17ಕ್ಕೆ1).
ಭಾರತ: 9.1 ಓವರ್ಗಳಲ್ಲಿ ವಿಕೆಟ್ ನಷ್ಟ ವಿಲ್ಲದೆ 69 (ಮಿಥಾಲಿ ರಾಜ್ ಔಟಾಗದೆ 37, ಸ್ಮೃತಿ ಮಂದಾನ ಔಟಾಗದೆ 22).
ಫಲಿತಾಂಶ: ಡಕ್ವರ್ಥ್ ಲೂಯಿಸ್ ನಿಯಮ ದನ್ವಯ ಭಾರತಕ್ಕೆ 10 ವಿಕೆಟ್ ಗೆಲುವು ಹಾಗೂ 3 ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಮುನ್ನಡೆ.
ಪಂದ್ಯಶ್ರೇಷ್ಠ: ಜೂಲನ್ ಗೋಸ್ವಾಮಿ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.