ಸೋಮವಾರ, ಮೇ 17, 2021
27 °C

ಕ್ರಿಕೆಟ್: ಭಾರತ ತಂಡಕ್ಕೆ ಪುಟಿದೇಳುವ ಆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆಸ್ಟರ್ ಲೀ ಸ್ಟ್ರೀಟ್: ಸಾಲು ಸಾಲು ಸೋಲು. ಪ್ರಮುಖ ಆಟಗಾರರ ಗಾಯದ ಸಮಸ್ಯೆ. ಸಂಕಷ್ಟಗಳು ಕೊನೆಗೊಂಡಿಲ್ಲ. ಆದ್ದರಿಂದಲೇ ಭಾರತ ತಂಡದಲ್ಲಿ ಉತ್ಸಾಹದ ಸುಳಿವಿಲ್ಲ. ಗೆಲುವೊಂದು ಬೇಕು. ಅದೇ ಹುಮ್ಮಸ್ಸು ಹೆಚ್ಚಲು ಬಲವಾಗಬೇಕು.ಎರಡು ಅಭ್ಯಾಸ ಪಂದ್ಯ ಗೆದ್ದಿದ್ದು ಮಾತ್ರ ಇಂಗ್ಲೆಂಡ್ ಪ್ರವಾಸದಲ್ಲಿನ ಭಾರತದ ಈವರೆಗಿನ ಸಾಧನೆ. ಟೆಸ್ಟ್ ಸರಣಿ ಕೈಬಿಟ್ಟುಹೋಯಿತು. ಟ್ವೆಂಟಿ-20 ಪಂದ್ಯದಲ್ಲಿಯೂ ಗೆಲುವು ಒಲಿಯಲಿಲ್ಲ. ಈಗ ಏಕದಿನ ಪಂದ್ಯಗಳ ಸರಣಿ. ಈ ಪ್ರಕಾರದ ಕ್ರಿಕೆಟ್‌ನಲ್ಲಿ ವಿಶ್ವಚಾಂಪಿಯನ್ ಆಗಿರುವ ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಪಡೆಗೆ ಸತ್ವಪರೀಕ್ಷೆ!ಚಾಂಪಿಯನ್ನರು ಎನ್ನುವ ಖ್ಯಾತಿಯನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಆಡಬೇಕು. ಇಲ್ಲದಿದ್ದರೆ ಟೆಸ್ಟ್ ರ‌್ಯಾಂಕಿಂಗ್‌ನ ಅಗ್ರಸ್ಥಾನ ಕಳೆದುಕೊಂಡ ನಂತರ ಕಾಡಿರುವ ನಿರಾಸೆ ಇಮ್ಮಡಿಯಾಗುತ್ತದೆ. ಇಂಗ್ಲೆಂಡ್ ಆಡುತ್ತಿರುವ ಅಬ್ಬರವನ್ನು ನೋಡಿದವರು ಏಕದಿನ ಸರಣಿಯೂ ಭಾರತದ ಕೈಬಿಟ್ಟು ಹೋಗುತ್ತದೆ ಎನ್ನುವ ಭವಿಷ್ಯ ನುಡಿದಾಗಿದೆ. ಕ್ರಿಕೆಟ್ ಪಂಡಿತರ ಈ ಮಾತು ಹುಸಿಯಾಗಬೇಕು. ಆಗಲೇ ಭಾರತದ ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳ ಮೊಗದಲ್ಲಿ ಮತ್ತೆ ನಗು ನಲಿಯುತ್ತದೆ.ಇಲ್ಲಿನ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ಶನಿವಾರ ಐದು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ನಡೆಯಲಿದೆ. ವಿಶ್ವಾಸದ ಅಲೆಯ ಮೇಲೆ ತೇಲುತ್ತಿರುವ ಇಂಗ್ಲೆಂಡ್ ಈ ಸರಣಿಯನ್ನು ಕೂಡ ಕ್ಲೀನ್ ಸ್ವೀಪ್ ಮಾಡುವ ಆಶಯ ಹೊಂದಿದೆ. ಅದಕ್ಕೆ ತಕ್ಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಶಕ್ತಿಯನ್ನು ಹೊಂದಿರುವ ಆತಿಥೇಯರ ಗೆಲುವಿನ ಕನಸನ್ನು ನುಚ್ಚು ನೂರು ಮಾಡುವುದೇ `ಮಹಿ~ ಬಳಗದ ಮುಂದಿರುವ ದೊಡ್ಡ ಸವಾಲು.ಭಾರತ ತಂಡದವರು ಇಂಗ್ಲೆಂಡ್‌ಗೆ ಬಂದಾಗಿನಿಂದ ಯಾವುದೂ ಲೆಕ್ಕಾಚಾರದಂತೆ ನಡೆದಿಲ್ಲ. ನಾಲ್ಕು ಟೆಸ್ಟ್‌ಗಳಲ್ಲಿ ಒಂದನ್ನೂ ಗೆಲ್ಲುವ ಮಟ್ಟದಲ್ಲಿ ಪ್ರವಾಸಿಗಳು ಸತ್ವಯುತ ಆಟವಾಡಲಿಲ್ಲ. ಸರಣಿಯ ಆರಂಭದಲ್ಲಿಯೇ ಗಾಯಾಳುಗಳ ನೋವಿನ ಗಾನವು ಕ್ರಿಕೆಟ್ ಪ್ರೇಮಿಗಳಿಗೆ ಕರ್ಕಶವಾಯಿತು. ವಿಚಿತ್ರವೆಂದರೆ ಒಂದು ಪಂದ್ಯವನ್ನು ಡ್ರಾ ಮಾಡುವಷ್ಟು ಶಕ್ತಿಯೂ ಭಾರತಕ್ಕೆ ಇಲ್ಲವಾಯಿತು. ಆದ್ದರಿಂದ ದೋನಿ ಪಡೆಯು ಈಗ ಕಳಾಹೀನ.ಇಂಗ್ಲೆಂಡ್ ಮಾತ್ರ ಯಾವುದೇ ಆತಂಕವಿಲ್ಲದೇ ವಿಶ್ವಾಸದಿಂದ ಮುನ್ನುಗ್ಗಿದೆ. ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಭಾರತವನ್ನು ಕೆಳಗೆ ತಳ್ಳಿದ ಆತಿಥೇಯರು ಏಕಮಾತ್ರ ಚುಟುಕು ಪಂದ್ಯದಲ್ಲಿ ಕೂಡ ಆರು ವಿಕೆಟ್‌ಗಳ ಅಂತರದ ವಿಜಯ ಸಾಧಿಸಿದರು. ಏಕದಿನ ಸರಣಿಯೂ ತಮ್ಮದಾಗುತ್ತದೆನ್ನುವ ವಿಶ್ವಾಸ ಆಲಿಸ್ಟರ್ ಕುಕ್ ನಾಯಕತ್ವದ ತಂಡದಲ್ಲಿದೆ.ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಏಕದಿನ ಪಂದ್ಯಗಳ ರ‌್ಯಾಂಕಿಂಗ್‌ನಲ್ಲಿ ಕೂಡ ಭಾರತವನ್ನು ಮೂರನೇ ಸ್ಥಾನದಿಂದ ಕೆಳಗೆ ಇಳಿಸುವ ಉತ್ಸಾಹ ಇಂಗ್ಲೆಂಡ್ ತಂಡದ್ದು. ಈ ಸರಣಿಯಲ್ಲಿ 5-0 ಅಂತರದಲ್ಲಿ ವಿಜಯ ಸಾಧಿಸಿದಲ್ಲಿ ಮೂರನೇ ಸ್ಥಾನ ಇಂಗ್ಲೆಂಡ್‌ಗೆ ದಕ್ಕಲಿದೆ. ಸದ್ಯ ಆಸ್ಟ್ರೇಲಿಯಾ, ಶ್ರೀಲಂಕಾ ಹಾಗೂ ಭಾರತ ಮೊದಲ ಮೂರು ಸ್ಥಾನದಲ್ಲಿವೆ. ಇಂಗ್ಲೆಂಡ್ ಐದನೇ ಸ್ಥಾನದಲ್ಲಿದೆ. ಅದು ತನ್ನ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಈ ಸರಣಿ ಉತ್ತಮ ಅವಕಾಶ.ಭಾರತವು ಟೆಸ್ಟ್ ಸರಣಿಯಂತೆ ಏಕದಿನ ಸರಣಿಯನ್ನು ಕಳೆದುಕೊಂಡರೆ ಅದೊಂದು ದೊಡ್ಡ ಆಘಾತ. ಸ್ವದೇಶಕ್ಕೆ ಮುಖ ಮುಚ್ಚಿಕೊಂಡು ಹಿಂದಿರುಗಬೇಕಾಗುತ್ತದೆ. ಈ ಅಪಾಯವನ್ನು ಅರಿತು; ಕೆಲವು ಪಂದ್ಯಗಳನ್ನಾದರೂ ಗೆಲ್ಲುವ ಪ್ರಯತ್ನ ಮಾಡಬೇಕು. ಸರಣಿ ಗೆದ್ದರಂತೂ ಹಿಂದಿನೆಲ್ಲ ನಿರಾಸೆಯನ್ನು ಅಭಿಮಾನಿಗಳು ಮರೆತುಬಿಡುತ್ತಾರೆ. ಅದು ದೇಶದ ಕ್ರಿಕೆಟ್ ಪ್ರೇಮಿಗಳ ಸಹಜ ಗುಣ!ಈ ಸರಣಿಯಲ್ಲಿ ಭಾರತಕ್ಕೆ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಜಹೀರ್ ಖಾನ್ ಹಾಗೂ ಹರಭಜನ್ ಸಿಂಗ್ ನೆರವು ಸಿಗುತ್ತಿಲ್ಲ. ಇವರೆಲ್ಲಾ ಗಾಯಾಳುಗಳ ಪಟ್ಟಿ ಸೇರಿದ್ದಾರೆ.

 

ಆದ್ದರಿಂದ ಅನುಭವಿಗಳಾದ ದೋನಿ, ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಮೇಲೆ ಹೊರೆ ಹೆಚ್ಚಿದೆ. ಯುವ ಆಟಗಾರರಿಗೆ ಮಾತ್ರ ಇದೊಂದು ಉತ್ತಮ ಅವಕಾಶ. ಮಿಂಚಿದರೆ ತಂಡದಲ್ಲಿ ಬೇರುಬಿಟ್ಟು ಗಟ್ಟಿಯಾಗಿ ನಿಲ್ಲುವುದು ಸಾಧ್ಯವಾಗುತ್ತದೆ.ತಂಡಗಳು

ಇಂಗ್ಲೆಂಡ್:
ಆಲಿಸ್ಟರ್ ಕುಕ್ (ನಾಯಕ), ಜೇಮ್ಸ ಆ್ಯಂಡರ್ಸನ್, ಇಯಾನ್ ಬೆಲ್, ರವಿ ಬೋಪರಾ, ಟಿಮ್ ಬ್ರೆಸ್ನನ್, ಸ್ಟುವರ್ಟ್   ಬ್ರಾಡ್, ಜೇಡ್ ಡೆರ್ನ್‌ಬಾಕ್, ಸ್ಟೀವನ್ ಫಿನ್, ಕ್ರೇಗ್ ಕೀಸ್ವೆಟರ್, ಎಯೊನ್ ಮಾರ್ಗನ್, ಸಮಿತ್ ಪಟೇಲ್, ಬೆನ್ ಸ್ಟೋಕ್ಸ್, ಗ್ರೇಮ್ ಸ್ವಾನ್ ಮತ್ತು ಜೋನಾಥನ್ ಟ್ರಾಟ್.ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಸಚಿನ್ ತೆಂಡೂಲ್ಕರ್, ಅಜಿಂಕ್ಯಾ ರಹಾನೆ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಆರ್.ಪಿ.ಸಿಂಗ್, ಆರ್.ವಿನಯ್ ಕುಮಾರ್, ಆರ್.ಅಶ್ವಿನ್, ಅಮಿತ್ ಮಿಶ್ರಾ, ಪಾರ್ಥಿವ್ ಪಟೇಲ್ ಮತ್ತು ವರುಣ್ ಆ್ಯರನ್.ಅಂಪೈರ್‌ಗಳು: ಬಿಲ್ಲಿ ಡಾಕ್ಟ್ರೋವ್ (ವೆಸ್ಟ್ ಇಂಡೀಸ್) ಮತ್ತು     ರಿಚರ್ಡ್ ಇಲಿಂಗ್‌ವರ್ತ್ (ಇಂಗ್ಲೆಂಡ್).

ಮೂರನೇ ಅಂಪೈರ್: ಮಾರಿಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ).

ಮ್ಯಾಚ್ ರೆಫರಿ: ಜೆಫ್ ಕ್ರೋವ್ (ನ್ಯೂಜಿಲೆಂಡ್).

ಪಂದ್ಯ ಆರಂಭ (ಭಾರತೀಯ ಕಾಲಮಾನ): ಮಧ್ಯಾಹ್ನ 2.45ಕ್ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.