ಕ್ರಿಕೆಟ್: ಮತ್ತೆ ಸೋಲಿನ ಹಾದಿ...

7

ಕ್ರಿಕೆಟ್: ಮತ್ತೆ ಸೋಲಿನ ಹಾದಿ...

Published:
Updated:

ಮೆಲ್ಬರ್ನ್: ಕಳಪೆ ಪ್ರದರ್ಶನ ಹೇಗೆಲ್ಲಾ ನೀಡಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟ ಭಾರತ ತಂಡ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮುಗ್ಗರಿಸಿತು. ಭಾನುವಾರ ನಡೆದ ಪಂದ್ಯದಲ್ಲಿ 65 ರನ್‌ಗಳ ಗೆಲುವು ಪಡೆದ ಆಸ್ಟ್ರೇಲಿಯಾ ಶುಭಾರಂಭ ಮಾಡಿದೆ.ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯ ಬಯಲಾದ ಕಾರಣ ಆಸೀಸ್‌ಗೆ ಗೆಲುವು ಕಷ್ಟವೆನಿಸಲಿಲ್ಲ. ಮೊದಲು ಬ್ಯಾಟ್ ಮಾಡಿದ ಮೈಕಲ್ ಕ್ಲಾರ್ಕ್ ಬಳಗ ಆರಂಭಿಕ ಆಘಾತವನ್ನು ಮೆಟ್ಟಿನಿಂತು 32 ಓವರ್‌ಗಳಲ್ಲಿ 5 ವಿಕೆಟ್‌ಗೆ 216 ರನ್ ಕಲೆಹಾಕಿತು. ಮಳೆ ಅಡ್ಡಿಪಡಿಸಿದ್ದರಿಂದ ಈ ಪಂದ್ಯದ ಓವರ್‌ಗಳ ಸಂಖ್ಯೆಯನ್ನು 32 ಕ್ಕೆ ಇಳಿಸಲಾಗಿತ್ತು.ಮಹೇಂದ್ರ ಸಿಂಗ್ ದೋನಿ ಬಳಗದ ಹೋರಾಟ 29.4 ಓವರ್‌ಗಳಲ್ಲಿ 151 ರನ್‌ಗಳಿಗೆ ಸೀಮಿತವಾಗಿತ್ತು. ಕ್ಲಿಂಟ್ ಮೆಕೇ (20ಕ್ಕೆ 4), ಮಿಷೆಲ್ ಸ್ಟಾರ್ಕ್ (33ಕ್ಕೆ 4) ಮತ್ತು ಕ್ಸೇವಿಯರ್ ಡೊಹರ್ಟಿ (36ಕ್ಕೆ 2) ಬೌಲಿಂಗ್ ದಾಳಿಯನ್ನು ಮೆಟ್ಟಿನಿಲ್ಲಲು ಭಾರತಕ್ಕೆ ಸಾಧ್ಯವಾಗಿಲ್ಲ. ಇದಕ್ಕೂ ಮುನ್ನ ಆಕರ್ಷಕ ಅರ್ಧಶತಕ ಗಳಿಸಿದ ಮ್ಯಾಥ್ಯೂ ವೇಡ್ (67, 69 ಎಸೆತ, 4 ಬೌಂ, 2 ಸಿಕ್ಸರ್) ಹಾಗೂ ಡೇವಿಡ್ ಹಸ್ಸಿ (61, 30 ಎಸೆತ, 4 ಬೌಂ, 3 ಸಿಕ್ಸರ್) ಆತಿಥೇಯ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.ಎರಡು ದಿನಗಳ ಹಿಂದೆ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಗೆಲುವು ಪಡೆದಿದ್ದ ಕಾರಣ ಅಭಿಮಾನಿಗಳು ಭಾರತ ತಂಡದ ಮೇಲೆ ಅಲ್ಪ ಭರವಸೆ ಇಟ್ಟಿದ್ದರು. ಆದರೆ ಅಂತಹ ನಿರೀಕ್ಷೆ ಹುಸಿಯಾಯಿತು.ಸವಾಲಿನ ಗುರಿ ಬೆನ್ನಟ್ಟಿದ ತಂಡ ಯಾವ ಹಂತದಲ್ಲೂ ಎದುರಾಳಿಗಳಿಗೆ ಬೆದರಿಕೆ ಹುಟ್ಟಿಸಲಿಲ್ಲ. ವೀರೇಂದ್ರ ಸೆಹ್ವಾಗ್ ಆಡದ ಕಾರಣ ಗೌತಮ್ ಗಂಭೀರ್ ಮತ್ತು ಸಚಿನ್ ತೆಂಡೂಲ್ಕರ್ ಇನಿಂಗ್ಸ್ ಆರಂಭಿಸಿದರು. ತಂಡದ ಮೊತ್ತ 13 ಆಗುವಷ್ಟರಲ್ಲಿ ಇವರಿಬ್ಬರನ್ನು ಪೆವಿಲಿಯನ್‌ಗಟ್ಟಿದ ಸ್ಟಾರ್ಕ್ ಪ್ರವಾಸಿ ತಂಡಕ್ಕೆ ಆಘಾತ ನೀಡಿದರು.ವಿರಾಟ್ ಕೊಹ್ಲಿ (31, 34 ಎಸೆತ, 3 ಬೌಂ) ಮತ್ತು ರೋಹಿತ್ ಶರ್ಮ (21) ಮೂರನೇ ವಿಕೆಟ್‌ಗೆ 47 ಎಸೆತಗಳಲ್ಲಿ 51 ರನ್ ಸೇರಿಸಿದಾಗ ಭಾರತದಿಂದ ಮರುಹೋರಾಟ ನಿರೀಕ್ಷಿಸಲಾಗಿತ್ತು. ಆದರೆ ಕ್ಲಿಂಟ್ ಮೆಕೇ ಒಂದೇ ಓವರ್‌ನಲ್ಲಿ ಇವರಿಬ್ಬರ ವಿಕೆಟ್ ಪಡೆದು ಆಸೀಸ್‌ಗೆ ಮೇಲುಗೈ ತಂದಿತ್ತರು. ಕ್ರೀಸ್‌ನಲ್ಲಿ ನೆಲೆಯೂರಿದ್ದ ಸಂದರ್ಭದಲ್ಲೇ ಇಬ್ಬರೂ ಔಟಾದದ್ದು ಭಾರತಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿತು.ಅನಂತರ ಆಸೀಸ್ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸುವ ತಾಕತ್ತನ್ನು ಯಾರೂ ತೋರಲಿಲ್ಲ. ಸುರೇಶ್ ರೈನಾ (4) ಔಟಾದಾಗ ಭಾರತದ ಮೊತ್ತ 5 ವಿಕೆಟ್‌ಗೆ 77. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದ ಕಾರಣ ಒತ್ತಡಕ್ಕೆ ಒಳಗಾದ ನಾಯಕ ದೋನಿ (38 ಎಸೆತಗಳಲ್ಲಿ 29) ಹಾಗೂ ರವೀಂದ್ರ ಜಡೇಜ (19) ಮರುಹೋರಾಟ ನಡೆಸುವ ಸ್ಥಿತಿಯಲ್ಲಿರಲಿಲ್ಲ.ಡೇವಿಡ್ ಹಸ್ಸಿ ಅಬ್ಬರ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸೀಸ್ ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಆರ್. ವಿನಯ್ ಕುಮಾರ್ (21ಕ್ಕೆ 2) ಪ್ರಭಾವಿ ಬೌಲಿಂಗ್ ಇದಕ್ಕೆ ಕಾರಣ. ಡೇವಿಡ್ ವಾರ್ನರ್ ಮತ್ತು ರಿಕಿ ಪಾಂಟಿಂಗ್ ಅವರು ವಿನಯ್‌ಗೆ ವಿಕೆಟ್ ಒಪ್ಪಿಸಿದರು. ಕ್ಲಾರ್ಕ್ ಬಳಗ 11 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 35 ರನ್ ಗಳಿಸಿದ್ದ ಸಂದರ್ಭ ಮಳೆ ಸುರಿಯಿತು. ಪಂದ್ಯ ಮತ್ತೆ ಆರಂಭವಾದಾಗ ಆಸೀಸ್ ಬ್ಯಾಟ್ಸ್‌ಮನ್‌ಗಳು ರನ್ ಮಳೆ ಸುರಿಸಿದರು. ಆ ಬಳಿಕದ 21 ಓವರ್‌ಗಳಲ್ಲಿ 181 ರನ್ ಹರಿದುಬಂತು.ವೇಡ್ ಚೊಚ್ಚಲ ಏಕದಿನ ಪಂದ್ಯದಲ್ಲೇ ಅರ್ಧಶತಕದ ಮೂಲಕ ಮಿಂಚಿದರು. ಅನುಭವಿ ಮೈಕ್ ಹಸ್ಸಿ (45, 32 ಎಸೆತ, 4 ಬೌಂ) ನಿರಾಸೆ ಉಂಟುಮಾಡಲಿಲ್ಲ. ಕೊನೆಯಲ್ಲಿ ಡೇವಿಡ್ ಹಸ್ಸಿ ಅಬ್ಬರಿಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು. ಅವರು ಡೇನಿಯನ್ ಕ್ರಿಸ್ಟಿಯನ್ ಜೊತೆ ಮುರಿಯದ ಆರನೇ ವಿಕೆಟ್‌ಗೆ 32 ಎಸೆತಗಳಲ್ಲಿ 62 ರನ್ ಸೇರಿಸಿದರು.

ಸ್ಕೋರ್ ವಿವರ:

ಆಸ್ಟ್ರೇಲಿಯಾ: 32 ಓವರ್‌ಗಳಲ್ಲಿ 5 ವಿಕೆಟ್‌ಗೆ 216

ಮ್ಯಾಥ್ಯೂ ವೇಡ್ ಬಿ ರಾಹುಲ್ ಶರ್ಮ  67

ಡೇವಿಡ್ ವಾರ್ನರ್ ಬಿ ವಿನಯ್ ಕುಮಾರ್  07

ರಿಕಿ ಪಾಂಟಿಂಗ್ ಸಿ ರೈನಾ ಬಿ ವಿನಯ್ ಕುಮಾರ್  02

ಮೈಕಲ್ ಕ್ಲಾರ್ಕ್ ಸಿ ರಾಹುಲ್ ಬಿ ರೋಹಿತ್ ಶರ್ಮ  10

ಮೈಕ್ ಹಸ್ಸಿ ಸಿ ಕೊಹ್ಲಿ ಬಿ ವಿನಯ್ ಕುಮಾರ್  45

ಡೇವಿಡ್ ಹಸ್ಸಿ ಔಟಾಗದೆ  61

ಡೇನಿಯಲ್ ಕ್ರಿಸ್ಟಿಯನ್ ಔಟಾಗದೆ  17

ಇತರೆ: (ಲೆಗ್ ಬೈ-2, ವೈಡ್-4, ನೋಬಾಲ್-2)  08

ವಿಕೆಟ್ ಪತನ: 1-15 (ವಾರ್ನರ್; 5.1), 2-19 (ಪಾಂಟಿಂಗ್; 7.5), 3-49 (ಕ್ಲಾರ್ಕ್; 14.4), 4-122 (ವೇಡ್; 22.6), 5-154 (ಮೈಕ್ ಹಸ್ಸಿ; 26.1)

ಬೌಲಿಂಗ್: ಪ್ರವೀಣ್ ಕುಮಾರ್ 7-0-35-0, ಆರ್. ವಿನಯ್ ಕುಮಾರ್ 7-0-21-3, ವಿರಾಟ್ ಕೊಹ್ಲಿ 1-0-4-0, ಸುರೇಶ್ ರೈನಾ 1-0-4-0, ಆರ್. ಅಶ್ವಿನ್ 5-0-48-0, ರೋಹಿತ್ ಶರ್ಮ 2-0-17-1, ರಾಹುಲ್ ಶರ್ಮ 6.2-0-44-1, ರವೀಂದ್ರ ಜಡೇಜ 2.4-0-41-0

ಭಾರತ: 29.4 ಓವರ್‌ಗಳಲ್ಲಿ 151

ಗೌತಮ್ ಗಂಭೀರ್ ಸಿ ವೇಡ್ ಬಿ ಮಿಷೆಲ್ ಸ್ಟಾರ್ಕ್  05

ತೆಂಡೂಲ್ಕರ್ ಸಿ ಪಾಂಟಿಂಗ್ ಬಿ ಮಿಷೆಲ್ ಸ್ಟಾರ್ಕ್  02

ವಿರಾಟ್ ಕೊಹ್ಲಿ ಸಿ ಪಾಂಟಿಂಗ್ ಬಿ ಕ್ಲಿಂಟ್ ಮೆಕೇ  31

ರೋಹಿತ್ ಶರ್ಮ ಸಿ ವೇಡ್ ಬಿ ಕ್ಲಿಂಟ್ ಮೆಕೇ  21

ರೈನಾ ಸಿ ಡೇವಿಡ್ ಹಸ್ಸಿ ಬಿ ಡೇನಿಯಲ್ ಕ್ರಿಸ್ಟಿಯನ್  04

ಮಹೇಂದ್ರ ಸಿಂಗ್ ದೋನಿ ಸಿ ವಾರ್ನರ್ ಬಿ ಕ್ಸೇವಿಯರ್ ಡೊಹರ್ಟಿ  29

ರವೀಂದ್ರ ಜಡೇಜ ಸಿ ಮೈಕ್ ಹಸ್ಸಿ ಬಿ ಕ್ಲಿಂಟ್ ಮೆಕೇ  19

ಆರ್. ಅಶ್ವಿನ್ ರನೌಟ್  05

ರಾಹುಲ್ ಶರ್ಮ ಬಿ ಕ್ಸೇವಿಯರ್ ಡೊಹರ್ಟಿ  01

ಪ್ರವೀಣ್ ಕುಮಾರ್ ಸಿ ಹ್ಯಾರಿಸ್ ಬಿ ಕ್ಲಿಂಟ್ ಮೆಕೇ  15

ಆರ್. ವಿನಯ್ ಕುಮಾರ್ ಔಟಾಗದೆ  12

ಇತರೆ: (ಲೆಗ್ ಬೈ-2, ವೈಡ್-5)  07

ವಿಕೆಟ್ ಪತನ: 1-9 (ಸಚಿನ್; 1.5), 2-13 (ಗಂಭೀರ್; 3.3), 3-64 (ಕೊಹ್ಲಿ; 11.2), 4-65 (ರೋಹಿತ್; 11.4), 5-77 (ರೈನಾ; 14.2), 6-114 (ಜಡೇಜ; 22.3), 7-120 (ಅಶ್ವಿನ್; 23.1), 8-123 (ರಾಹುಲ್; 23.5), 9-128 (ದೋನಿ; 25.2), 10- 151 (ಪ್ರವೀಣ್; 29.4)

ಬೌಲಿಂಗ್: ರ‌್ಯಾನ್ ಹ್ಯಾರಿಸ್ 5-0-28-0, ಮಿಷೆಲ್ ಸ್ಟಾರ್ಕ್ 6-0-33-2, ಡೇನಿಯಲ್ ಕ್ರಿಸ್ಟಿಯನ್ 5-0-21-1, ಕ್ಲಿಂಟ್ ಮೆಕೇ 4.4-0-20-4, ಕ್ಸೇವಿಯರ್ ಡೊಹರ್ಟಿ 7-0-36-2, ಮೈಕಲ್ ಕ್ಲಾರ್ಕ್ 2-0-11-0

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 65 ರನ್ ಗೆಲುವು

ಪಂದ್ಯಶ್ರೇಷ್ಠ: ಮ್ಯಾಥ್ಯೂ ವೇಡ್

ಮುಂದಿನ ಪಂದ್ಯ: ಫೆ. 8; ಭಾರತ- ಶ್ರೀಲಂಕಾ (ಪರ್ತ್)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry