ಕ್ರಿಕೆಟ್: ಮುಂಬೈ ಇಂಡಿಯನ್ಸ್‌ಗೆ ಬ್ಲಿಜಾರ್ಡ್ ಅರ್ಧ ಶತಕದ ಆಸರೆ

7

ಕ್ರಿಕೆಟ್: ಮುಂಬೈ ಇಂಡಿಯನ್ಸ್‌ಗೆ ಬ್ಲಿಜಾರ್ಡ್ ಅರ್ಧ ಶತಕದ ಆಸರೆ

Published:
Updated:

ಚೆನ್ನೈ (ಪಿಟಿಐ): ಸಾಮರ್ಸೆಟ್ ಬೌಲರ್‌ಗಳ ಆರ್ಭಟದ ನಡುವೆ ಕುಂಟುತ್ತಲೇ ಸಾಗಿದ ಮುಂಬೈ ಇಂಡಿಯನ್ಸ್ ತಂಡದವರು ಕಷ್ಟಪಟ್ಟು ನೂರೈವತ್ತಕ್ಕೂ ಹೆಚ್ಚು ರನ್ ಗಳಿಸಿ ನಿಟ್ಟುಸಿರು ಬಿಟ್ಟರು.ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಭಜನ್ ಸಿಂಗ್ ನಾಯಕತ್ವದ ತಂಡದ್ದು ಕಷ್ಟದ ಕಥೆ. ಪಂದ್ಯ ಆರಂಭಕ್ಕೆ ಮುನ್ನವೇ ಸಚಿನ್ ತೆಂಡೂಲ್ಕರ್ ಜೊತೆಗೆ ಪಿಚ್ ಪರಿಶೀಲಿಸಿದ್ದ ಹರಭಜನ್ ನಾಣ್ಯ ಚಿಮ್ಮುವ ಅದೃಷ್ಟದಾಟದಲ್ಲಿ ಯಶ ಸಿಕ್ಕಿತು. ಎದುರಾಳಿಗೆ ಗುರಿಯನ್ನು ನೀಡಿ, ಬಿಗುವಿನ ಬೌಲಿಂಗ್ ದಾಳಿಯಿಂದ ಗೆಲುವು ಪಡೆಯುವುದು ಯೋಜನೆ ಹೊಂದಿದ್ದರು ಎನ್ನುವುದನ್ನು ಅವರ ತೆಗೆದುಕೊಂಡ ತೀರ್ಮಾನದಿಂದಲೇ ಸ್ಪಷ್ಟ.ಭಾರಿ ದೊಡ್ಡ ಮೊತ್ತ ಗಳಿಸುವ ಉತ್ಸಾಹವಿದ್ದರೂ ಅದಕ್ಕೆ ತಕ್ಕ ಆಟವನ್ನು ಮಾತ್ರ ಮುಂಬೈನವರು ಅಂಗಳದಲ್ಲಿ ಆಡಲಿಲ್ಲ. ಆದ್ದರಿಂದ ಇಪ್ಪತ್ತು ಓವರುಗಳಲ್ಲಿ ಹರಿದು ಬಂದಿದ್ದು 160 ರನ್ ಮಾತ್ರ. ಅದು ಐದು ವಿಕೆಟ್ ಕಳೆದುಕೊಂಡಿತು. ಇಂಡಿಯನ್ಸ್ ನೀಡಿದ ಸವಾಲಿಗೆ ತಿರುಗೇಟು ನೀಡುವ ಛಲದೊಂದಿಗೆ ಇನಿಂಗ್ಸ್ ಆರಂಭಿಸಿದ ಸಾಮರ್ಸೆಟ್ ತಂಡವು ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 7ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತ್ತು.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಇನಿಂಗ್ಸ್ ಆರಂಭ ಅಷ್ಟೇನು ಉತ್ಸಾಹದಾಯಕ ಎನಿಸಲಿಲ್ಲ. ಜೋಸ್ ಬಟ್ಲರ್ ಎಸೆತದಲ್ಲಿ ಸರುಲ್ ಕನ್ವರ್ ವಿಕೆಟ್ ಪತನವು `ಭಜ್ಜಿ~ ಬಳಗಕ್ಕಾದ ಮೊದಲ ಆಘಾತ. ಆದರೆ ಈ ಪೆಟ್ಟು ಇಂಡಿಯನ್ಸ್ ಒತ್ತಡಕ್ಕೆ ಸಿಲುಕುವಂತೇನು ಮಾಡಿತು.ಆದರೂ ಚಡಪಡಿಸಿಕೊಂಡು ಚೇತರಿಸಿಕೊಳ್ಳಲು ಮುಂಬೈ ಯತ್ನಿಸಿತು. ಆರಂಭಿಕ ಆಟಗಾರ ಐಡೆನ್ ಬ್ಲಿಜಾರ್ಡ್ (54; 39 ಎ., 5 ಬೌಂಡರಿ, 3 ಸಿಕ್ಸರ್) ಹಾಗೂ ಅಂಬಟಿ ರಾಯುಡು ನಡುವಣ ಎರಡನೇ ವಿಕೆಟ್ ಜೊತೆಯಾಟ 43 ರನ್‌ಗಳಿಗೆ ವಿಸ್ತರಿಸಿತು. ಈ ಹಂತದಲ್ಲಿ ರಾಯುಡುಗೆ ಆ್ಯಡಮ್ ಡಿಬ್ಲೆ ಪೆವಿಲಿಯನ್ ದಾರಿ ತೋರಿಸಿದರು.ಒಂದು ಕೊನೆಯಲ್ಲಿ ಬ್ಲಿಜಾರ್ಡ್ ಉತ್ಸಾಹದಿಂದ ರನ್ ಗಳಿಸುತ್ತಿದ್ದರೂ ಇನ್ನೊಂದು ಕೊನೆಯಲ್ಲಿ ಅವರಿಗೆ ಜೊತೆಯಾಗಿ ನಿಲ್ಲುವಲ್ಲಿ ಜೇಮ್ಸ ಫ್ರಾಂಕ್ಲಿನ್ ಕೂಡ ವಿಫಲರಾದರು. ಒಂಬತ್ತು ಎಸೆತಗಳನ್ನು ಕಷ್ಟಪಟ್ಟೇ ಎದುರಿಸಿದ ಅವರು ವಾನ್‌ಡೇರ್ ಮೇರ್ವ್ ಬೌಲಿಂಗ್‌ನಲ್ಲಿ ರಕ್ಷಣಾತ್ಮಕವಾಗಿ ಆಡುವ ಯತ್ನದಲ್ಲಿಯೇ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

 

ಇಂಥ ಸಂಕಷ್ಟದ ನಡುವೆಯೂ ಬ್ಲಿಜಾರ್ಡ್ ತಾವೆದುರಿಸಿದ 34ನೇ ಎಸೆತದಲ್ಲಿ ಅರ್ಧ ಶತಕ ಪೂರೈಸಿದರು. ಆದರೆ ಆನಂತರ ಅವರಾಟವೂ ನಡೆಯಲಿಲ್ಲ. ಸಾಮರ್ಸೆಟ್ ತಂಡದಲ್ಲಿರುವ ಭಾರತೀಯ ಆಟಗಾರ ಮುರಳಿ ಕಾರ್ತಿಕ್ ಸ್ಪಿನ್ ಮೋಡಿಯಲ್ಲಿ ಅವರು ದಂಗಾಗಿ ನಿಂತರು. ಸ್ಲಾಗ್ ಸ್ವೀಪ್ ಯತ್ನ ಕೈಕೊಟ್ಟಿತ್ತು.ಬ್ಯಾಟ್ ವಂಚಿಸಿದ ಚೆಂಡು ಸ್ಟಂಪ್‌ಗೆ ಅಪ್ಪಳಿಸಿತು. ಆ ಹೊತ್ತಿಗೆ ಇಂಡಿಯನ್ಸ್ ಒಟ್ಟು ಮೊತ್ತ 92 ರನ್.

ಕೀರನ್ ಪೊಲಾರ್ಡ್ ಹಾಗೂ ಸೂರ್ಯಕುಮಾರ್ ಯಾದವ್ ನಡುವಣ ಜೊತೆಯಾಟ ಬೆಳೆಯುವುದೆನ್ನುವ ಆಸೆಯೂ ಬಹುಬೇಗ ಕರಗಿತು. ಪೊಲಾರ್ಡ್ ಎರಡು ಬೌಂಡರಿಗಳಿದ್ದ 24 ರನ್ ಗಳಿಸಿ ನಿರ್ಗಮಿಸಿದರು.ಸಮರ್ಸೆಟ್ ತಂಡದ ನಾಯಕ ಅಲ್ಫಾನ್ಸೊ ಥಾಮಸ್ ಎಸೆತದಲ್ಲಿ ಅವರು ಬೌಲ್ಡ್ ಆದರು. ಆನಂತರ ಯಾದವ್ (23; 19 ಎ., 3 ಬೌಂಡರಿ) ಹಾಗೂ ರಾಜಗೋಪಾಲ್ ಸತೀಶ್ (25; 12 ಎ., 2 ಬೌಂಡರಿ, 1 ಸಿಕ್ಸರ್) ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ ತಮ್ಮ ತಂಡವನ್ನು ನೂರೈವತ್ತು ರನ್‌ಗಳ ಗಡಿ ದಾಟಿಸಿದರು.    

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry