ಸೋಮವಾರ, ಅಕ್ಟೋಬರ್ 21, 2019
22 °C

ಕ್ರಿಕೆಟ್: ರೋಹಿತ್‌ಗೆ ಅಗ್ನಿಪರೀಕ್ಷೆ ಕಾದು ಕುಳಿತಿದೆ

Published:
Updated:

ಸಿಡ್ನಿ (ಪಿಟಿಐ): ರೋಹಿತ್ ಶರ್ಮ ಪರ್ತ್ ಟೆಸ್ಟ್ ನಲ್ಲಿ ಆಡುವ ಅವಕಾಶ ಪಡೆದರೆ ಪದಾರ್ಪಣೆ ಪಂದ್ಯದಲ್ಲೇ `ಅಗ್ನಿಪರೀಕ್ಷೆ~ ಎದುರಿಸಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಮಿಕಿ ಆರ್ಥರ್ ನುಡಿದಿದ್ದಾರೆ. ವೇಗದ ಬೌಲಿಂಗ್‌ಗೆ ನೆರವು ನೀಡುವ ಪಿಚ್‌ನಲ್ಲಿ ಆಡುವುದು   ರೋಹಿತ್‌ಗೆ ಅಷ್ಟು ಸುಲಭವಲ್ಲ ಎಂಬುದು ಅವರ ಹೇಳಿಕೆ.ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರೋಹಿತ್ ಟೆಸ್ಟ್ ಪದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಸ್ಥಾನಕ್ಕೆ ಕುತ್ತುಂಟಾಗುವ ಸಾಧ್ಯತೆಯಿದೆ. ಪರ್ತ್‌ನಲ್ಲಿ ನಡೆಯುವ ಮೂರನೇ ಟೆಸ್ಟ್‌ನಲ್ಲಿ ಕೊಹ್ಲಿ ಬದಲು ರೋಹಿತ್ ಕಣಕ್ಕಿಳಿಯಬಹುದು.ನಾಲ್ಕು ಪಂದ್ಯಗಳ ಸರಣಿಯಲ್ಲಿ 0-2 ರಲ್ಲಿ ಹಿನ್ನಡೆ ಅನುಭವಿಸಿರುವ ಭಾರತಕ್ಕೆ ಮೂರನೇ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಡ್ರಾ ಅಥವಾ ಸೋಲು ಅನುಭವಿಸಿದರೆ ಸರಣಿಯನ್ನು ಕಳೆದುಕೊಳ್ಳಲಿದೆ. ಈ ಕಾರಣ ಮಹೇಂದ್ರ ಸಿಂಗ್ ದೋನಿ ತಂಡದಲ್ಲಿ ಕೆಲವು ಬದಲಾವಣೆಗೆ ಮುಂದಾಗುವುದು ಖಚಿತ. ಕೊಹ್ಲಿ ಬದಲು ರೋಹಿತ್‌ಗೆ ಅವಕಾಶ ನೀಡುವುದು ಅದರಲ್ಲಿ ಮುಖ್ಯವಾದುದು.ಆದರೆ ಆಸೀಸ್ ಕೋಚ್ ಆರ್ಥರ್ ಪ್ರಕಾರ, ರೋಹಿತ್ ಪದಾರ್ಪಣೆ ಪಂದ್ಯದಲ್ಲೇ ಪರದಾಟ ನಡೆಸುವ ಸಾಧ್ಯತೆಯಿದೆ. ವೇಗದ ಬೌಲಿಂಗ್‌ಗೆ ನೆರವು ನೀಡುವ ವಾಕಾ ಕ್ರೀಡಾಂಗಣದ ಪಿಚ್‌ನಲ್ಲಿ ರೋಹಿತ್ ಯಶಸ್ವಿಯಾಗುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಅದೇ ರೀತಿ ಈ ಬ್ಯಾಟ್ಸ್‌ಮನ್‌ನ `ಬ್ಯಾಕ್‌ಫುಟ್~ ಆಟ ಟೆಸ್ಟ್ ಪಂದ್ಯದ ಬೇಡಿಕೆಗೆ ತಕ್ಕಂತೆ ಇಲ್ಲ ಎಂದು ನುಡಿದಿದ್ದಾರೆ.`ಬೌನ್ಸ್‌ಗೆ ನೆರವು ನೀಡುವ ಪಿಚ್‌ಗಳಲ್ಲಿ ರೋಹಿತ್‌ಗೆ ಸಾಕಷ್ಟು ಸವಾಲುಗಳು ಎದುರಾಗಲಿವೆ. ವಾಕಾ ಕ್ರೀಡಾಂಗಣದಲ್ಲಿ ಅಂತಹ ಪಿಚ್ ಇದೆ. ರೋಹಿತ್ ಬ್ಯಾಕ್‌ಫುಟ್ ಆಟದಲ್ಲಿ ಕೆಲವು ಲೋಪಗಳಿವೆ. ಟಿವಿಯಲ್ಲಿ ಹಲವು ಸಲ ಅದನ್ನು ಗಮನಿಸಿದ್ದೇನೆ. ಆದ್ದರಿಂದ ಈ ವಿಭಾಗದಲ್ಲಿ ಅವರು ಸುಧಾರಣೆ ಕಂಡುಕೊಳ್ಳುವುದು ಅಗತ್ಯ~ ಎಂದು ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಇಯಾನ್ ಚಾಪೆಲ್ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ರೋಹಿತ್ ಬಹಳ ಹಿಂದೆಯೇ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಬೇಕಿತ್ತು ಎಂದು ಹೇಳಿದ್ದಾರೆ.`ರೋಹಿತ್ ಕಳೆದ ಕೆಲ ವಾರಗಳಿಂದ ಯಾವುದೇ ಪಂದ್ಯಗಳನ್ನು ಆಡಿಲ್ಲ. ಆದ್ದರಿಂದ ಪರ್ತ್ ಟೆಸ್ಟ್‌ಗೆ ಅವರನ್ನು ಕಣಕ್ಕಿಳಿಸುವುದು ಸರಿಯಾದ ನಿರ್ಧಾರವಲ್ಲ. ಏಕೆಂದರೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟ. ಒಬ್ಬ ಅನುಭವಿ ಬ್ಯಾಟ್ಸ್ ಮನ್ ಪರ್ತ್‌ನಲ್ಲಿ ಆಡಲು ಪರದಾಟ ನಡೆಸುತ್ತಾನೆ. ಆದ್ದರಿಂದ ಅನನುಭವಿಗೆ ಇಲ್ಲಿ ಕಠಿಣ ಸವಾಲು ಎದುರಾಗಲಿದೆ~ ಎಂಬುದು ಚಾಪೆಲ್ ಹೇಳಿಕೆ.ಮೂರನೇ ಟೆಸ್ಟ್‌ಗೆ ಮುನ್ನ ರೋಹಿರ್ತ್ ಕ್ಲಬ್ ಕ್ರಿಕೆಟ್ ಪಂದ್ಯಗಳಲ್ಲಿ ಆಡುವುದು ಒಳ್ಳೆಯದು ಎಂದ ಚಾಪೆಲ್, `ಇದರಿಂದ ಅವರಿಗೆ ಪರ್ತ್‌ನ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಧ್ಯ~ ಎಂದು ತಿಳಿಸಿದ್ದಾರೆ. ಮೊದಲ ಎರಡು ಟೆಸ್ಟ್‌ಗಳಲ್ಲಿ ರೋಹಿತ್ ಬದಲು ಕೊಹ್ಲಿಗೆ ಅವಕಾಶ ನೀಡುವ ಮೂಲಕ ಭಾರತ ತಂಡದ ಆಡಳಿತ ತಪ್ಪು ಮಾಡಿದೆ ಎಂಬ ಅಭಿಪ್ರಾಯವನ್ನು ಚಾಪೆಲ್ ವ್ಯಕ್ತಪಡಿಸಿದ್ದಾರೆ.ಕ್ಯಾನ್‌ಬೆರಾದಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ರೋಹಿತ್ ಪ್ರಭಾವಿ ಪ್ರದರ್ಶನ ನೀಡಿದ್ದರು. ಒಂದು ಪಂದ್ಯದಲ್ಲಿ ಅಜೇಯ 56 ರನ್ ಗಳಿಸಿದ್ದರೆ, ಇನ್ನೊಂದು ಪಂದ್ಯದಲ್ಲಿ ಕ್ರಮವಾಗಿ 47 ಹಾಗೂ ಅಜೇಯ 38 ರನ್ ಪೇರಿಸಿದ್ದರು. ಟೆಸ್ಟ್ ಪದಾರ್ಪಣೆಗೆ ತಾನು ಸಿದ್ಧ ಎಂದು ರೋಹಿತ್ ಹೇಳಿದ್ದಾರೆ.`ಸರಿಯಾದ ಸಿದ್ಧತೆ ಇಲ್ಲದೆ ಟೆಸ್ಟ್ ಪದಾರ್ಪಣೆ ಮಾಡಲು ಯಾರೂ ಬಯಸುವುದಿಲ್ಲ. ಕೋಚ್ ಡಂಕನ್ ಫ್ಲೆಚರ್, ಟ್ರೆವರ್ ಪೆನಿ ಹಾಗೂ ಕೆಲವು ಹಿರಿಯ ಆಟಗಾರರು ಸೂಕ್ತ ಸಲಹೆ ನೀಡುತ್ತಿದ್ದಾರೆ. ಟೆಸ್ಟ್ ಪಂದ್ಯಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತದೆ ಎಂಬುದು ನನಗೆ ತಿಳಿದಿದೆ. ಅವಕಾಶ ಸಿಕ್ಕಾಗ ಟೆಸ್ಟ್ ಆಡಲು ಸಜ್ಜಾಗಿದ್ದೇನೆ~ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.ಕೆಲವು ವಿಭಾಗಗಳಲ್ಲಿ ಸುಧಾರಣೆ ಕಂಡುಕೊಳ್ಳಲು ಇನ್ನೂ ಅವಕಾಶವಿದೆ ಎಂಬುದನ್ನು ರೋಹಿತ್ ಒಪ್ಪಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್‌ಗಳ ನಾಲ್ಕು ಇನಿಂಗ್ಸ್‌ಗಳಲ್ಲಿ 10.75ರ ಸರಾಸರಿಯಲ್ಲಿ ಒಟ್ಟು 43 ರನ್ ಪೇರಿಸಲಷ್ಟೇ ಯಶಸ್ವಿಯಾಗಿದ್ದಾರೆ. ಈ ಕಾರಣ ಮೂರನೇ ಟೆಸ್ಟ್‌ನಲ್ಲಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ತೀರಾ ಕಡಿಮೆ.

Post Comments (+)