ಕ್ರಿಕೆಟ್: ವಿನಯ್ ಕುಮಾರ್ ಯಾರ ಪಾಲಾಗುತ್ತಾರೆ?

7

ಕ್ರಿಕೆಟ್: ವಿನಯ್ ಕುಮಾರ್ ಯಾರ ಪಾಲಾಗುತ್ತಾರೆ?

Published:
Updated:

ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಕರ್ನಾಟಕದ ವೇಗದ ಬೌಲರ್ ಆರ್.ವಿನಯ್ ಕುಮಾರ್ ಉದ್ಯಾನ ನಗರಿಯಲ್ಲಿ ಶನಿವಾರ ನಡೆಯಲಿರುವ ಐಪಿಎಲ್ ಹರಾಜಿನಲ್ಲಿ ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.ಐಪಿಎಲ್‌ನ ಮೊದಲ ಮೂರು ಅವತರಣಿಕೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ `ದಾವಣಗೆರೆ ಎಕ್ಸ್‌ಪ್ರೆಸ್~ ಖ್ಯಾತಿಯ ವಿನಯ್ ನಾಲ್ಕನೇ ಅವತರಣಿಕೆಯಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಪ್ರತಿನಿಧಿಸಿದ್ದರು.ಆದರೆ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಒಳಗಾಗಿರುವ ಕೊಚ್ಚಿ  ತಂಡವನ್ನು ಬಿಸಿಸಿಐ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಆ ತಂಡದಲ್ಲಿದ್ದ ಆಟಗಾರರು ಮತ್ತೆ ಹರಾಜಿಗೆ ಒಳಗಾಗಲಿದ್ದಾರೆ. ಆದರೆ ವಿನಯ್ ಅವರನ್ನು ಮತ್ತೆ ತನ್ನತ್ತ ಸೆಳೆಯಲು ರಾಯಲ್ ಚಾಲೆಂಜರ್ಸ್ ಪ್ರಯುತ್ನಿಸುತ್ತಾ ಕಾದು ನೋಡಬೇಕು.`ದೊಡ್ಡ ಮೊತ್ತ ನೀಡಿ ಖರೀದಿಸಲು ನಮಗೆ ಸಾಧ್ಯವಿಲ್ಲ. ಆದರೆ ವಿನಯ್ ಹಾಗೂ ರವೀಂದ್ರ ಜಡೇಜಾ ನಮ್ಮ ಮನಸ್ಸಿನಲ್ಲಿರುವುದು ನಿಜ. ಈ ಬಗ್ಗೆ ನಾವು ಸಮಾಲೋಚನೆ ನಡೆಸುತ್ತಿದ್ದೇವೆ~ ಎಂದು ಆರ್‌ಸಿಬಿ ತಂಡದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.ಈಗಾಗಲೇ ಫ್ರಾಂಚೈಸಿಗಳ ಮಾಲೀಕರು ಹಾಗೂ ಆ ತಂಡದ ಕೆಲ ಕೋಚ್‌ಗಳು ಉದ್ಯಾನ ನಗರಿಗೆ ಆಗಮಿಸಿದ್ದು ಯಾರನ್ನು ಖರೀದಿಸಬೇಕು ಎಂಬ ತಂತ್ರ ಹೆಣೆಯುತ್ತಿದ್ದಾರೆ.ಹರಾಜು ಪಟ್ಟಿಯಲ್ಲಿರುವ 11 ದೇಶಗಳ 144 ಮಂದಿ ಆಟಗಾರರಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಹೆಚ್ಚು ಬೇಡಿಕೆ ಇದೆ. ಅವರು ಬಿಡ್‌ನಲ್ಲಿ ಒಂದು ಮಿಲಿಯನ್ ಡಾಲರ್ ದಾಟುವ ನಿರೀಕ್ಷೆ ಇದೆ. ಅವರಲ್ಲದೇ, ಎಸ್.ಶ್ರೀಶಾಂತ್, ವಿ.ವಿ.ಎಸ್.ಲಕ್ಷ್ಮಣ್, ಆರ್.ಪಿ.ಸಿಂಗ್, ಪಾರ್ಥಿವ್ ಪಟೇಲ್, ರಮೇಶ್ ಪೋವಾರ್ ಹಾಗೂ ವಿ.ಆರ್.ವಿ.ಸಿಂಗ್ ಹರಾಜಿಗೆ ಒಳಗಾಗಲಿರುವ ಭಾರತದ ಇತರ ಆಟಗಾರರು. ವಿದೇಶಿ ಆಟಗಾರರಲ್ಲಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್, ಶ್ರೀಲಂಕಾದ ಮಾಹೇಲ ಜಯವರ್ಧನೆ, ಆಸ್ಟ್ರೇಲಿಯಾದ ಪೀಟರ್ ಸಿಡ್ಲ್ ಅವರಿಗೂ ಹೆಚ್ಚು ಬೇಡಿಕೆ ಇದೆ. ಆದರೆ ಯಾವುದೇ ತಂಡದ ಬಳಿ ಈಗ ಹೆಚ್ಚು ಹಣ ಉಳಿದಿಲ್ಲ. ಒಂದು ತಂಡಕ್ಕೆ ಹೆಚ್ಚುವರಿ ಎರಡು ಮಿಲಿಯನ್ ಡಾಲರ್ ಎಂದು ಐಪಿಎಲ್ ಆಡಳಿತ ನಿಗದಿಪಡಿಸಿರುವ ಮೊತ್ತದೊಳಗೆ ಮಾತ್ರ ಖರೀದಿ ಮಾಡಬೇಕು.ಈಗಾಗಲೇ ಕ್ರಿಸ್ ಗೇಲ್ ಅವರನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಕೂಡ ದೊಡ್ಡ ಮೊತ್ತಕ್ಕೆ ಬಿಡ್ ಮಾಡುವ ಸಾಮರ್ಥ್ಯ ಹೊಂದಿಲ್ಲ. ಈ ತಂಡದ ಬಳಿ ಈಗ ಕೇವಲ 1.44 ಮಿಲಿಯನ್ ಡಾಲರ್ ಇದೆ. ಈ ತಂಡ ಇಬ್ಬರು ವಿದೇಶಿ ಆಟಗಾರರನ್ನು ಸೇರಿದಂತೆ 9 ಮಂದಿಯನ್ನು ಖರೀದಿಸಬಹುದು.ಆದರೆ ಬಹುತೇಕ ವಿದೇಶಿ ಆಟಗಾರರು ಹರಾಜಾಗದೇ ಉಳಿಯುವ ಸಾಧ್ಯತೆ ಇದೆ.  ಏಕೆಂದರೆ 136 ವಿದೇಶಿ ಆಟಗಾರರು 29 ಸ್ಥಾನಗಳಿಗೆ ಪೈಪೋಟಿ ನಡೆಸಬೇಕಾಗಿದೆ.ಆಸ್ಟ್ರೇಲಿಯಾ (32), ದಕ್ಷಿಣ ಆಫ್ರಿಕಾ (30), ಶ್ರೀಲಂಕಾ (10), ವೆಸ್ಟ್‌ಇಂಡೀಸ್ (19), ಇಂಗ್ಲೆಂಡ್ (15), ನ್ಯೂಜಿಲೆಂಡ್ (10), ಭಾರತ (8), ಜಿಂಬಾಬ್ವೆ (7), ಐರ್ಲೆಂಡ್ (2), ಬಾಂಗ್ಲಾದೇಶ (1),   ಹಾಲೆಂಡ್‌ನ (1) ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.ಐಟಿಸಿ ರಾಯಲ್ ಗಾರ್ಡೇನಿಯಾದಲ್ಲಿ ಈ ಹರಾಜು ಜರುಗಲಿದ್ದು, ಇಂಗ್ಲೆಂಡ್‌ನ ರಿಚರ್ಡ್ ಮೆಡ್ಲೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಐಪಿಎಲ್ ಟೂರ್ನಿಯ ಐದನೇ ಆವೃತ್ತಿ ಏಪ್ರಿಲ್ 4ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ಈ ಬಾರಿ 9 ತಂಡಗಳು ಮಾತ್ರ ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry