ಶನಿವಾರ, ಡಿಸೆಂಬರ್ 7, 2019
16 °C

ಕ್ರಿಕೆಟ್: ವಿರಾಟ್ ಕೊಹ್ಲಿಗೆ ಚೊಚ್ಚಲ ಟೆಸ್ಟ್ ಶತಕದ ಸಂಭ್ರಮ

Published:
Updated:
ಕ್ರಿಕೆಟ್: ವಿರಾಟ್ ಕೊಹ್ಲಿಗೆ ಚೊಚ್ಚಲ ಟೆಸ್ಟ್ ಶತಕದ ಸಂಭ್ರಮ

ಅಡಿಲೇಡ್: ಗಣರಾಜ್ಯೋತ್ಸವ ದಿನ ವಿರಾಟ್ ಕೊಹ್ಲಿ ಚೊಚ್ಚಲ ಟೆಸ್ಟ್ ಶತಕದ ಮೂಲಕ ಸಂಭ್ರಮಿಸಿದರೆ, `ಆಸ್ಟ್ರೇಲಿಯಾ ಡೇ~ ದಿನ ಪೀಟರ್ ಸಿಡ್ಲ್ ಐದು ವಿಕೆಟ್ ಪಡೆದು ಮಿಂಚಿದರು. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದ ಗೌರವ ಇವರಿಬ್ಬರಿಗೆ ಸಲ್ಲಬೇಕು.ಕೊಹ್ಲಿ (116, 213 ಎಸೆತ, 11 ಬೌಂ, 1 ಸಿಕ್ಸರ್) ಸೊಗಸಾದ ಶತಕದ ಮೂಲಕ ಭಾರತಕ್ಕೆ ಆಸರೆಯಾದರು. ಆದರೂ ಆಸೀಸ್ ಪಂದ್ಯದ ಮೇಲಿನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ್ದು, ಸರಣಿ `ಕ್ಲೀನ್ ಸ್ವೀಪ್~ ಸಾಧನೆಯತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.ಅಡಿಲೇಡ್ ಓವಲ್‌ನಲ್ಲಿ ಮೂರನೇ ದಿನವಾದ ಗುರುವಾರ ಭಾರತ ಮೊದಲ ಇನಿಂಗ್ಸ್‌ನಲ್ಲಿ 95.1 ಓವರ್‌ಗಳಲ್ಲಿ 272 ರನ್‌ಗಳಿಗೆ ಆಲೌಟಾಗಿ 332 ರನ್‌ಗಳ ಹಿನ್ನಡೆ ಅನುಭವಿಸಿತು. ಫಾಲೋ ಆನ್ ನೀಡದೆ ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ತಂಡ ದಿನದಾಟದ ಅಂತ್ಯಕ್ಕೆ 14 ಓವರ್‌ಗಳಲ್ಲಿ 3 ವಿಕೆಟ್‌ಗೆ 50 ರನ್ ಗಳಿಸಿದೆ.ಇದೀಗ ಮೈಕಲ್ ಕ್ಲಾರ್ಕ್ ಬಳಗ ಒಟ್ಟು 382 ರನ್‌ಗಳ ಮುನ್ನಡೆಯಲ್ಲಿದೆ. ಇನ್ನೂ ಎರಡು ದಿನಗಳ ಆಟ ಬಾಕಿಯುಳಿದಿದ್ದು, ಭಾರತದ ಮೇಲೆ ಸೋಲಿನ ದಟ್ಟ ಕರಿನೆರಳು ಆವರಿಸಿದೆ. ಜಹೀರ್ ಖಾನ್ ಜೊತೆ ಭಾರತದ ಬೌಲಿಂಗ್ ಆರಂಭಿಸಿದ ಆರ್. ಅಶ್ವಿನ್ (24ಕ್ಕೆ 2) ಎರಡನೇ ಇನಿಂಗ್ಸ್‌ನ ಆರಂಭದಲ್ಲೇ ಎದುರಾಳಿಗಳಿಗೆ ಆಘಾತ ನೀಡಿದರು.ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಅಶ್ವಿನ್ ಪೆವಿಲಿಯನ್‌ಗಟ್ಟಿದರು. ಶಾನ್ ಮಾರ್ಷ್ ಅವರ ವಿಕೆಟ್ ಜಹೀರ್ ಪಡೆದರು. ಔಟಾಗದೆ ಉಳಿದಿರುವ ರಿಕಿ ಪಾಂಟಿಂಗ್ (1) ಮತ್ತು ಮೈಕಲ್ ಕ್ಲಾರ್ಕ್ (9) ಶುಕ್ರವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.ಕೊಹ್ಲಿ ವೈಭವ: ಪ್ರಸಕ್ತ ಪ್ರವಾಸದಲ್ಲಿ ಭಾರತದ ಪರ ಮೊದಲ ಶತಕ ಗಳಿಸಿದ ಕೊಹ್ಲಿಗೆ ಶಹಬ್ಬಾಸ್ ಹೇಳಲೇಬೇಕು. ಅವರ ಇನಿಂಗ್ಸ್ ಇಲ್ಲದೇ ಇರುತ್ತಿದ್ದಲ್ಲಿ ಪ್ರವಾಸಿ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಾಣುವ ಸಾಧ್ಯತೆಯಿತ್ತು. ಅತಿಯಾದ ಬಿಸಿಲು ಹಾಗೂ ಆಸೀಸ್ ವೇಗಿಗಳ ಮಾರಕ ದಾಳಿಯನ್ನು ಮೆಟ್ಟಿನಿಂತು ಶತಕ ಗಳಿಸಲು ಈ ಯುವ ಬ್ಯಾಟ್ಸ್‌ಮನ್ ತೋರಿದ ಛಲ ಅದ್ಭುತ.2 ವಿಕೆಟ್‌ಗೆ 61 ರನ್‌ಗಳಿಂದ ಆಟ ಆರಂಭಿಸಿದ ಭಾರತ ಸಚಿನ್ ತೆಂಡೂಲ್ಕರ್ (25), ಗೌತಮ್ ಗಂಭೀರ್ (34) ಮತ್ತು ವಿವಿಎಸ್ ಲಕ್ಷ್ಮಣ್ (18) ಅವರನ್ನು ಬೇಗನೇ ಕಳೆದುಕೊಂಡಿತು. ತಂಡದ ಮೊತ್ತ 111 ಆಗುವಷ್ಟರಲ್ಲಿ ಐದು ವಿಕೆಟ್‌ಗಳು ಉರುಳಿದ್ದವು. ಸಿಡ್ಲ್ (49ಕ್ಕೆ 5) ಪ್ರಭಾವಿ ದಾಳಿ ಇದಕ್ಕೆ ಕಾರಣ.ಇಂತಹ ಒತ್ತಡದ ಸಂದರ್ಭದಲ್ಲಿ ಜೊತೆಗೂಡಿದ ಕೊಹ್ಲಿ ಮತ್ತು ವೃದ್ಧಿಮಾನ್ ಸಹಾ (35) ಆರನೇ ವಿಕೆಟ್‌ಗೆ 38.3 ಓವರ್‌ಗಳಲ್ಲಿ 114 ರನ್ ಸೇರಿಸಿದರು. ಇದರಿಂದ ಭಾರತದ ಮೊತ್ತ 250ರ ಗಡಿ ದಾಟಿತು. ಒಂದು ಹಂತದಲ್ಲಿ 5 ವಿಕೆಟ್‌ಗೆ 225 ರನ್ ಗಳಿಸಿದ್ದ ಭಾರತ 47 ರನ್‌ಗಳಿಗೆ ಕೊನೆಯ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ ಭಾರತ ಭಾರಿ ಹಿನ್ನಡೆ ಅನುಭವಿಸಿದರೂ ಕೊಹ್ಲಿ ಇನಿಂಗ್ಸ್‌ನ್ನು ಕಡೆಗಣಿಸುವಂತಿಲ್ಲ. ಮೊದಲ ಎರಡು ಟೆಸ್ಟ್‌ಗಳಲ್ಲಿ ವಿಫಲರಾಗಿದ್ದ ದೆಹಲಿಯ               ಬ್ಯಾಟ್ಸ್‌ಮನ್ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಅಪಾಯ ಎದುರಿಸಿದ್ದರು.ಆದರೆ ಪರ್ತ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ (44 ಮತ್ತು 71) ಉತ್ತಮ ಆಟದ ಮೂಲಕ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಇದೀಗ ಶತಕದ ಮೂಲಕ ಮತ್ತೆ ಮಿಂಚಿದ್ದಾರೆ. ಮಾತ್ರವಲ್ಲ ತಂಡದ ಆಡಳಿತ ತಮ್ಮ ಮೇಲಿಟ್ಟ ಭರವಸೆಯನ್ನು ಈಡೇರಿಸಿದ್ದಾರೆ.ತಂಡದ ಇತರ ಬ್ಯಾಟ್ಸ್‌ಮನ್‌ಗಳಿಗಿಂತ ಭಿನ್ನ ಆಟವನ್ನು ಕೊಹ್ಲಿ ತೋರಿದರು. ಪ್ರತಿಯೊಂದು ಎಸೆತವನ್ನೂ ಆತ್ಮವಿಶ್ವಾಸದಿಂದ ಎದುರಿಸಿದರು. ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲ ಕ್ರೀಸ್‌ಗೆ ಭೇಟಿ ನೀಡಿ ಮರಳುತ್ತಿದ್ದರೆ, ಈ ಯುವ ಆಟಗಾರ ಕ್ರೀಸ್ ಬಳಿ ಭದ್ರವಾಗಿ ನಿಂತುಕೊಂಡರು. 99ರನ್ ಗಳಿಸಿದ್ದ ಸಂದರ್ಭ ಅವರು ರನೌಟ್‌ನಿಂದ ಅಲ್ಪದರಲ್ಲೇ ಪಾರಾಗಿದ್ದರು.ಇಂತಹ ಕೆಲವೊಂದು ಅಗ್ನಿಪರೀಕ್ಷೆ ಎದುರಿಸಿದ ಅವರು    ಸಿಡ್ಲ್ ಎಸೆತವನ್ನು ಕವರ್ಸ್‌ ಕಡೆ ತಳ್ಳಿ ಎರಡು ರನ್ ಗಳಿಸುವ ಮೂಲಕ ಶತಕ ಪೂರೈಸಿದರು. ಮಾತ್ರವಲ್ಲ ಮೇಲಕ್ಕೆ ನೆಗೆದು ಸಂಭ್ರಮಿಸಿದರು. ಸರಣಿಯಲ್ಲಿ ಇದುವರೆಗೆ ಮೆರೆದಾಡಿದ ಆಸೀಸ್ ಬೌಲರ್‌ಗಳಿಗೆ ಪ್ರತ್ಯುತ್ತರ ನೀಡಿದ ಸಂತಸ ಅವರ ಮುಖದಲ್ಲಿ ಎದ್ದುಕಂಡಿತು. ಕೊಹ್ಲಿ ಕೊನೆಯವರಾಗಿ ಔಟಾದರು.ಮಹೇಂದ್ರ ಸಿಂಗ್ ದೋನಿ ಸ್ಥಾನದಲ್ಲಿ ಆಡುವ ಅವಕಾಶ ಪಡೆದ ಸಹಾ ಕೂಡಾ ನಿರಾಸೆ ಉಂಟುಮಾಡಲಿಲ್ಲ. 94 ಎಸೆತಗಳನ್ನು ಎದುರಿಸಿದ ಅವರು ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು.ಕಳಪೆ ಫಾರ್ಮ್‌ನ ಕಾರಣ ಟೀಕೆಗೆ ಗುರಿಯಾಗಿರುವ ಲಕ್ಷ್ಮಣ್ ತಮ್ಮ ವೈಫಲ್ಯಗಳ ಸರಪಳಿಗೆ ಮತ್ತೊಂದು ಕೊಂಡಿಯನ್ನು ಸೇರಿಸಿಕೊಂಡರು. ಅವರು ನಥಾನ್ ಲಿಯಾನ್ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.    ಸಿಡ್ಲ್‌ಗೆ ಉತ್ತಮ ಸಾಥ್ ನೀಡಿದ ಬೆನ್ ಹಿಲ್ಫೆನಾಸ್ 62 ರನ್‌ಗಳಿಗೆ ಮೂರು ವಿಕೆಟ್ ಪಡೆದರು.

ಸ್ಕೋರ್ ವಿವರ:

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 7 ವಿಕೆಟ್‌ಗೆ 604 ಡಿಕ್ಲೇರ್ಡ್‌

ಭಾರತ: ಮೊದಲ ಇನಿಂಗ್ಸ್ 95.1 ಓವರ್‌ಗಳಲ್ಲಿ 272

(ಬುಧವಾರ 21 ಓವರುಗಳಲ್ಲಿ 2 ವಿಕೆಟ್‌ಗೆ 61)

ಗೌತಮ್ ಗಂಭೀರ್ ಸಿ ಹಸ್ಸಿ ಬಿ ಪೀಟರ್ ಸಿಡ್ಲ್  34

ಸಚಿನ್ ತೆಂಡೂಲ್ಕರ್ ಸಿ ಪಾಂಟಿಂಗ್ ಬಿ ಪೀಟರ್ ಸಿಡ್ಲ್  25

ವಿವಿಎಸ್ ಲಕ್ಷ್ಮಣ್ ಸಿ ಹಡ್ಡಿನ್ ಬಿ ನಥಾನ್ ಲಿಯಾನ್ 18

ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಬೆನ್ ಹಿಲ್ಫೆನಾಸ್  116

ವೃದ್ಧಿಮಾನ್ ಸಹಾ ಬಿ ರ‌್ಯಾನ್ ಹ್ಯಾರಿಸ್  35

ಆರ್. ಅಶ್ವಿನ್ ಎಲ್‌ಬಿಡಬ್ಲ್ಯು ಬಿ ಪೀಟರ್ ಸಿಡ್ಲ್  05

ಜಹೀರ್ ಖಾನ್ ಸಿ ಹಡ್ಡಿನ್ ಬಿ ಪೀಟರ್ ಸಿಡ್ಲ್   00

ಇಶಾಂತ್ ಶರ್ಮ ಬಿ ಬೆನ್ ಹಿಲ್ಫೆನಾಸ್   16

ಉಮೇಶ್ ಯಾದವ್ ಔಟಾಗದೆ  06

ಇತರೆ: (ಬೈ-1, ವೈಡ್-1, ನೋಬಾಲ್-2)  04

ವಿಕೆಟ್ ಪತನ: 1-26 (ಸೆಹ್ವಾಗ್; 5.1), 2-31 (ದ್ರಾವಿಡ್; 6.6), 3-78 (ಸಚಿನ್; 31.2), 4-87 (ಗಂಭೀರ್; 33.5), 5-111 (ಲಕ್ಷ್ಮಣ್; 46.1), 6-225 (ಸಹಾ; 84.4), 7-230 (ಅಶ್ವಿನ್; 87.1), 8-230 (ಜಹೀರ್; 87.2), 9-263 (ಶರ್ಮ; 93.6), 10-272 (ಕೊಹ್ಲಿ; 95.1).

ಬೌಲಿಂಗ್: ರ‌್ಯಾನ್ ಹ್ಯಾರಿಸ್ 25-7-71-1, ಬೆನ್ ಹಿಲ್ಫೆನ್ಹಾಸ್ 22.1-5-62-3, ಪೀಟರ್ ಸಿಡ್ಲ್ 15-2-49-5, ನಥಾನ್ ಲಿಯಾನ್ 21-5-48-1, ಮೈಕಲ್ ಕ್ಲಾರ್ಕ್ 6-1-23-0, ಮೈಕ್ ಹಸ್ಸಿ 6-0-18-0

ಆಸ್ಟ್ರೇಲಿಯಾ: ಎರಡನೇ ಇನಿಂಗ್ಸ್ 14 ಓವರ್‌ಗಳಲ್ಲಿ 3 ವಿಕೆಟ್‌ಗೆ 50

ಡೇವಿಡ್ ವಾರ್ನರ್ ಸಿ ಮತ್ತು ಬಿ ಆರ್. ಅಶ್ವಿನ್  28

ಎಡ್ ಕೋವನ್ ಎಲ್‌ಬಿಡಬ್ಲ್ಯು ಬಿ ಆರ್. ಅಶ್ವಿನ್  10

ಶಾನ್ ಮಾರ್ಷ್ ಎಲ್‌ಬಿಡಬ್ಲ್ಯು ಬಿ ಜಹೀರ್ ಖಾನ್   00

ರಿಕಿ ಪಾಂಟಿಂಗ್ ಬ್ಯಾಟಿಂಗ್  01

ಮೈಕಲ್ ಕ್ಲಾರ್ಕ್ ಬ್ಯಾಟಿಂಗ್  09

ಇತರೆ: (ಲೆಗ್ ಬೈ-2)  02

ವಿಕೆಟ್ ಪತನ: 1-39 (ವಾರ್ನರ್; 9.6), 2-40 (ಮಾರ್ಷ್; 10.6), 3-40 (ಕೋವನ್; 11.4)

ಬೌಲಿಂಗ್: ಜಹೀರ್ ಖಾನ್ 7-0-24-1, ಆರ್. ಅಶ್ವಿನ್ 7-1-24-2

ಪ್ರತಿಕ್ರಿಯಿಸಿ (+)