ಕ್ರಿಕೆಟ್: ವಿಶ್ವಕಪ್‌ಗೆ ಸ್ಥಾನ ಪಡೆಯುವ 15 ಮಂದಿ ಯಾರು?

7

ಕ್ರಿಕೆಟ್: ವಿಶ್ವಕಪ್‌ಗೆ ಸ್ಥಾನ ಪಡೆಯುವ 15 ಮಂದಿ ಯಾರು?

Published:
Updated:

ಚೆನ್ನೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಮುಂದೆ ಈಗ ದೊಡ್ಡ ಸವಾಲು ಎದುರಾಗಿದೆ. ಅದು ಉಪಖಂಡದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡ ಆಯ್ಕೆ ಮಾಡುವುದು.

ಅದಕ್ಕಾಗಿ ಕೆ.ಶ್ರೀಕಾಂತ್ ಸಾರಥ್ಯದ ಆಯ್ಕೆ ಸಮಿತಿ ಸೋಮವಾರ ಇಲ್ಲಿ ಸಭೆ ಸೇರಲಿದೆ. ಈಗಾಗಲೇ 30 ಮಂದಿ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಲಾಗಿದೆ. ಅದರಲ್ಲಿನ ಅತ್ಯುತ್ತಮ 15 ಮಂದಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಸಮಿತಿಯ ಮುಂದಿದೆ.

ಪ್ರಮುಖ ಆಟಗಾರರು ಗಾಯದ ಸಮಸ್ಯೆಗೆ ಸಿಲುಕಿರುವುದು ಆಯ್ಕೆದಾರರಿಗೆ ತಲೆನೋವು ಉಂಟು ಮಾಡಿದೆ. ಸಚಿನ್ ತೆಂಡೂಲ್ಕರ್ (ಸ್ನಾಯು ಸೆಳೆತ), ವೀರೇಂದ್ರ ಸೆಹ್ವಾಗ್ (ಭುಜ ನೋವು), ಗೌತಮ್ ಗಂಭೀರ್ (ಮೊಣಕೈ ನೋವು), ಪ್ರವೀಣ್ ಕುಮಾರ್ (ಮೊಣಕೈ ನೋವು) ಹಾಗೂ ಎಸ್.ಶ್ರೀಶಾಂತ್ (ಟೆನಿಸ್ ಎಲ್ಬೊ) ಅವರು ಗಾಯದ ಸಮಸ್ಯೆಗೆ ಸಿಲುಕಿರುವ ಆಟಗಾರರು.

ಆದರೂ ಚಾಂಪಿಯನ್‌ಷಿಪ್‌ಗೆ ಇನ್ನೂ ಒಂದು ತಿಂಗಳು ಕಾಲಾವಕಾಶ ಇರುವ ಕಾರಣ ಅಷ್ಟರಲ್ಲಿ ಈ ಆಟಗಾರರು ಸುಧಾರಿಸಿಕೊಳ್ಳುವ ವಿಶ್ವಾಸವನ್ನು ಆಯ್ಕೆ ಸಮಿತಿ ಹೊಂದಿದೆ.

ಹಾಗಾಗಿ ಬ್ಯಾಟ್ಸ್‌ಮನ್‌ಗಳಾದ ಸಚಿನ್, ದೋನಿ, ವೀರೇಂದ್ರ ಸೆಹ್ವಾಗ್, ಗಂಭೀರ್, ರೈನಾ, ಕೊಹ್ಲಿ, ಯುವರಾಜ್ ಸ್ಥಾನ ಪಡೆಯುವುದು ಬಹುತೇಕ ಖಚಿತ. ಬೌಲರ್‌ಗಳಲ್ಲಿ ಜಹೀರ್ ಖಾನ್, ಆಶೀಶ್ ನೆಹ್ರಾ ಹಾಗೂ ಹರಭಜನ್ ಸಿಂಗ್ ಸ್ಥಾನ ಗಿಟ್ಟಿಸುವ ಸಾಧ್ಯತೆ ಹೆಚ್ಚು.

ಆದರೆ ಮುರಳಿ ವಿಜಯ್, ರೋಹಿತ್ ಶರ್ಮ, ಯೂಸುಫ್ ಪಠಾಣ್, ಆರ್.ಅಶ್ವಿನ್, ಮುನಾಫ್ ಪಟೇಲ್, ಪ್ರವೀಣ್ ಕುಮಾರ್, ಶ್ರೀಶಾಂತ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಈಗ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ನಾಯಕ ದೋನಿ ಪ್ರಕಾರ, ‘ಒಂದೆರಡು ಸ್ಥಾನಕ್ಕೆ ಮಾತ್ರ ಪೈಪೋಟಿ ಇದೆ. ಕಳೆದ ಒಂದೂವರೆ ವರ್ಷದಲ್ಲಿ ನೀಡಿದ ಸಾಧನೆ ಹಾಗೂ ಹಾಕಿದ ಪ್ರಯತ್ನ ಪರಿಗಣನೆಗೆ ಬರಲಿದೆ. ಒಂದೆರಡು ಉತ್ತಮ ಪ್ರದರ್ಶನ ಇಲ್ಲಿ ಲೆಕ್ಕಕ್ಕಿಲ್ಲ’ ಎಂದಿದ್ದಾರೆ. ವಿಶ್ವಕಪ್‌ನ ಮೊದಲ ಪಂದ್ಯ ಫೆ. 19ರಂದು ಢಾಕಾದಲ್ಲಿ ನಡೆಯಲಿದೆ.

ಸಂಭಾವ್ಯ ಆಟಗಾರರ ಪಟ್ಟಿ: ಮಹೇಂದ್ರ ಸಿಂಗ್ ದೋನಿ, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಹರಭಜನ್ ಸಿಂಗ್, ಜಹೀರ್ ಖಾನ್, ಆಶೀಶ್ ನೆಹ್ರಾ, ಎಸ್.ಶ್ರೀಶಾಂತ್, ಮುನಾಫ್ ಪಟೇಲ್, ಇಶಾಂತ್ ಶರ್ಮ, ಆರ್.ವಿನಯ್ ಕುಮಾರ್, ಮುರಳಿ ವಿಜಯ್, ರೋಹಿತ್ ಶರ್ಮ, ರವೀಂದ್ರ ಜಡೇಜಾ, ಆಜಿಂಕ್ಯ ರಹಾನೆ, ಸೌರಭ್ ತಿವಾರಿ, ಯೂಸುಫ್ ಪಠಾಣ್, ಪಾರ್ಥಿವ್ ಪಟೇಲ್, ಆರ್.ಅಶ್ವಿನ್, ವೃದ್ಧಿಮಾನ್ ಸಹಾ, ದಿನೇಶ್ ಕಾರ್ತಿಕ್, ಶಿಖರ್ ಧವನ್, ಅಮಿತ್ ಮಿಶ್ರಾ, ಪಿಯೂಷ್ ಚಾವ್ಲಾ, ಚೇತೇಶ್ವರ ಪೂಜಾರ, ಪ್ರಗ್ಯಾನ್ ಓಜಾ ಹಾಗೂ ಪ್ರವೀಣ್ ಕುಮಾರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry