ಶನಿವಾರ, ಮೇ 28, 2022
27 °C

ಕ್ರಿಕೆಟ್ ವೈಭವ ಮರಳುವ ಆಶಯದಲ್ಲಿ ಪಿಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ಶ್ರೀಲಂಕಾ ತಂಡದ ಕ್ರಿಕೆಟಿಗರ ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಎರಡು ವರ್ಷ ಸಂದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ ವೈಭವ ಪಾಕಿಸ್ತಾನದಲ್ಲಿ ಮತ್ತೆ ಮರುಕಳಿಸಬಹುದು ಎನ್ನುವ ಆಶಯವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೊಂದಿದೆ.ಪಾಕಿಸ್ತಾನದಲ್ಲಿಯೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯಬೇಕು ಎನ್ನುವ ಪಿಸಿಬಿ ಆಶಯಕ್ಕೆ ಏಷ್ಯನ್ ಹಾಗೂ ಆಫ್ರಿಕನ್ ಕ್ರಿಕೆಟ್ ಮಂಡಳಿ ಕೂಡ ಬೆಂಬಲ ವ್ಯಕ್ತಪಡಿಸಿದೆ ಎಂದು ಪಿಸಿಬಿ ತಿಳಿಸಿದೆ. ಶ್ರೀಲಂಕಾ ತಂಡದ ಆಟಗಾರರು 2009ರಲ್ಲಿ ಪಾಕ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಭಯೋತ್ಪಾದಕರ ದಾಳಿ ನಡೆದಿತ್ತು. ಪಾಕ್‌ನ ಆರು ಪೊಲೀಸ್ ಅಧಿಕಾರಿಗಳು ಹಾಗೂ ವ್ಯಾನ್ ಚಾಲಕ ಈ ದಾಳಿಗೆ ಅಹುತಿಯಾಗಿದ್ದರು.ಈ ಘಟನೆ ನಡೆದು ಎರಡು ವರ್ಷಗಳ ಬಳಿಕ ಈ ವರ್ಷದಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳುವ ಬಗ್ಗೆ ಲಂಕಾ ಆಸಕ್ತಿ ಹೊಂದಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ನಿಶಾಂತ್ ರಣತುಂಗ ಹೇಳಿದ್ದಾರೆ. ‘ಇದೊಂದು ಒಳ್ಳೆಯ ಬೆಳವಣಿಗೆ. ಪಾಕ್‌ನಲ್ಲಿ ಕ್ರಿಕೆಟ್‌ಗೆ ಮತ್ತೆ ಜೀವಕಳೆ ಬರಲು ಲಂಕಾ ಪ್ರವಾಸ ಸಹಾಯಕವಾಗಲಿದೆ’ ಎಂದು ಪಿಸಿಬಿ ಹೇಳಿದೆ.‘ಭಯೋತ್ಪಾದಕರ ದಾಳಿಯ ನಂತರ ಪಾಕಿಸ್ತಾನದಲ್ಲಿ ಕ್ರಿಕೆಟ್ ಉತ್ಸುಕತೆ ಕಳೆದುಕೊಂಡಿದೆ. ಆದರೆ ಮತ್ತೆ ಪಾಕ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವುದರಿಂದ ಅಲ್ಲಿನ ಜನರಲ್ಲಿದ್ದ ಕ್ರಿಕೆಟ್ ಆಸಕ್ತಿ ಮರಳಬಹುದು ಎನ್ನುವ ಆಶಯ ನಮ್ಮದು. ಆದ್ದರಿಂದ ಲಂಕಾ ಈ ವರ್ಷದಲ್ಲಿ ಪಾಕ್ ಪ್ರವಾಸ ಕೈಗೊಳ್ಳುವ ಆಸಕ್ತಿ ಹೊಂದಿದೆ’ ಎಂದು ನಿಶಾಂತ್ ರಣತುಂಗ ಹೇಳಿದ್ದಾರೆ.‘ಪಾಕಿಸ್ತಾನದಲ್ಲಿ ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲು ಲಂಕಾ ಆಸಕ್ತಿ ತೋರಿದ್ದು ಈ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪ್ರವಾಸ ಕೈಗೊಳ್ಳುವ ಕುರಿತು ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ರಣತುಂಗಾ ‘ಸಂಡೇ ಟೈಮ್ಸ್’ ಪತ್ರಿಕೆಗೆ ತಿಳಿಸಿದ್ದಾರೆ.ಪಾಕಿಸ್ತಾನದಲ್ಲಿಯೂ ಮತ್ತೆ ಕ್ರಿಕೆಟ್ ಪಂದ್ಯಗಳು ನಡೆಯಬೇಕು ಎನ್ನುವ ಆಶಯವನ್ನು ಇಲ್ಲಿನ ಸರ್ಕಾರವೂ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.