ಕ್ರಿಕೆಟ್: ಸತತ ಮೂರು ಸೋಲಿನ ಆಘಾತದಲ್ಲಿ ಮಹಿ ಬಳಗ...

7

ಕ್ರಿಕೆಟ್: ಸತತ ಮೂರು ಸೋಲಿನ ಆಘಾತದಲ್ಲಿ ಮಹಿ ಬಳಗ...

Published:
Updated:
ಕ್ರಿಕೆಟ್: ಸತತ ಮೂರು ಸೋಲಿನ ಆಘಾತದಲ್ಲಿ ಮಹಿ ಬಳಗ...

ಬರ್ಮಿಂಗ್‌ಹ್ಯಾಮ್: ನಾಲ್ಕು ತಿಂಗಳ ಹಿಂದೆಯಷ್ಟೆ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಬೀಗಿದ್ದ ಭಾರತ ಕ್ರಿಕೆಟ್ ತಂಡದ ಆಟಗಾರರು ಇದೀಗ ನಿರಾಸೆಯ ಮುಖ ಹೊತ್ತಿದ್ದಾರೆ. ಸತತ ಮೂರು ಟೆಸ್ಟ್ ಸೋಲಿನ ಬಳಿಕ ಐಸಿಸಿ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನೂ ಕಳೆದುಕೊಂಡ `ಮಹಿ~ ಬಳಗಕ್ಕೆ ಇದೀಗ ದಿಕ್ಕೇ ತೋಚದಂತಾಗಿದೆ.

 

ವಿಶ್ವಕಪ್ ಗೆಲುವು ಮಾತ್ರವಲ್ಲ, ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿ ಮೆರೆದಾಡುತ್ತಿದ್ದ ಭಾರತ ತಂಡವನ್ನು ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ಇಂಗ್ಲೆಂಡ್ ಇದೀಗ ಪಾತಾಳಕ್ಕೆ ನೂಕಿದೆ. ಅಲ್ಲಿಂದ ಎದ್ದುನಿಲ್ಲುವ ಪ್ರಯತ್ನದಲ್ಲಿ ಆಟಗಾರರು ಇದ್ದಾರೆ. ಆದರೆ ಅದು ನಿರೀಕ್ಷಿಸಿದಷ್ಟು ಸುಲಭವಲ್ಲ.ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡ ಮೂರನೇ ಟೆಸ್ಟ್‌ನಲ್ಲಿ ಭಾರತ ಇನಿಂಗ್ಸ್ ಹಾಗೂ 242 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಪಂದ್ಯದ ಬಳಿಕ ಭಾರತ ತಂಡದ ಆಟಗಾರರು ಹೋಟೆಲ್‌ನ ಒಳಗೆಯೇ ಕಾಲ ಕಳೆಯಲಿಲ್ಲ. ರಾತ್ರಿ ಭೋಜನಕ್ಕಾಗಿ ಕೆಲವರು ಹೋಟೆಲ್‌ನಿಂದ ಹೊರಬಂದರು.ಮಹೇಂದ್ರ ಸಿಂಗ್ ದೋನಿ ಒಳಗೊಂಡಂತೆ ಕೆಲವು ಆಟಗಾರರು ಅಲ್ಪ `ರಿಲ್ಯಾಕ್ಸ್~ ಆಗುವ ಉದ್ದೇಶದಿಂದ ಹೊರಬಂದರು. ಹೋಟೆಲ್‌ನ ಒಳಗೆಯೇ ಕಾಲ ಕಳೆದರೆ, ಮತ್ತಷ್ಟು ಒತ್ತಡ ಅನುಭವಿಸಬೇಕಾಗಬಹುದು ಎಂಬ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ.ಇಂಗ್ಲೆಂಡ್‌ನಲ್ಲಿ ಅನುಭವಿಸಿದ ವೈಫಲ್ಯದಿಂದ `ಮಹಿ~ ಬಳಗ ಮಾಜಿ ಆಟಗಾರರ ಟೀಕೆಗೆ ಗುರಿಯಾಗಿದೆ. ಸರಿಯಾದ ಸಿದ್ಧತೆ ನಡೆಸದ ಕಾರಣ ಭಾರತಕ್ಕೆ ಈ ಪರಿಸ್ಥಿತಿ ಎದುರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತಂಡವು ಎಲ್ಲ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿದೆ. ನೂತನ ಕೋಚ್ ಡಂಕನ್ ಫ್ಲೆಚರ್ ಆರಂಭದಲ್ಲೇ ಒತ್ತಡಕ್ಕೆ ಒಳಗಾಗಿದ್ದಾರೆ.ಇಂಗ್ಲೆಂಡ್ ವಿರುದ್ಧ ಯಶಸ್ಸು ಸಾಧಿಸಲು ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅವರು ಮಿಂಚುವುದು ಅಗತ್ಯವಾಗಿತ್ತು. ಆದರೆ ದ್ರಾವಿಡ್ ಅವರನ್ನು ಹೊರತಪಡಿಸಿ ಭಾರತದ ಎಲ್ಲ     ಬ್ಯಾಟ್ಸ್‌ಮನ್‌ಗಳೂ ವಿಫಲರಾಗಿದ್ದಾರೆ. ಸಚಿನ್ ಮತ್ತು ಲಕ್ಷ್ಮಣ್ ತಮಗೆ ಲಭಿಸಿದ ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಎಡವಿದರು.ಮೂರು ಟೆಸ್ಟ್ ಪಂದ್ಯಗಳ ಆರು ಇನಿಂಗ್ಸ್‌ಗಳಲ್ಲಿ ಭಾರತ ಒಮ್ಮೆಯೂ 300 ರನ್‌ಗಳ ಗಡಿ ದಾಟಿಲ್ಲ! ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ   ಇನಿಂಗ್ಸ್‌ನಲ್ಲಿ ಪೇರಿಸಿದ 288 ರನ್ ಭಾರತದ ಅತ್ಯುತ್ತಮ ಪ್ರದರ್ಶನ ಎನಿಸಿದೆ.ಇಂಗ್ಲೆಂಡ್‌ನ ವೇಗಿಗಳಾದ   ಸ್ಟುವರ್ಟ್ ಬ್ರಾಡ್, ಜೇಮ್ಸ ಆ್ಯಂಡರ್‌ಸನ್ ಮತ್ತು ಟಿಮ್ ಬ್ರೆಸ್ನನ್ ಅವರು ಪರಿಸ್ಥಿತಿಯ ಲಾಭವನ್ನು ಚೆನ್ನಾಗಿ ಎತ್ತಿಕೊಂಡರು. ಆದರೆ ಪ್ರವಾಸಿ ತಂಡದ ಬೌಲರ್‌ಗಳು ಇದುವರೆಗೆ ಪೂರ್ಣ ವೈಫಲ್ಯ ಅನುಭವಿಸಿದ್ದಾರೆ.ಭಾರತದ ಆಟಗಾರರು ಭಾನುವಾರ ಅಭ್ಯಾಸ ನಡೆಸಲಿಲ್ಲ. ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಗುರುವಾರ ಆರಂಭವಾಗಲಿದೆ. ಪ್ರಸಕ್ತ ಪರಿಸ್ಥಿತಿಯನ್ನು ನೋಡಿದರೆ ಅದರಲ್ಲಿ ಗೆಲುವು ಅಸಾಧ್ಯ. ಕಡಿಮೆಪಕ್ಷ ಡ್ರಾ ಸಾಧಿಸಿ `ಕ್ಲೀನ್‌ಸ್ವೀಪ್~ ಮುಖಭಂಗದಿಂದ ಹೊರಬರುವುದು ದೋನಿ ಪಡೆಯ ಲೆಕ್ಕಾಚಾರ.ಭಾರತ ಕಳೆದ ಐದು ವರ್ಷಗಳಲ್ಲಿ ಪರ್ತ್, ಜೋಹಾನ್ಸ್‌ಬರ್ಗ್, ಕಿಂಗ್‌ಸ್ಟನ್, ಡರ್ಬನ್ ಮತ್ತು ಹ್ಯಾಮಿಲ್ಟನ್‌ನಲ್ಲಿ ವೇಗ ಮತ್ತು ಬೌನ್ಸ್‌ಗೆ ನೆರವು ನೀಡುವ ಪಿಚ್‌ಗಳಲ್ಲಿ ಟೆಸ್ಟ್‌ನಲ್ಲಿ ಜಯ ಪಡೆದಿತ್ತು. ಆದರೆ ಇದೀಗ ಇಂಗ್ಲೆಂಡ್ ವಿರುದ್ಧ ಎದುರಾದ ಸೋಲು ಹಿಂದಿನ ಸಾಧನೆಗಳ ಮೇಲೆ ಕರಿನೆರಳು ಬೀರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry