ಭಾನುವಾರ, ಡಿಸೆಂಬರ್ 15, 2019
21 °C

ಕ್ರಿಕೆಟ್: ಸೋಲಿನ ಪ್ರಪಾತದ ಕಡೆ ವೀರೂ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಸೋಲಿನ ಪ್ರಪಾತದ ಕಡೆ ವೀರೂ ಪಡೆ

ಅಡಿಲೇಡ್: ಇನ್ನೇನು ಮುಗಿಯಿತು ಭಾರತ ತಂಡದ ಕಥೆ. ಮತ್ತೊಂದು ಸಂಪೂರ್ಣ ಸರಣಿ ಸೋಲಿನ ಶೂಲ ನಿಶ್ಚಿತ.ಬಾಕಿ ಇರುವ ನಾಲ್ಕು ವಿಕೆಟ್‌ಗಳಲ್ಲಿ ಕೊನೆಯ ದಿನದಾಟ ಮುಗಿಯುವವರೆಗೆ ಹೋರಾಟ ನಡೆಸುವ ಶಕ್ತಿ ಇದೆಯೆಂದು ಹೇಳುವ ವಿಶ್ವಾಸವೂ ಕಳೆದು ಹೋಗಿದೆ. ದೊಡ್ಡ ವಿಕೆಟ್‌ಗಳೇ ಉರುಳಿವೆ ಇನ್ನು ಬಾಲವನ್ನು ಕಟ್ಟಿಹಾಕುವುದು ಆಸ್ಟ್ರೇಲಿಯಾಕ್ಕೆ ಕಷ್ಟವಾಗದು.ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿಯೂ ಹೊಸ ಚೈತನ್ಯ ಪಡೆಯದ ಭಾರತಕ್ಕೆ ಅಡಿಲೇಡ್ ಓವಲ್ ಅಂಗಳವೂ ಮಂಗಳಕಾರಿ ಎನಿಸಲಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಒಂದಿಷ್ಟು ಆಸೆಯ ಚಿಗುರು ಮೂಡಿದರೂ, ನಳನಳಿಸುವ ಟೊಂಗೆಯಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿನ ವಿರಾಟ್ ಕೊಹ್ಲಿ ಶತಕವೊಂದೇ ಸಂಭ್ರಮ. `ವೀರೂ~ ಕೂಡ ಅಂಥ ನೂರು ಗಳಿಸುತ್ತಾರೆ ಎನ್ನುವ ನಿರೀಕ್ಷೆಯೂ ಬಿಲಿಸಿಗೆ ಇಟ್ಟ ಬೆಣ್ಣೆಯಂತೆ ಬೇಗ ಕರಗಿ ಹೋಯಿತು.ಎರಡನೇ ಇನಿಂಗ್ಸ್ ಬೆಳೆಸುವ ಸಾಹಸಕ್ಕೆ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಬೆಂಬಲವೂ ಸಿಗಲಿಲ್ಲ. ಆದ್ದರಿಂದ ಸೋಲು ತೀರ ಹತ್ತಿರ. ಗೆಲುವಿನ ಸನಿಹದಲ್ಲಿ ಬಂದು ನಿಂತಿರುವ ಮೈಕಲ್ ಕ್ಲಾರ್ಕ್ ನೇತೃತ್ವದ ಪಡೆಯ ಆಟಗಾರರ ಮೊಗದ ತುಂಬಾ ಈಗ ನಗು. ಭಾರತದವರ ಮುಖ ಮಾತ್ರ ಬಿಗಿದುಕೊಂಡಿದೆ. ಮಂದಹಾಸದ ಗೆರೆಗಳನ್ನು ಭೂತಗನ್ನಡಿ ಹಿಡಿದು ಹುಡುಕಿದರೂ ಕಾಣಿಸುವುದಿಲ್ಲ.ಆಸ್ಟ್ರೇಲಿಯಾದವರು ಭಾರತದ ಮುಂದೆ ಇಟ್ಟಿರುವ ಗೆಲುವಿನ ಸವಾಲು ಸರಿಯಾಗಿ 500 ರನ್. ಕಷ್ಟಪಟ್ಟು ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಗಳಿಸಿದ್ದು 166 ರನ್ ಮಾತ್ರ. ಆರು ವಿಕೆಟ್‌ಗಳು ಕಳೆದು ಹೋಗಿವೆ. ನಾಲ್ಕು ವಿಕೆಟ್‌ಗಳನ್ನು ಬಾಕಿ ಇಟ್ಟುಕೊಂಡಿರುವ ಭಾರತವು ಇನ್ನೂ 334 ರನ್‌ಗಳನ್ನು ಗೋಪುರ ಕಟ್ಟಬೇಕು. ಸಾಧ್ಯವಾಗದ ಮಾತು. ಆದ್ದರಿಂದ ಕೊನೆಯ ದಿನವನ್ನು ದೂಡುವ ಪ್ರಯತ್ನ ಮಾಡುವುದೊಂದೇ ದಾರಿ.ವಿಕೆಟ್ ಕಾಯ್ದುಕೊಂಡು ಕೊನೆಯೊಂದು ದಿನವನ್ನು ಕಳೆದುಬಿಟ್ಟರೆ ಅದೇ ದೊಡ್ಡ ಸಾಧನೆಯ ಕಿರೀಟ. ಗೆಲುವು ಸಾಧ್ಯವಾಗದಿದ್ದರೂ `ಡ್ರಾ~ ಮಾಡಿಕೊಂಡ ಸಮಾಧಾನ ಸಿಗುತ್ತದೆ. ಆದರೆ ಹೀಗೆ ಮಾಡುವುದಕ್ಕೆ ಆಸ್ಟ್ರೇಲಿಯಾದ ಬೌಲರ್‌ಗಳು ಅವಕಾಶವನ್ನಂತೂ ನೀಡುವುದಿಲ್ಲ. ಈಗಾಗಲೇ ಭಯಗೊಂಡಿರುವ ಭಾರತದ ಬ್ಯಾಟಿಂಗ್ ಪಡೆಯು ಕುಸಿತದ ಕಡೆ ಜಾರಿಯಾಗಿದೆ. ಕ್ಲಾರ್ಕ್ ಬಳಗದವರು ಶನಿವಾರ ಬೆಳಿಗ್ಗೆ ಆದಷ್ಟು ಬೇಗ 4-0ಯಲ್ಲಿ ವಿಜಯೋತ್ಸವ ಆಚರಿಸಲು ಸಜ್ಜು.ಪ್ರಥಮ ಇನಿಂಗ್ಸ್‌ನಲ್ಲಿ 332 ರನ್‌ಗಳಿಂದ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ ತನ್ನ ಎರಡನೇ ಇನಿಂಗ್ಸ್ ಅನ್ನು ಬೇಗ ಡಿಕ್ಲೇರ್ಡ್‌ ಮಾಡಿಕೊಂಡಿತು. ಗುರುವಾರದ ಆಟದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 50 ರನ್ ಗಳಿಸಿದ್ದ ಅದು ಮತ್ತೆರಡು ವಿಕೆಟ್ ಒಪ್ಪಿಸಿ ಒಟ್ಟು ಮೊತ್ತವನ್ನು 167 ರನ್ ಆಗಿಸಿಕೊಂಡಿತು. ಮಾಜಿ ನಾಯಕ ರಿಕಿ ಪಾಂಟಿಂಗ್ 60 (146 ನಿಮಿಷ, 96 ಎಸೆತ, 5 ಬೌಂಡರಿ) ರನ್ ಗಳಿಸಿದ ಹೊತ್ತಿಗೆ ಹಾಲಿ ನಾಯಕ ಕ್ಲಾರ್ಕ್ ಇನಿಂಗ್ಸ್ ಕೊನೆಗೊಳಿಸುವ ನಿರ್ಧಾರ ಪ್ರಕಟಿಸಿದರು. ಅಸಾಧ್ಯವಾದ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಐದನೇ ಓವರ್‌ನಲ್ಲಿಯೇ ಆಘಾತ. ಆರಂಭಿಕ ಆಟಗಾರ ಗೌತಮ್ ಗಂಭೀರ್ ಹದಿನೆಂಟು ಎಸೆತಗಳಲ್ಲಿ ಕಷ್ಟಪಟ್ಟು ಕೇವಲ ಮೂರು ರನ್ ಗಳಿಸಿದ್ದರು. ಆಗಲೇ  ರ‌್ಯಾನ್ ಹ್ಯಾರಿಸ್ ಎಸೆತದಲ್ಲಿ ಬ್ಯಾಟ್ ಹೊರಕೊನೆಗೆ ತಾಗಿ ವಿಕೆಟ್ ಕೀಪರ್ ಬ್ರಾಡ್ ಹಡ್ಡಿನ್ ಕೈಗವಸಿನಲ್ಲಿ ಸುರಕ್ಷಿತ. ಸೆಹ್ವಾಗ್ ಜೊತೆಗೂಡಿದ ದ್ರಾವಿಡ್ ಇನಿಂಗ್ಸ್ ಕಟ್ಟುತ್ತಾರೆ ಎನ್ನುವ ಆಶಯಕ್ಕೂ ಧಕ್ಕೆ. ಎರಡನೇ ವಿಕೆಟ್‌ನಲ್ಲಿ 66 ರನ್‌ಗಳನ್ನು ಕಲೆಹಾಕಿದರೂ ಅದು ತಂಡವನ್ನು ಆಪತ್ತಿನಿಂದ ರಕ್ಷಿಸುವ ಜೊತೆಯಾಟವಲ್ಲ.ದೆಹಲಿಯ ಅನುಭವಿ ಬ್ಯಾಟ್ಸ್‌ಮನ್ ವೀರೂ, ಲಿಯಾನ್ ಅವರ `ಫುಲ್‌ಟಾಸ್~ಗೆ ಮುನ್ನುಗ್ಗಿ ಬ್ಯಾಟ್ ಬೀಸಿ ತಕ್ಕ ಉತ್ತರ ನೀಡುವ ಉದ್ದೇಶ ಹೊಂದಿದ್ದರು. ಆದರೆ ಅದೇ ಅಪಾಯಕಾರಿ ಸಾಹಸ. ಬ್ಯಾಟ್‌ನಿಂದ ಸಿಡಿದ ಚೆಂಡು ಶಾರ್ಟ್ ಕವರ್ ಕಡೆಗೆ ಚಿಮ್ಮಿತು. ಅಲ್ಲಿದ್ದ ಪಾಂಟಿಂಗ್ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ತಪ್ಪು ಮಾಡಲಿಲ್ಲ. ಆನಂತರ ಹ್ಯಾರಿಸ್ ದಾಳಿಯಲ್ಲಿ ಸಹನೆ ಕಳೆದುಕೊಂಡ ದ್ರಾವಿಡ್, ಹಸ್ಸಿ ಕೈಗೆ ಚೆಂಡನ್ನೊಪ್ಪಿಸಿದರು. ಆಗ ಭಾರತ ತಂಡದ ಎರಡನೇ ಇನಿಂಗ್ಸ್‌ನ ಒಟ್ಟು ಮೊತ್ತ   ನೂರು ರನ್.ಲಕ್ಷ್ಮಣ್ ಹಾಗೂ ಸಚಿನ್ ಮತ್ತೊಮ್ಮೆ ತಮ್ಮ ಮೇಲಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿಲ್ಲ. ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಗಳಿಸಿ ಮಿಂಚಿದ್ದ ವಿರಾಟ್ ಕೊಹ್ಲಿಗೆ ದುರದೃಷ್ಟ ಕಾಡಿತು. ಆತುರದಲ್ಲಿ ರನ್ ಗಳಿಸಲು ಮುನ್ನುಗ್ಗಿದ್ದ ಅವರು ಲಯತಪ್ಪಿ ರನ್‌ಔಟ್ ಬಲೆಗೆ ಬಿದ್ದರು. ರನ್‌ಗಾಗಿ ಕರೆ ನೀಡುವಲ್ಲಿ ಮಾಡಿದ ತಪ್ಪಿಗೆ ಅವರು ದುಬಾರಿ ದಂಡವನ್ನೇ ತೆತ್ತರು. ದಿನದಾಟದ ಕೊನೆಗೆ ಕ್ರೀಸ್‌ನಲ್ಲಿ ಉಳಿದಿದ್ದು ಇಶಾಂತ್ ಶರ್ಮ ಹಾಗೂ ವೃದ್ಧಿಮಾನ್ ಸಹಾ.

ಸ್ಕೋರ್ ವಿವರ

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್ 157 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 604 ಡಿಕ್ಲೇರ್ಡ್‌

ಭಾರತ: ಮೊದಲ ಇನಿಂಗ್ಸ್ 95.1 ಓವರುಗಳಲ್ಲಿ 272

ಆಸ್ಟ್ರೇಲಿಯಾ: ಎರಡನೇ ಇನಿಂಗ್ಸ್ 46 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 167 ಡಿಕ್ಲೇರ್ಡ್‌

(ಗುರುವಾರದ ಆಟದಲ್ಲಿ: 14 ಓವರುಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 50)

ರಿಕಿ ಪಾಂಟಿಂಗ್ ಔಟಾಗದೆ  60

ಮೈಕಲ್ ಕ್ಲಾರ್ಕ್ ಸಿ ವೃದ್ಧಿಮಾನ್ ಸಹಾ ಬಿ ಉಮೇಶ್ ಯಾದವ್  37

ಮೈಕಲ್ ಹಸ್ಸಿ ಎಲ್‌ಬಿಡಬ್ಲ್ಯು ಬಿ ಇಶಾಂತ್ ಶರ್ಮ  15

ಬ್ರಾಡ್ ಹಡ್ಡಿನ್ ಔಟಾಗದೆ  11

ಇತರೆ: (ಲೆಗ್‌ಬೈ-6)  06

ವಿಕೆಟ್ ಪತನ: 1-39 (ಡೇವಿಡ್ ವಾರ್ನರ್; 9.6), 2-40 (ಶಾನ್ ಮಾರ್ಷ್; 10.6), 3-40 (ಎಡ್ ಕೋವನ್; 11.4), 4-111 (ಮೈಕಲ್ ಕ್ಲಾರ್ಕ್; 28.2), 5-147 (ಮೈಕಲ್ ಹಸ್ಸಿ; 38.5).

ಬೌಲಿಂಗ್: ಜಹೀರ್ ಖಾನ್ 13-1-38-1, ರವಿಚಂದ್ರನ್ ಅಶ್ವಿನ್ 20-2-73-2, ಇಶಾಂತ್ ಶರ್ಮ 8-0-27-1, ಉಮೇಶ್ ಯಾದವ್ 5-0-23-1

ಭಾರತ: ಎರಡನೇ ಇನಿಂಗ್ಸ್ 56 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 166

ಗೌತಮ್ ಗಂಭೀರ್ ಸಿ ಬ್ರಾಡ್ ಹಡ್ಡಿನ್ ಬಿ ರ‌್ಯಾನ್ ಹ್ಯಾರಿಸ್ 03

ವೀರೇಂದ್ರ ಸೆಹ್ವಾಗ್ ಸಿ ರಿಕಿ ಪಾಂಟಿಂಗ್ ಬಿ ನಥಾನ್ ಲಿಯಾನ್  62

ರಾಹುಲ್ ದ್ರಾವಿಡ್ ಸಿ ಮೈಕಲ್ ಹಸ್ಸಿ ಬಿ ರ‌್ಯಾನ್ ಹ್ಯಾರಿಸ್  25

ಸಚಿನ್ ತೆಂಡೂಲ್ಕರ್ ಸಿ ಎಡ್ ಕೋವನ್ ಬಿ ನಥಾನ್ ಲಿಯಾನ್  13

ವಿ.ವಿ.ಎಸ್.ಲಕ್ಷ್ಮಣ್ ಸಿ ಶಾನ್ ಮಾರ್ಷ್ ಬಿ ನಥಾನ್ ಲಿಯಾನ್  35

ವಿರಾಟ್ ಕೊಹ್ಲಿ ರನ್‌ಔಟ್ (ಬೆನ್ ಹಿಲ್ಫೆನ್ಹಾಸ್)  22

ಇಶಾಂತ್ ಶರ್ಮ ಬ್ಯಾಟಿಂಗ್  02

ವೃದ್ಧಿಮಾನ್ ಸಹಾ  ಬ್ಯಾಟಿಂಗ್  00

ಇತರೆ: (ಲೆಗ್‌ಬೈ-3, ವೈಡ್-1)  04

ವಿಕೆಟ್ ಪತನ: 1-14 (ಗೌತಮ್ ಗಂಭೀರ್; 4.3), 2-80 (ವೀರೇಂದ್ರ ಸೆಹ್ವಾಗ್; 19.1), 3-100 (ರಾಹುಲ್ ದ್ರಾವಿಡ್; 28.1), 4-110 (ಸಚಿನ್ ತೆಂಡೂಲ್ಕರ್; 31.4), 5-162 (ವಿ.ವಿ.ಎಸ್.ಲಕ್ಷ್ಮಣ್; 53.2), 6-166 (ವಿರಾಟ್ ಕೊಹ್ಲಿ; 54.6).

ಬೌಲಿಂಗ್: ರ‌್ಯಾನ್ ಹ್ಯಾರಿಸ್ 14-4-25-2 (ವೈಡ್-1), ಬೆನ್ ಹಿಲ್ಫೆನ್ಹಾಸ್ 9-2-33-0, ಪೀಟರ್ ಸಿಡ್ಲ್ 10-3-36-0, ನಥಾನ್ ಲಿಯಾನ್ 19-3-57-3, ಮೈಕಲ್ ಹಸ್ಸಿ 2-0-3-0, ಮೈಕಲ್ ಕ್ಲಾರ್ಕ್ 2-0-9-0

ಪ್ರತಿಕ್ರಿಯಿಸಿ (+)