ಶುಕ್ರವಾರ, ಮೇ 14, 2021
25 °C

ಕ್ರಿಕೆಟ್: 9ರಿಂದ ತರಬೇತಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಏಪ್ರಿಲ್ 9ರಿಂದ ಮೇ 18ರ ವರೆಗೆ ಉಚಿತವಾಗಿ ಬೇಸಿಗೆ ಕ್ರಿಕೆಟ್ ತರಬೇತಿ  ಶಿಬಿರ ನಡೆಯಲಿದೆ.

`ಬೆಂಗಳೂರಿನಲ್ಲಿ ಐದು ಕೇಂದ್ರಗಳು ಹಾಗೂ ರಾಜ್ಯದ ಇತರೆಡೆ 26 ಕೇಂದ್ರಗಳಲ್ಲಿ ಶಿಬಿರ ಜರುಗಲಿದೆ. ಪ್ರತಿ ಕೇಂದ್ರದಲ್ಲಿ 40 ರಿಂದ 45 ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತದೆ~ ಎಂದು ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಉದ್ಯಾನನಗರಿಯ ಆರ್‌ಎಸ್‌ಐ `ಬಿ~ ಕ್ರೀಡಾಂಗಣ, ಎನ್‌ಆರ್‌ಎ ಕ್ರೀಡಾಂಗಣ, ಎಚ್‌ಎಎಲ್ ಶಾಲಾ ಕ್ರೀಡಾಂಗಣ, ರಾಜರಾಜೇಶ್ವರ ನಗರದಲ್ಲಿರುವ ಬೆಸ್ಟ್ ಕ್ಲಬ್ ಹಾಗೂ ಜೆ.ಪಿ. ನಗರದಲ್ಲಿರುವ ವಿಇಟಿ ಕ್ರೀಡಾಂಗಣದಲ್ಲಿ ಶಿಬಿರ ನಡೆಯಲಿದೆ~ ಎಂದು ಅವರು ಮಾಹಿತಿ ನೀಡಿದರು. ಈ ಶಿಬಿರಗಳಿಗೆ ಐಪಿಎಲ್ ತಂಡವಾದ ರಾಯಲ್ ಚಾಲೆಂಜರ್ಸ್ ಪ್ರಾಯೋಜಕತ್ವ ನೀಡಿದೆ.

ಮಂಗಳೂರು, ಮಣಿಪಾಲ್, ಉಜಿರೆ, ಮಡಿಕೇರಿ, ಗೋಣಿಕೊಪ್ಪ, ಮೈಸೂರು, ಮಂಡ್ಯ, ಚಾಮರಾಜಪೇಟೆ, ಸುತ್ತೂರು, ಶಿವಮೊಗ್ಗ, ಹಾಸನ, ಸಾಗರ, ಚಿಕ್ಕಮಗಳೂರು, ಭದ್ರಾವತಿ, ಹುಬ್ಬಳ್ಳಿ, ಬೆಳಗಾವಿ, ಕಾರವಾರ, ಗದಗ, ರಾಯಚೂರು, ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ತುಮಕೂರು, ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿ ಶಿಬಿರ ನಡೆಯಲಿದೆ.

`16, 18 ಹಾಗೂ 19 ವರ್ಷದೊಳಗಿನ ವಯೋಮಿತಿ ವಿಭಾಗದ ಮೂರು ಹಂತಗಳಲ್ಲಿ ಶಿಬಿರ ನಡೆಯಲಿದ್ದು, ವಾರದಲ್ಲಿ ನಾಲ್ಕು ದಿನ ತರಬೇತಿ ನೀಡಲಾಗುತ್ತದೆ. ಇದೇ ವರ್ಷದ ಜೂನ್ ವೇಳೆಗೆ `ಆರ್‌ಸಿ (ರಾಯಲ್ ಚಾಲೆಂಜರ್ಸ್) ಕೆಎಸ್‌ಸಿಎ ಅಕಾಡೆಮಿ~ ಆರಂಭಿಸಲಾಗುವುದು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದಕ್ಕೆ ನೆರವು ನೀಡಲಿದೆ~ ಎಂದು ಕುಂಬ್ಳೆ ವಿವರಿಸಿದರು.

`ಶಿಬಿರ ಆರಂಭವಾಗಿ ಕೆಲ ದಿನಗಳ ನಂತರ ವಲಯವಾರು ಕ್ರಿಕೆಟ್ ಟೂರ್ನಿ ನಡೆಸಲಾಗುವುದು. ಸುಮಾರು 1500 ಕ್ರೀಡಾಪಟುಗಳಿಗೆ ಇದರ ಪ್ರಯೋಜನ ಲಭಿಸಲಿದೆ. ಶೀಘ್ರದಲ್ಲೇ ಕೋಚ್‌ಗಳ ಆಯ್ಕೆ ನಡೆಯಲಿದೆ~ ಎಂದು ಮಾಜಿ ಕ್ರಿಕೆಟಿಗ ಹೇಳಿದರು.

ಅಕಾಡೆಮಿಯ ಮುಖ್ಯಸ್ಥ ಜಿ.ಆರ್. ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.