ಶನಿವಾರ, ನವೆಂಬರ್ 23, 2019
22 °C
ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್‌ಗೆ ವಿಶ್ವಾಸ

ಕ್ರಿಮಿನಲ್ ಅಭ್ಯರ್ಥಿಗಳಿಗೆ ಮತದಾರರಿಂದಲೇ ಪಾಠ

Published:
Updated:

ಬೆಂಗಳೂರು: `ರಾಜ್ಯದ ಜನತೆ ಬದಲಾವಣೆ ಬಯಸಿರುವುದರಿಂದ ಈ ಬಾರಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸವಿದೆ. ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಚುನಾವಣೆ ನಂತರ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಹೇಳಿದರು.ಬೆಂಗಳೂರು ವರದಿಗಾರರ ಕೂಟ ಮತ್ತು ಬೆಂಗಳೂರು ಪ್ರೆಸ್ ಕ್ಲಬ್ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿಜೆಪಿಯ ಐದು ವರ್ಷದ ಆಳ್ವಿಕೆಯಿಂದ ಜನರು ಬೇಸತ್ತಿದ್ದಾರೆ. ಮತದಾರರ ಒಲವು ಕಾಂಗ್ರೆಸ್ ಕಡೆಗೆ ಇದೆ. ಈಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವೇ ಇದಕ್ಕೆ ನಿದರ್ಶನ ಎಂದರು.ಬಡವರ, ಹಿಂದುಳಿದ ವರ್ಗಗಳ ಏಳಿಗೆಗಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ. ಕೇಂದ್ರದ ಯುಪಿಎ ಸರ್ಕಾರ ಜಾರಿಗೆ  ತಂದಿರುವ ಜನಪರ ಯೋಜನೆಗಳು ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಹೇಳಿದರು.ಪಕ್ಷದಿಂದ ಸ್ಪರ್ಧಿಸಲು ಪ್ರತಿ ಕ್ಷೇತ್ರದಲ್ಲಿ ಐದರಿಂದ ಹತ್ತು ಮಂದಿ ಆಕಾಂಕ್ಷಿಗಳು ಇದ್ದ ಕಾರಣ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿರುವುದು ನಿಜ. ಟಿಕೆಟ್ ವಂಚಿತ ಬಂಡಾಯ ಅಭ್ಯರ್ಥಿಗಳ ಮನವೊಲಿಸಿ ಕಣದಿಂದ ಹಿಂದೆ ಸರಿಸಲು ಪ್ರಯತ್ನಿಸಲಾಗುವುದು. ಅತೃಪ್ತರೊಂದಿಗೆ ಮಾತುಕತೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕೇಂದ್ರ ಸಚಿವರು, ಸಂಸದರು, ಶಾಸಕರ ಮಕ್ಕಳಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ವಂಶಪಾರಂಪರ‌್ಯ ರಾಜಕಾರಣಕ್ಕೆ ಮಣೆ ಹಾಕಿದೆಯಲ್ಲವೇ ಎಂಬ ಪ್ರಶ್ನೆಗೆ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರ ಪುತ್ರರು ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿಲ್ಲ. ಹಿಂದೊಮ್ಮೆ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದನ್ನು ವಂಶಪಾರಂಪರ‌್ಯ ರಾಜಕಾರಣ ಎಂದು ಕರೆಯುವುದು ಸರಿಯಲ್ಲ ಎಂದರು.ಏನೆಲ್ಲ ಪ್ರಯತ್ನಗಳ ನಂತರವೂ ಕ್ರಿಮಿನಲ್ ಆರೋಪ ಹೊತ್ತ ಕೆಲವರು ಟಿಕೆಟ್ ಗಿಟ್ಟಿಸಿದ್ದಾರೆ. ಪಕ್ಷದಲ್ಲಿ ಹೈಕಮಾಂಡ್ ಹಿಡಿತ ಸಡಿಲಗೊಂಡಿದೆಯೇ ಎಂಬ ಪ್ರಶ್ನೆಗೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನ ಅಂತಿಮ. ಹಾಗೇನಾದರೂ ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ದೊರೆತಿದ್ದರೆ ಮತದಾರರೇ ಅಂತಹವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಪ್ರತಿಕ್ರಿಯಿಸಿ (+)