ಸೋಮವಾರ, ಏಪ್ರಿಲ್ 19, 2021
25 °C

ಕ್ರಿಮಿನಲ್ ಕೇಸ್ ಮುಟ್ಟದ ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಕ್ರಿಮಿನಲ್ ಕೇಸ್‌ಗಳ ತಂಟೆಗೆ ಹೋಗದ ಜಗದೀಶ ಶೆಟ್ಟರ್ ಯಾವಾಗಲೂ ಸಿವಿಲ್ ಪ್ರಕರಣಗಳನ್ನೇ ಆರಿಸಿಕೊಳ್ಳುತ್ತಿದ್ದರು. ಕೆಲಸದ ಮೇಲಿನ ಶ್ರದ್ಧೆ ಹಾಗೂ ಸಮರ್ಪಣಾಭಾವ ಅವರಿಗೆ ಒಳ್ಳೆಯ ಹೆಸರು ತಂದಿತ್ತು~-ನಿಯೋಜಿತ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ವಕೀಲಿ ವೃತ್ತಿಯಲ್ಲಿ ಮಾರ್ಗದರ್ಶನ ಮಾಡಿದ ಹಿರಿಯರಲ್ಲಿ ಒಬ್ಬರಾದ ಬಿ.ವಿ. ಪಾವಟೆ ಹೇಳುವ ಮಾತುಗಳಿವು.`ಶೆಟ್ಟರ್ ಕೋರ್ಟ್ ಅಂಗಳದಲ್ಲಿ ಕರಿಕೋಟು ಹಾಕಿಕೊಂಡು ಕಾಲಿಡುವ ಹೊತ್ತಿಗೆ ಅವರ ತಂದೆ ಶಿವಪ್ಪ ಹೆಸರು ಮಾಡಿದ ವಕೀಲರಾಗಿದ್ದರು. ಹೀಗಾಗಿ  ವಕೀಲಿ ವೃತ್ತಿಯಲ್ಲಿ ನೆಲೆ ಕಂಡುಕೊಳ್ಳುವುದು ಅವರಿಗೆ ಅಷ್ಟೇನೂ ಕಷ್ಟವಾಗಲಿಲ್ಲ~ ಎಂದು ಅವರು ಹೇಳುತ್ತಾರೆ.

 

`ತಂದೆ ಶಿವಪ್ಪನವರೇ ಅವರಿಗೆ ಮೊದಲ ಕಾನೂನು ಗುರುವಾಗಿದ್ದರು. ನಾವೆಲ್ಲ ಅವರ ಸ್ನೇಹಿತರಷ್ಟೇ. ಪ್ರಸಂಗ ಬಂದಾಗ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದೆವು~ ಎಂದು ವಿವರಿಸುತ್ತಾರೆ ಪಾವಟೆ.`ನಮ್ಮದೊಂದು ಗೆಳೆಯರ ಬಳಗ ಇತ್ತು. ಅವರೆಲ್ಲರ ಜೊತೆ ಜಗದೀಶ ಸಲಿಗೆ ಹೊಂದಿದ್ದರು. ವೃತ್ತಿ ಸಂಬಂಧವಾಗಿ ಏನಾದರೂ ಗೊಂದಲ ಉಂಟಾದಾಗ, ಕಾಯ್ದೆ ಹಾಗೂ ತರ್ಕದ ವಿಷಯ ಬಂದಾಗ ನಮ್ಮಂದಿಗೆ ಚರ್ಚಿಸುತ್ತಿದ್ದರು. ಅವರ ಅವಧಿಯಲ್ಲಿ `ಶೆಟ್ಟರ್ ಆ್ಯಂಡ್ ಅಸೋಸಿಯೇಟ್ಸ್~ ವಕೀಲರ ಕಚೇರಿ ಪ್ರವರ್ಧಮಾನಕ್ಕೆ ಬಂತು~ ಎಂದು ಅವರು ಸ್ಮರಿಸುತ್ತಾರೆ.`ನಿತ್ಯ ಸ್ಕೂಟರ್ ಮೇಲೆ ಬರುತ್ತಿದ್ದರು. ಎಲ್ಲವನ್ನೂ ವಿನೀತವಾಗಿ ಕೇಳುತ್ತಿದ್ದರು. ಬಿಡುವಿದ್ದಾಗ ಬೇರೆ ಕುತೂಹಲಕಾರಿ ಪ್ರಕರಣಗಳ ಬಗೆಗೂ ತಿಳಿದುಕೊಳ್ಳುತ್ತಿದ್ದರು. ಹಿರಿಯರನ್ನು ಯಾವಾಗಲೂ ಪ್ರೀತಿ-ಗೌರವದಿಂದಲೇ ಮಾತನಾಡಿಸುತ್ತಿದ್ದರು. ಬಡವ-ಬಲ್ಲಿದ ಎನ್ನುವ ತಾರತಮ್ಯವನ್ನು ಅವರೆಂದೂ ಮಾಡಲಿಲ್ಲ~ ಎಂದು ಅವರು ತಿಳಿಸುತ್ತಾರೆ.`1994ರಲ್ಲಿ ಮೊದಲ ಸಲ ಶಾಸಕರಾಗಿ ಆಯ್ಕೆ ಆಗುವವರೆಗೂ ಕೋರ್ಟ್ ಅಂಗಳದಲ್ಲಿ ಅವರು ನಿತ್ಯ ಕಾಣುತ್ತಿದ್ದರು. ಶಾಸಕರಾದ ಮೇಲೂ ಅವರು ಬಂದಿದ್ದಿದೆ. ಆಮೇಲೆ ಕಾರ್ಯದ ಒತ್ತಡದಿಂದ ಇತ್ತ ಬರುವುದು ಕಡಿಮೆಯಾಗಿದೆ~ ಎನ್ನುತ್ತಾರೆ ಅವರು.ಶೆಟ್ಟರ್ ಅವರನ್ನು ಕಾಲೇಜು ವಿದ್ಯಾರ್ಥಿ ಆಗಿದ್ದಾಗಿನಿಂದಲೂ ಬಲ್ಲ ಹಿರಿಯ ವಕೀಲ ಆರ್.ಪಿ. ಉಗರಗೋಳ, `ಆತ ತುಂಬಾ ವಿಧೇಯ ಹುಡುಗನಾಗಿದ್ದ. ಏನೋ ಸಾಧನೆ ಮಾಡಬೇಕು ಎನ್ನುವ ಹಂಬಲವಿತ್ತು. ವಕೀಲಿ ವೃತ್ತಿಗಿಂತ ಸಾಮಾಜಿಕ ಸೇವೆಯೇ ಆತನ ಇಷ್ಟದ ಕ್ಷೇತ್ರವಾಗಿತ್ತು. ಆದ್ದರಿಂದಲೇ ಜಗದೀಶ ಕೋರ್ಟ್ ಅಂಗಳದ ಬದಲು ರಾಜಕಾರಣದಲ್ಲಿ ಬೆಳೆದ~ ಎಂದು ವಿವರಿಸುತ್ತಾರೆ.`ಮುಖ್ಯಮಂತ್ರಿಯಾದರೂ ಜನರಿಗೆ ಸಿಗಬಲ್ಲ ವ್ಯಕ್ತಿ ಆತ. ಹಿರಿಯ ವಕೀಲರ ಮೇಲೆ ಆತನಿಗೆ ತುಂಬಾ ಅಭಿಮಾನ. ಬಿಡುವು ಸಿಕ್ಕಾಗಲೆಲ್ಲ ನಮ್ಮಲ್ಲಿಗೆ ಬಂದು ಮಾತಾಡಿಕೊಂಡು ಹೋಗುತ್ತಾನೆ. ಅಗತ್ಯ ಸಲಹೆಗಳನ್ನೂ ನಾವು ನೀಡಿದ್ದಿದೆ~ ಎಂದು ತಿಳಿಸುತ್ತಾರೆ.`ವಕೀಲರ ಸಂಘದ ಸದಸ್ಯರಾಗಿರುವ ಅವರು, ಚುನಾವಣೆ ಇದ್ದಾಗ ತಪ್ಪದೇ ಬಂದು ಓಟು ಹಾಕುತ್ತಾರೆ~ ಎಂದು ಹೇಳಲು, ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ, ಉಗರಗೋಳ ಮರೆಯುವುದಿಲ್ಲ.`ನಮ್ಮ ನಡುವೆ ಬೆಳೆದ ಹುಡುಗನೊಬ್ಬ ಮುಖ್ಯಮಂತ್ರಿ ಆಗುತ್ತಿರುವುದು ನಮಗೆಲ್ಲ ಖುಷಿ ತಂದಿದೆ. ಸಮಯ ಕಡಿಮೆ ಇದೆ. ಜನ ಮೆಚ್ಚುವಂತಹ ಸರ್ಕಾರ ನೀಡಬೇಕು ಎಂಬುದಷ್ಟೇ ನಮ್ಮ ಅಪೇಕ್ಷೆಯಾಗಿದೆ~ ಎಂದು ಅವರು ಸಲಹೆ ನೀಡುತ್ತಾರೆ.ಶಿವಪ್ಪ ತಮ್ಮ ಕೊನೆಯ ದಿನಗಳತನಕ ತಪ್ಪದೇ ಕೋರ್ಟ್‌ಗೆ ಹಾಜರಾಗುತ್ತಿದ್ದರು. ವಕೀಲಿ ವೃತ್ತಿಯನ್ನು ಅವರು ಅಷ್ಟಾಗಿ ಪ್ರೀತಿಸುತ್ತಿದ್ದರು ಎಂದೂ ಅವರು ನೆನಪಿಸಿಕೊಳ್ಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.