ಕ್ರಿಯಾಸಮಾಧಿಯಲ್ಲಿ ಲೀನವಾದ ಪಂಚಮಸಾಲಿ ಶ್ರೀ

7

ಕ್ರಿಯಾಸಮಾಧಿಯಲ್ಲಿ ಲೀನವಾದ ಪಂಚಮಸಾಲಿ ಶ್ರೀ

Published:
Updated:
ಕ್ರಿಯಾಸಮಾಧಿಯಲ್ಲಿ ಲೀನವಾದ ಪಂಚಮಸಾಲಿ ಶ್ರೀ

ಪಂಚಮಸಾಲಿ ಜಗದ್ಗುರು ಪೀಠ (ಹರಿಹರ ತಾ): ಹಲವು ಮಠಾಧೀಶರು, ಅನೇಕ ಗಣ್ಯರು ಹಾಗೂ ಅಪಾರ ಭಕ್ತರ ಅಶ್ರುತರ್ಪಣದ ಮಧ್ಯೆ ಸರ್ಕಾರಿ ಸಕಲ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಸ್ಥಿರ ಪೀಠಾಧಿಪತಿ ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ಪಾರ್ಥಿವ ಶರೀರ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಮಠದ ಆವರಣದಲ್ಲಿ ನಿರ್ಮಿಸಿದ ಕ್ರಿಯಾ ಸಮಾಧಿಯಲ್ಲಿ ಲೀನವಾಯಿತು.ಪಂಚಮಸಾಲಿ ಮಠದ ಪ್ರಥಮ ಸ್ಥಿರ ಪೀಠಾಧಿಪತಿಯಾಗಿ 2008 ಫೆ. 17ರಂದು ಪಟ್ಟಾಧಿಕಾರ ವಹಿಸಿಕೊಂಡಿದ್ದ ಶ್ರೀಗಳು ಐದನೇ ಪಟ್ಟಾಧಿಕಾರ ಮಹೋತ್ಸವಕ್ಕೆ ಕೇವಲ 13 ದಿನ ಬಾಕಿ ಇರುವಾಗಲೇ ಇಹಲೋಕ ತ್ಯಜಿಸಿರುವುದು ಭಕ್ತರಲ್ಲಿ ತಂದೆಯನ್ನೇ ಕಳೆದುಕೊಂಡ ಅನಾಥ ಪ್ರಜ್ಞೆ ಮೂಡಲು ಕಾರಣವಾಗಿತ್ತು. ಪಂಚಮಸಾಲಿ ಶ್ರೀಗಳು ಫೆ. 4ರಂದು ಬೆಳಗಿನ ಜಾವ ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದು, ಅಂದು ರಾತ್ರಿಯೇ ಹರಿಹರ ನಗರಕ್ಕೆ ಸಮೀಪದಲ್ಲಿ ಶಿವಮೊಗ್ಗ ರಸ್ತೆಯಲಿರುವ ಮಠದ ಆವರಣಕ್ಕೆ ತರಲಾಗಿತ್ತು. ಶ್ರೀಗಳ ಕ್ರಿಯಾ ಸಮಾಧಿ ಪ್ರಕ್ರಿಯೆ ಸುಗಮವಾಗಿ ನೆರವೇರಲು ಜಿಲ್ಲಾಡಳಿತ ಹಾಗೂ ಮಠದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಲಾಗಿತ್ತು.ಮಂಗಳವಾರ ಬೆಳಿಗ್ಗೆಯಿಂದಲೇ ಶ್ರೀಗಳ ಪಾರ್ಥಿವ ಶರೀರಕ್ಕೆ ವೀರಶೈವ ಲಿಂಗಾಯತ ಧರ್ಮದ ವಿಧಿ-ವಿಧಾನಗಳ ಅನ್ವಯ ಪೂಜಾ ಕಾರ್ಯ ನೆರವೇರಿಸಲಾಯಿತು.ಮಧ್ಯಾಹ್ನ 1ಕ್ಕೆ ಸರಿಯಾಗಿ ಪಾರ್ಥಿವ ಶರೀರವನ್ನು ನಿರ್ಮಾಣ ಹಂತದಲ್ಲಿರುವ ಮಠದ ಬಲಭಾಗದಲ್ಲಿ ನಿರ್ಮಿಸಿರುವ ಕ್ರಿಯಾಸಮಾಧಿ ಸ್ಥಳಕ್ಕೆ ಹೂವಿನ ಪಲ್ಲಕ್ಕಿಯಲ್ಲಿ ತರಲಾಯಿತು.ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಚರ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶಿವಮೊಗ್ಗ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನ ನೆರವೇರಿಸಲಾಯಿತು.ಉಕ್ಕಿಬಂದ ದುಃಖದ ಕಂಬನಿ ನಡುವೆಯೇ ಭಕ್ತರು ಬಿಲ್ವಪತ್ರೆ ಮಳೆಗೆರೆದ ತಕ್ಷಣ ಶ್ರೀಗಳ ಪಾರ್ಥಿವ ಶರೀರ ವಿಭೂತಿಯ ಗಟ್ಟಿಗಳಲ್ಲಿ ನಿರ್ಮಿಸಲಾಗಿದ್ದ ಕ್ರಿಯಾ ಸಮಾಧಿಯಲ್ಲಿ ಲೀನವಾಯಿತು.ಸಿದ್ದಲಿಂಗೇಶ್ವರ ಶ್ರೀಗೆ ಸ್ಥಿರ ಪೀಠಾಧಿಪತಿ ಸ್ಥಾನ

ದಾವಣಗೆರೆ: ವೀರಶೈವ ಪಂಚಮಸಾಲಿ ಪೀಠದ ಸ್ಥಿರ ಪೀಠಾಧಿಪತಿಯ ಸ್ಥಾನವನ್ನು ಚರಪೀಠಾಧಿಪತಿಯೂ ಆದ ಸಿದ್ದಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ಕ್ರಿಯಾ ಸಮಾಧಿಗೂ ಮುನ್ನ ಅಲಂಕರಿಸಿದರು.

ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು ಹಾಗೂ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಸಿದ್ದಲಿಂಗೇಶ್ವರ ಶ್ರೀಗಳಿಗೆ ಹಿರಿಯ ಗುರುಗಳ ರುದ್ರಾಕ್ಷಿ ಕಿರೀಟ ಹಾಗೂ ಸ್ಥಿರಮುದ್ರಿಕೆ ಉಂಗುರ ತೊಡಿಸುವ ಮೂಲಕ ಮಠದ ಸಮಸ್ತ ಜವಾಬ್ದಾರಿ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry