ಕ್ರಿಸ್ಮಸ್ ಸಡಗರ...ಕ್ರೈಸ್ತರ ಸಂಭ್ರಮ...

7

ಕ್ರಿಸ್ಮಸ್ ಸಡಗರ...ಕ್ರೈಸ್ತರ ಸಂಭ್ರಮ...

Published:
Updated:

ಬಳ್ಳಾರಿ: ಏಸು ಕ್ರಿಸ್ತನ ಜನ್ಮದಿನದ ಶುಭ ಘಳಿಗೆ ಸಮೀಪಿ ಸುತ್ತಿದೆ. `ಕ್ರಿಸ್ಮಸ್' ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಕ್ರೈಸ್ತರ ಮನೆಗಳಲ್ಲಿ ಈಗ ಸಂಭ್ರಮ ಮೇರೆಮೀರಿದೆ.ಕಳೆದ 3 ದಿನಗಳಿಂದ ಏಸು ಕ್ರಿಸ್ತನ ಜನನದ ಮಹತ್ವ ಸಾರುವ `ಗೀತಗಾಯನ' (ಕ್ಯಾರಲ್) ಕಾರ್ಯಕ್ರಮವನ್ನು ಕ್ರೈಸ್ತ ಬಾಂಧವರು ಆರಂಭಿಸಿದ್ದು, `ಎಂಥ ಮಗುವನ್ನು ಹೆತ್ತೆಯಮ್ಮ .. ಲೋಕಕ್ಕೆ ಸಂತಸ ನೀಡಿದ ಬಾಲ ಯೇಸುವಿನ ಹೆತ್ತೆಯಮ್ಮ...' ಎಂಬ ಜನಪದ ಧಾಟಿಯ ಗೀತೆಯನ್ನು ಪ್ರಸ್ತುತಪಡಿಸುವ ಕ್ರೈಸ್ತ ಗುರುಗಳು ಮನೆಮನೆಗೆ ತೆರಳಿ, ಅಭ್ಯುದಯ ಕೋರುತ್ತಿದ್ದಾರೆ.ಉಡುಗೊರೆಗಳ ಭರಾಟೆಗೆ ಚಾಲನೆ ದೊರೆತಿದೆ. ಪ್ರತಿ ಮನೆಯ ಅಂಗಳಗಳು ವಿಶೇಷವಾಗಿ ಅಲಂಕೃತಗೊಂಡಿದ್ದು, ವಿದ್ಯುದ್ದೀಪಗಳು ಬಂಧು- ಮಿತ್ರರನ್ನು ಸ್ವಾಗತಿಸುತ್ತಿವೆ.ಸರಿಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಮಾತೆ ಮೇರಿ ಯೇಸುವಿಗೆ ಗೋದಲಿಯೊಂದರಲ್ಲಿ ಜನ್ಮ ನೀಡಿದ್ದರಿಂದ, ಇದೀಗ ಮನೆಮನೆಗಳಲ್ಲಿ ಗೋದಲಿಯ (ಕ್ರಿಬ್) ಮಾದರಿ ನಿರ್ಮಿಸಿ ವಿಶೇಷ ಪೂಜೆಗೆ ಅಣಿಗೊಳಿಸಲಾಗುತ್ತಿದೆ.ಹೊಳೆಯುವ ನಕ್ಷತ್ರ: ಪ್ರತಿ ಮನೆಗಳೆದುರು ನಕ್ಷತ್ರ ದಾಕಾರದ ಆಕಾಶ ಬುಟ್ಟಿಗಳು ಫಳಫಳ ಹೊಳೆಯುತ್ತಿದೆ. `ಏಸು ಜನಿಸಿದ ದಿನ ಅದೇ ಹಾದಿಯಲ್ಲಿ ಹೊರಟಿದ್ದ ಜ್ಞಾನಿಗಳಿಗೆ ನಕ್ಷತ್ರವೊಂದು ಗೋಚರಿಸಿ, ದೈವ ಸ್ವರೂಪಿಯ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟಿತು' ಎಂಬ ಪ್ರತೀತಿ ಇರುವುದರಿಂದ ಪ್ರತಿ ಮನೆಗಳೆದುರು ಅದೇ ಮಾದರಿಯ ನಕ್ಷತ್ರಕ್ಕೆ ಪರಮ ಪೂಜ್ಯನೀಯ ಸ್ಥಾನ ನೀಡಲಾಗುತ್ತದೆ.

ಕ್ರಿಸ್ಮಸ್ ಸಂಭ್ರಮಾಚರಣೆ ಆರಂಭಿಸುವ ಸಂಪ್ರದಾಯಕ್ಕೆ ನಗರದಲ್ಲಿ ಕಳೆದ ಶುಕ್ರವಾರ ಸಂಜೆ ಚಾಲನೆ ದೊರೆತಿದ್ದು, ಕ್ರೈಸ್ತರ ಮನೆಗಳಲ್ಲಿ ಮೊಂಬತ್ತಿಯ ಬೆಳಕು ಪ್ರೀತಿ, ಸಹಬಾಳ್ವೆಯನ್ನು ಸಾರುತ್ತಿದೆ.ಏಸು ಕ್ರಿಸ್ತ ಜನಿಸಿರುವ ಗೋದಲಿ (ಕ್ರಿಬ್)ಯ ಮಾದರಿಯನ್ನು ಸಿದ್ಧಪಡಿಸಿ, ಬಣ್ಣಬಣ್ಣದ ನಕ್ಷತ್ರಗಳು, ವಿದ್ಯುದ್ದೀಪಗಳಿಂದ ಮನೆಯನ್ನು ಅಲಂಕರಿಸಿರುವ ನಗರದ ಕಂಟೋನ್‌ಮೆಂಟ್ ಪ್ರದೇಶದ ನಿವಾಸಿ ಗೊನ್ಸಾಲ್ವೀಸ್ ಮಂಗಳವಾರ ನಡೆಯಲಿರುವ ಕ್ರಿಸ್ಮಸ್ ಸಡಗರ ಹಾಗೂ ಸೋಮವಾರ ರಾತ್ರಿಯ ಪ್ರಾರ್ಥನೆಗೆ ಅಣಿಗೊಳ್ಳುತ್ತಿದ್ದಾರೆ.ಸರ್ವಸಿದ್ಧತೆ: ಕ್ರಿಸ್ಮಸ್ ದಿನದ ಮುನ್ನದಿನವಾದ ಸೋಮವಾರ `ಪ್ರಜಾವಾಣಿ'ಯ ಪ್ರತಿನಿಧಿ ಅವರ ಮನೆಗೆ ಭೇಟಿ ನೀಡಿದಾಗ ವಿಶೇಷ ಆಚರಣೆಗೆ ಸರ್ವ ಸಿದ್ಧತೆಗಳು ನಡೆದಿದ್ದು ಕಂಡುಬಂತು.ಕಳೆದ ಮೂರು ದಿನಗಳಿಂದ ನಿತ್ಯ ಸಂಜೆ ಧರ್ಮಗುರುಗಳ ನೇತೃತ್ವದ ತಂಡವು  ಹಬ್ಬದ ಸಂತಸ ಹಂಚಿಕೊಳ್ಳುವ ಉದ್ದೇಶದಿಂದ ವಾದ್ಯ ವೃಂದಗಳೊಂದಿಗೆ  ಮನೆಮನೆಗೆ ತೆರಳಿ, `ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ' ಎಂದು ಕೋರುವ ಪ್ರಾರ್ಥನೆಯನ್ನು ಸಲ್ಲಿಸುತ್ತಿದೆ ಎಂದರು.ಸಾಂತಾ ಕ್ಲಾಸ್ ವೇಷಧಾರಿಯು ಚುಮುಚುಮು ಚಳಿಯನ್ನೂ ಲೆಕ್ಕಿಸದೆ ಹಾಡು  ಕುಣಿತದೊಂದಿಗೆ ಮನರಂಜನೆ ನೀಡುತ್ತಿದ್ದು, ಹಬ್ಬಕ್ಕೆಂದೇ ಸಿದ್ಧಪಡಿಸಿದ ಕೇಕ್, ಚಾಕಲೇಟ್‌ಗಳನ್ನು ವಿತರಿಸಿ, ಅಲಂಕೃತ ಗೋದಲಿಯ ಎದುರು ಕ್ರಿಸ್ಮಸ್ ಗೀತೆಗಳನ್ನು   ಹಾಡಿ ನಲಿಯುತ್ತಿದ್ದಾರೆ.ಜೀವನದ ಎಲ್ಲ ಜಂಜಡಗಳನ್ನೂ ಮರೆತು, ದೇವರನ್ನು ಸ್ಮರಿಸುತ್ತ ಸಂತಸವನ್ನು ಹಂಚಿಕೊಳ್ಳುವುದೇ ಈ ಆಚರಣೆಯ ಮೂಲ ಉದ್ದೇಶವಾಗಿದ್ದು, ಮುಂಚಿತವಾಗಿಯೇ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬಕ್ಕೆ ಅಣಿಯಾಗುವಂತೆ ಪ್ರೇರೇಪಿಸಲಾಗುತ್ತದೆ.ಪ್ರೀತಿ, ಶಾಂತಿ, ಕ್ಷಮೆಯ ಮಹತ್ವ ಸಾರುತ್ತ, ಪಾಪ ನಿವೇದನೆ ಮಾಡಿಕೊಂಡು, ಆಧ್ಯಾತ್ಮ ಪರಿವರ್ತನೆಗೆ ಹಾತೊರೆ ಯುವ ಮನಸುಗಳು ಎಲ್ಲರೊಂದಿಗೆ ಒಂದಾಗಿ ಹರ್ಷಿಸುವ ಕ್ರಿಸ್ಮಸ್‌ನ ಸಂಭ್ರಮ ತಾರಕಕ್ಕೇರಿದೆ.ನಗರದಲ್ಲಿರುವ ವಿವಿಧ ಚರ್ಚ್‌ಗಳನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಮಂಗಳವಾರದ ಬೆಳಗಿನ ಪ್ರಾರ್ಥನೆಗೆ ವೇದಿಕೆ ಸಿದ್ಧಗೊಳ್ಳುತ್ತಿದೆ.ಹೊಸ ವರ್ಷದ ಹೊಸ್ತಿಲಲ್ಲಿ, ಹೊಸಬಟ್ಟೆ ಹಾಕಿಕೊಂಡು ಸ್ನೇಹಿತರು, ಸಂಬಂಧಿಗಳ ಜತೆ ಹರ್ಷವನ್ನು ಆಚರಿಸಲು ಕ್ರೈಸ್ತರು ಕಾತರರಾಗಿದ್ದಾರೆ. ನಗರದಲ್ಲಿರುವ ಸಾವಿರಾರು ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಲೆಂದೇ  ನೂರಾರು ವರ್ಷಗಳಷ್ಟು ಹಳೆಯ ಚರ್ಚ್‌ಗಳಲ್ಲಿ ವೇದಿಕೆ ಅಣಿಗೊಳಿಸಲಾಗಿದೆ. ಹಬ್ಬದ ಖರೀದಿಯ ಭರಾಟೆಯೂ ಭರದಿಂದ ಸಾಗಿದ್ದು, ಕ್ರಿಸ್‌ಮಸ್ ಟ್ರೀ ಮತ್ತಿತರ ವಸ್ತುಗಳು ಮನೆಯನ್ನು ಬೆಳಗುತ್ತಿವೆ. ಕೇಕ್ ಮತ್ತಿತರ ಸಿಹಿ ತಿನಿಸುಗಳನ್ನು ತಯಾರಿಸುವಲ್ಲಿ ಕ್ರೈಸ್ತ ಮಹಿಳೆಯರು ನಿರತರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry