ಗುರುವಾರ , ನವೆಂಬರ್ 21, 2019
20 °C

ಕ್ರಿಸ್ ಗೇಲ್ `ಮಹಾಸ್ಫೋಟ'

Published:
Updated:

ಬೆಂಗಳೂರು: `ಗೇಲ್ ಬ್ಯಾಟಿಂಗ್ ಮಾಡುವಾಗ ಫೀಲ್ಡರ್‌ಗಳು ಪ್ರೇಕ್ಷಕರಾಗುವರು; ಪ್ರೇಕ್ಷಕರು ಫೀಲ್ಡರ್‌ಗಳಾಗುವರು'

- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಕ್ರಿಸ್ ಗೇಲ್ ಬ್ಯಾಟ್‌ನಿಂದ ಸಿಕ್ಸರ್ ಹಾಗೂ ಬೌಂಡರಿಗಳು ಸಿಡಿಯುತ್ತಿದ್ದಾಗ ಹರಭಜನ್ ಸಿಂಗ್ `ಟ್ವಿಟರ್'ನಲ್ಲಿ ಬರೆದ ಸಂದೇಶ ಇದು. ಗೇಲ್ ಆಟದ ಅಬ್ಬರವನ್ನು ಈ ಒಂದು ವಾಕ್ಯದಲ್ಲಿ ಸೆರೆಹಿಡಿಯಬಹುದು.ವೆಸ್ಟ್‌ಇಂಡೀಸ್‌ನ ಈ `ಭುಜಬಲ ಪರಾಕ್ರಮಿ' ಪುಣೆ ವಾರಿಯರ್ಸ್ ವಿರುದ್ಧ ಗಳಿಸಿದ ಅಜೇಯ 175 ರನ್‌ಗಳು ಕೇವಲ ಟ್ವೆಂಟಿ-20 ಪಂದ್ಯ ಮಾತ್ರವಲ್ಲ, ಕ್ರಿಕೆಟ್‌ನ ಇತಿಹಾಸದಲ್ಲಿ ಮೂಡಿಬಂದ ಅದ್ಭುತ ಇನಿಂಗ್ಸ್‌ಗಳಲ್ಲಿ ಒಂದಾಗಿದೆ.ಗೇಲ್ ಈ ಇನಿಂಗ್ಸ್ ಮೂಲಕ ಹಲವು ದಾಖಲೆಗಳಿಗೆ ಒಡೆಯರಾದರು.  ಟ್ವೆಂಟಿ-20 ಪಂದ್ಯದಲ್ಲಿ ಅತಿವೇಗದ ಶತಕ (30 ಎಸೆತ), ಅತ್ಯಧಿಕ ವೈಯಕ್ತಿಕ ಮೊತ್ತ, ಅತಿಹೆಚ್ಚಿನ ಸಿಕ್ಸರ್‌ಗಳು (17) ಒಳಗೊಂಡಂತೆ ಇನ್ನೂ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು.ಐಪಿಎಲ್‌ನಲ್ಲಿ ಗೇಲ್ ಆಟ ಏನು ಎಂಬುದು ಎಲ್ಲರಿಗೂ ತಿಳಿದದ್ದೇ. ಆದರೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಬ್ಯಾಟಿಂಗ್‌ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಆಕ್ರಮಣವನ್ನು ಮೈಗೂಡಿಸಿಕೊಂಡು ಆಡಿದರೂ ಗೇಲ್ ತಮ್ಮ ಇನಿಂಗ್ಸ್‌ನ ಉ್ದ್ದದಕ್ಕೂ ಯಾವುದೇ ತಪ್ಪು ಮಾಡಲಿಲ್ಲ. ಅವರನ್ನು ಔಟ್ ಮಾಡುವ ಅವಕಾಶ ಎದುರಾಳಿ ತಂಡಕ್ಕೆ ಒಮ್ಮೆಯೂ ಲಭಿಸಲಿಲ್ಲ.ಗೇಲ್ ಅಬ್ಬರದ ಆಟದಿಂದ ರಾಯಲ್ ಚಾಲೆಂಜರ್ಸ್ ತಂಡ ಈ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 130 ರನ್‌ಗಳ ಜಯ ಪಡೆಯಿತು. ಗೆಲುವಿಗೆ 263 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ವಾರಿಯರ್ಸ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 133 ರನ್ ಗಳಿಸಲಷ್ಟೇ ಶಕ್ತವಾಯಿತು. 

ಪ್ರತಿಕ್ರಿಯಿಸಿ (+)