ಭಾನುವಾರ, ಡಿಸೆಂಬರ್ 15, 2019
26 °C

`ಕ್ರೀಡಾಂಗಣಕ್ಕೆ ಕರಿಬಸಪ್ಪ ಹೆಸರಿಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕ್ರೀಡಾಂಗಣಕ್ಕೆ ಕರಿಬಸಪ್ಪ ಹೆಸರಿಡಿ'

ಬಳ್ಳಾರಿ: ನಗರದ ಡಾ. ರಾಜಕುಮಾರ್ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ನೂತನ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಅಲ್ಲಂ ಕರಿಬಸಪ್ಪ ಅವರ ಹೆಸರು ಇರಿಸುವಂತೆ  ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಂಸದ ಕೆ.ಸಿ. ಕೊಂಡಯ್ಯ ತಿಳಿಸಿದರು.ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಅಲ್ಲಂ ಕರಿಬಸಪ್ಪ ಅವರ 99ನೇ ಜನ್ಮದಿನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕಲೆ, ಶಿಕ್ಷಣ,  ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರಕ್ಕೆ ಕರಿಬಸಪ್ಪ ಅವರು ಸಲ್ಲಿಸಿರುವ ಸೇವೆ ಸ್ಮರಣೀಯವಾಗಿದೆ. ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಹಾಗೂ ಮುಂದಿನ ವರ್ಷ ನಡೆಯಲಿರುವ ಕರಿಬಸಪ್ಪ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ  ನಗರದ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಅವರ ಹೆಸರನ್ನೇ ಇರಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.ವೀರಶೈವ ಸಮಾಜಕ್ಕೆ ಅಲ್ಲಂ ಕರಿಬಸಪ್ಪ ಅವರ ಕೊಡುಗೆ ಅಪಾರ. ಜಿಲ್ಲೆಯಲ್ಲಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆ ಆರಂಭವಾಗಲು ಅವರ ಶ್ರಮ ಸ್ಮರಣೀಯವಾಗಿದೆ. ಅವರು ಸತತ ಪರಿಶ್ರಮದಿಂದ ಆರಂಭಿಸಿದ ವಿದ್ಯಾವರ್ಧಕ ಸಂಸ್ಥೆ ಇದೀಗ ಹೆಮ್ಮರವಾಗಿ ಬೆಳೆದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ತಿಪ್ಪಣ್ಣ ತಿಳಿಸಿದರು.ಅಲ್ಲಂ ಕರಿಬಸಪ್ಪ ಅವರು ರಾಜ್ಯದ ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.  ಅವರ ಸಮಯಪ್ರಜ್ಞೆ, ಶಿಸ್ತು, ಆದರ್ಶ ಇಂದಿನ ಪೀಳಿಗೆಗೆ ಮಾದರಿ ಎಂದು ಕರಿಬಸಪ್ಪ ಅವರ ಪುತ್ರ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಸ್ಮರಿಸಿದರು.ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಚೆನ್ನಪ್ಪ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಕೌಡಕಿ ಉಮಾಪತೆಪ್ಪ, ನರಸೇಪಲ್ಲಿ ನಾಗರಾಜ, ಕಾರ್ಯದರ್ಶಿ ಪಿ. ಗಾದೆಪ್ಪ, ಉಪಾಧ್ಯಕ್ಷ ಕೆ. ಕೋಟೇಶ್ವರರಾವ್, ಖಜಾಂಚಿ ಅಲ್ಲಂ ದೊಡ್ಡಪ್ಪ, ಕೆ.ಚಂದ್ರಶೇಖರ್  ಉಪಸ್ಥಿತರಿದ್ದರು. ಅಸೋಸಿಯೇಷನ್ ಅಧ್ಯಕ್ಷ ಸೀಲಾ ಬ್ರಹ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸುಭದ್ರಮ್ಮ ಮನ್ಸೂರ್, ಬೆಳಗಲ್ ವೀರಣ್ಣ, ಶಂಕರ್ ನಾಯ್ಡು, ರಮೇಶಗೌಡ ಪಾಟೀಲ್, ಪುರುಷೋತ್ತಮ ಹಂದ್ಯಾಳ್, ಜಿ. ಆರ್. ವೆಂಕಟೇಶಲು, ಎಂ. ರಾಮಾಂಜಿನೇಯಲು, ಡಿ.ಎಚ್. ಕೃಷ್ಣಮೂರ್ತಿ, ಕೆ. ಸುರೇಂದ್ರ ಬಾಬು, ಡಿ.ಸುಬಣ್ಣ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಕೆ.ಸುರೇಂದ್ರಬಾಬು ಕಾರ್ಯಕ್ರಮ ನಿರೂಪಿಸಿದರು.  ಪಿ.ಗಾದೆಪ್ಪ ವಂದಿಸಿದರು.ನಂತರ ಮಹಾದೇವ ತಾತ ಕಲಾಸಂಘದ ವತಿಯಿಂದ `ಮೋಹಿನಿ ಭಸ್ಮಾಸುರ'  ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.

ಪ್ರತಿಕ್ರಿಯಿಸಿ (+)