ಕ್ರೀಡಾಂಗಣ ಅಭಿವೃದ್ಧಿಗೆ ನೆರವು: ಸಚಿವರ ಭರವಸೆ

7
ಹೊಳಲ್ಕೆರೆ: ಪಿಯು ಕಾಲೇಜುಮಟ್ಟದ ಕ್ರೀಡಾಕೂಟಕ್ಕೆ ಆಂಜನೇಯ ಚಾಲನೆ

ಕ್ರೀಡಾಂಗಣ ಅಭಿವೃದ್ಧಿಗೆ ನೆರವು: ಸಚಿವರ ಭರವಸೆ

Published:
Updated:

ಹೊಳಲ್ಕೆರೆ: ಪಟ್ಟಣದಲ್ಲಿ ಅವ್ಯವಸ್ಥೆಯ ಗೂಡಾಗಿರುವ ತಾಲ್ಲೂಕು ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಹಣಕಾಸಿನ ನೆರವು ನೀಡಲಾಗುವುದು ಎಂದು ಸಮಾಜಕಲ್ಯಾಣ ಸಚಿವ ಎಚ್. ಆಂಜನೇಯ ಭರವಸೆ ನೀಡಿದರು.ಪಟ್ಟಣದಲ್ಲಿ ಶುಕ್ರವಾರ ನಡೆದ ಪಿಯು ಕಾಲೇಜುಗಳ ತಾಲ್ಲೂಕುಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಮಾರು ಹತ್ತಾರು ವರ್ಷಗಳಿಂದ ಇಲ್ಲಿನ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಲೇ ಇದೆ. ಆದರೆ, ಕ್ರೀಡಾಂಗಣ ಮಾತ್ರ ಯಾವುದೇ ಅಭಿವೃದ್ಧಿ ಕಂಡಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಇರುವ ಈ ಕ್ರೀಡಾಂಗಣಕ್ಕೆ ಸಾಕಷ್ಟು ಜಾಗವಿದ್ದರೂ ಅವ್ಯವಸ್ಥೆಗಳಿಂದ ಇಲ್ಲಿಗೆ ಯಾರೂ ಬರುತ್ತಿಲ್ಲ. ಈ ಬಗ್ಗೆ ವಿವರಗಳನ್ನು ಪಡೆದು ಕ್ರೀಡಾಂಗಣ ಅಭಿವೃದ್ಧಿಪಡಿಸುವ ಬಗ್ಗೆ ಕ್ರಮಕೈಗೊಳ್ಳಲಾಗವುದು ಎಂದು ಹೇಳಿದರು.ವಿದ್ಯಾರ್ಥಿಗಳು ಪಠ್ಯ ವಿಷಯಗಳೊಂದಿಗೆ ಕ್ರೀಡೆಯಲ್ಲೂ ಹೆಚ್ಚಿನ ಆಸಕ್ತಿ ವಹಿಸಿಕೊಳ್ಳಬೇಕು. ಸರ್ಕಾರ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದು, ಸಮರ್ಥ ಕ್ರೀಡಾಪಟುಗಳು ಹೊರಹೊಮ್ಮುತ್ತಿಲ್ಲ. ಕ್ರೀಡಾಪಟುಗಳು ಜಿಲ್ಲೆ, ರಾಜ್ಯಮಟ್ಟಕ್ಕೆ ಹೋಗುವ ಹೊತ್ತಿಗೆ ಸುಸ್ತಾಗುತ್ತಾರೆ. ರಾಷ್ಟ್ರಮಟ್ಟಕ್ಕೆ ಹೋಗುವ ಕ್ರೀಡಾಪಟುಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಈಚೆಗೆ ಯೋಗ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಆಂಜನೇಯ ಹೇಳಿದರು.ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮೋಹನ್ ನಾಗರಾಜ್ ಮಾತನಾಡಿ, ಯುವಕರು ದುಶ್ಚಟಗಳಿಂದ ದೂರವಿದ್ದು, ಕ್ರೀಡೆಗಳಲ್ಲಿ ತೊಡಗಬೇಕು. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಲಭಿಸುತ್ತದೆ. ನಂಬಿಕೆ ಮತ್ತು ಆತ್ಮವಿಶ್ವಾಸಗಳಿಂದ ಆಡಿದರೆ ಯಶಸ್ಸು ಲಭಿಸುತ್ತದೆ ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯ ಪಿ.ಆರ್. ಶಿವಕುಮಾರ್, ಪ್ರಾಂಶುಪಾಲ ರಾಜಶೇಖರಪ್ಪ, ಬಿಇಒ ಎಸ್.ಆರ್. ಮಂಜುನಾಥ್, ಡಾ.ಎಚ್.ಜಿ. ಉಮಾಪತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry