ಕ್ರೀಡಾಂಗಣ ಎಂಬ ಬಯಲು ಶೌಚಾಲಯ !

7

ಕ್ರೀಡಾಂಗಣ ಎಂಬ ಬಯಲು ಶೌಚಾಲಯ !

Published:
Updated:
ಕ್ರೀಡಾಂಗಣ ಎಂಬ ಬಯಲು ಶೌಚಾಲಯ !

ಅಂಗಳದ ಅಂಚಿನಲ್ಲಿ ಬಿದ್ದಿರುವ ಮದ್ಯದ ಖಾಲಿ ಶೀಷೆಗಳು. ಅನತಿ ದೂರದಲ್ಲಿ ತಂಬಿಗೆ ಹಿಡಿದು ಮಲವಿಸರ್ಜನೆಗೆ ಕುಳಿತಿರುವ ನಾಗರಿಕರು. ರಸ್ತೆಬದಿಯಿಂದ ಅಂಗಳದತ್ತ ನುಗ್ಗುತ್ತಿರುವ ವರಾಹಸಂಕುಲ. ಗಬ್ಬುವಾಸನೆ ನಡುವೆ ಮುಂಜಾನೆಯ ಹೆಜ್ಜೆ ಹಾಕುತ್ತಿರುವ ವಾಯುವಿಹಾರಿಗಳು. ಈ ನಡುವೆ ಶಬ್ದ ಮಾಡುತ್ತ ಚಲಿಸುವ ಚಾಲನಾ ತರಬೇತಿ ನೀಡುವ ಕಾರುಗಳನ್ನು ನೋಡಬೇಕಿದ್ದರೆ ಚಾಮರಾಜನಗರದ ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ನೀವೊಮ್ಮೆ ಭೇಟಿ ನೀಡಬೇಕು.ಕ್ರೀಡಾಪಟುಗಳ ಸಾಧನೆಗೆ ಸ್ಫೂರ್ತಿಯಾಗಬೇಕಿದ್ದ ಕ್ರೀಡಾಂಗಣ ಅಭಿವೃದ್ಧಿ ಕಾಣದೆ ಸಂಪೂರ್ಣ ಸೊರಗಿದೆ. ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಮಾತಿನಲ್ಲಿ ಅರ್ಥವೇ ಉಳಿದಿಲ್ಲ.ಕ್ರೀಡಾಂಗಣದ ಒಂದು ಮೂಲೆಯಲ್ಲಿ ಖಾಸಗಿ ಬಸ್‌ನಿಲ್ದಾಣಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಇಲ್ಲಿ ಷಟಲ್ ಬ್ಯಾಡ್ಮಿಂಟನ್‌ಗಾಗಿ ಎರಡು ಅಂಕಣ ನಿರ್ಮಿಸಲಾಗಿದೆ. ಉಳಿದಂತೆ ಯಾವುದೇ ಒಳಾಂಗಣ ಕ್ರೀಡೆ ಆಡಲು ಅವಕಾಶವಿಲ್ಲ.ಸದಸ್ಯತ್ವ ಪಡೆದ ಯಾರು ಬೇಕಾದರೂ ಷಟಲ್ ಬ್ಯಾಡ್ಮಿಂಟನ್ ಆಡಬಹುದು ಎಂಬುದು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ `ನೀತಿ'. ಇದು ಭವಿಷ್ಯದಲ್ಲಿ ಉತ್ತಮ ಬ್ಯಾಡ್ಮಿಂಟನ್‌ಪಟುಗಳ ಸೃಷ್ಟಿಗೆ ಕೊಡಲಿಪೆಟ್ಟು ನೀಡಿದೆ. ಹೀಗಾಗಿ, ಹವ್ಯಾಸಿಗಳದ್ದೇ ಕಾರುಬಾರು. ಇಲಾಖೆಯಡಿ 100ಕ್ಕೂ ಹೆಚ್ಚು ಮಂದಿಗೆ ಒಳಾಂಗಣ ಕ್ರೀಡಾಂಗಣದ ಸದಸ್ಯತ್ವ ದೊರೆತಿದೆ. ಇದರಲ್ಲಿ ಮುಕ್ಕಾಲು ಭಾಗ ಅಧಿಕಾರಿಗಳು, ರಾಜಕಾರಣಿಗಳು, ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳೇ ಇದ್ದಾರೆ !ಬೆಳಿಗ್ಗೆಯೇ ತಂಡೋಪತಂಡವಾಗಿ ದಾಂಗುಡಿ ಇಡುತ್ತಾರೆ. ಆದರೆ, ಯುವ ಕ್ರೀಡಾಪಟುಗಳಿಗೆ ಸಮಯಾವಕಾಶ ಲಭಿಸುವುದು ಕಡಿಮೆ. ಜಿಲ್ಲೆಯ ಶಾಲಾ- ಕಾಲೇಜಿನಲ್ಲಿ ಉತ್ತಮ ಬ್ಯಾಡ್ಮಿಂಟನ್‌ಪಟುಗಳಿದ್ದಾರೆ. ಅವರಿಗೆ ಪ್ರೋತ್ಸಾಹ ಸಿಕ್ಕಿಲ್ಲ. ಇಲಾಖೆಯಿಂದಲೂ ಅಂತಹವರನ್ನು ಗುರುತಿಸಿ ತರಬೇತಿ ನೀಡುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.ಒಳಾಂಗಣ ಕ್ರೀಡಾಂಗಣಕ್ಕೆ ಅಂಟಿಕೊಂಡಂತೆ ಬ್ಯಾಸ್ಕೆಟ್‌ಬಾಲ್ ಅಂಗಳವಿದ್ದು, ಅವ್ಯವಸ್ಥೆಯ ಆಗರವಾಗಿದೆ. ಕೆಲವೆಡೆ ಸಿಮೆಂಟ್ ಹೊದಿಕೆ ಮೇಲಿದ್ದಿದೆ. ಬ್ಯಾಸ್ಕೆಟ್ ಬೋರ್ಡ್ ಒಡೆದುಹೋಗಿದೆ. ಅಂಗಳದ ಪಕ್ಕದಲ್ಲಿಯೇ ಮದ್ಯದ ಖಾಲಿ ಬಾಟಲಿಗಳ ಚೂರುಗಳು ಎಲ್ಲೆಂದರಲ್ಲಿ ಬಿದ್ದಿವೆ. ಅಂಗಳದ ಒಂದು ಭಾಗದಲ್ಲಿ ಮುಳ್ಳಿನಪೊದೆಗಳು ಬೆಳೆದಿವೆ. ಹೀಗಾಗಿ, ಈ ಪ್ರದೇಶ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.ಸಂಜೆಯಾಗುತ್ತಲೇ ರಸ್ತೆಬದಿಯಲ್ಲಿ ಇರುವ ಮದ್ಯದ ಅಂಗಡಿಯಿಂದ ಬಾಟಲಿಯೊಂದಿಗೆ ಅಂಗಳದತ್ತ ಕುಡುಕರ ಸವಾರಿ ಆರಂಭವಾಗುತ್ತದೆ. ಮಧ್ಯರಾತ್ರಿವರೆಗೂ ಅವರ ಹಾವಳಿ ವಿಜೃಂಭಿಸುತ್ತದೆ. ಕುಡಿದ ಮತ್ತಿನಲ್ಲಿ ಅಂಗಳದಲ್ಲಿಯೇ ಬಾಟಲಿ ಒಡೆದುಹಾಕುವ ಮಂದಿಯೂ ಇದ್ದಾರೆ.ಬೆಳಿಗ್ಗೆ ಬಾಟಲಿ ಚೂರುಗಳನ್ನು ಎತ್ತಿಹಾಕಲು ಕ್ರೀಡಾ ಇಲಾಖೆಯ ರಕ್ಷಣಾ ಸಿಬ್ಬಂದಿ ಅನುಭವಿಸುವ ಸಂಕಷ್ಟ ಹೇಳತೀರದು. ಕ್ರೀಡಾಂಗಣದಲ್ಲಿ ವಾಲಿಬಾಲ್‌ಗೆ ಪ್ರತ್ಯೇಕ ಅಂಗಳವಿಲ್ಲ. ಸ್ಪರ್ಧೆ ಇದ್ದಾಗಲಷ್ಟೇ ಕಚೇರಿಯಲ್ಲಿರುವ ಕಂಬಗಳನ್ನು ಹೊತ್ತೊಯ್ದು ನೆಡುತ್ತಾರೆ. ಸ್ಪರ್ಧೆ ಮುಗಿದ ನಂತರ ಮತ್ತೆ ಕಚೇರಿಯ ಮೂಲೆಯಲ್ಲಿ ಕಂಬಗಳು ತಳವೂರುತ್ತವೆ.ಐದಾರು ವರ್ಷಗಳ ಹಿಂದೆ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು ಎಂಬ ಚಿಂತನೆ ಮೊಳಕೆಯೊಡೆದಿತ್ತು. ಇದಕ್ಕಾಗಿ ಈಗಿರುವ ಬಸ್‌ನಿಲ್ದಾಣದ ಸ್ಥಳ ಗುರುತಿಸಲಾಗಿತ್ತು. ಆದರೆ, ನಗರದ ಮಧ್ಯದಲ್ಲಿದ್ದ ನಿಲ್ದಾಣ ಕ್ರೀಡಾಂಗಣದ ಮೂಲೆಗೆ ಸ್ಥಳಾಂತರಗೊಂಡಾಗ ಕ್ರೀಡಾ ಇಲಾಖೆಯ ಎಲ್ಲ ಲೆಕ್ಕಾಚಾರ ತಲೆಕೆಳಕಾಯಿತು. ಇತ್ತೀಚೆಗೆ ಆಧುನಿಕ ಮಾದರಿಯ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಸಂಬಂಧ ಪ್ರಸ್ತಾವ ಸಲ್ಲಿಸುವಂತೆ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಕೋರಿಕೆ ಪತ್ರ ಬಂದಿತ್ತು. ಆದರೆ, ಸ್ಥಳಾವಕಾಶದ ನೆಪವೊಡ್ಡಿದ ಪರಿಣಾಮ ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಕನಸು ಮರೀಚಿಕೆಯಾಗಿದೆ.`ರಾತ್ರಿವೇಳೆ ಕ್ರೀಡಾಂಗಣದಲ್ಲಿ ಕುಡುಕರ ಹಾವಳಿ ಹೆಚ್ಚುತ್ತಿರುವುದು ನಿಜ. ಅವರನ್ನು ಹೊರಗೆ ಕಳುಹಿಸಲು ಮುಂದಾಗುವ ಇಲಾಖೆಯ ಸಿಬ್ಬಂದಿ ಮೇಲೆಯೇ ದಾಳಿ ನಡೆಸಿರುವ ಹಲವು ನಿದರ್ಶನಗಳಿವೆ. ಬ್ಯಾಸ್ಕೆಟ್‌ಬಾಲ್ ಅಂಗಳ ಸೇರಿದಂತೆ ಕ್ರೀಡಾಂಗಣದ ಸುತ್ತಲೂ ಕಬ್ಬಿಣದ ಬೇಲಿ ಅಳವಡಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ 2 ಕೋಟಿ ರೂ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಲಭಿಸಿದರೆ ಕ್ರೀಡಾಂಗಣದ ಭದ್ರತೆಗೆ ಕ್ರಮವಹಿಸಲಾಗುವುದು' ಎನ್ನುತ್ತಾರೆ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ. ಚೆಲುವಯ್ಯ.`ಸದ್ಯಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಧುನಿಕ ಮಾದರಿಯ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಥಳವಿಲ್ಲ. ಹೀಗಾಗಿ, ಈ ಯೋಜನೆ ಕಾರ್ಯಗತಗೊಂಡಿಲ್ಲ. ಬೇರೆಡೆ ಸ್ಥಳ ಲಭಿಸಿದರೆ ಕ್ರೀಡಾಂಗಣ ನಿರ್ಮಾಣಕ್ಕೆ ಒತ್ತು ನೀಡಲಾಗುವುದು' ಎನ್ನುತ್ತಾರೆ ಅವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry