ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ

7

ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಮೀಸಲಾತಿ

Published:
Updated:

 ಚಿತ್ರದುರ್ಗ: ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಮೀಸಲಾತಿ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಕ್ರೀಡಾ ಸಚಿವ ಅಪ್ಪಚ್ಚುರಂಜನ್ ಹೇಳಿದರು. ಮೀಸಲಾತಿ ಕಲ್ಲಿಸುವ ಕುರಿತು ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ನೀರ್ಣಯ ಕೈಗೊಳ್ಳಲಾಗುವುದು ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡವರಿಗೆ ರೂ 1 ಲಕ್ಷ , ವಿಜೇತರಿಗೆ ರೂ 25 ಲಕ್ಷ  ನಗದು ಬಹುಮಾನ ನೀಡಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪ್ರಸ್ತುತ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸಲು ಹಿಂದೆಟು ಹಾಕುತ್ತಿದ್ದಾರೆ. ಇದನ್ನು ಹೊಗಲಾಡಿಸಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಅಗತ್ಯವಿದೆ. ಆದ್ದರಿಂದ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಸೂಕ್ತ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.ಒಲಿಂಪಿಕ್ಸ್ ಸೇರಿದಂತೆ ಯಾವುದೇ ಕ್ರೀಡಾಕೂಟ ಸಮೀಪಿಸಿದಾಗ ದೇಶದಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ಒತ್ತಡ ಹಾಕಿ ತರಬೇತಿ ನೀಡುತ್ತೇವೆ. ತರಬೇತಿ ಸಮಯದಲ್ಲಿ ಕ್ರೀಡಾಪಟುಗಳು ಸಾಕಷ್ಟು ಬಳಲುವ ಸಾಧ್ಯತೆಯಿದೆ. ಈ ಕಾರಣದಿಂದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಚೀನಾ, ಜಪಾನ್ ದೇಶದಲ್ಲಿ ಪ್ರತಿ ದಿನ 5ರಿಂದ 6ಗಂಟೆ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.ಕ್ರೀಡಾಪಟುಗಳ ಹಿತದೃಷ್ಟಿಯಿಂದ `ಕ್ರೀಡಾ ಸಂಜೀವಿನಿ~ ಎಂಬ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆ ಅಡಿ ಕ್ರೀಡಾಪಟುಗಳು ಕ್ರೀಡಾಕೂಟ ಗಳಲ್ಲಿ ಎನಾದರೂ ಅನಾಹುತ ಸಂಭವಿಸಿದರೆ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಹುದು. ಈ ನಿಟ್ಟಿನಲ್ಲಿ ಜಿಲ್ಲೆಗೆ 300ರಂತೆ ರಾಜ್ಯದಲ್ಲಿ 10ಸಾವಿರ ಯುವಕರನ್ನು ಈ ಯೋಜನೆ ಯಲ್ಲಿ ನೋಂದಾಯಿಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡಾಪಟುಗಳನ್ನು ನೋಂದಣಿ ಮಾಡಿಕೊಳ್ಳುವ ಉದ್ದೇಶವಿದೆ ಎಂದರು.ಕ್ರೀಡಾಪಟುಗಳಿಗೆ ಅಗತ್ಯ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೊಂದು ಸುಸಜ್ಜಿತ ಕ್ರೀಡಾ ಹಾಸ್ಟೆಲ್ ಹಾಗೂ ಕ್ರೀಡಾಂಗಣ ಸ್ಥಾಪಿಸಲಾಗುವುದು. ಈ ಬಗ್ಗೆ ಬಳ್ಳಾರಿ, ಕೊಪ್ಪಳ, ರಾಯಚೂರು ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಶೀಲಿಸಲಾಗಿದೆ. ಹೊಸ ಕ್ರೀಡಾ ನೀತಿ ಜಾರಿಗೊಳಿಸುವ ಮೂಲಕ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಪೌಷ್ಟಿಕ ಆಹಾರ ಸೇರಿದಂತೆ ಕ್ರೀಡಾ ಸಾಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.  ಇಲ್ಲಿಯವರೆಗೂ ಇಲಾಖೆಯಲ್ಲಿ ಕೇವಲ 93 ಸಿಬ್ಬಂದಿ ಇದ್ದು, ಮುಂದಿನ ದಿನಗಳಲ್ಲಿ 290 ಸಿಬ್ಬಂದಿ ನೇಮಕ ಮಾಡಲಾಗುವುದು. ಜಿಲ್ಲೆಗೊಬ್ಬ ಹಿರಿಯ ತರಬೇತುದಾರ ಸೇರಿದಂತೆ 170 ತರಬೇತುದಾರರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಕ್ರೀಡಾಧಿಕಾರಿ ಇಂದಿರಾದೇವಿ, ತರಬೇತುದಾರ ಮಹಿಬುಲ್ಲಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry