ಕ್ರೀಡಾಪಟುಗಳಿಗೆ ರೂ. 100 ತರಬೇತಿ ಭತ್ಯೆ

7

ಕ್ರೀಡಾಪಟುಗಳಿಗೆ ರೂ. 100 ತರಬೇತಿ ಭತ್ಯೆ

Published:
Updated:

ಬೆಂಗಳೂರು: ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆಯ್ಕೆಯಾಗುವ ರಾಜ್ಯದ ಕ್ರೀಡಾ ಪಟುಗಳು ತರಬೇತಿಗೆ ಹಾಜರಾದಾಗ ಪ್ರತಿ ದಿನಕ್ಕೆ 100 ರೂ. ಗಳ ವಿಶೇಷ ತರಬೇತಿ ಭತ್ಯೆ, ಈಜುಕೊಳ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಸೇರಿದಂತೆ ಇತರ ಸೌಲಭ್ಯಗಳನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಈ ಸಲದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.‘ಗುರುವಾರ ವಿಧಾನಸೌಧದಲ್ಲಿ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ, ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾ ಕೂಟ ಮತ್ತು ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾ ಕೂಟಗಳಲ್ಲಿ ಅತ್ಯುತ್ತಮ ಸಾಧನೆ ತೋರಿ ರಾಜ್ಯಕ್ಕೆ ಕೀರ್ತಿ ತಂದ ಕ್ರೀಡಾಪಟುಗಳನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುತ್ತೇನೆ’ ಎಂದು ಹೇಳಿದರು. ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲು ಆಯ್ಕೆಯಾಗುವ ರಾಜ್ಯದ ಕ್ರೀಡಾ ಪಟುಗಳು ತರಬೇತಿಗೆ ಹಾಜರಾದಾಗ ಪ್ರತಿ ದಿನಕ್ಕೆ 100 ರೂ. ಗಳ ವಿಶೇಷ ತರಬೇತಿ ಭತ್ಯೆ ನೀಡಲಾಗುವುದು. ಇದರ ಜೊತೆಗೆ ರಾಜ್ಯದ ಪ್ರತಿಭಾನ್ವಿತ ಕ್ರೀಡಾ ಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲು ಅಗತ್ಯವಿರುವ ಆಧುನಿಕ ತರಬೇತಿ ನೀಡಲು ಈ ಅಯವ್ಯಯದಲ್ಲಿ 10 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ‘ಅವಶ್ಯಕತೆಯಿರುವ ಜಿಲ್ಲೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ಈಜುಕೊಳ ನಿರ್ಮಾಣ ಮಾಡಲು ನಗರಾಭಿವೃದ್ಧಿ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು. ಈ ಉದ್ದೇಶಕ್ಕಾಗಿ 2011-12ನೇ ಸಾಲಿನಲ್ಲಿ ರಾಜ್ಯ ಸರ್ಕಾರವು 10 ಕೋಟಿ ರೂ.ಗಳನ್ನು ಮೀಸಲಿರಿಸಲಿದೆ.  ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕಾಗಿ 5 ಕೋಟಿ ರೂ. ಶಿವಮೊಗ್ಗ ಜಿಲ್ಲೆಯ ವಿದ್ಯಾನಗರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸಮುಚ್ಛಯ ನಿರ್ಮಾಣಕ್ಕೆ 10 ಕೋಟಿ ರೂ. ಒದಗಿಸಲಾಗುವುದು ಎಂದು ಪ್ರಕಟಿಸಿದರು. ಈ ವರ್ಷ ಬಳ್ಳಾರಿಯಲ್ಲಿ ಒಂದು ಕ್ರೀಡಾ ಸಮುಚ್ಛಯ ನಿರ್ಮಿಸಲು 5 ಕೋಟಿ ರೂ.ಗಳನ್ನು ನೀಡಲಾಗುವುದು ಎಂದರು.ಬೆಂಗಳೂರು ಟರ್ಫ್ ಕ್ಲಬ್ ಜೂಜು ತೆರಿಗೆಯಡಿಯಲ್ಲಿ ಅಧಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಕ್ರಮ: ಟೋಟಲೈಸೇಟರ್ ಬಗ್ಗೆ ಬೆಂಗಳೂರು ಟರ್ಫ್ ಕ್ಲಬ್ ಪಾವತಿಸಬೇಕಾದ ರಾಜಿ ತೆರಿಗೆ ಮೊತ್ತವನ್ನು ಶೇ. 4 ರಿಂದ ಶೇ. 8ಕ್ಕೆ ಏರಿಸಲು ಪ್ರಸ್ತಾವಿಸುತ್ತೇನೆ ಎಂದ ಅವರು, ಮೇಲಿನ ಅಧಿಕ ಸಂಪನ್ಮೂಲ ಕ್ರೋಡೀಕರಣ ಕ್ರಮಗಳಿಂದ ಸುಮಾರು ರೂ. 500 ಕೋಟಿ ಹೆಚ್ಚುವರಿ ಆದಾಯ ಸಂಗ್ರಹ ಆಗುವುದೆಂದು ನಿರೀಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry