ಭಾನುವಾರ, ಮೇ 16, 2021
22 °C

ಕ್ರೀಡಾಪಟುಗಳ ಅಪ್ಪಂದಿರ ಅಂತರಂಗ

ಸಂದರ್ಶನ: ರಮೇಶ ಕೆ. Updated:

ಅಕ್ಷರ ಗಾತ್ರ : | |

ಕ್ಕಳನ್ನು ಪಾಲನೆ ಪೋಷಣೆ ಮಾಡುವಲ್ಲಿ ಅಪ್ಪಂದಿರಿಗಿಂತ ತಾಯಿಯೇ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳುತ್ತಾಳೆ ಎಂಬ ಮಾತಿದೆ. ಹಾಗೆಯೇ, ಮಕ್ಕಳ ಮೇಲಿನ ಕಾಳಜಿಯಲ್ಲಿ ಅಪ್ಪಂದಿರ ಪಾತ್ರವೂ ಬಹು ದೊಡ್ಡದಿದೆ ಎಂಬ ಮಾತು ಅಷ್ಟೇ ಸತ್ಯ. ಇದಕ್ಕೆ ಪುಷ್ಟಿ ನೀಡುವಂತಿದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಟಗಾರರ ಅಪ್ಪಂದಿರ ಅಭಿಪ್ರಾಯಗಳು. ಅಪ್ಪಂದಿರ ದಿನದ ಪ್ರಯುಕ್ತ (ಜೂನ್  ತಿಂಗಳ 2ನೇ ಭಾನುವಾರ) ನಡೆಸಿದ ಮಾತುಕತೆಯ ಹೂರಣ ಇಲ್ಲಿದೆ...ಲಂಡನ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಎಚ್.ಎನ್. ಗಿರೀಶ್, ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ರಾಜ್ಯದ ಕ್ರಿಕೆಟಿಗ ಆರ್.ವಿನಯ್ ಕುಮಾರ್ ಹಾಗೂ ಭಾರತ ಕಬಡ್ಡಿ ತಂಡದ ಆಟಗಾರ್ತಿ ಮಮತಾ ಪೂಜಾರಿ ಅವರ ಅಪ್ಪನೊಂದಿಗೆ `ಮೆಟ್ರೊ' ಮಾತುಕತೆ ನಡೆಸಿದಾಗ ಅಪ್ಪನ ಆಪ್ತತೆ ವ್ಯಕ್ತವಾಗಿದ್ದು ಹೀಗೆ...

ಖುಷಿಗೆ ಪಾರವೇ ಇರಲಿಲ್ಲ...

ಮಗಳ ಸಾಧನೆ ಕಣ್ಣಾರೆ ಕಂಡ ನನಗೆ ತುಂಬಾ ಖುಷಿಯಾಗಿದೆ. ಕಾಲೇಜಿಗೆ ಹೋಗುವಾಗಿನಿಂದ ಕಬಡ್ಡಿ ಆಡಲು ಆರಂಭಿಸಿದಳು. ಅವಳಿಗೆ ಆಟ ಅಂದ್ರೆ ಪ್ರಾಣ, ನನ್ನ ಮಗಳು ಚೆನ್ನಾಗಿ ಓದಬೇಕು, ಒಳ್ಳೆ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿತ್ತು. ಆದರೆ ದೇಶವೇ ಕೊಂಡಾಡುವ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾಳೆ.ಚೀನಾದಲ್ಲಿ 2010ರಲ್ಲಿ ನಡೆದ ಏಪ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಮಂಗಳೂರಿಗೆ ಹಿಂತಿರುಗಿದಾಗ ಆಕೆಯನ್ನು ಬರಮಾಡಿಕೊಳ್ಳಲು ನಮ್ಮ ಕುಟುಂಬ ಹಾಗೂ ಹೆರ್ಮುಂಡೆ ಗ್ರಾಮದ ಜನರೆಲ್ಲಾ ವಾಹನ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ಹೋದ ದಿನ ಮರೆಯಲಾಗದು. 

-ಭೋಜ ಪೂಜಾರಿ, ಮಮತಾ ಪೂಜಾರಿ ತಂದೆ.

ಉದ್ಯೋಗ ಕೊಟ್ಟರೆ ಸಾಕು...

ನ್ನ ಪುತ್ರ ಗಿರೀಶ್ ಪ್ಯಾರಾಲಿಂಪಿಕ್ಸ್ ಹೈಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ದೇಶಕ್ಕೆ ಕೀರ್ತಿ ತಂದ. ಹಳ್ಳಿಯಲ್ಲಿ ಬೆಳೆದ ಮಗ ಸ್ವಂತ ಶಕ್ತಿಯಿಂದ ಈ ಸಾಧನೆ ಮಾಡಿದ್ದಾನೆ. ಹುಟ್ಟಿನಿಂದಲೇ ಅವನ ಕಾಲು ಊನವಾಗಿತ್ತು. ಅವನು ಯಾವುದಾದರೊಂದು ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅವನೇ ಜೀವನ ರೂಪಿಸಿಕೊಳ್ಳುತ್ತಾನೆ ಎಂಬ ನಂಬಿಕೆಯಿತ್ತು. ಆದರೆ ಅವನ ದಾರಿಯೇ ಬದಲಾಯಿತು.

ಗಿರೀಶ್ 4ನೇ ತರಗತಿಯಲ್ಲಿದ್ದಾಗಲೇ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದಾಗ ಮೊದಲು ಬೇಡ ಎಂದು ಹೇಳಿದೆವು. ಆದರೆ ಹಟದಿಂದ ಮುನ್ನಡೆದ, ಏಳನೇ ತರಗತಿಗೆ ಬಂದಾಗ ಹೋಬಳಿ ಮಟ್ಟದಲ್ಲಿ ಪದಕ ಪಡೆದ. ನಂತರ ತಾಲ್ಲೂಕು, ಜಿಲ್ಲೆ, ರಾಜ್ಯ ಹೀಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದವರೆಗೂ ಸಾಧನೆಯ ಮೆಟ್ಟಿಲೇರಿದ.ಮೊದಮೊದಲು ಅವನಿಗೆ ಪ್ರೋತ್ಸಾಹ ನೀಡಲಿಲ್ಲ, ಅವನ ಸಾಧನೆ ಕಂಡ ನಂತರ ಬೆಂಬಲ ನೀಡಲು ಮುಂದಾದೆವು. ಲಂಡನ್‌ನಿಂದ ಬೆಳಗಿನ ಜಾವ 3 ಗಂಟೆಗೆ ಕರೆಮಾಡಿ ಬೆಳ್ಳಿಪದಕ ಪಡೆದ ವಿಷಯ ತಿಳಿಸಿದ ಘಳಿಗೆ ಎಂದಿಗೂ ಮರೆಯಲಾಗದ ಕ್ಷಣ. ಹಾಸನ ಜಿಲ್ಲೆ ಅರಕಲಗೂಡಿನ ಹೊಸನಗರ ನಮ್ಮೂರು. ಇರೋದು ಎರಡು ಎಕರೆ ಜಮೀನು. ಮೂರು ಮಕ್ಕಳನ್ನು ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ. ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿ ಸರ್ಕಾರದಿಂದ ಉದ್ಯೋಗ ದೊರಕಿಸಿ ಕೊಡಬೇಕು. ಆಗಮಾತ್ರ ಈ ಅಪ್ಪನಿಗೆ ನೆಮ್ಮದಿ.

-ನಾಗರಾಜೇ ಗೌಡ, ಗಿರೀಶ್ ತಂದೆ .

ಎಂಜಿನಿಯರ್, ಡಾಕ್ಟರ್ ಆಗ್ತಾನೆ ಅಂದುಕೊಂಡಿದ್ವಿ!

ಭಾರತ ಕ್ರಿಕೆಟ್ ತಂಡದಲ್ಲಿ ರಾಜ್ಯದಿಂದ ಆಡುತ್ತಿರುವ ಏಕೈಕ ಕನ್ನಡಿಗ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಸಾಧನೆಯಲ್ಲಿ ಅವನ ಹಾರ್ಡ್‌ವರ್ಕ್ ಹೆಚ್ಚಾಗಿದೆ. ಅವನು ಎಂಜಿನಿಯರೋ, ವೈದ್ಯನೋ ಆಗಬೇಕು ಎಂಬ ಆಸೆಯಿತ್ತು. ಆದರೆ ಉತ್ತಮ ಕ್ರಿಕೆಟಿಗನಾದ. ಆತನಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದನ್ನೇ ಆಯ್ಕೆಮಾಡಿಕೊಳ್ಳಲಿ ಎಂದು ಸುಮ್ಮನಾದೆ.ಮೂಲತಃ ಆತ ಕಬಡ್ಡಿ, ಹೈಜಂಪ್, ಲಾಂಗ್‌ಜಂಪ್‌ನಲ್ಲಿ ರಾಜ್ಯ ಮಟ್ಟದ ಅಥ್ಲೀಟ್. ಹಾಗಾಗಿ ಆತನ ಆಸಕ್ತಿಗೆ ನೀರೆರೆದು ಪೋಷಿಸಿದೆ. ಅಮ್ಮನ ಪ್ರೋತ್ಸಾಹವೂ ಅವನಿಗಿದೆ. 2004ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ. ಎರಡು ವರ್ಷಗಳ ಹಿಂದಿನ ಐಪಿಎಲ್ ಪಂದ್ಯವೊಂದರಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರನಾದಾಗ ಅಂದು ನನ್ನ ಹುಟ್ಟಿದ ದಿನ. ಆ ಗೌರವವನ್ನು ನನಗೆ ಅರ್ಪಿಸಿದ ಕ್ಷಣ ಮರೆಯಲಾಗದು.

ಅಲ್ಲಿ ಹೋದರೆ ಹಾಳಾಗುತ್ತಾನೆ, ಇಲ್ಲಿ ಹೋದರೆ ಹಾಳಾಗುತ್ತಾನೆ ಎನ್ನುವ ಮನೋಭಾವದ ಕೆಲವು ಪೋಷಕರಿದ್ದಾರೆ. ಆದರೆ ನಾವು ಅವನು ಹೋದ ದಾರಿಗೆ ಬೆಂಬಲ ನೀಡಿದೆವೆು. ಅದೇ ಎಲ್ಲಾ ಅಪ್ಪಂದಿರ ಮುಖ್ಯ ಕರ್ತವ್ಯ.

-ಡಿ. ರಂಗನಾಥ್, ವಿನಯ್ ಕುಮಾರ್ ತಂದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.