ಮಂಗಳವಾರ, ಮಾರ್ಚ್ 9, 2021
31 °C

ಕ್ರೀಡಾ ತಾರೆಯರಿಗೆ ಲೋಕಸಭೆ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರೀಡಾ ತಾರೆಯರಿಗೆ ಲೋಕಸಭೆ ಸವಾಲು

ನವದೆಹಲಿ (ಪಿಟಿಐ):  ಫುಟ್‌ಬಾಲ್‌ ಮಿಂಚು ಬೈಚುಂಗ್‌ ಭುಟಿಯಾ ಮತ್ತು ಒಲಿಂಪಿಕ್‌ ಪದಕ ವಿಜೇತ ಶೂಟರ್‌ ರಾಜವರ್ಧನ್‌ ಸಿಂಗ್‌ ರಾಠೋಡ್‌ ಒಳಗೊಂಡಂತೆ ಕ್ರೀಡಾ ಜಗತ್ತಿನ ಪ್ರಮುಖರು ಈ ಬಾರಿಯ ಲೋಕಸಭೆ ಚುನಾವಣಾ ಕಣದಲ್ಲಿ  ತಮ್ಮ ಜನಪ್ರಿಯತೆಯ ಪರೀಕ್ಷೆಗಿಳಿದಿದ್ದಾರೆ.ಭಾರತ ಫುಟ್‌ಬಾಲ್‌ ತಂಡದ ಮಾಜಿ ನಾಯಕ  ಭುಟಿಯಾ ಡಾರ್ಜಿಲಿಂಗ್‌ನಿಂದ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ­ದ್ದಾರೆ. ಅರ್ಜುನ ಪ್ರಶಸ್ತಿ, ಪದ್ಮಶ್ರೀ ಸೇರಿದಂತೆ ಹಲವು ಪುರಸ್ಕಾರ­ಗಳನ್ನು ಪಡೆದುಕೊಂಡಿರುವ ಭುಟಿಯಾ 2011ರ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿಯಾಗಿದ್ದರು.ಭಾರತ ತಂಡದ ಸ್ಟ್ರೈಕರ್‌ ಆಗಿ ಗೋಲು ಗಳಿಸುವ ಅವಕಾಶವನ್ನು ಎಂದೂ ಕೈಚೆಲ್ಲದ ಭುಟಿಯಾ ಇನ್ನೂ ದೊಡ್ಡ ಗೋಲಿನ ಮೇಲೆ ಕಣ್ಣಿಟ್ಟಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಡಾರ್ಜಿಲಿಂಗ್‌ ಕ್ಷೇತ್ರವನ್ನು ಗೆದ್ದು ಕೊಡುವುದು ಈಗ ಅವರ ಮುಂದಿರುವ ಸವಾಲಾಗಿದೆ.ಚುರುಕು ಕ್ಷೇತ್ರರಕ್ಷಕನಿಗೆ ಫುಲ್ಪುರದ ಮೇಲೆ ಕಣ್ಣು: ಚುರುಕಿನ ಕ್ಷೇತ್ರ ರಕ್ಷಣೆಯೊಂದಿಗೆ ತ್ವರಿತವಾಗಿ ರನ್‌ ಗಳಿಸಲು ಹೆಸರಾಗಿದ್ದ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಉತ್ತರ ಪ್ರದೇಶದ ಫುಲ್ಪುರದಲ್ಲಿ ತಮ್ಮ ಅದೃಷ್ಟವನ್ನು ಪಣಕ್ಕೊಡ್ಡಿದ್ದಾರೆ.13 ಟೆಸ್ಟ್‌ ಮತ್ತು 125 ಏಕದಿನ ಪಂದ್ಯಗಳನ್ನು ಆಡಿರುವ ಕೈಫ್‌ ಕೊನೆಯ ಬಾರಿ ಭಾರತ ತಂಡದ ಪರವಾಗಿ ಮೈದಾನಕ್ಕಿಳಿದದ್ದು 2006ರಲ್ಲಿ. ದೇಶಿ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶದ ಪರ ಈಗಲೂ ಕೈಫ್‌ ಸಕ್ರಿಯರಾಗಿದ್ದಾರೆ.ಭಾರತೀಯ ರಾಜಕೀಯ ನೇತಾರನ ಚಹರೆಯನ್ನು 33ರ ಕೈಫ್‌ ಅವರಲ್ಲಿ ಕಾಣುವುದು ಸ್ವಲ್ಪ ಕಷ್ಟ. ಚಿಕ್ಕ ವಯಸ್ಸಲ್ಲೇ ದೊಡ್ಡ ಸಾಧನೆ ಮಾಡಿರುವ ಅವರ ಹಿರಿಮೆ ಕ್ಷೇತ್ರವನ್ನು ಗೆಲ್ಲಲು ನೆರವಾದೀತು ಎಂಬ ನಂಬಿಕೆಯನ್ನು ಕೈಫ್ ಮೇಲೆ ಕಾಂಗ್ರೆಸ್‌ ಇಟ್ಟಿದೆ. ಕೈಫ್‌ ನೇತೃತ್ವದಲ್ಲಿ ಭಾರತ 19 ವರ್ಷ ವಯಸ್ಸಿನೊಳಗಿನವರ ತಂಡ 2000ದಲ್ಲಿ ವಿಶ್ವಕಪ್‌  ಜಯಿಸಿತ್ತು.ಅಜರ್‌ ರಾಜಸ್ತಾನಕ್ಕೆ ವರ್ಗ: ಕೈಫ್ ಮಾತ್ರವಲ್ಲ, ಕಾಂಗ್ರೆಸ್‌ ಪರವಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್ ಕೂಡ ಕಣದಲ್ಲಿದ್ದಾರೆ. ಕಳೆದ ಬಾರಿ ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಗೆದ್ದ ಅವರು ಈ ಬಾರಿ ರಾಜಸ್ತಾನದ ಟೊಂಕ್‌ ಸವಾಯ್‌ ಮಾಧೋಪುರ್  ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.15 ವರ್ಷಗಳ ಅಂತರರಾಷ್ಟ್ರೀಯ ಕ್ರೀಡಾ ಜೀವನವನ್ನು 2000ದಲ್ಲಿ ಮ್ಯಾಚ್‌ ಫಿಕ್ಸಿಂಗ್ ಆರೋಪದ ಕಳಂಕದಿಂದಾಗಿ ಅಜರುದ್ದೀನ್‌ ಮೊಟಕುಗೊಳಿಸಬೇಕಾಯಿತು.  ಆದರೆ ನಂತರ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಂಡರು.ಜೈಪುರದಿಂದ ಶೂಟರ್‌ ರಾಠೋಡ್‌: ರಾಜವರ್ಧನ್‌ ಸಿಂಗ್‌ ರಾಠೋಡ್‌  ಜೈಪುರ ಗ್ರಾಮಾಂತರ ಕ್ಷೇತ್ರದ ಬಿಜೆಪಿ ಹುರಿಯಾಳಾಗಿ­ದ್ದಾರೆ. 2004ರ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್‌ ಟ್ರ್ಯಾಕ್‌ನಲ್ಲಿ ಬೆಳ್ಳಿ ಪದಕ ಗೆದ್ದು ರಾಠೋಡ್‌ ಪ್ರಸಿದ್ಧರಾದರು. 1900ರ ಪ್ಯಾರಿಸ್‌ ಒಲಿಂಪಿಕ್ಸ್‌ ನಂತರ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ವ್ಯಕ್ತಿ ಎಂಬ ಹಿರಿಮೆಯೂ ಅವರದ್ದಾಗಿದೆ. ರಾಠೋಡ್‌  ರಾಜಸ್ತಾನದ ಜೈಸಲ್ಮೇರ್‌ನವರು.ಟರ್ಕಿ ಮುಂದೆ ಕಠಿಣ ಸವಾಲು: ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ರಾಷ್ಟ್ರೀಯ ಹಾಕಿ ತಂಡದ ಮಾಜಿ ನಾಯಕ ದಿಲೀಪ್‌ ಟರ್ಕಿ ಈ ಬಾರಿ ಬಿಜೆಡಿ ಟಿಕೆಟ್‌ನಿಂದ ಒಡಿಶಾದ ಸುಂದರಗಡ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರು ಕೇಂದ್ರದ ಮಾಜಿ ಸಚಿವ ಬಿಜೆಪಿಯ ಜುವಲ್‌ ಓರಮ್‌ ಮತ್ತು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಹೇಮಾನಂದ ಬಿಸ್ವಾಲ್‌ ಅವರ ಸವಾಲು ಎದುರಿಸಬೇಕಿದೆ. ಕುರುಕ್ಷೇತ್ರದಿಂದ ಜಿಂದಾಲ್‌: ಚುನಾವಣಾ ಕಣದಲ್ಲಿರುವ ಇನ್ನೊಬ್ಬ ಪ್ರಮುಖ ಕ್ರೀಡಾಳು ನವೀನ್ ಜಿಂದಾಲ್‌. ಕುರುಕ್ಷೇತ್ರ ಸಂಸದ­ರಾಗಿ­ರುವ ಜಿಂದಾಲ್‌ ಈ ಬಾರಿ ಮತ್ತೆ ಅದೇ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.ಸ್ಕೀಟ್‌ ಶೂಟಿಂಗ್‌ನಲ್ಲಿ ಜಿಂದಾಲ್‌ ಹೆಸರಿನಲ್ಲಿ ರಾಷ್ಟ್ರೀಯ ದಾಖಲೆಯೇ ಇದೆ. ಜಿಂದಾಲ್‌ ಉಕ್ಕು ಮತ್ತು ವಿದ್ಯುತ್‌ ಲಿ.ನ ಅಧ್ಯಕ್ಷ­ರಾಗಿರುವ ಅವರು ಖ್ಯಾತ ಉದ್ಯಮಿಯೂ ಹೌದು.  2002ರಲ್ಲಿ ದಕ್ಷಿಣ ಕೊರಿಯಾದ ಬೂಸಾನ್‌ ಏಷ್ಯನ್ ಕ್ರೀಡಾಕೂಟದಲ್ಲಿ ಜಿಂದಾಲ್ ಭಾರತವನ್ನು ಪ್ರತಿನಿಧಿಸಿದ್ದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಹಲವು ಪದಕಗಳನ್ನು ಗೆದ್ದಿದ್ದಾರೆ. ಅವರು ಉತ್ತಮ ಪೋಲೋ ಆಟಗಾರರಾಗಿಯೂ ಹೆಸರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.