ಕ್ರೀಡಾ ನೀತಿಯಲ್ಲಿ ಲೋಪ: ವಿಷಾದ

7

ಕ್ರೀಡಾ ನೀತಿಯಲ್ಲಿ ಲೋಪ: ವಿಷಾದ

Published:
Updated:
ಕ್ರೀಡಾ ನೀತಿಯಲ್ಲಿ ಲೋಪ: ವಿಷಾದ

ಬಾಗಲಕೋಟೆ: ಸರ್ಕಾರಗಳ ಕ್ರೀಡಾ ನೀತಿಯಲ್ಲಿನ ಲೋಪದಿಂದಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತ ಹಿಂದುಳಿ ಯಲು ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ವಿಷಾದ ವ್ಯಕ್ತಪಡಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯು ನಗರದ ಬಿವಿವಿ ಸಂಘದ ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ-ಬಾಲಕಿಯರ ಹಾಕಿ ಟೂರ್ನಿಯನ್ನು ಸೋಮವಾರ  ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಅರ್ಹ ಕ್ರೀಡಾಪಟುಗಳಿಗೆ ಅವಕಾಶಗಳು ಲಭ್ಯವಾಗುತ್ತಿಲ್ಲ, ಲಾಭಿಗೆ ಮಣೆ ಹಾಕಲಾಗುತ್ತಿದೆ. ಈ ಕಾರಣವಾಗಿ ಅರ್ಹ ಕ್ರೀಡಾಪಟುಗಳು ದೇಶ-ವಿದೇಶದಲ್ಲಿ ಸಾಧನೆ ಮೆರೆಯಲು ಸಾಧ್ಯವಾಗುತ್ತಿಲ್ಲ, ಈ ಬಗ್ಗೆ ಭಾರತೀಯರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.ಕ್ರೀಡೆಗಾಗಿ ಮೀಸಲಿಟ್ಟ ಹಣವೂ ರಾಜಕಾರಣಿಗಳ ಪಾಲಾಗುತ್ತಿದೆ. ಹಗರ ಣಗಳು ನಡೆಯುತ್ತಿವೆ. ಸರ್ಕಾರಗಳ ನಿರ್ಲಕ್ಷ್ಯ ಮತ್ತು ಪಾಲಕರ ನಿರುತ್ಸಾಹ ದಿಂದ ದೇಶದಲ್ಲಿ ಕ್ರೀಡೆ ಸೊರಗಿದೆ ಎಂದು ಹೇಳಿದರು.

ಇಂದು ಅನೇಕ ಶಾಲೆ- ಕಾಲೇಜು ಗಳಿಗೆ ಆಟದ ಮೈದಾನವೇ ಇಲ್ಲವಾಗಿದೆ, ರಾಜ್ಯದ ಅದೆಷ್ಟೋ ತಾಲ್ಲೂಕುಗಳಲ್ಲಿ ಕ್ರೀಡಾಂಗಣವೇ ಇಲ್ಲ, ಈ ಬಗ್ಗೆ ಸರ್ಕಾರಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕ್ರಿಕೆಟ್ ವ್ಯಾಮೋಹದಿಂದ ಯುವಜನತೆ ದೇಶೀಯ ಕ್ರೀಡೆ ಹಾಕಿ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಹೇಳಿದರು.ಶಾರೀರಿಕ ಬೆಳವಣಿಗೆಗೆ ಪೂರಕವಾದ ಹಾಕಿ, ಕಬ್ಬಡಿ, ಖೋಖೋ ಆಟಗಳಿಗೆ ಆದ್ಯತೆ ನೀಡಬೇಕಿದೆ. ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಯುವಂತೆ ದೈಹಿಕ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದರು.

240 ವಿದ್ಯಾರ್ಥಿಗಳಿಗೆ ಒಬ್ಬ ದೈಹಿಕ ಶಿಕ್ಷಕರ ಬದಲು, 100 ವಿದ್ಯಾರ್ಥಿಗಳಿಗೆ ಒಬ್ಬ ದೈಹಿಕ ಶಿಕ್ಷಕರಿರುವಂತೆ ನೇಮಕ ಮಾಡಿಕೊಳ್ಳಬೇಕಾಗಿದೆ. ದೈಹಿಕ ಶಿಕ್ಷಕರು ಶಾಲಾ ಕೊಠಡಿಯನ್ನು ಬಿಟ್ಟು ಮೈದಾನಕ್ಕೆ ಬರಬೇಕು ಎಂದು ಸಲಹೆ ನೀಡಿದರು.ತಾ.ಪಂ.ಸದಸ್ಯೆ ತಾರಾಬಾಯಿ ಚವ್ಹಾಣ, ಡಿಡಿಪಿಐ ಎ.ಎಂ. ಮಡಿವಾಳರ, ಬಿಇಒ ಎನ್.ವೈ. ಕುಂದರಗಿ, ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಆಲೂರ, ಉಪಪ್ರಾಚಾರ್ಯ ಎಸ್. ಎಸ್. ಕಾತರಕಿ, ಜಿಲ್ಲಾ ದೈಹಿಕ ಶಿಕ್ಷಣಾ ಧಿಕಾರಿ ಎಂ.ಡಿ.ವಾಲಿ  ಮತ್ತಿತರರು ಉಪಸ್ಥಿತರಿದ್ದರು.

ಮಳೆ ಅಡ್ಡಿ: ಭಾನುವಾರ ರಾತ್ರಿ ಭಾರಿ ಮಳೆಯಾಗಿದ್ದ ಕಾರಣ ಕ್ರೀಡಾಂಗಣದಲ್ಲಿ ಹಾಕಿ ಪಂದ್ಯಾವಳಿ ನಡೆಸಲು ಅಡಚಣೆಯಾಯಿತು.ರಾಜ್ಯದ ನಾಲ್ಕು ವಿಭಾಗಗಳಿಂದ ಒಟ್ಟು 22 ತಂಡಗಳು ಭಾಗವಹಿಸಿದ್ದು, ಪ್ರೌಢಶಾಲಾ ವಿಭಾಗದ ಬಾಲಕರ 7 ಮತ್ತು ಬಾಲಕಿಯರ 5 ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಬಾಲಕರ 5 ಮತ್ತು ಬಾಲಕಿಯರ 5 ತಂಡಗಳು ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry